ಬೆಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಹಿಂದೆ ವಿದೇಶದ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಹೋರಾಟಕ್ಕೆ ಸಾಕಷ್ಟು ಹಣದ ನೆರವೂ ಹರಿದು ಬರುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೊರಗೆಡವಿದ್ದಾರೆ.
ವಿಧಾನಸಭೆಯಲ್ಲಿ ನಿಯಮ 69ರಡಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತ ಚರ್ಚೆಯ ಕೊನೆಯಲ್ಲಿ ಉತ್ತರ ನೀಡಿದ ಅವರು, ಅನೇಕ ಶಾಸಕರಿಗೆ ಬೆದರಿಕೆ ಕರೆ ಬಂದಿದೆ. ದುಬೈ, ಸೌದಿ ಕಡೆಯಿಂದ ಕರೆಗಳು ಬಂದಿವೆ. ನನಗೂ ಬಂದಿದೆ. ಆದರೆ ಅವು ಮಹತ್ವ ಎನಿಸಲಿಲ್ಲ, ಹೀಗಾಗಿ ಸುಮ್ಮನಿದ್ದೆ. ಮುಖ್ಯಮಂತ್ರಿಯವರಿಗೂ ಎಚ್ಚರಿಕೆ ನೀಡುವ ಕರೆ ನನಗೆ ಬಂದಿದೆ. ಇದೊಂದು ದೊಡ್ಡ ಷಡ್ಯಂತ್ರ ಎನಿಸುತ್ತಿದೆ ಎಂದರು.
ಪೌರತ್ವ ವಿರೋಧಿ ಹೋರಾಟದಲ್ಲಿ ಕರ್ನಾಟಕಕ್ಕೆ ಅಂತಾರಾಜ್ಯ ಕುಮ್ಮಕ್ಕಲ್ಲದೇ ಹೊರಗಿನಿಂದಲೂ ಚಿತಾವಣೆ ಇದೆ. ಉತ್ತರ ಪ್ರದೇಶ, ಬಿಹಾರದಲ್ಲೂ ಇಂಥ ಘಟನೆಗಳು ನಡೆದಿವೆ. ಈ ಬಗ್ಗೆ ವಿವರ ಕಲೆ ಹಾಕಲಾಗುತ್ತಿದೆ ಎಂದರು.
ಕರ್ನಾಟಕದ ಘಟನೆಯಲ್ಲಿ ಪಿಎಫ್​ಐ ಪಾತ್ರದ ಬಗ್ಗೆಯೂ ಗೃಹ ಸಚಿವರು ಮಾಹಿತಿ ನೀಡಿದರು. ಜತೆಗೆ ಕೇರಳದಿಂದ ಬಂದವರ ಬಗ್ಗೆ ವಿವರಣೆ ನೀಡಿದರು. ಕೇರಳದಿಂದ ನಮ್ಮ ಕರಾವಳಿ ಜಿಲ್ಲೆ ಪ್ರವೇಶಿಸಲು 100 ದಾರಿಗಳಿವೆ. ಸಮುದ್ರ ಮೂಲಕವೂ ಪ್ರವೇಶಿಸಬಹುದು. 45 ನಿಮಿಷದಲ್ಲಿ ಇಲ್ಲಿಗೆ ಬಂದು ತಲುಪಬಹುದು. ಘಟನೆ ನಡೆದ ಸಂದರ್ಭದಲ್ಲಿ ಕೇರಳಕ್ಕೆ ಸಂಬಂಧಪಟ್ಟ 1300 ಮೊಬೈಲ್​ಗಳು ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದು ಗೊತ್ತಾಗಿದೆ. 373 ಕೇರಳ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದೆ. ಅವರು ವ್ಯಾಪಾರಕ್ಕೂ ಬಂದವರು ಇರಬಹುದು. ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಪೌರತ್ವ ಕಾಯ್ದೆಯಿಂದ ಏನೂ ಆಗಲ್ಲ ಎಂದು ಗೊತ್ತಿದ್ದರೂ ಉದ್ದೇಶ ಪೂರ್ವಕವಾಗಿ ಭಯ ಬಿತ್ತಲಾಗುತ್ತಿದೆ. ಪರದೆ ಹಿಂದೆ ನಿಂತು ಚಿತಾವಣೆ ಮಾಡಲಾಗುತ್ತಿದೆ. ಬೀದಿಗೆ ಬಂದು ಹೋರಾಡುವಂತೆ ಪ್ರೇರೇಪಿಸಲಾಗುತ್ತಿದೆ ಎಂದು ಟೀಕಿಸಿದರು.
