ಬೆಂಗಳೂರು:ಇನ್ನೂ ಮುಗಿಯದ ಕರೊನಾ ಎರಡನೇ ಅಲೆ ಹಾಗೂ ಮೂರನೇ ಅಲೆ ಆಗಮನದ ಆತಂಕದ ಹಿನ್ನೆಲೆಯಲ್ಲಿ ಪರಿಣತರ ಸಮಿತಿ ಸರ್ಕಾರಕ್ಕೆ ಒಂದಷ್ಟು ಸಲಹೆಗಳನ್ನು ನೀಡಿದೆ. ಕರೊನಾ ಪರಿಸ್ಥಿತಿ ನಿರ್ವಹಣೆ ಬಗ್ಗೆ ಡಾ.ದೇವಿಪ್ರಸಾದ್ ಶೆಟ್ಟಿ, ಡಾ. ಸುದರ್ಶನ್​ ಬಲ್ಲಾಳ್​ ಅವರಿರುವ ಸಮಿತಿ ಸಚಿವರಾದ ಡಾ.ಕೆ.ಸುಧಾಕರ್, ಡಾ.ಸಿ.ಎನ್​. ಅಶ್ವತ್ಥನಾರಾಯಣ್​ ಮುಂತಾದ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದೆ. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಭೆ ನಡೆಸಿದ್ದು, ಆ ಬಳಿಕ ಅವರು ಕೋವಿಡ್​ ಸ್ಥಿತಿಗತಿ ನಿರ್ವಹಣೆ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕೋವಿಡ್ ಎರಡನೇ ಅಲೆ ಅಂತಿಮ ಹಂತದಲ್ಲಿದೆ. ಅಲೆಯ ಪ್ರಭಾವ ಕಮ್ಮಿಯಾದರೂ ಸಾವಿರಕ್ಕೂ ಅಧಿಕ ಪ್ರಕರಣಗಳು ಬರುತ್ತಿವೆ ಎಂದಿರುವ ಸಿಎಂ, ಗಡಿಭಾಗಗಲ್ಲಿ ತೀವ್ರ ನಿಗಾ ಇರುವ ಕುರಿತು ತಿಳಿಸಿದ್ದಾರೆ. ಸದ್ಯಕ್ಕೆ ಗಡಿ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಎಂದು ಸಮಿತಿ ಹೇಳಿದೆ. ಆದರೆ ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಪ್ರದೇಶಗಳಲ್ಲಿ ಶಾಲೆ ಆರಂಭಿಸಬಹುದು. ಅಂಥ ಕಡೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಲಸಿಕೆ ಪಡೆದಿರಬೇಕು. ಒಂದು ವೇಳೆ ಪಾಸಿಟಿವಿಟಿ ಶೇ.2ಕ್ಕಿಂತ ಅಧಿಕವಾದಲ್ಲಿ ಒಂದು ವಾರ ಶಾಲೆಗಳನ್ನು ಬಂದ್ ಮಾಡಿ ನಂತರ ಸ್ಯಾನಿಟೈಸ್​ ಮಾಡಿ ಶುರು ಮಾಡಬೇಕು ಎಂದಿದ್ದಾರೆ.
ಸದ್ಯದ ಪರಿಸ್ಥಿತಿ ನೋಡಿದರೆ ಜಿಲ್ಲಾವಾರು ಕೋವಿಡ್​ ನಿರ್ವಹಣೆ ಪ್ಲ್ಯಾನ್ ಮಾಡಬೇಕಿದೆ. ಆಯಾ ಜಿಲ್ಲೆಗಳಲ್ಲಿನ ಪಾಸಿಟಿವಿಟಿ ಇತ್ಯಾದಿ ಅಂಶಗಳಿಗೆ ಅನುಸಾರವಾಗಿ ಆಯಾ ಜಿಲ್ಲೆಗಳವರೇ ಕ್ರಮಕೈಗೊಳ್ಳಬೇಕು. ದಕ್ಷಿಣಕನ್ನಡ, ಉಡುಪಿ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಬೆಂ. ಗ್ರಾಮಾಂತರಗಳಲ್ಲಿ ಹೆಚ್ಚಿನ ಲಸಿಕೀಕರಣ ಆಗಬೇಕು. ಇಲ್ಲಿ ಪಾಸಿಟಿವಿಟಿ ಹೆಚ್ಚಿದೆ. ಟೆಸ್ಟಿಂಗ್ ವ್ಯಾಕ್ಸಿನೇಷನ್​ ಕೂಡ ಜಾಸ್ತಿ ಆಗಬೇಕು. ಅಲ್ಲದೆ ಮಹಾರಾಷ್ಟ್ರ, ಕೇರಳ ಗಡಿಯ 10 ಕಿ.ಮೀ. ಒಳಗಿನ ಎಲ್ಲ ಹಳ್ಳಿಗಳಲ್ಲಿ ಸಂಪೂರ್ಣ ಟೆಸ್ಟ್​ ಆಗಬೇಕು. ರಾಯಚೂರು, ಗುಲ್ಬರ್ಗ, ಹಾವೇರಿ, ಚಿಕ್ಕಮಗಳೂರ, ಬಳ್ಳಾರಿ, ಬೀದರ್, ಕೊಪ್ಪಳ, ತುಮಕೂರು, ಬಿಜಾಪುರ ಟೆಸ್ಟಿಂಗ್ ಹೆಚ್ಚಬೇಕು ಎಂದು ಸಿಎಂ ಹೇಳಿದರು.
