ಬೆಂಗಳೂರು:ಮೀನುಗಾರರು ಮತ್ತು ಅವರ ಮಕ್ಕಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಭರ್ಜರಿ ಕೊಡುಗೆಯನ್ನು ಘೋಷಿಸಿದ್ದಾರೆ. ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಉದ್ಘಾಟಿಸಿದ ಅವರು, ಕೇಬಲ್ ನೆಟ್ ಮೂಲಕ ಮೀನುಗಾರಿಕೆ ಮಾಡಲು 3 ಲಕ್ಷ ರೂ. ಸಹಾಯಧನವನ್ನು ಪ್ರಸ್ತುತ 300 ಜನರಿಗೆ ನೀಡುತ್ತಿದ್ದು, ಇದನ್ನು 1000 ಮೀನುಗಾರರಿಗೆ ಹೆಚ್ಚಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ.
ಸ್ತ್ರೀ ಸಾಮರ್ಥ್ಯ ಯೋಜನೆಯಡಿ 3ರಿಂದ 5 ಲಕ್ಷ ನೀಡಲಾಗುತ್ತಿದ್ದು, ಒಳನಾಡು ಮೀನುಗಾರಿಕೆ ಕೈಗೊಳ್ಳಲು ಮುಂದೆ ಬರುವ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಸ್ವಾಮಿ ವಿವೇಕಾನಂದರ ಯೋಜನೆಯಡಿ ನೀಡುವ ಸಹಾಯಧನವನ್ನು ಬಳಸಿ ಮೀನುಗಾರಿಕೆ ಕೈಗೊಳ್ಳಲು ಮುಂದಾಗಬೇಕು ಎಂದರು.
ಈಗಾಗಲೇ ಆದೇಶ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಮೀನುಗಾರಿಕೆಯಲ್ಲಿ ರಾಜ್ಯ ಇನ್ನೂ ಸಾಧನೆ ಮಾಡಬೇಕಿದೆ. ರಫ್ತು ಮಾಡುವಲ್ಲಿ ಆಂಧ್ರಪ್ರದೇಶ ಮುಂದುವರಿದಿದೆ. ಹೀಗಾಗಿ ಒಂದು ತಂಡವನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ಯಲು ಸೂಚಿಸಿರುವುದಾಗಿ ತಿಳಿಸಿದರು.
ಈಗಿರುವ ಮೀನುಗಾರಿಕೆ ಚಟುವಟಿಕೆಗಳನ್ನು ವಿಸ್ತರಿಸಿ, ಈಗಿನ ರಫ್ತು ಪ್ರಮಾಣಕ್ಕಿಂತ ಮೂರುಪಟ್ಟು ಹೆಚ್ಚು ಮಾಡಬೇಕೆಂದು ಸೂಚಿಸಿದ್ದೇನೆ. ಇದಕ್ಕೆ ಮುಂದಿನ ಆಯವ್ಯಯದಲ್ಲಿ ಅನುದಾನ ಮೀಸಲು ಇರಿಸಲಾಗುವುದು ಎಂದರು.
ಮೀನುಗಾರರು ಆರ್ಥಿಕವಾಗಿ ಸಬಲರಾಗಲು 5000 ಮೀನುಗಾರರ ಮನೆಗಳಿಗೆ ಮಂಜೂರಾತಿ ನೀಡಿದೆ. ಕಾಲಮಿತಿಯಲ್ಲೇ ಈ ಮನೆಗಳನ್ನು ಪೂರ್ಣಗೊಳಿಸಬೇಕು. ಜನವರಿಯೊಳಗೆ ಪೂರ್ಣಗೊಳಿಸಿದರೆ ಖುದ್ದಾಗಿ ಬಂದು ಮೀನುಗಾರರಿಗೆ ಹಂಚಲಾಗುವುದು ಎಂದರು.
