|ಎಸ್.ಎನ್. ಸೇತುರಾಂ
ರಂಗಭೂಮಿ ಇನ್ನೂ ರಂಗೋದ್ಯಮವಾಗಿ ಬೆಳೆದಿಲ್ಲ. ಹಾಗಾಗಿ ಇದನ್ನು ವೃತ್ತಿಯಾಗಿಸಿಕೊಂಡಲ್ಲಿ ದುಡಿಮೆ ಸಾಧ್ಯವಿಲ್ಲ. ಬದಲಾಗಿ ಪ್ಯಾಶನ್ ಆಗಿ ತೆಗೆದುಕೊಂಡರೆ ಸಮಸ್ಯೆ ಇಲ್ಲ. ಇದನ್ನು ವೃತ್ತಿಯಾಗಿಸಿಕೊಂಡವರಲ್ಲಿ ಲಾಭ ಮಾಡಿದವರು ವಿರಳಾತಿವಿರಳ. ನಾನು ರಂಗಭೂಮಿಯನ್ನು ಪ್ರವೃತ್ತಿಯಾಗಿ ತೆಗೆದುಕೊಂಡು ಬಹಳ ಆನಂದಿಸಿದ್ದೇನೆ. ಈ ಕ್ಷೇತ್ರದಲ್ಲಿ ಪ್ರೇಕ್ಷಕರನ್ನು ಸದಾ ಸೆಳೆದಿಡುವುದು ಸುಲಭವಲ್ಲ. ಜತೆಗೆ ಸರ್ಕಾರದ ಅನುದಾನ ನೆಚ್ಚಿಕೊಂಡು ಬದುಕಲೂ ಆಗಲ್ಲ. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆ ವೃತ್ತಿಯಿಂದ ಆಚೆ ಏನೂ ಇರಲಿಲ್ಲ. ಅದೇ ರಂಗಭೂಮಿಯಲ್ಲಿ ಬರಹಗಾರನಾಗಿ, ನಟನಾಗಿ ಹೆಸರು ಮಾಡಿದ್ದೇನೆ. ನಮ್ಮಲ್ಲಿ ಅದ್ಭುತವಾದ ಕಲಾವಿದರು, ನಿರ್ದೇಶಕರು ಇದ್ದಾರೆ. ಆದರೆ ಪ್ರೇಕ್ಷಕರ ವರ್ಗವನ್ನು ಬೆಳೆಸದಿದ್ದರೆ ಪ್ರಯೋಜನವಿಲ್ಲ. ಈ ವಿಚಾರದಲ್ಲಿ ನಾಟಕ ಕಲಾವಿದರು ಸ್ವಲ್ಪ ಅಪ್ರಸ್ತುತ ಆಗಿದ್ದೇವೆ ಎನ್ನುವುದಾದರೆ ಪ್ರಸ್ತುತ ಆಗುವ ಬಗ್ಗೆ ಯೋಚಿಸಬೇಕಿದೆ. ನಾಟಕದಲ್ಲಿ ಮಾನವತಾವಾದ ಬಿಟ್ಟು ಬೇರೆ ಏನೋ ಹೇಳುತ್ತೇವೆ ಎನ್ನುವುದು ತಪ್ಪಾಗುತ್ತದೆ. ರಂಗಭೂಮಿ ಕಲಾವಿದರಾದ ನಾವು ವೈಯಕ್ತಿಕ ಓರೆಕೋರೆಗಳನ್ನು ಹೊರಗಿಟ್ಟು ಸ್ವತಃ ತೀರ್ಪು ನೀಡುತ್ತೇವೆ. ಹಾಗಾದಾಗ ಸಾಮಾನ್ಯ ಪ್ರೇಕ್ಷಕನಿಗೆ ರಂಗಕಲಾವಿದ ಬೇರೆ ಎನ್ನುವ ಭಾವನೆ ಮೂಡುತ್ತದೆ. ನಾವು ವಿಷಯವನ್ನು ಧಾಷ್ಟರ್್ಯದಿಂದ ಹೇಳಿದರೆ ಜನರು ದೂರ ಉಳಿಯುತ್ತಾರೆ. ರಂಗಭೂಮಿ ಇರುವುದೇ ವೇದಿಕೆ ಮೇಲೆ ನಿಂತು ಸತ್ಯ ಮಾತನಾಡೋಕೆ. ಆದರೆ ಬಹಳಷ್ಟು ಸಂದರ್ಭದಲ್ಲಿ ಜನರು ಸತ್ಯ ನುಡಿಯುವುದಿಲ್ಲ. ಪ್ರೇಕ್ಷಕರು ದೂರಾಗಲು ಇದೂ ಒಂದು ಕಾರಣ ಇರಬಹುದು.
