| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತಂಡವನ್ನು ರಚನೆ ಮಾಡಿಕೊಂಡಿರುವ ಜತೆಜತೆಗೆ ಅವರ ಎದುರು ‘ಸವಾಲು’ಗಳ ರಾಶಿಯೇ ಬಂದು ಕುಳಿತಿದೆ. ಅದರೊಂದಿಗೆ ಹೆಜ್ಜೆ ಹೆಜ್ಜೆಗೂ ‘ಅಗ್ನಿ ಪರೀಕ್ಷೆ’ ಎದುರಿಸುವ ಅನಿವಾರ್ಯತೆಯೂ ಇದೆ.
ಬೊಮ್ಮಾಯಿ ಹನಿಮೂನ್ ಅವಧಿ ಇಲ್ಲದೇ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಸಂಪುಟ ರಚನೆಯನ್ನು ಗಮನಿಸಿದರೆ ಮುಖ್ಯಮಂತ್ರಿ ಆದವರಿಗೆ ಯಾವುದೇ ಸ್ವಾತಂತ್ರ್ಯ ಇಲ್ಲದೆ ಇರುವುದು ಕಂಡು ಬರುತ್ತಿತ್ತು, ಒಂದೆಡೆ ಪಕ್ಷದ ಹೈಕಮಾಂಡ್, ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮತ್ತೊಂದೆಡೆ ಮಂತ್ರಿ ಸ್ಥಾನ ಸಿಗದ ಅತೃಪ್ತರು ಹಾಗೂ ಸಂಪುಟದಲ್ಲಿ ಉಂಟಾಗಿರುವ ಅಸಮತೋಲನ ನಿವಾರಣೆ ಮಾಡಿಕೊಳ್ಳುವುದು ಸರ್ಕಸ್​ನಲ್ಲಿನ ‘ಹಗ್ಗದ ಮೇಲಿನ ನಡಿಗೆ’ಯಂತಾಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ವರಿಷ್ಠರು ಚುನಾವಣಾ ಸಂಪುಟವನ್ನೇ ನೀಡಿದ್ದಾರೆ ಎನ್ನಲಾಗುತ್ತಿದೆ. ಪಕ್ಷ ಮುಂದಿನ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂದರೆ ಜನರಲ್ಲಿ ವಿಶ್ವಾಸ ಗಳಿಸುವ ರೀತಿಯಲ್ಲಿ ಚುರುಕಾಗಿ ಕೆಲಸ ನಿರ್ವಹಿಸಬೇಕಾಗಿದೆ.
ಉಳಿದಿರುವುದು ಒಂದೇ ವರ್ಷ: ಬೊಮ್ಮಾಯಿ ಸರ್ಕಾರಕ್ಕೆ 2023ರ ಮೇ ತನಕ ಅವಧಿ ಇದ್ದರೂ, ಅವರಿಗೆ ನಿಜವಾದ ಅಧಿಕಾರ ಮಾಡಲು ಸಿಗುವ ಅವಧಿ ಒಂದು ವರ್ಷ ಮಾತ್ರ. ಏಕೆಂದರೆ ಕೊನೆಯ ವರ್ಷ ಪೂರ್ಣ ಪ್ರಮಾಣದಲ್ಲಿ ಚುನಾವಣಾ ವರ್ಷವೇ ಆಗಿರುತ್ತದೆ. ಆದ್ದರಿಂದ ಬೊಮ್ಮಾಯಿ ಒಂದು ವರ್ಷದ ಅವಧಿಯಲ್ಲಿ ತಮ್ಮ ಸರ್ಕಾರದ ಇಮೇಜ್ ಹೆಚ್ಚಿಸುವ ಮೂಲಕ, ಪಕ್ಷವನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸಬೇಕಾಗಿದೆ. ಅದಕ್ಕೂ ಮೊದಲೇ ಅನೇಕ ಚುನಾವಣೆಗಳು ಇದ್ದು, ಅವುಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವಂತೆ ನೋಡಿಕೊಳ್ಳಬೇಕಾಗಿದೆ. ಆದ್ದರಿಂದ ಎಲ್ಲಿಯೂ ಎಚ್ಚರ ತಪ್ಪದೇ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿ ಕೆಲ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಅಂತಹ ಆರೋಪಗಳಿಗೆ ಅವಕಾಶ ಇಲ್ಲದಂತೆ ಎಚ್ಚರವಹಿಸುವ ದೊಡ್ಡ ಹೊಣೆ ಬೊಮ್ಮಾಯಿ ಮೇಲಿದೆ. ಸರ್ಕಾರದ ಅವಧಿ ಮುಗಿಯುತ್ತ ಬಂದಂತೆ ಭ್ರಷ್ಟಾಚಾರ ಹೆಚ್ಚುವುದು ಮೊದಲಿನಿಂದಲೂ ಬೆಳೆದು ಬಂದಿದೆ. ಅದನ್ನು ಬೊಮ್ಮಾಯಿ ಯಾವ ರೀತಿಯಲ್ಲಿ ತಡೆಯಲಿದ್ದಾರೆ ಎಂಬುದು ಬೊಮ್ಮಾಯಿಗೆ ಇರುವ ದೊಡ್ಡ ಸವಾಲು. ಸಚಿವ ಸಂಪುಟದಲ್ಲಿ ಪ್ರಾದೇಶಿಕ ಸಮಾನತೆ, ಪ್ರಾದೇಶಿಕ ನ್ಯಾಯವನ್ನು ಕಾಪಾಡಿಲ್ಲ ಎಂಬ ಮಾತಿದೆ. ಇಂತಹ ಅಸಮತೋಲನವನ್ನು ಸರ್ಕಾರದ ಕಾರ್ಯಕ್ರಮಗಳ ಮೂಲಕ ಸರಿಪಡಿಸಿಕೊಂಡು ರಾಜ್ಯದ ಜನರಿಗೆ ಆ ಭಾವನೆ ಬಾರದಂತೆ ನೋಡಿಕೊಳ್ಳಬೇಕಾಗಿದೆ.
ಹಿರಿಯರು-ಕಿರಿಯರ ಸಂಭಾಳಿಕೆ
ಬೊಮ್ಮಾಯಿ ಅವರ ಸಂಪುಟ ಹಿರಿಯರು ಹಾಗೂ ಕಿರಿಯರಿಂದ ಕೂಡಿದೆ. ಹೆಚ್ಚು ಹಿರಿಯರು ಅವಕಾಶ ಪಡೆದಿದ್ದಾರೆ. ರಾಜಕೀಯ ಅನುಭವ ಹಾಗೂ ಪಕ್ಷದಲ್ಲಿ ಹಿರಿಯರಾದವರನ್ನು ಸಂಭಾಳಿಸುವ ಕೆಲಸವನ್ನು ಅತ್ಯಂತ ಜಾಣ್ಮೆಯಿಂದ ನಿರ್ವಹಿಸಬೇಕಾಗಿದೆ. ಅನೇಕ ಕಿರಿಯರು ಹೊಸದಾಗಿ ಸಂಪುಟಕ್ಕೆ ಸೇರಿದ್ದು, ಅವರನ್ನು ಇಲಾಖೆಯ ಕರ್ತವ್ಯದಲ್ಲಿ ಮೈ ಮರೆಯದಂತೆ ನೋಡಿಕೊಳ್ಳಬೇಕಾಗಿದೆ. ಬೊಮ್ಮಾಯಿ, ಜೆ.ಎಚ್.ಪಟೇಲ್ ಕಾಲದಿಂದಲೂ ರಾಜಕೀಯ ಪಡಸಾಲೆಯನ್ನು ಹತ್ತಿರದಿಂದ ನೋಡಿದ್ದಾರೆ. ಆದ್ದರಿಂದ ಹಿರಿಯ-ಕಿರಿಯರನ್ನು ಸಂಭಾಳಿಸುವ ಜಾಣ್ಮೆಯನ್ನು ಹೇಗೆ ತೋರಲಿದ್ದಾರೆ ಎಂಬುದನ್ನು ರಾಜ್ಯದ ಜನ ಎದುರು ನೋಡುತ್ತಿದ್ದಾರೆ.