ಸುಪ್ರೀಂಗೆ ಅರ್ಜಿ
ಮಂಗಳೂರು ಗಲಭೆ ಘಟನೆಯಲ್ಲಿ ಬಂಧಿತರಾದವರಿಗೆ ಜಾಮೀನು ನೀಡಿರುವ ಹೈಕೋರ್ಟ್, ತನ್ನ ಆದೇಶದಲ್ಲಿ ಪ್ರಸ್ತಾಪಿಸಿರುವ ಅಂಶಗಳ ಕುರಿತು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಜಾಮೀನು ನೀಡುವಾಗ ಬೇರೆ ವಿಚಾರ ಪ್ರಸ್ತಾಪಿಸಬಾರದೆಂದು ಸುಪ್ರಿಂಕೋರ್ಟ್ ಒಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೂ, ಹೈಕೋರ್ಟ್ ಜಾಮೀನು ನೀಡುವಾಗ ನೀಡಿರುವ ಅಭಿಪ್ರಾಯ ಸರಿಯಲ್ಲ. ಈ ಪ್ರಸ್ತಾಪವನ್ನು ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.
ರಾಜಕೀಯ ಲಾಭಕ್ಕೆ ಪೊಲೀಸರ ಟೀಕೆ ಬೇಡ
ಬೆಂಗಳೂರು:ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸರ್ಕಾರ ಸಮರ್ಥಿಸಿಕೊಂಡಿದ್ದು, ಪ್ರತಿಪಕ್ಷದ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಜತೆಗೆ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತೆ ಹೇಳಿಕೆ ನೀಡಬೇಡಿ ಎಂದು ಬುದ್ಧಿವಾದ ಹೇಳಿದೆ.
ವಿಧಾನಸಭೆಯಲ್ಲಿ ನಿಯಮ 69ರ ಅಡಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ನಡೆದ ಚರ್ಚೆಯ ಕೊನೆಯಲ್ಲಿ ಉತ್ತರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕರ್ತವ್ಯ ನಿರತ ಪೊಲೀಸರ ಮೇಲೆ ಕಲ್ಲು ತೂರಿದರೆ, ಪೆಟ್ರೋಲ್ ಬಾಂಬ್ ತೂರಿದರೆ ಅವರಾದರೂ ಏನು ಮಾಡಲು ಸಾಧ್ಯ. ಪೊಲೀಸರ ಜತೆ ನಿಂತು ಆತ್ಮ ಸ್ಥೈರ್ಯ ತುಂಬದೇ ಹೋದರೆ ಮುಂದೆ ಇಂಥ ಗಲಭೆ ನಡೆದಾಗ ಅವರು ಮೂಕ ಪ್ರೇಕ್ಷಕರಾಗಿ ನಿಂತು ಬಿಡಬಹುದು. ಇಂಥ ಸಂದರ್ಭದಲ್ಲಿ ರಾಜಕೀಯ ಲಾಭ ಲೆಕ್ಕಾಚಾರ ಮಾಡದೇ, ಎಲ್ಲರೂ ಒಟ್ಟಾಗಿರಬೇಕು ಎಂದು ಹೇಳಿದರು.