ಪ್ರಯತ್ನ ನಿರಂತರವಾಗಿರಲಿ:ಹಿಂದೆಲ್ಲಾ ಒಂದು ನಾಟಕ ನೋಡಿದೆ/ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿತ್ತು. ಅದು ಇಂದಿಗೂ ಉಳಿದಿದೆಯಾ ಎಂಬ ಪ್ರಶ್ನೆ ಮೂಡುತ್ತದೆ. ನಾವಿಂದು ನೈತಿಕ ವಿಷಯ ಬೇಡ ಎಂದು ತೆಗೆದು ಹಾಕಿದ್ದೇವೆ. ಹಾಗಾಗಿ ಯಾರು ಯಾವ ವಿಷಯದಲ್ಲಿ ಆಸಕ್ತರು ಎಂಬುದನ್ನು ತಿಳಿಯಬೇಕಿದೆ. ಒಂದು ವಿಚಾರದ ಬಗ್ಗೆ ಕೆಲವು ಕಡೆ ಜನರು ನೋಡದಿರಬಹುದು. ಹಾಗೆಂದು ನಾಟಕ ಮಾಡುವುದನ್ನು ಬಿಡಬಾರದು. ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಹೋಗಿ ಹೆಸರು ಮಾಡಿದವರು ಇದ್ದಾರೆ. ರಂಗಭೂಮಿಯಲ್ಲಿ ಇರುವಷ್ಟೇ ಸಮಸ್ಯೆ ಸಿನಿಮಾ ರಂಗದಲ್ಲೂ ಇದೆ.
ಬಡತನದ ಬದುಕು:ಅನೇಕ ಕಾರ್ಯಕ್ರಮಗಳ ಆಯೋಜಕರು ಸಂಗೀತಗಾರರಿಗೆ ವಿಶೇಷ ವ್ಯವಸ್ಥೆ ಮಾಡುತ್ತಾರೆ. ಹೋಟೆಲ್​ಗಳಲ್ಲಿ ರೂಂ ವ್ಯವಸ್ಥೆ ಕಲ್ಪಿಸುತ್ತಾರೆ. ಅದೇ ನಾಟಕದವರು ಎಂದಾಗ ಹಾಸ್ಟಲ್, ಡಾರ್ವಿುಟ್ರಿ ಎನ್ನುತ್ತಾರೆ. ರಂಗಭೂಮಿಯಲ್ಲಿ ಬಡತನದಲ್ಲೇ ಬದುಕಬೇಕು. ಬಹಳಷ್ಟು ರಂಗಭೂಮಿ ಕಲಾವಿದರು ಹಸಿವಿನಿಂದಲೇ ಬದುಕುತ್ತಿದ್ದಾರೆ. ಸಂಗೀತ ಎಂದರೆ 50 ಸಾವಿರ ಎನ್ನುತ್ತಾರೆ, ನಾಟಕ ಎಂದರೆ 20 ಸಾವಿರ ಎನ್ನುವುದೂ ಕಷ್ಟ. ಇನ್ನು ಪ್ರಭುತ್ವದಿಂದ ಬರುವ ನೆರವು ಬಹಳ ಕಡಿಮೆ.
