ಮೈಸೂರು:ರಾಜ್ಯದಲ್ಲಿ ಎಲ್ಲ ಜಲಾಶಯಗಳು ತುಂಬಿದ್ದು, ಉತ್ತಮ ಮಳೆಯಾಗಿದೆ, ಅಂತರ್ಜಲ ಕುಸಿತ ಕಡಿಮೆಯಾಗಿದೆ. ಹೀಗಾಗಿ ಈ ಬಾರಿ ಉತ್ತಮ ಬೆಳೆ ನಿರೀಕ್ಷೆ ಇದೆ. ಇದೇ ರೀತಿ ಪ್ರತಿವರ್ಷವೂ ಉತ್ತಮ ಮಳೆ-ಬೆಳೆಯಾಗಿ ನಾಡು ಸಮೃದ್ಧಿಯಿಂದ ಕೂಡಿರಲಿ ಎಂಬ ಆಶಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದರು.
ಕೆಆರ್​ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಹೆಲಿಕಾಪ್ಟರ್​ನಲ್ಲಿ ಬೀಚನಹಳ್ಳಿ ಹೆಲಿಪ್ಯಾಡ್​ಗೆ ಆಗಮಿಸಿದ ಸಿಎಂ, ಮಧ್ಯಾಹ್ನ 1.04ಕ್ಕೆ ಕಬಿನಿಗೆ ಬಾಗಿನ ಅರ್ಪಿಸಿದರು. ಈ ಸಂದರ್ಭ ಎಚ್.ಡಿ.ಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಬಿನಿ ಜಲಾಶಯದಿಂದ ನೀರು ಹರಿಯಬಿಟ್ಟಾಗ ಜಲಾಶಯ ಮುಂಭಾಗದಲ್ಲಿರುವ ಸೇತುವೆ ಮುಳುಗಡೆಯಾಗುವ ಹಿನ್ನೆಲೆಯಲ್ಲಿ ಸಾಕಷ್ಟು ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ಕಳೆದ ಬಾರಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದ್ದಾಗ ಮೇಲ್ಮಟ್ಟದ ಸೇತುವೆ, ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಗ್ರಾಮಸ್ಥರ ಬೇಡಿಕೆ ಇದೀಗ ಈಡೇರಿದೆ ಎಂದು ತಿಳಿಸಿದರು. ರಾಜ್ಯದ ನೀರಾವರಿ ಕ್ಷೇತ್ರದ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದ್ದು, ನೀರಾವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಇದರಂತೆ ಈವರೆಗೆ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗಿನಿಂದ 7,400 ಕೋಟಿ ರೂ. ಮೊತ್ತದ 28 ವಿವಿಧ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಇವೆ. ಅವುಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಈ ಬಾರಿ ಸರಳವಾಗಿ ದಸರಾ
ಕರೊನಾ ಸೋಂಕು ಹೆಚ್ಚುತ್ತಿರುವುದರಿಂದ ನಾಡಹಬ್ಬ ದಸರಾ ಉತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಈ ಬಾರಿ ಸರಳವಾಗಿ ದಸರಾ ಆಚರಿಸುವ ಬಗ್ಗೆ ಉನ್ನತ ಮಟ್ಟದ ಸಮಿತಿಯಲ್ಲಿ ರ್ಚಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
395 ಕೋಟಿ ರೂ. ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರ 395.5 ಕೋಟಿ ರೂ. ಮುಂಗಡವಾಗಿ ಬಿಡುಗಡೆ ಮಾಡಿದೆ. ನೆರೆ ಹಿನ್ನೆಲೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೆವು, ಇದೀಗ ಮನವಿಗೆ ಕೂಡಲೇ ಸ್ಪಂದಿಸಿದ ಕೇಂದ್ರ ಸರ್ಕಾರ ಹಣವನ್ನು ಎಸ್​ಡಿಆರ್​ಎಫ್ ಅಡಿ ಮುಂಗಡವಾಗಿ ಬಿಡುಗಡೆ ಮಾಡಿರುವುದು ಸಂತಸ ತಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಕೆಲವೆಡೆ ಮಳೆ ಆರ್ಭಟ-ಅನಾಹುತ