ಮುಂದಿನ ಮೂರು ವಾರಗಳಲ್ಲಿ 6 ಜೀನೋಮ್​ ಟೆಸ್ಟಿಂಗ್ ಲ್ಯಾಬ್​ ಸ್ಥಾಪನೆ ಆಗಬೇಕು. ಡೆಲ್ಟಾ ವೇರಿಯಂಟ್ ಕುರಿತು ಹೆಚ್ಚಿನ ಅಧ್ಯಯನ ಅನಿವಾರ್ಯವಾಗಿದ್ದು, ಅದಕ್ಕೆ ಜೀನೋಮ್ ಲ್ಯಾಬ್ ಅಗತ್ಯವಾಗಿದೆ. ಆ ಕುರಿತು ಸೋಮವಾರ ಆದೇಶ ಹೊರಡಿಸಲಾಗುವುದು. ಐಐಎಸ್​ಸಿ ಸೇರಿ ಈಗಾಗಲೇ ರಾಜ್ಯದಲ್ಲಿ ನಾಲ್ಕು ಅಂಥ ಲ್ಯಾಬ್​ಗಳಿವೆ ಎಂದೂ ಸಿಎಂ ಹೇಳಿದರು. ರಾಜ್ಯದಲ್ಲಿ ಸದ್ಯ 4 ಕೋಟಿ ಲಸಿಕೀಕರಣ ಆಗಿದೆ, 14 ಲಕ್ಷ ಡೋಸ್ ಇದೆ, 30 ಲಕ್ಷ ಈ ತಿಂಗಳಾಂತ್ಯದಲ್ಲಿ ಬರುತ್ತೆ. ಮತ್ತಷ್ಟು ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಪಾಸಿಟಿವಿಟಿ ಶೇ. 0.75 ಇದೆ. ಅದು ಶೇ. 2ಕ್ಕೆ ಬಂದರೆ ಅಥವಾ ಆಸ್ಪತ್ರೆಗಳ ಬೆಡ್​ ಶೇ. 40 ತುಂಬಿದರೆ ಕೋವಿಡ್ ಪರಿಸ್ಥಿತಿ ನಿರ್ವಹಣೆ ಅಧಿಕಾರವನ್ನು ಪೂರ್ಣವಾಗಿ ಬಿಬಿಎಂಪಿಗೇ ಕೊಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಪರಿಣತರ ಪ್ರಕಾರ ಎರಡನೆ ಅಲೆ ಸಂಪೂರ್ಣ ಮುಗಿದಿಲ್ಲ. ಮೊದಲನೆ ಅಲೆ ಕೇರಳದಲ್ಲೇ ಶುರುವಾಗಿದ್ದು, ಎರಡನೆ ಅಲೆ ಅತಿಹೆಚ್ಚು ಇರುವುದು ಕೂಡ ಕೇರಳದಲ್ಲೇ. ಕೇರಳಿಗರ ನಿಯಂತ್ರಣ ಆಗಲೇಬೇಕಿದೆ. ಜನರ ಜೀವ-ಜೀವನದ ಪ್ರಶ್ನೆ ಇದು. ಅದು ನಮ್ಮ ಜವಾಬ್ದಾರಿ ಇದೆ. ಅವರು ಹೈಕೋರ್ಟ್​ನಲ್ಲಿ ಕೇಸ್ ಹಾಕುವುದರ ಬದಲು ನಿಯಂತ್ರಣಕ್ಕೆ ಗಮನಕೊಡಲಿ ಎಂದ ಸಿಎಂ, ಹಬ್ಬಗಳಿಗೆ ಹಳೇ ಮಾರ್ಗಸೂಚಿಯೇ ಅನ್ವಯಿಸುತ್ತದೆ, ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ಇರುವುದಿಲ್ಲ ಎಂದರು.
ಇನ್ಮುಂದೆ ಶಾಸಕ ಸತೀಶ್​ ರೆಡ್ಡಿ ಮನೆಗೆ ಸಾರ್ವಜನಿಕರ ಪ್ರವೇಶಕ್ಕೂ ಕಟ್ಟುನಿಟ್ಟು; ಕಾರಣವಿದು…

ಪೆಟ್ಟಾದರೂ ಛಲ ಕುಂದಿಲ್ಲ, ಕೊನೆಯ ಉಸಿರು ಇರುವವರೆಗೂ ಹೋರಾಡುವೆ: ವಿಜಯವಾಣಿ ಕ್ಲಬ್​ಹೌಸ್​​ನಲ್ಲಿ ವೀರಯೋಧ ಮಹೇಶ್

Sign in to your account
Please enter an answer in digits:fifteen + 10 =
Remember me