ನಾಟಕ ಯಾವುದೇ ವರ್ಗಕ್ಕೆ ಸೀಮಿತವಲ್ಲ:ನನ್ನ ನಾಟಕದಲ್ಲಿ ಆತ್ಮಾವಲೋಕನ ನಾಟಕಗಳು; ನನ್ನ ತಲೆಮಾರಿನ ಮನಸ್ಥಿತಿಯ ನಾಟಕಗಳೇ ಹೆಚ್ಚಿರುತ್ತದೆ. ಆದಾಗಿಯೂ ಯುವಜನರೇ ಹೆಚ್ಚು ಬರುತ್ತಾರೆ. 40 ದಾಟಿದವರು ತೀರ ಕಡಿಮೆ. ನಾಟಕದ ಯಶಸ್ಸು ರಂಗಭೂಮಿಯನ್ನು ಪ್ರೀತಿಸುವವರು ಮಾಡುವ ಕೆಲಸವೇ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ. ನಾಟಕಕಾರ ಇಲ್ಲವೆ ನಟ ಮಾತ್ರ ರಂಗಭೂಮಿಯನ್ನು ಉಳಿಸಲು ಸಾಧ್ಯ.
2013ರಲ್ಲಿ ಮೊದಲ ನಾಟಕ:ನನ್ನ ಮೊದಲ ನಾಟಕ 2013ರಲ್ಲಿ ರಚಿಸಿದ್ದು, ಆಗ ಅದನ್ನು ಓದಿದ್ದು ಮಂಡ್ಯ ರಮೇಶ್ ಮನೆಯಲ್ಲಿ. ನಾನು ಆದಾಯ ತೆರಿಗೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರಿಂದ ಸರ್ಕಾರದ ಹಣದ ಅವಶ್ಯಕತೆ ಕಂಡುಬರಲಿಲ್ಲ. ಹಾಗಾಗಿ ನಾನು ಪ್ರಶ್ನೆ ಮಾಡಿಲ್ಲ. ನಮ್ಮ ನಾಟಕಗಳಿಗೆ ಪ್ರೇಕ್ಷಕರಿದ್ದಾರೆ. ನಾಟಕ ಆದ ನಂತರವೂ ನಟನಿಗೆ ಅಭ್ಯಾಸ ಮಾಡುವ ಚೈತನ್ಯ ಇರಬೇಕು.
ಸಭ್ಯತೆ, ಶಿಸ್ತು ಮುಖ್ಯ:ಜನರು ನಾಟಕ ನೋಡಲು ಬರುವುದು ಒತ್ತಟ್ಟಿಗಿರಲಿ, ನಾಟಕದವರು ಎಂದ ಕೂಡಲೇ ಅವರನ್ನು ದೂರವೇ ಇಡಲು ಪ್ರಯತ್ನಿಸುವವರೂ ಇದ್ದಾರೆ. ಅದರ ಬಗ್ಗೆ ಯೋಚಿಸದೆ ನಮ್ಮ ಪ್ರಯತ್ನ ನಾವು ಮಾಡಬೇಕಾಗುತ್ತದೆ. ಅದಕ್ಕೆ ಸಭ್ಯತೆ ಹಾಗೂ ಶಿಸ್ತು ಬಹಳ ಮುಖ್ಯ.
ಮನರಂಜನೆಯೊಂದೇ ಮಾನದಂಡವಲ್ಲ:ರಂಗ ತಂಡಗಳು ನಾಟಕ ಮಾಡುತ್ತಿವೆ. ಆದರೆ ಜನರು ಬರುತ್ತಿಲ್ಲ ಎಂದರೆ ಕೇವಲ ನಗಿಸುವುದಷ್ಟೇ ವಸ್ತು ವಿಷಯವಾಗಿದ್ದರೆ ಪ್ರಯೋಜನವಿಲ್ಲ. ಜನರನ್ನು ಸೇರಿಸುವ ಸಾಮರ್ಥ್ಯ ಹಾಗೂ ಶಿಸ್ತು ತಂಡಕ್ಕೆ ಇರಬೇಕು. ಪ್ರೇಕ್ಷಕರನ್ನು ಸೆಳೆಯುವ ರೀತಿಯಲ್ಲಿ, ಜನರ ಆಸಕ್ತಿಗೆ ಅನುಗುಣವಾಗಿ ನಾಟಕ ಮಾಡಬೇಕು.
