ನವೋದಯದ ಪ್ರಧಾನ ಕವಿಗಳಲ್ಲಿ ಒಬ್ಬರಾದ ಬೇಂದ್ರೆ ಆ ಸಾಹಿತ್ಯಪಂಥದ ಆಶಯಗಳಲ್ಲೊಂದಾದ ಮಾನವತಾವಾದ-ಸಾಮಾಜಿಕ ಚಿಂತನೆಗಳನ್ನು ಕಾವ್ಯದಲ್ಲಿ ಆಳವಾಗಿ ಒಡಮೂಡಿಸಿದವರು. ಎಷ್ಟೇ ಸಾವು ನೋವಿನ ಖಾಸಗಿ ದುಮ್ಮಾನವಿದ್ದರೂ ಸಮಾಜದ ಕುರಿತಾದ ಅವರ ಒಲವು-ನಿಲುವುಗಳು ಮನುಷ್ಯನನ್ನು ಬೊಟ್ಟುಮಾಡಿ ತೋರಿಸುತ್ತದೆಯೇ ಹೊರತು ಭೂಮಿಯನ್ನಲ್ಲ. ವ್ಯವಸ್ಥೆಯನ್ನು ಹದಗೆಡಿಸುವ ಮನುಷ್ಯಜನಾಂಗ ಕುರಿತು ಅವರದು ಸಾತ್ವಿಕ ಕ್ರೋಧಾವೇಶವಷ್ಟೇ. ಭೂಮಿಪರವಾದ ನಿಲುವು-ಒಲವುಗಳು ಎಂದೆಂದಿಗೂ ಕವಿಗೆ ಸದಾ ಆಪ್ಯಾಯಮಾನ ಮತ್ತು ಆಪಾತಮಧುರ. ‘ಮನುವಿನ ಮಕ್ಕಳು’ ಎನ್ನುವ ಕವನಕ್ಕೆ ಕವಿಯೇ ನೀಡಿರುವ ಭಾವಸಂದರ್ಭದಲ್ಲಿ ಇದು ಮತ್ತಷ್ಟು ಸುಸ್ಪಷ್ಟವಾಗಿದೆ. ಮನುಷ್ಯನ ಸುಖಕ್ಕೆ ಮನುಷ್ಯರೇ ಅಡ್ಡಾಗಿ ಬರುವಷ್ಟು ನಿಸರ್ಗ ಬರುವುದಿಲ್ಲ. ಆದರೆ, ಸಾಮಾಜಿಕ ಕ್ರೌರ್ಯ, ಅಸಮಾನತೆಗಳನ್ನು ಕಂಡಾಗ ಕವಿ ಭುಗಿಲೆದ್ದು ಕನಲುತ್ತಾರೆ. ‘ತುತ್ತಿನ ಚೀಲ’ ಕವಿತೆ ಇವರ ಅಂತಃಸ್ಪೋಟದ ಉರಿಹೊಗೆಯನ್ನು ಹೊರಚಾಚುತ್ತದೆ.