ಮೀನು ಶತಮಾನಗಳಿಂದ ಮನುಷ್ಯನ ಆಹಾರವಾಗಿದೆ. ಮೀನು ಸಸ್ಯಾಹಾರಿ. ಮೀನನ್ನು ತಿನ್ನುವವರು ಮಾಂಸಾಹಾರಿಗಳು. ವಿದೇಶಗಳಲ್ಲಿ ಮೀನನ್ನು ಸಸ್ಯಾಹಾರ ಎಂದು ವ್ಯಾಖ್ಯಾನ ಮಾಡುತ್ತಾರೆ. ಮೀನಿಗೆ ಬಹಳಷ್ಟು ಬೆಲೆ ಬಂದಿದೆ. ಮೀನುಗಾರಿಕೆ ಬೃಹತ್ ಉದ್ಯಮವಾಗಿ ಬೆಳೆದಿದೆ. ಮೀನು ಸಾಕಣೆ, ಆಹಾರ ಉತ್ಪಾದನೆ, ಮೀನಿನ ಸಂಗ್ರಹ ಹಾಗೂ ಸಾಗಾಣಿಕೆ ಮುಂತಾದ ದೊಡ್ಡ ಚಟುವಟಿಕೆಗಳನ್ನು ಮೀನುಗಾರಿಕೆ ಒಳಗೊಂಡಿದೆ. ಇದರಿಂದ ಸಾವಿರಾರು ಜನ ಉದ್ಯೋಗದಲ್ಲಿ ತೊಡಗಲು ಸಾಧ್ಯವಿದೆ ಎಂದು ಅವರು ಹೇಳಿದರು.
ಮೀನುಗಾರಿಕೆಯಲ್ಲಿ ಸಮುದ್ರ ಮೀನುಗಾರಿಕೆ ಇದೆ. ನಮ್ಮ ಮೀನುಗಾರರು ಸಾಕಷ್ಟು ಸಾಹಸ ಮಾಡಬೇಕಾಗಿದೆ. ಒಳನಾಡು ಮೀನುಗಾರಿಕೆಯೂ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೀನಿನ ಆಹಾರದ ಮಾರಾಟದ ಬೆಲೆ ಬಹಳ ಕಡಿಮೆ ಇದೆ. ಮೀನು ಹಿಡಿದು ಎಷ್ಟು ಅವಧಿಯೊಳಗೆ ಜನರಿಗೆ ಮುಟ್ಟಿಸುತ್ತೇವೆ ಎನ್ನುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಸ್ಥಳೀಯವಾಗಿ ಮೀನುಗಾರಿಕೆ ಮಾಡಿ ಉತ್ಪಾದಿಸಿದರೆ, ಅಲ್ಲಿ ತಾಜಾ ಮೀನುಗಳನ್ನು ನೀಡಬಹುದು. ಸಮುದ್ರದ ಮೀನುಗಳಿಗೂ, ಉತ್ಪಾದಿಸುವ ಮೀನುಗಳಿಗೂ ವ್ಯತ್ಯಾಸವಿದೆ. ನೀರು ಮತ್ತು ಅದರ ಒಟ್ಟು ಪ್ರದೇಶ, ಮಣ್ಣಿನ ಸಾರ ಮುಂತಾದ ವಿಚಾರಗಳಿವೆ. ಸಂಶೋಧಕರು ಒಳನಾಡು ಮೀನುಗಾರಿಕೆಯಲ್ಲಿ ದೊಡ್ಡ ಪ್ರಮಾಣದ ಸಂಶೋಧನೆ ಮಾಡುತ್ತಿದ್ದಾರೆ ಎಂದರು.