ಗಾಯಕಿ ಮತ್ತು ರಂಗಭೂಮಿ ನಟಿ ರೋಹಿಣಿ ರಘುನಂದನ್ ಅವರು ಜೋಕುಮಾರ ಸ್ವಾಮಿ ಗೀತೆ ಸೇರಿ ಹಲವು ರಂಗಗೀತೆಗಳನ್ನು ಹೇಳಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು. ರಂಗಭೂಮಿಯಲ್ಲಿ ರಂಗಗೀತೆಯ ಪ್ರಾಮುಖ್ಯದ ಬಗ್ಗೆಯೂ ಮಾತನಾಡಿದರು. ಅಕ್ಷತಾ ಬಣ್ಣದಬಾವಿ ಅವರು ರಂಗಗೀತೆ ಪ್ರಸ್ತುತಪಡಿಸಿದರು.
|ಮಂಡ್ಯ ರಮೇಶ್
ರಂಗಭೂಮಿ ಬೆಳೆಯಲು ಮುಖ್ಯವಾಗಿ ಬೇಕಿರುವುದು ಬೆಂಬಲ. ನೋಡುಗ ವರ್ಗದ ಬೆಂಬಲ ಇದ್ದಿದ್ದರಿಂದಲೇ ರಾಜ್ಯದೆಲ್ಲೆಡೆ ನಾಟಕಗಳಿಗೆ ಕೊರತೆಯಿಲ್ಲ. ಮೈಸೂರಿನಲ್ಲಿಯೇ ಈ ತಿಂಗಳಲ್ಲಿ 8-10 ನಾಟಕೋತ್ಸವಗಳು ನಡೆದವು. ಈ ನಿರಂತರತೆ ಬೇಕೆಂದರೆ ಪ್ರೇಕ್ಷಕನಷ್ಟೇ ಬೆಂಬಲ ಸರ್ಕಾರದಿಂದಲೂ ಸಿಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಣ ಬಿಡುಗಡೆಯಾದರೂ, ಅದು ರಂಗಭೂಮಿಯನ್ನು ತಲುಪುವುದಿಲ್ಲ. ಶಾಲೆ, ಕಾಲೇಜುಗಳಲ್ಲಿ ರಂಗಭೂಮಿಯ ಪಾಠಗಳು ನಡೆಯಬೇಕು. ಶಾಲೆಯಲ್ಲಿ ಗಣಿತ, ವಿಜ್ಞಾನ, ಸಮಾಜ ಹೇಗೋ ರಂಗಭೂಮಿಯೂ ಕಲಿಕೆಯಲ್ಲಿ ಪಠ್ಯವಾಗಲಿ. ಇದೆಲ್ಲ ಆಗಲು ರಂಗಶಿಕ್ಷಕರ ನೇಮಕ ಆಗಬೇಕು. ಆದರೆ ಆಗಿಲ್ಲದಿರುವುದು ಬೇಸರದ ಸಂಗತಿ.