ಇನ್ನವಾದರೆ ಮುಂದೆ ಎಲ್ಲರೂ ದೊಡ್ಡ ಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ, ಇದು ಮರುಕಳಿಸಿದರೆ ರಾಷ್ಟ್ರಕ್ಕೆ ಆತಂಕ ವಿಚಾರ ಎಂದರು. ರಾಜ್ಯದ ಪೊಲೀಸರಿಗೆ ಉತ್ತಮ ಟ್ರಾ್ಯಕ್ ರೆಕಾರ್ಡ್ ಇದೆ. ಬೇರೆ ರಾಜ್ಯಗಳ ಪೊಲೀಸ್ ವ್ಯವಸ್ಥೆಗೆ ಹೋಲಿಸಿದರೆ ರಾಜ್ಯದ ಪೊಲೀಸರ ಕಾರ್ಯನಿರ್ವಹಣೆ ಉತ್ತಮ ರೀತಿಯಲ್ಲಿದೆ ಎಂದರು.
ರಾಜ್ಯದಲ್ಲಿ 2-3 ತಿಂಗಳಲ್ಲಿ 736 ಪೌರತ್ವ ವಿರೋಧಿ ಪ್ರತಿಭಟನೆ ನಡೆದಿದ್ದು, ಎಲ್ಲೆಡೆ ಶಾಂತಿಯುತವಾಗಿ ನಡೆದಿದೆ. ಸರ್ಕಾರ ಪ್ರತಿಭಟನೆ ನಡೆಸುವ ಹಕ್ಕನ್ನೇ ಕೊಟ್ಟಿಲ್ಲ ಎಂಬ ಪ್ರತಿಪಕ್ಷದ ಆರೋಪದಲ್ಲಿ ಹುರುಳಿಲ್ಲ. ಬೆಂಗಳೂರಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಸೇರಿದ ಪ್ರತಿಭಟನೆಯೂ ನಡೆದಿತ್ತು ಎಂದು ವಿವರಿಸಿದರು.
ಹತ್ಯೆಯಾದ ಜಮೀಲ್ ಮೇಲೆ ಪ್ರಕರಣಗಳಿವೆ, ನೌಶೀರ್ ಗೂ ಸಂಘಟನೆ ನಂಟಿದೆ. ಹೀಗಾಗಿ ಮೂಲ್ಕಿ ಗೋಲಿಬಾರ್ ಪ್ರಕರಣದಲ್ಲಿ ಪರಿಹಾರ ನೀಡಿಲ್ಲ. ಹೀಗಾಗಿ ಎರಡನ್ನೂ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು. ಮಂಗಳೂರಿನ ಎರಡೂ ಠಾಣೆಗಳಲ್ಲಿ ದಾಖಲಾದ ಪ್ರಕರಣದಂತೆ 57 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಕೊನೆಯಲ್ಲಿ ನ್ಯಾಯಾಂಗ ತನಿಖೆಗೆ ಒತ್ತಾಯ ಮತ್ತು ದೇಶದ್ರೋಹ ಪ್ರಕರಣ ಹಿಂತೆಗೆದುಕೊಳ್ಳಬೇಕೆಂಬ ಪ್ರತಿಪಕ್ಷದ ಮನವಿಯನ್ನು ಸರ್ಕಾರ ಪರಿಗಣಿಸಲಿಲ್ಲ. ಸರ್ಕಾರದ ಉತ್ತರಕ್ಕೆ ತೃಪ್ತವಾಗದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಪೊಲೀಸರೇ ನಡೆಸಿದ ಅಮಾಯಕರ ಹತ್ಯೆ ಎಂದು ಟೀಕಿಸಿ ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರು ಮಾತ್ರ ಸದನದಲ್ಲೇ ಉಳಿದರು.
ಗುಹಾಗೆ ಕ್ಷಮೆ ಕೋರಿದ ಗೃಹ ಸಚಿವ: ಈ ಹೋರಾಟದಲ್ಲಿ ಕೆಲವು ಸಣ್ಣಪುಟ್ಟ ಘಟನೆಗಳು ನಡೆದಿವೆ. ಲೇಖಕ ರಾಮಚಂದ್ರ ಗುಹಾ ಅವರನ್ನು ಎಳೆದಾಡಲಾಯಿತು. ಅದಕ್ಕಾಗಿ ನಾನೇ ಖುದ್ದು ಅವರಿಗೆ ಕರೆ ಮಾಡಿ ಕ್ಷಮೆ ಕೋರಿದೆ. ಮಾಜಿ ಸ್ಪೀಕರ್​ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಬೆಂಕಿಹಚ್ಚಿ, ಕಲ್ಲು ತೂರಿದವರು ಅಮಾಯಕರೇ?
