ಬೆಂಗಳೂರು:ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ಉತ್ತೇಜನ ನಿರೀಕ್ಷೆ ಇಟ್ಟುಕೊಂಡು ಸ್ವಿಜರ್ಲೆಂಡ್​ನ ದಾವೋಸ್​ಗೆ ತೆರಳಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ತಂಡ ಮೊದಲ ದಿನವೇ ಶುಭ ಸುದ್ದಿಯೊಂದನ್ನು ನೀಡಿದೆ.
ಬೆಂಗಳೂರಿನಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭಿಸಲು ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಡಬ್ಲ್ಯುಇಎಫ್ ಜತೆ ಒಪ್ಪಂದವೊಂದಕ್ಕೆ ಸಹಿದ್ದಾರೆ. ಈ ಮೂಲಕ ಕರ್ನಾಟಕದ ಉದ್ಯಮ ಕ್ಷೇತ್ರದಲ್ಲಿ ಹೊಸದೊಂದು ಅಧ್ಯಾಯ ಆರಂಭವಾಗಿದ್ದು, ಇದು ಹೂಡಿಕೆದಾರರಿಗೆ ಮತ್ತು ಉದ್ಯಮಿಗಳಿಗೆ ಸ್ಪರ್ಧಾತ್ಮಕ ಹಾಗೂ ಹಿತಕರವೂ ಆದ ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ದೀರ್ಘಕಾಲಿಕವಾಗಿ ಉಪಯುಕ್ತವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಡಬ್ಲ್ಯುಇಎಫ್ ಸಂಘಟಕರ ಪ್ರಕಾರ, ವಿಶ್ವದಲ್ಲಿ ಕರ್ನಾಟಕವೇ ಇಂತಹದ್ದೊಂದು ಕೇಂದ್ರ ಸ್ಥಾಪಿಸುವುದಕ್ಕೆ ಮುಂದೆ ಬಂದ ಮೊದಲ ರಾಜ್ಯವಾಗಿದೆ.
ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಸಂದರ್ಭ ಉಪಸ್ಥಿತರಿದ್ದ ಡಬ್ಲ್ಯುಇಎಫ್ ವ್ಯವಸ್ಥಾಪಕ ನಿರ್ದೇಶಕ ಮೊರಾಟ್ ಸಾನ್ಮೆಝ್ ಮಾತನಾಡಿ, ವ್ಯಾಪಾರ ವಹಿವಾಟಿನಲ್ಲಿ ನೈತಿಕತೆಯು ಕಡಿಮೆ ಆಗುತ್ತಿರುವ ಕುರಿತು ಹೂಡಿಕೆದಾರರು ಕಳವಳ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಗಳು ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಗೆ ಈ ಕೇಂದ್ರ ಸಹಕಾರಿ ಎಂದು ವಿವರಿಸಿದರು. ಕರ್ನಾಟಕವು ಹೆಚ್ಚಿನ ಹೂಡಿಕೆ ನಿರೀಕ್ಷಿಸುವುದಾದರೆ, ಈ ಕೇಂದ್ರವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು.
ಇದಕ್ಕೆ ಸ್ಥಳದಲ್ಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಬಿ.ಎಸ್. ಯಡಿಯೂರಪ್ಪ, ಈ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದರು ಮತ್ತು ಔಪಚಾರಿಕ ಒಡಂಬಡಿಕೆಗೂ ಸೈ ಎಂದರು. ನಂತರ ಕರ್ನಾಟಕ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಬಿಎಸ್​ವೈ, ಸುಲಲಿತ ವಹಿವಾಟು ನಡೆಸಲು ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಮುಂಚೂಣಿಗೆ ಬರಲು ನೆರವಾಗುವ ಅಧ್ಯಯನಗಳನ್ನು ಕೈಗೊಳ್ಳಲು ಆಸಕ್ತಿ ವಹಿಸಿದೆ ಎಂದು ತಿಳಿಸಿದ ಅವರು, ಅಭಿವೃದ್ಧಿ ಕಾರ್ಯಸೂಚಿಯ ಗುರಿಯನ್ನು ಪ್ರಸ್ತಾಪಿಸಿದರು.