ಉತ್ತರ ಕರ್ನಾಟಕ ಕಡೆಗಣನೆ:ಒಂದು ಕಾಲಕ್ಕೆ ಉತ್ತರ ಕರ್ನಾಟಕದಲ್ಲಿಯೇ 160 ನಾಟಕ ಕಂಪನಿಗಳಿದ್ದವು. ಈಗ 8-10 ಕಂಪನಿಗಳಿವೆ. ಇದಕ್ಕೆ ಕಾರಣ ಸರ್ಕಾರದ ಕಡೆಗಣನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉಕ ಭಾಗದ ರಂಗಕಲಾವಿದರಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ಸರ್ಕಾರ ಎಂಬುದಕ್ಕಿಂತ ಅಧಿಕಾರಿಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯ ಕೊರತೆ ಇದೆ. ಅಲ್ಲಿನ ಜಾನಪದ ಪ್ರಕಾರಗಳ ಬಗ್ಗೆ, ಅಲ್ಲಿನ ಮಣ್ಣಿನ ಗುಣದ ಬಗ್ಗೆ ತಿಳಿದುಕೊಳ್ಳಬೇಕಿದೆ. ಹೆಜ್ಜೆಗೊಬ್ಬರು ರಂಗಕಲಾವಿದರು ಸಿಗುತ್ತಾರೆ. ಆದರೆ, ಅವರೆಲ್ಲರನ್ನು ಸಂಘಟಿಸುವ ಸಂಘಟಕರು ಸಿಗುತ್ತಿಲ್ಲ.
ಸ್ಮೃತಿಯೊಳಗಿನ ಬದುಕು:ರಂಗಭೂಮಿಗೆ ಸಂಸ್ಕೃತಿಯ ಬೆಸುಗೆಯಿದೆ. ಇಲ್ಲಿ ಯಾವುದೂ ಶ್ರೇಷ್ಠವಲ್ಲ. ಕನಿಷ್ಠವೂ ಅಲ್ಲ. ಇಲ್ಲಿ ಎಲ್ಲವೂ ಇದೆ. ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆಯೂ ರಂಗಭೂಮಿ ಮಾತನಾಡುತ್ತದೆ. ಸಮಾಜ ಶಾಸ್ತ್ರದ ಅಧ್ಯಯನವನ್ನೂ ಒಳಗೊಂಡ ಶ್ರೇಷ್ಠ ಪ್ರದರ್ಶಕ ಕಲೆ. ಸಮರ್ಥ ಸಾಮಾಜಿಕ ಶಿಕ್ಷಣವೂ ಹೌದು. ಏಕೆಂದರೆ, ನಾಟಕ ಪ್ರತಿ ದಿನ ಮುಳುಗುತ್ತದೆ. ಮಾರನೇ ದಿನ ಹೊಸದಾಗಿ ಮತ್ತೆ ಹುಟ್ಟುತ್ತದೆ. ಎಲ್ಲ ಕಾಲಮಾನವನ್ನು ಹೀರಿಕೊಂಡು ಸಾಗಬಲ್ಲ ಮಾಧ್ಯಮವಿದು. ಪ್ರತಿ ದುಃಖ, ಖುಷಿ, ಹೋರಾಟವೂ ಹಾಡಾಗುತ್ತದೆ. ಹಾಗಾಗಿ ಇದಕ್ಕೆ ಸ್ಮೃತಿ ಒಳಗಿನ ಬದುಕೆನ್ನಬಹುದು.