ಬಡತನದ ಬಾಳು ಸಾಗಿಸಲು ಖಾನಾವಳಿ ನಡೆಸುತ್ತಿದ್ದ ಗಟ್ಟಿಜೀವ ಅಜ್ಜಿ ಗೋದೂಬಾಯಿಯ ಮಮತೆಯಲ್ಲಿ ಬೇಂದ್ರೆ ಬೆಳೆದರು. ಅವರ 11ನೇ ವಯಸ್ಸಿನಲ್ಲಿ ತಂದೆ ತೀರಿಹೋದರು. ಅವರ ಬಾಲ್ಯ ಸ್ತ್ರೀಪೋಷಿತವಾಗಿತ್ತು. ಧಾರವಾಡದ ಜಾನಪದ ಮತ್ತು ಭಕ್ತ ಪರಂಪರೆಯಲ್ಲಿ ಒಂದಾಗಿ ಬೆಳೆದ ಅವರಿಗೆ ಜನಪದ ಬದುಕು ಮತ್ತು ಭಾಷೆ ಒಂದು ಬುದ್ಧಿಪೂರ್ವಕ ಕಾವ್ಯ ಪ್ರಯೋಗವಾಗಿರಲಿಲ್ಲ. ಅದು ಸಹಜಸ್ಪೂರ್ತಿಯ ಜೀವಲಹರಿಯಾಗಿತ್ತು. ಅವರು ವಾಸಿಸುತ್ತಿದ್ದ ಕಾಮನಕಟ್ಟೆಯಲ್ಲಿ ಸಾಹಿತ್ಯಿಕ, ರಾಷ್ಟ್ರೀಯ ಮತ್ತು ಸಂಸ್ಕೃತಿ ಚಿಂತನೆಯ ಆಲೂರು ವೆಂಕಟರಾವ್, ಗರಗ ಸಿದ್ಧಲಿಂಗಪ್ಪ, ಕಡಪಾ ರಾಘವೇಂದ್ರರಾವ್ ಮುಂತಾದವರಿದ್ದರು. ಅವರಿಗೆ ಶಾಲೆಯಲ್ಲಿ ಶಾಂತಕವಿ, ಹುಯಿಲಗೋಳ ನಾರಾಯಣರಾಯರು ಮತ್ತು ಕಟ್ಟಿ ಮಧ್ವಾಚಾರ್ಯರಂತಹ ಕವಿ, ಸಾಹಿತಿಗಳು ಶಿಕ್ಷಕರಾಗಿದ್ದರು. ಅದರಿಂದ ಅವರಲ್ಲಿ ಸಾಹಿತ್ಯ, ಸಂಸ್ಕೃತಿ, ರಾಷ್ಟ್ರೀಯತೆ, ಕನ್ನಡ ಭಾಷಾಭಿಮಾನ ಸಹಜವಾಗಿ ಜೀವದ್ರವ್ಯವಾದವು. ಅವು ಅವರನ್ನು ರಾಷ್ಟ್ರಪ್ರೇಮಿಯಾಗಿ ರೂಪಿಸಿದವು.
|ಸಿದ್ದಲಿಂಗ ಪಟ್ಟಣಶೆಟ್ಟಿಸಾಹಿತಿ
ಅನೇಕ ಸಾಹಿತಿಗಳು ತಾವು ಹುಟ್ಟಿದ ಊರನ್ನು ಮರೆತುಬಿಡುತ್ತಾರೆ. ಆದರೆ, ಬೇಂದ್ರೆ ಅವರು ಧಾರವಾಡದ ಪೋತ್ನಿಸ್ ಗಲ್ಲಿ, ಕಾಮನಕಟ್ಟಿ, ಕಲಿತ ಶಾಲೆ-ವಿದ್ಯಾರಣ್ಯ ಹೈಸ್ಕೂಲ್, ದತ್ತಾತ್ರೇಯ ಗುಡಿಯನ್ನು ಎಂದೂ ಮರೆತಿರಲಿಲ್ಲ. ಅವರ ಕಥೆ, ನಾಟಕ, ಕವಿತೆ, ಭಾಷಣದಲ್ಲಿ ಸದಾ ಈ ಸ್ಥಳಗಳನ್ನು ಉಲ್ಲೇಖ ಮಾಡುತ್ತಿದ್ದರು. ಜೀವನದ ವಿವಿಧ ಹಂತದಲ್ಲಿ ಎಲ್ಲೇ ಹೋದರೂ, ಎಲ್ಲೇ ಕೆಲಸ ಮಾಡಿದರೂ ಅವರಿಗೆ ಧಾರವಾಡವೇ ಶಕ್ತಿಕೇಂದ್ರವಾಗಿತ್ತು. ಬೇಂದ್ರೆ ಅಂದರೆ ಧಾರವಾಡ, ಧಾರವಾಡ ಅಂದರೆ ಬೇಂದ್ರೆ ಎಂಬಂತಾಗಿತ್ತು. ಅಂದಿನ ಧಾರವಾಡ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕಾದರೆ ಬೇಂದ್ರೆ ಅವರ ಸಾಹಿತ್ಯವನ್ನು ನಾವೆಲ್ಲ ಓದಬೇಕು.