ಬೆಂಗಳೂರು: ಕಳೆದೊಂದು ವಾರದಿಂದ ಅಬ್ಬರದೊಂದಿಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದ್ದ ಮಳೆ, ಸದ್ಯ ಕೆಲವು ಜಿಲ್ಲೆಗಳಲ್ಲಿ ಆರ್ಭಟ ಮುಂದುವರಿಸಿದ್ದು ಅನಾಹುತಗಳನ್ನು ಸೃಷ್ಟಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಭೀಮಳ್ಳಿ ಹತ್ತಿರದ ಹಳ್ಳದಲ್ಲಿ ಪ್ರವಾಹ ಉಂಟಾಗಿ ಕಲಬುರಗಿ ದುಬೈ ಕಾಲನಿ ನಿವಾಸಿ ಮಲ್ಲಿಕಾರ್ಜುನ ನೀಲಕಂಠ ಕುದಮೂಡ (12) ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಸಂಜಯಗಾಂಧಿ ನಗರ ನಿವಾಸಿ ವಿಶ್ವಾರಾಧ್ಯ ಸಿದ್ದಪ್ಪ ಕುಂಬಾರ (24) ಎಂಬಾತ ಗಿಡಕ್ಕೆ ಸಿಲುಕಿಕೊಂಡು ಪಾರಾಗಿದ್ದಾನೆ. ಭೀಮಳ್ಳಿ ಬಳಿಯ ಭೋಸಗಾ ಕೆರೆ ಮತ್ತು ಹಳ್ಳದ ನೀರಿನಿಂದ ಉಂಟಾಗಿರುವ ಫಾಲ್ಸ್ ನೋಡಲು ಇಬ್ಬರು ಗುರುವಾರ ಸಂಜೆ ಬೈಕ್​ನಲ್ಲಿ ಹಳ್ಳದ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಬೈಕ್ ಮಗುಚಿ ಬಿದ್ದಿದ್ದರು. ವಿಷಯ ತಿಳಿಯುತ್ತಲೇ ಪೊಲೀಸರು ರಾತ್ರಿ ಶೋಧ ನಡೆಸಿದರೂ ಮಲ್ಲಿಕಾರ್ಜುನ ಪತ್ತೆಯಾಗಲಿಲ್ಲ. ಶುಕ್ರವಾರ ಮುಂದುವರಿದ ಕಾರ್ಯಾಚರಣೆಯಿಂದಾಗಿ ಗೋಕಟ್ಟಾ ಎಂಬಲ್ಲಿ ಸಂಜೆ ಆತನ ಶವ ಪತ್ತೆಯಾಯಿತು. ಬಳ್ಳಾರಿ ಜಿಲ್ಲೆ ನಿಟ್ಟೂರು ಬಳಿಯ ಜೋಗಾವತಿ ಹಳ್ಳದ ಮಣ್ಣಿನ ತಾತ್ಕಾಲಿಕ ಸೇತುವೆ ಶುಕ್ರವಾರ ಜನ ಓಡಾಡುವ ವೇಳೆಯೇ ಮಳೆ ನೀರಿಗೆ ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್ ಸಾವು ಸಂಭವಿಸಿಲ್ಲ.
ಡ್ರೋಣ್ ಮೂಲಕ ಔಷಧ ಪೂರೈಕೆ:ರಾಯಚೂರು ಜಿಲ್ಲೆ ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ ಕರಕಲಗಡ್ಡಿಯ ನಡುಗಡ್ಡೆಯಲ್ಲಿರುವ ಪಾರ್ಶ್ವವಾಯು ಪೀಡಿತ ವ್ಯಕ್ತಿಗೆ ತಾಲೂಕು ಆಡಳಿತ ಡ್ರೋಣ್ ಮೂಲಕ 15 ದಿನಕ್ಕಾಗುವಷ್ಟು ಔಷಧ ಪೂರೈಸಿದೆ. ಜತೆಗೆ ಅಗತ್ಯ ವಸ್ತುಗಳು, ಹೊಸ ಮೊಬೈಲ್​ಫೋನ್ ಕೂಡ ಕಳುಹಿಸಲಾಗಿದೆ. ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ವ್ಯಾಪಕ ಮಳೆ ಆಗಲಿರುವುದರಿಂದ ಆ.22ರಂದು ಯೆಲ್ಲೋ ಅಲರ್ಟ್ ಜಾರಿ ಇರಲಿದೆ.
ನೆರೆ ಪ್ರವಾಸ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆ.24ರಿಂದ 26ರವರೆಗೆ ಅತಿವೃಷ್ಟಿ ಬಾಧಿತ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eleven =
Remember me