ನಾಟಕಕ್ಕೆ ಸಾವಿಲ್ಲ:ರಂಗಭೂಮಿ ಸಮುದಾಯದ ಮಧ್ಯೆ ಉಸಿರಾಡುತ್ತಿದೆ. ಹಾಗಾಗಿ ರಂಗಭೂಮಿಗೆ ಯಾವತ್ತೂ ಸಾವಿಲ್ಲ. ಇಡೀ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ, ಮನುಷ್ಯನನ್ನು ಅದು ಎಚ್ಚರಿಸುತ್ತದೆ. ಕರೊನಾ ಸಮಯದಲ್ಲಿ ವೃತ್ತಿ ರಂಗಭೂಮಿ ಸಾಕಷ್ಟು ಏರಿಳಿತ ಕಂಡಿತು. ಒಂದು ಮಗು ಹೇಗೆ ಹಾಲಿಗಾಗಿ ಒದ್ದಾಡಿತೋ, ಹೆಣ್ಣು ಮಗಳು ಸಂಸಾರ ನಡೆಸಲು ಹೇಗೆ ಕಷ್ಟಪಟ್ಟಳೋ, ಅದೇ ಕಷ್ಟ ರಂಗಭೂಮಿಗೂ ಬಂದಿತ್ತು. ಕಲಾವಿದರ ಪಾಡಂತೂ ದೇವರಿಗೆ ಪ್ರೀತಿ. ಇಷ್ಟಿ ದ್ದರೂ, ನಾಟಕಗಳನ್ನು ಯಾರೂ ಪುಕ್ಕಟೆಯಾಗಿ ನೋಡಲಿಲ್ಲ. ಈಗಲೂ ದುಡ್ಡು ಕೊಟ್ಟೇ ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ವಾರ ನಾಟಕಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತವೆ. ಜನರಿಂದ, ಜನರಿಗಾಗಿ, ಜನರೊಟ್ಟಿಗೆ ರಂಗಭೂಮಿ ಇರಲಿದೆ. ಸೂರ್ಯ- ಚಂದ್ರ ಇರೋವರೆಗೂ ನಾಟಕಕ್ಕೆ ಸಾವಿಲ್ಲ.
ಮಹಿಳೆ ಇಲ್ಲದೆ ರಂಗಭೂಮಿ ಇಲ್ಲ:ಸ್ತ್ರೀ ಇಲ್ಲದೆ ರಂಗಭೂಮಿ ಉದ್ಧಾರ ಆಗುವುದಿಲ್ಲ. ಕೇವಲ ಪುರುಷನ ಬವಣೆಯನ್ನಷ್ಟೇ ಸಮಾಜದಲ್ಲಿ ನೋಡುವವರಿಲ್ಲ. ಹಾಗಾಗಿಯೇ ರಂಗಭೂಮಿಯಲ್ಲಿ ಅವಳು ಬೇಕೇ ಬೇಕು. ಅವಳ ಮನಸ್ಸು, ಆಕೆಯ ಸಂಘರ್ಷ, ಪ್ರೀತಿ, ತ್ಯಾಗ, ಹೋರಾಟ, ಸೌಂದರ್ಯ.. ಈ ಎಲ್ಲವನ್ನೂ ಆಕೆಯೊಬ್ಬಳೇ ರಂಗದ ಮೇಲೆ ತೋರಿಸಬಲ್ಲಳು. ರಂಗಭೂಮಿಯಲ್ಲಿ ಮಹಿಳೆಯ ಕೊಡುಗೆಯೂ ಅಷ್ಟೇ ಪ್ರಮಾಣದಲ್ಲಿದೆ.
ಜೀವನ ಸಂಸ್ಕೃತಿಯ ಭಾಗ:ನಾಟಕಗಳು ಶಾಲೆಗಳಲ್ಲಿ ಮನರಂಜನೆಯ ಉದ್ದೇಶಕ್ಕಷ್ಟೇ ಇದ್ದಂತಿದೆ. ವರ್ಷಕ್ಕೊಮ್ಮೆ ವಾರ್ಷಿಕೋತ್ಸವದಲ್ಲಿ ಮನರಂಜಿಸಲಷ್ಟೇ ಸೀಮಿತವಾದಂತಿದೆ. ಆದರೆ, ನಾಟಕ ಎಂಬುದು ನಮ್ಮೊಳಗಿನಿಂದ ಬರಬೇಕಾದ ಪ್ರೀತಿ. ಪಠ್ಯದಲ್ಲಿ ಅದರ ಮಹತ್ವ ಇರಬೇಕು. ಆಗ ಮಾತ್ರ ನಾಟಕವೂ ಜೀವನ ಮತ್ತು ಸಂಸ್ಕೃತಿಯ ಭಾಗವಾಗಲು ಸಾಧ್ಯ.
ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!

ಗುಂಡೇಟಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನೇ ಬಲಿ; 12 ಜನರ ತಂಡದಿಂದ ಬೇಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