ಬೇಂದ್ರೆ ಅವರ ಸಾಹಿತ್ಯ ಹಾಗೂ ಆಡುವ ಭಾಷೆ ಒಂದೇ ಇರುತ್ತಿತ್ತು. ಜನರೊಂದಿಗೆ ಹೇಗೆ ಬೆರೆಯುತ್ತಿದ್ದರೋ ಹಾಗೇ ಬರೆಯುತ್ತಿದ್ದರು. ಹಾಗಾಗಿ ಅವರು ಎಲ್ಲರಿಗೂ ಆಪ್ತರಾಗಿದ್ದರು. ಆಡುಭಾಷೆಯನ್ನು ಅಕ್ಷರ ಮತ್ತು ಧ್ವನಿಗೆ ಇಳಿಸಿದ್ದು ಬೇಂದ್ರೆಯವರ ಹೆಗ್ಗಳಿಕೆ. 1956ರಲ್ಲಿ ಮೊದಲ ಸಲ ನಾನು ಬೇಂದ್ರೆ ಅವರನ್ನು ನೋಡಿದ್ದೆ. ನಂತರ ಹಲವು ಬಾರಿ ಭೇಟಿಯಾಗಿ ಆತ್ಮೀಯ ಒಡನಾಟ ಸಂಪಾದಿಸಿದೆ. ಬೇಂದ್ರೆ ಅವರು ಧಾರವಾಡದಲ್ಲಿ ಹುಟ್ಟಿ ಬೆಳೆದಿದ್ದರೂ ಅವರ ಪೂರ್ವಜರು ಇದ್ದ ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ 1967ರಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಲಭಿಸಿತು. ಆಗ ನಾನು ಅವರ ಜತೆಯಲ್ಲಿಯೇ ಧಾರವಾಡದಿಂದ ತೆರಳಿದ್ದೆ. ಕವಿಗೋಷ್ಠಿ ಆಯೋಜಿಸಿದ್ದ ಸಂಘಟಕರು ಹಾಕಿದ್ದ ಹೂವಿನ ಹಾರವನ್ನು ಬೇಂದ್ರೆ ಅವರು ತಕ್ಷಣವೇ ನನ್ನ ಕೊರಳಿಗೆ ಹಾಕಿದ್ದು ನನಗೆ ಎಂದಿಗೂ ಮರೆಯಲಾಗದ ಕ್ಷಣ.
|ಹ. ವೆಂ. ಕಾಖಂಡಕಿಸಾಹಿತಿ
ಗೆಳೆಯರ ಗುಂಪಿನ ಭಾಷೆ ಕನ್ನಡ ಆಗಿರಬೇಕು ಎಂಬುದು ಬೇಂದ್ರೆ ಅವರ ನಿಲುವಾಗಿತ್ತು. ಗೆಳೆಯರ ನಡುವೆ ವ್ಯವಹಾರ ಇಟ್ಟುಕೊಂಡಿರಲಿಲ್ಲ. ಗೆಳೆತನ ಅವರ ಪಾಲಿಗೆ ಪವಿತ್ರ ಸಂಬಂಧವಾಗಿತ್ತು. ಮುನವಳ್ಳಿಯ ಕಿರಿಯ ಗೆಳೆಯ ಚಿದಂಬರ ಅಂತ್ಯಕ್ರಿಯೆ ವ್ಯವಸ್ಥೆಗೆ ಅಗ್ನಿ ಹಿಡಿದುಕೊಂಡು ಬೇಂದ್ರೆ ಅವರೇ ಹೋಗಿದ್ದರು. ಎಳೆಯ ಗೆಳೆಯರ ಸಾಹಿತ್ಯಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದರು. ಗೆಳೆತನ ಆರೋಗ್ಯಕರವಾಗಿರಬೇಕು. ಹೊಸ ಹೊಸ ಜ್ಞಾನ ಸಂಪಾದಿಸಬೇಕು. ಗೆಳೆತನದ ಮೂಲಗುಣ ಹಣವಲ್ಲ ಎಂದು ಅವರು ಪದೇಪದೆ ಹೇಳುತ್ತಿದ್ದರು. ಗೆಳೆಯರ ಜತೆಗಿನ ಸಂಭ್ರಮದ ಕ್ಷಣ, ಗೆಳೆಯರ ಅಗಲಿಕೆ, ಗೆಳೆಯರು ಮನಸ್ಸು ತಟ್ಟಿದ ಸಂದರ್ಭಗಳನ್ನು ಉಲ್ಲೇಖಿಸಿ ಅವರು ನೂರಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಹಳೆಯ ಗೆಳೆಯರನ್ನು ಮರೆಯದೇ ಜೀವನದ ಕೊನೆಯವರೆಗೂ ಅವರು ಹೊಸ ಹೊಸ ಗೆಳೆಯರನ್ನು ಸಂಪಾದಿಸಿದ್ದರು. ಗೆಳೆತನವನ್ನು ಅತ್ಯಂತ ಶ್ರೀಮಂತವಾಗಿ ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದರು. 1966ರಲ್ಲಿ ಧಾರವಾಡದಲ್ಲಿ ನಾನು ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದಾಗ ವಿದ್ಯಾರಣ್ಯ ಹೈಸ್ಕೂಲ್​ನಲ್ಲಿ ಬೇಂದ್ರೆ ಅವರ 70ನೇ ಜನ್ಮದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೈಭವವನ್ನು ಕಂಡು ನಾನು ಪೋಸ್ಟ್​ಕಾರ್ಡ್​ನಲ್ಲಿ ಬೇಂದ್ರೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದೆ. ಇದಕ್ಕೆ ಪ್ರತಿಯಾಗಿ ಬೇಂದ್ರೆ ಅವರು, ‘ಉತ್ತಮ ನಡತೆ, ಜ್ಞಾನ ಸಂಪಾದಿಸು’ ಎಂದು ನನಗೆ ಪತ್ರ ಬರೆದಿದ್ದರು. ಇದು ನನ್ನಂಥ ಎಳೆಯನಲ್ಲೂ ಸ್ನೇಹಭಾವ ಹೊಂದುವ ಅವರ ಗುಣವನ್ನು ತೋರಿಸುತ್ತದೆ.
|ಡಾ. ಗೀತಾ ವಸಂತ್ಸಾಹಿತಿ
ದ.ರಾ. ಬೇಂದ್ರೆ ಅವರ ಸಮಗ್ರ ಸಾಹಿತ್ಯದಲ್ಲಿ ಧ್ವನಿ, ಹೊಳಹು, ನೆಲೆ, ಲೌಕಿಕ-ಅಲೌಕಿಕ ಸಂಗತಿಗಳು ಮೇಳೈಸಿವೆ. ಅವರ ಕಾವ್ಯವನ್ನು ಇಂಥದ್ದಕ್ಕೇ ಎಂದು ಬಂಧಿಸಿಡಲು ಸಾಧ್ಯವಿಲ್ಲ. ಅರ್ಥವನ್ನು ದಾಟಿ ಹರಿಯುವ ನದಿ, ಭೋರ್ಗರೆವ ಸಾಗರದಂತದು. ಅವರ ಕಾವ್ಯ ನಿಜಕ್ಕೂ ಮಹಾಕಾವ್ಯ. ಅವರ ಬದುಕಿನ ಅನುಸಂಧಾನದ ಮೂಲಕ ಅಪಾರವಾದ ಮಹಾಕಾವ್ಯವನ್ನು ನಮ್ಮ ಮುಂದಿಟ್ಟಿದ್ದಾರೆ. ಬೇಂದ್ರೆ ಅವರ ಸಾಹಿತ್ಯ ವಿರಾಟ್ ಸ್ವರೂಪದ್ದಾಗಿದೆ. ಕನ್ನಡದ ಮೀಮಾಂಸೆ ಎಲ್ಲರಿಗೂ ದಕ್ಕಿಲ್ಲ. ಜಾನಪದ, ದೇಸಿ ಸತ್ವದ ಒಂದೊಂದು ಬರಹವೂ ಮೀಮಾಂಸೆಯ ಹೊಳಹನ್ನು ತೆರೆದಿಡುತ್ತವೆ. ಬೇಂದ್ರೆ ಅವರ ಕಾವ್ಯದಲ್ಲಿನ ಹೊಳಹು