ಹೊಸ ತಳಿಗಳನ್ನು ಒಳನಾಡು ಮೀನುಗಾರಿಕೆಯಲ್ಲಿ ಪ್ರಯೋಗ ಮಾಡಿ ಯಶಸ್ವಿ ಆಗಿಸಬೇಕು. ಹೊಸ ತಳಿಗಳನ್ನು ತಯಾರು ಮಾಡಿದರೆ ದೊಡ್ಡ ಮಾರುಕಟ್ಟೆ ಲಭ್ಯವಿದೆ. ಮಾರುಕಟ್ಟೆ ಹಾಗೂ ಉತ್ಪಾದನೆ ನಡುವೆ ದೊಡ್ಡ ಅಂತರವಿದೆ. ಈ ಅಂತರ ತುಂಬಲು ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ ಹೊಸ ತಳಿಗಳನ್ನು ಪ್ರಯೋಗ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳಸಬೇಕು. ಸಮುದ್ರದ ಮೀನುಗಾರಿಕೆಗೆ ಹಲವಾರು ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವೆ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಪ್ರತಿ ಹೆಕ್ಟೇರ್ ಹೊಸದಾಗಿ ಪ್ರಾರಂಭಿಸಿದರೆ 1 ಲಕ್ಷ ರೂ. ವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಕರಾವಳಿಯಲ್ಲಿ ಉತ್ಪಾದನೆಯಾಗುವ ಮೀನಿಗೆ ತನ್ನದೇ ಮಾರುಕಟ್ಟೆ ವ್ಯವಸ್ಥೆ ಇದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಸಮುದ್ರಮಟ್ಟದಲ್ಲಿ ಏರಿಕೆಯಾಗಿ ಮೀನು ಉತ್ಪಾದನೆಯಲ್ಲಿ ಬಹಳಷ್ಟು ಏರುಪೇರುಗಳಾಗಿವೆ. ಕರಾವಳಿ ಮೀನುಗಾರರು 8 ಅಥವಾ 10 ನಾಟಿಕಲ್ ಮೈಲುಗಳಲ್ಲಿ ಮೀನುಗಾರಿಕೆ ಮಾಡುತ್ತಾರೆ. ಆದರೆ ಬಹಳ ದೊಡ್ಡ ಉತ್ಕೃಷ್ಟ ಮೀನುಗಳು ಆಳಸಮುದ್ರದಲ್ಲಿ ದೊರೆಯುತ್ತವೆ. ನಮ್ಮ ಮೀನುಗಾರರು ದೊಡ್ಡ ಟ್ರಾಲರ್ ಬಳಸಿ ಆಳಸಮುದ್ರ ಮೀನುಗಾರಿಕೆ ಮಾಡಬೇಕೆಂದು ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೋತ್ಸಾಹದಿಂದ ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಡಿ ನಾವು 100 ಹೊಸ ಆಳ ಸಮುದ್ರ ಬೋಟುಗಳನ್ನು ಒದಗಿಸುತ್ತಿದ್ದೇವೆ. ಇದಕ್ಕೆ ಶೇ.40 ಸಹಾಯಧನವಿದ್ದು ಅತಿ ಸುಲಭ ದರದಲ್ಲಿ ಸಾಲದ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ 100 ಬೋಟುಗಳನ್ನು ನೀಡಿದರೆ, ಮುಂದಿನ ವರ್ಷ 300 ಬೋಟುಗಳಿಗೆ ವಿಸ್ತರಣೆ ಮಾಡುವ ಉದ್ದೇಶವಿದೆ. ಮೀನುಗಾರರ ಸಂಘಗಳು ಕೂಡ ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿ ಹೆಚ್ಚಿನ ಉತ್ಪಾದನೆ ಮಾಡಬೇಕೆಂಬ ಉದ್ದೇಶ ನಮ್ಮದು ಎಂದರು.
ಕರಾವಳಿ ಪಕ್ಕದಲ್ಲಿ ಕಡಲ ಕೊರೆತವಾಗಿ ಹೂಳು ತುಂಬಿ ತೊಂದರೆ ಆಗುತ್ತಿರುವುದರಿಂದ ಎಂಟು ಮೀನುಗಾರಿಕೆ ಬಂದರುಗಳಿಗೆ ವಿಶೇಷ ಅನುದಾನ ನೀಡಿ ಹೂಳು ತೆಗೆಯಲು ಈ ವರ್ಷ ಅನುಮೋದನೆ ನೀಡಲಾಗಿದೆ.