ಅಭಿವೃದ್ಧಿಗೆ ಆದ್ಯತೆ
ಸರ್ಕಾರ ಜೀವಂತವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಸಾಬೀತು ಮಾಡಿ ತೋರಿಸಬೇಕಾಗಿದೆ. ಅದಕ್ಕೆ ತಕ್ಕಂತೆ ಆರ್ಥಿಕ ಸಂಪನ್ಮೂಲ ಕ್ರೋಡಿಕರಿಸಬೇಕು. ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದರೇ ಜನರಲ್ಲಿ ವಿಶ್ವಾಸ ಮೂಡಿಸಲು ಆಗುವುದಿಲ್ಲ. ಕೇಂದ್ರವನ್ನು ಮನವೊಲಿಸುವ ಮೂಲಕ ಬಾಕಿ ಹಣದ ಜತೆಗೆ ಹೆಚ್ಚಿನ ನೆರವು ತರುವ ಪ್ರಯತ್ನ ಮಾಡಬೇಕಾಗಿದೆ. ಬೊಮ್ಮಾಯಿ ಮೊದಲ ದಿನವೇ ಮಿತವ್ಯಯದ ಮಾತನಾಡಿದ್ದು, ಅದನ್ನು ಅಕ್ಷರಶಃ ಜಾರಿಗೆ ತರಬೇಕು.
ಸ್ಟೇರಿಂಗ್ ಹೈಕಮಾಂಡ್ ಕೈಯಲ್ಲಿ
ಸಂಪುಟ ರಚನೆ ಕಸರತ್ತು 3 ದಿನಗಳ ಕಾಲ ದೆಹಲಿಯಲ್ಲಿ ನಡೆದಾಗ ಸಾಕಷ್ಟು ನಿರೀಕ್ಷೆಗಳಿದ್ದವು. ಪೂರ್ಣಪ್ರಮಾಣದಲ್ಲಿ ಹೊಸ ಸಂಪುಟವೇ ಬರಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಆ ರೀತಿಯಾಗಿಲ್ಲ. ಏಳು ಜನರನ್ನು ತೆಗೆದು ಆರು ಜನರಿಗೆ ಹೊಸದಾಗಿ ಅವಕಾಶ ನೀಡಲಾಗಿದೆ. ಇಲ್ಲಿ ಹೈಕಮಾಂಡ್​ನ ಹಿಡಿತ ಇರುವುದು ನೋಡಿದರೆ ಬೊಮ್ಮಾಯಿ ಚಾಲಕನ ಸ್ಥಾನದಲ್ಲಿ ಕೂತಿದ್ದರೂ ಸ್ಟೇರಿಂಗ್ ಹೈಕಮಾಂಡ್ ಹಿಡಿತದಲ್ಲಿದೆ. ಇದು ಒಂದು ರೀತಿಯ ಸಮಾಧಾನದ ಸಂಗತಿಯೂ ಹೌದು. ಕೇಂದ್ರದ ವರಿಷ್ಠರು ಸರ್ಕಾರ ಎಚ್ಚರ ತಪ್ಪದಿರುವಂತೆ ನೋಡಿಕೊಳ್ಳುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗುತ್ತದೆ. ಅಭಿವೃದ್ಧಿ ಹಾಗೂ ಮುಂದಿನ ಚುನಾವಣೆಗೆ ಪಕ್ಷದ ಇಮೇಜ್ ಹೆಚ್ಚಿಸುವುದು ವರಿಷ್ಠರ ಉದ್ದೇಶ ಇದಾಗಿದೆ ಎಂದೇ ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಾರೆ.
ಬಿಎಸ್​ವೈ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಿಂದ ಬೊಮ್ಮಾಯಿ ನಡೆದುಕೊಳ್ಳಬೇಕಾಗಿದೆ. ಅವರ ಮನಸ್ಸಿಗೆ ಎಲ್ಲಿಯೂ ನೋವಾಗದಂತೆ ನಡೆದುಕೊಳ್ಳುವುದು ಇಡೀ ಸರ್ಕಾರದ ಜವಾಬ್ದಾರಿಯೂ ಆಗಿದೆ. ಅವರಿಗೆ ಏನಾದರೂ ಮನಸ್ಸಿಗೆ ನೋವಾಗಿದೆ ಎಂಬುದೇನಾದರೂ ಹೊರಬಂದರೆ ಅದು ಬಿಜೆಪಿ ಸಂಘಟನೆಗೆ ದೊಡ್ಡ ಹೊಡೆತ ಕೊಡುತ್ತದೆ. ಆದ್ದರಿಂದ ಇಡೀ ಸಂಪುಟ ಅವರನ್ನು ಗೌರವದಿಂದ ನೋಡಿಕೊಳ್ಳಬೇಕಾಗುತ್ತದೆ. ಆ ರೀತಿಯಲ್ಲಿ ಮಾಡುವುದು ಬೊಮ್ಮಾಯಿ ಅವರ ಕರ್ತವ್ಯವೂ ಆಗಿರುತ್ತದೆ. ಈ ವಿಚಾರದಲ್ಲಿ ಹೈಕಮಾಂಡ್ ಸಹ ಅನುಮಾನದಿಂದ ನೋಡದಂತೆ ಎಚ್ಚರ ವಹಿಸಬೇಕಾಗುತ್ತದೆ.