ಎಲ್ಲರಿಗೂ ಸುಲಭವಾಗಿ ಅರ್ಥವಾಗುವುದಿಲ್ಲ. ಹಾದಿ-ಬೀದಿ ನುಡಿಗಳನ್ನೇ ಸಾಹಿತ್ಯವನ್ನಾಗಿ ಮಾಡಿದ ಗಾರುಡಿಗ ಅವರು. ಹೃದಯ ತಟ್ಟುವ ಹಾಗೆ ನುಡಿ ಇರಬೇಕು. ಶಿಶುನಾಳ ಶರೀಫರ ವಾಣಿಯಂತೆ ಕನ್ನಡದ ನುಡಿಯಾಗಿರಬೇಕೆಂಬುದು ಬೇಂದ್ರೆ ಅವರ ಅಭಿಪ್ರಾಯವಾಗಿತ್ತು. ಮಾತು ಮತ್ತು ಮಾತೆಯನ್ನು ಸಂಗಮಿಸಿಕೊಂಡು ಬೇಂದ್ರೆ ಹೇಳುತ್ತಿದ್ದರು. ಹಾಗಾಗಿಯೇ ಅವರು ತಾಯಿಯ ಹೆಸರನ್ನು ಮುಂದಿಟ್ಟುಕೊಂಡು ಅಂಬಿಕಾತನಯದತ್ತ ಎಂದು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡರು. ಅವರು ಕಾವ್ಯವನ್ನು ಕೃತಕವಾಗಿ ಕಟ್ಟಿಕೊಡಲಿಲ್ಲ. ಅದು ಆತ್ಮದ ವಾಣಿಯೇ ಆಗಿತ್ತು. ಶೋಧಿಸಿದರು, ಸಾಧಿಸಿದರು. ಅನುಭವದ ಬಗ್ಗೆ ಮಾತನಾಡಿದರೂ ಅನುಭಾವವನ್ನು ಕಟ್ಟಿಕೊಟ್ಟಿದ್ದಾರೆ. ಲೌಕಿಕ ಬಿಟ್ಟು ಅಲೌಕಿಕ ಇಲ್ಲ ಎನ್ನುತ್ತಿದ್ದರು. ಮಾತು ಮಂತ್ರವಾಗಬೇಕು. ಜೀವನ ಸ್ವತಂತ್ರವಾಗಬೇಕು. ಮಾತಿಗೆ ಶಕ್ತಿ ಬರುವುದು ಭಾವ ಹೀರಿದಾಗ ಮಾತ್ರ ಎಂಬುದು ಬೇಂದ್ರೆಯವರ ಗಟ್ಟಿ ನಂಬಿಕೆಯಾಗಿತ್ತು.
ಹಿರಿಯ ಜಾನಪದ ಕಲಾವಿದ ಡಾ. ರಾಮು ಮೂಲಗಿ ಅವರು ಸಂವಾದದ ನಡು-ನಡುವೆ ಜಾನಪದ ಶೈಲಿಯಲ್ಲಿ ಹಾಡುಗಳನ್ನು ಹಾಡಿದರು. ಅನನ್ಯಾ ದೇಸಾಯಿ ಅವರು ಬೇಂದ್ರೆ ಅವರ ಭಾವಗೀತೆ ಹಾಡಿದರು. ಸಾಹಿತಿ ರಾಧಿಕಾ ಕಾಖಂಡಕಿ ಅವರು, ಬೇಂದ್ರೆ ಅವರ ಕಾವ್ಯಕ್ಕೆ ತಾವೇ ರಾಗ ಸಂಯೋಜನೆ ಮಾಡಿದ ಹಾಡುಗಳನ್ನು ಹಾಡಿದರು. ‘ಶ್ರೀಗುರುವೇ ಅರುವೇ ಶರಣಾಗಿ ಬರುವೆ.. ಕರುಣೆಯನು ಕೋರಿ ಬರುವೆ’ , ‘ದೇವರದೀಪ ಹಚ್ಚೀರೆ’, ‘ಟೊಂಕದ ಮೇಲೆ ಕೈಯಿಟ್ಟಾನ ಭಕ್ತಿ ಸುಂಕ ಬೇಡ್ತಾನ’, ‘ಚೈತನ್ಯದ ಪೂಜೆ ನಡದಾದ ನೋಡ ತಂಗಿ…ಅಭಂಗದ ಭಂಗಿ’ ಹಾಡುಗಳನ್ನು ಪ್ರಸ್ತುತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + three =
Remember me