ಮೀನುಗಾರರಿಗೆ ಡೀಸಲ್ ಹಾಗೂ ಸೀಮೆ ಎಣ್ಣೆ ಸಹಾಯಧನ ಹೆಚ್ಚಿಸಲಾಗಿದೆ. ಪ್ರವಾಹ ಬಂದ ಸಂದರ್ಭದಲ್ಲಿ ಮೀನುಗಾರರ ಹಡಗುಗಳು ಹಾಳಾಗುತ್ತವೆ. ಅದಕ್ಕೆ ಎನ್​ಡಿಆರ್​ಎಫ್​ ನಿಯಮಾವಳಿ ಪ್ರಕಾರ ಅನುದಾನ ನೀಡಲು ಅವಕಾಶವಿಲ್ಲ. ರಾಜ್ಯ ಸರ್ಕಾರದಿಂದಲೇ ಮೀನುಗಾರರ ದೋಣಿಗಳಿಗೆ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ. ಒಳನಾಡು ಮೀನುಗಾರಿಕೆಗೂ ಪ್ರೋತ್ಸಾಹ ನೀಡಲು 5600 ಗ್ರಾಮ ಪಂಚಾಯಿತಿಯಲ್ಲಿ 5600 ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅನುದಾನ ನೀಡಿದೆ. ಆಲಮಟ್ಟಿ, ಕೆಆರ್​​ಎಸ್ ಹಿನ್ನೀರಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಮೀನುಗಾರಿಕೆ ಆಗುತ್ತಿಲ್ಲ. ಕೆಲವರೇ ಸ್ವಾಮ್ಯ ಮಾಡಿಕೊಂಡಿದ್ದು, ಇದನ್ನು ತಪ್ಪಿಸಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಬಿಬಿಎಂಪಿ ವಲಯಗಳಲ್ಲಿ ಮೀನಿನ ಆಹಾರಕ್ಕೆ ಬಹಳ ಬೇಡಿಕೆ ಇದೆ. ಪ್ರತಿ ವಾರ್ಡಿನಲ್ಲಿ 1500-2000 ಚ.ಮೀ. ವಿಸ್ತೀರ್ಣದಲ್ಲಿ ಮೀನಿನ ಆಹಾರ ಒದಗಿಸುವ ಮಳಿಗೆ ಪ್ರಾರಂಭಿಸುವ ಯೋಜನೆ ಇದೆ. ಬೆಂಗಳೂರಿನ 243 ವಾರ್ಡ್‌ಗಳಲ್ಲೂ, ಇದಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಖಾಸಗಿ ವಲಯದವರು ಇಲ್ಲಿ ಮಳಿಗೆ ತೆರೆಯಬಹುದು. ಬೆಂಗಳೂರು ನಗರದಲ್ಲಿ ಈ ಯೋಜನೆ ಸಫಲವಾದರೆ, ರಾಜ್ಯದ ಎಲ್ಲ ಮಹಾನಗರಪಾಲಿಕೆ ವ್ಯಾಪ್ತಿಗೆ ಈ ಯೋಜನೆ ವಿಸ್ತರಿಸಲಾಗುವುದು ಎಂದರು.
14 ಲಕ್ಷ ಜನ ರೈತಮಕ್ಕಳಿಗೆ ವಿದ್ಯಾನಿಧಿ ಯೋಜನೆ ಕೊಡುತ್ತಿದ್ದೇನೆ. ರೈತಕೂಲಿಕಾರರು, ಮೀನುಗಾರರು, ನೇಕಾರರು, ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ. ಈಗಾಗಲೇ 1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಇದೇ ವರ್ಷ ವಿತರಿಸುವ ಗುರಿ ಹೊಂದಿದ್ದು, ಇದಕ್ಕಾಗಿ 50 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದರು.

ಮೀನುಗಾರಿಕೆ, ಮೀನು ಆಹಾರ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ, ರಫ್ತು, ಸ್ಥಳೀಯ ಮಾರುಕಟ್ಟೆ, ಹೀಗೆ ಮೀನುಗಾರಿಕೆಯ ವಿವಿಧ ವಲಯಗಳಿಗೆ ಈಗ ಬಹಳ ಅವಕಾಶಗಳಿವೆ. ಖಾಸಗಿ ವಲಯದವರು ಆಸಕ್ತಿ ವಹಿಸಿ ಬಂದರೆ, ಮಾರುಕಟ್ಟೆ ವ್ಯವಸ್ಥೆ, ಸಾಗಾಣಿಕೆ ಸೇರಿ ಎಲ್ಲ ರೀತಿಯ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ. ಮೀನಿನ ಸಂಸ್ಕರಣೆ, ಮೀನು ಆಹಾರ ಉತ್ಪಾದನೆಗೆ ಸರ್ಕಾರ ಸಹಕಾರ ನೀಡುತ್ತದೆ. ಮೀನುಗಾರಿಕೆ ವಲಯದಲ್ಲಿ ಖಾಸಗಿ ವಲಯದ ಆಸಕ್ತಿ, ಹೆಚ್ಚಿನ ಹೂಡಿಕೆ, ಉತ್ಪಾದನೆ, ಮಾರುಕಟ್ಟೆ ಅವಕಾಶಗಳು ಬರಬೇಕೆಂಬ ಉದ್ದೇಶದಿಂದ ಇಂದಿನ ಸಮಾವೇಶ ಆಯೋಜಿಸಲಾಗಿದೆ ಎಂದರು.
ಮೀನುಗಾರಿಕೆಯ ವಹಿವಾಟನ್ನು ಎಂಟು ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಇದ್ದು, ಇದು ರಾಜ್ಯದ ಆಂತರಿಕ ಜಿಡಿಪಿಯನ್ನು ಹೆಚ್ಚಿಸುತ್ತದೆ. ಪ್ರಧಾನಿ ಮೋದಿಯವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ ರಾಜ್ಯದಲ್ಲಿನ ಕೃಷಿ, ಮೀನುಗಾರಿಕೆ, ಕುರಿ ಸಾಕಾಣಿಕೆ ಇವೆಲ್ಲವೂ ಕೊಡುಗೆ ನೀಡಲಿವೆ. ಕೃಷಿಯಲ್ಲಿ ಶೇ.1ರ ಅಭಿವೃದ್ಧಿಯಾದರೆ, ಶೇ.4ರಷ್ಟು ಉತ್ಪಾದನೆ ಹಾಗೂ ಶೇ.10ರಷ್ಟು ಅಭಿವೃದ್ಧಿ ಸೇವಾ ವಲಯದಲ್ಲಿ ಆಗುತ್ತದೆ. ಜನರ ದುಡಿಮೆಯೇ ರಾಜ್ಯದ ಆರ್ಥಿಕತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್. ಅಂಗಾರ, ಸಚಿವ ಡಾ.ಸಿ‌.ಎನ್. ಅಶ್ವತ್ಥನಾರಾಯಣ್, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ್, ಶಾಸಕ ಸಂಜೀವ ಮಟಂದೂರು, ಇಂಡಿಯನ್ ಮನಿ ಡಾಟ್ ಕಾಮ್ ಸ್ಥಾಪಕ ಸಿ.ಎಸ್. ಸುಧೀರ್, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್ ಮತ್ತಿತರರು ಹಾಜರಿದ್ದರು.
ಬದುಕಿದ್ದ ವೃದ್ಧೆಯನ್ನೇ ಕಚ್ಚಿ ಕಚ್ಚಿ ತಿಂದ ಬೀದಿನಾಯಿಗಳು!; ಸಾರ್ವಜನಿಕರಿಂದ ಅಂತ್ಯಸಂಸ್ಕಾರ..
ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − five =
Remember me