ಹಾಲಿ ಕಚೇರಿಯಲ್ಲೇ ಮುಂದುವರಿಯಲು 20 ಸಚಿವರ ಆಸಕ್ತಿ
ಬೆಂಗಳೂರು: ಸಂಪುಟ ಸೇರಿರುವ 20 ಸಚಿವರು, ಈಗ ಹಾಲಿ ಇರುವ ಕಚೇರಿಗಳನ್ನೇ ಮುಂದುವರಿಸಲು ಒಲವು ತೋರಿಸಿದ್ದಾರೆ. ಬಿಎಸ್​ವೈ ಸಂಪುಟದಲ್ಲಿದ್ದ 23 ಸಚಿವರುಗಳು ಈಗ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದು, ಅದರಲ್ಲಿ ವಿಕಾಸ ಸೌಧದಲ್ಲಿರುವ ಕೆಲ ಸಚಿವರು ವಿಧಾನಸೌಧದ ಕಡೆಗೆ ಬರಲು ಆಸಕ್ತರಾಗಿದ್ದಾರೆ. ವಸತಿ ಸಚಿವ ಸೋಮಣ್ಣ ಸೇರಿ 3-4 ಸಚಿವರು ಮಾತ್ರ ವಿಧಾನಸೌಧಕ್ಕೆ ತಮ್ಮ ಕಚೇರಿಯನ್ನು ಬದಲಿಸಿಕೊಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತೆರೆದ ಕಚೇರಿ ಬಾಗಿಲು
ಮಾಜಿ ಆಗುತ್ತಿದ್ದಂತೆ ಸೀಲ್ ಮಾಡಿ ಬಂದ್ ಮಾಡಲಾಗಿದ್ದ ಸಚಿವರ ಕಚೇರಿಗಳನ್ನು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆಯೇ ತೆರೆಯಲಾಗಿದೆ.
ವಿಜಯಪುರಕ್ಕೆ ಬರ
ಬಿಜೆಪಿಯಿಂದ ಮೂವರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರನ್ನು ಹೊಂದಿರುವ ವಿಜಯಪುರ ಜಿಲ್ಲೆ ಸಂಪುಟದಲ್ಲಿ ಸ್ಥಾನಸಿಕ್ಕಿಲ್ಲ. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಅವಕಾಶ ವಂಚಿತರಾಗಿದ್ದಾರೆ.
ಬೆಲ್ಲದ್​ಗೆ ಶೆಟ್ಟರ್ ಅಡ್ಡಿ
ಬೆಂಗಳೂರು: ಅರವಿಂದ ಬೆಲ್ಲದ ಸಂಪುಟ ಸೇರದಿರಲು ಜಗದೀಶ ಶೆಟ್ಟರ್ ಕೂಡ ಅಡ್ಡಿಯಾಗಿದ್ದರು ಎಂಬುದೀಗ ಬಿಜೆಪಿ ವಲಯದಲ್ಲಿ ಚರ್ಚೆಯಲ್ಲಿದೆ. ಬೆಲ್ಲದ ಮಂತ್ರಿಯಾದರೆ ಧಾರವಾಡ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆಂಬ ಕಾರಣಕ್ಕೆ ಅವರನ್ನು ಮಂತ್ರಿ ಮಾಡದಿ ರುವಂತೆ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದರು. ಇದಕ್ಕೆ ಹೈಕಮಾಂಡ್ ಒಪ್ಪಿತು ಎನ್ನಲಾಗಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:15 + 6 =
Remember me