ಸುಸ್ಥಿರ ಕೈಗಾರಿಕೆಗಳನ್ನು ರೂಪಿಸುವ ಮೂಲಕ ಕರ್ನಾಟಕವು ವರ್ಲ್ಡ್ ಎಕನಾಮಿಕ್ ಫೋರಂ-2020ರ ಗುರಿ ಸಾಧನೆಗೆ ಸಕ್ರಿಯವಾಗಿ ಶ್ರಮಿಸಲಿದೆ. ಭಾರತದ ಪ್ರಮುಖ ಕೈಗಾರಿಕಾ ರಾಜ್ಯವಾಗಿ ಹೊರಹೊಮ್ಮುವ ಮೂಲಕ ಜಾಗತಿಕ ಮಟ್ಟದಲ್ಲಿಯೂ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ರಾಜ್ಯ ಪ್ರಮುಖಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ಮತ್ತು ಏಷ್ಯಾ ಅಜೆಂಡಾದ ಪ್ರಾದೇಶಿಕ ಮುಖ್ಯಸ್ಥ ವಿರಾಜ್ ಮೆಹ್ತಾ ಇತರರಿದ್ದರು.
ಸದ್ಗುರು ಜತೆ ಮಾತುಕತೆ
ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಕರ್ನಾಟಕ ಪೆವಿಲಿಯನ್​ಗೆ ಭೇಟಿ ನೀಡಿದ ಇಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಸಿಎಂ ಯಡಿಯೂರಪ್ಪ ಬರಮಾಡಿಕೊಂಡು ಮಾತುಕತೆ ನಡೆಸಿದರು.
ಕೇಂದ್ರ ಮಾಡೋದೇನು?
ಅಂತರ್ಜಾಲ ಆಧಾರಿತ, ಕೃತಕ ಬುದ್ಧಿಮತ್ತೆ ವ್ಯವಹಾರೋದ್ಯಮ ಹೆಚ್ಚಾಗಿ ಬೆಳೆಯುತ್ತಿದೆ. ಆದರೆ, ನೈತಿಕತೆಗೆ ಲಂಗುಲಗಾಮು ಇಲ್ಲವಾಗಿದೆ. ಖಾಸಗಿತನಕ್ಕೂ ಧಕ್ಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ, ಅಂತರ್ಜಾಲ ದುರ್ಬಳಕೆ ಮೇಲೆ ಎಥಿಕಲ್ ಥಿಂಗ್ಸ್ ಕಣ್ಣಿಡಲಿದೆ. ಜತೆಗೆ ಸರ್ಕಾರಕ್ಕೆ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಪಾಲಿಸಿ ಮಾಡಿಸಲು ಸಹಕಾರ ನೀಡಲಿದೆ. ತಂತ್ರಜ್ಞಾನಕ್ಕೆ ಪೂರಕವಾಗಿ ಸಲಹೆ ಶಿಫಾರಸು ಮಾಡಲಿದೆ.
ಜಾಗತಿಕ ಕಂಪೆನಿಗಳ ಜತೆ ಚರ್ಚೆ
ಸ್ವಿಜರ್ಲೆಂಡ್​ನ ದಾವೋಸ್​ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಬಿ.ಎಸ್.ಯಡಿಯೂರಪ್ಪ, ಅಧಿಕಾರಿಗಳ ತಂಡದೊಂದಿಗೆ ಸೇರಿ ಜಾಗತಿಕ ಮಟ್ಟದ 40 ಕಂಪನಿಗಳ ಜತೆ ಚರ್ಚೆ ನಡೆಸಲಿದ್ದಾರೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶ, ಸರ್ಕಾರದಿಂದ ಸಿಗುವ ಸಹಕಾರದ ಬಗ್ಗೆ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಜತೆಗೆ ಕರ್ನಾಟಕ ಪೆವಿಲಿಯನ್​ಗೆ ಹೂಡಿಕೆದಾರರನ್ನು ಸೆಳೆಯಲು ವಿಶೇಷ ಗಮನ ಹರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