ಮಂಗಳೂರು ಪ್ರತಿಭಟನೆ ವೇಳೆ ಕಲ್ಲು ತೂರಾಟ ಆರಂಭಿಸಿದರು. ಪ್ರಚೋದನೆಗೊಳಗಾಗಿ ಸಂಘಟಿತವಾಗಿ ಬಂದರು, ಸಾವಿರಾರು ಜನರೂ ಇದ್ದರು. ಪೊಲೀಸ್ ಠಾಣೆಯತ್ತ ಕಲ್ಲು ತೂರಿ, ಪೊಲೀಸ್ ವಾಹನ ಅಲ್ಲಿ ಬಾರದಂತೆ ಕಂಬಗಳನ್ನು ಹಾಕಿ ಅಡ್ಡಗಟ್ಟಿದರು. ಸಿಸಿ ಕ್ಯಾಮರಾಗಳನ್ನು ಹಾನಿ ಮಾಡಿದರು. ಟಯರ್​ಗೆ ಬೆಂಕಿ ಹಚ್ಚಿ ಠಾಣೆಯೊಳಗೆ ಹಾಕಲು ಪ್ರಯತ್ನಿಸಿದರು, ಅಲ್ಲೇ ಇದ್ದ ಬಂದೂಕು ಮಾರಾಟದ ಅಂಗಡಿಯನ್ನು ಹಾನಿ ಮಾಡಿದ್ದರು. ಅವರ ಕೈಗೆ ಬಂದೂಕು ಸಿಕ್ಕಿದ್ದರೆ ಏನಾಗುತ್ತಿತ್ತು ಎಂದು ಊಹಿಸಲು ಅಸಾಧ್ಯ. ಈ ರೀತಿ ಕಲ್ಲು ತೂರಿ, ಬೆಂಕಿ ಹಚ್ಚಿದವರು ಅಮಾಯಕರೇ? ಎಂದು ಪ್ರತಿಪಕ್ಷದವರನ್ನು ಪ್ರಶ್ನಿಸಿದರು.
ನಿಯಮದ ಪ್ರಕಾರವೇ ಗೋಲಿಬಾರ್
ಗೋಲಿಬಾರ್ ಯಾವ ಸಂದರ್ಭದಲ್ಲಿ ಮಾಡಬಹುದೆಂಬುದಕ್ಕೆ ಸ್ಪಷ್ಟ ನಿರ್ದೇಶನಗಳಿವೆ. ಅದರ ಪ್ರಕಾರವೇ ನಡೆದುಕೊಳ್ಳಲಾಗಿದೆ ಎಂದು ಗೃಹ ಸಚಿವರು ಹೇಳಿದರು. 144 ಸೆಕ್ಷನ್ ಇದ್ದಾಗಲೂ ಪ್ರತಿಭಟನೆಗೆ ಬಂದವರ ಮನವೊಲಿಸಲು ಪ್ರಯತ್ನಿಸಲಾಯಿತು. ಮಾತು ಕೇಳದಾಗ ಲಾಠಿ ಬೀಸಲಾಯಿತು. 106 ಟಿಯರ್ ಗ್ಯಾಸ್ ಸಿಡಿಸಲಾಯಿತು, 43 ರಬ್ಬರ್ ಗುಂಡು ಹಾರಿಸಲಾಯಿತು, ಗಾಳಿಯಲ್ಲಿ 66 ಸುತ್ತು ಗುಂಡು ಹಾರಿಸಲಾಯಿತು. ನಂತರವಷ್ಟೇ ಉದ್ರಿಕ್ತರನ್ನು ಚದುರಿಸಲು ಗುಂಡು ಹಾರಿಲಾಯಿತು. ಏಕಾಏಕಿ ಗುಂಡು ಹಾರಿಸಿಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − one =
Remember me
