ಬೆಂಗಳೂರು:ರಾಜ್ಯದ ಹಲವೆಡೆ ನೆರೆ ಪರಿಹಾರ ವಿತರಣೆಯಲ್ಲಿ ನಡೆದಿರುವ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಈ ಪ್ರಕರಣಗಳ ಜಿಲ್ಲಾವಾರು ತನಿಖೆಗೆ ತೀರ್ವನಿಸಿದ್ದಾರೆ. ಮೊದಲ ಹಂತದಲ್ಲಿ ಬೆಳಗಾವಿ ವಿಭಾಗದೆಲ್ಲೆಡೆ ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ಅಕ್ರಮ ಬಯಲಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾವಾರು ತನಿಖೆ ನಡೆಸುವುದು ಮುಖ್ಯಮಂತ್ರಿಗಳ ಉದ್ದೇಶವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಹಾವೇರಿ ಜಿಲ್ಲೆಯಲ್ಲಿ ರೈತರಿಗೆ ಸೇರಬೇಕಾದ ಪರಿಹಾರದ ಹಣವನ್ನು ಅಧಿಕಾರಿಗಳ ಕೈಚಳಕದಿಂದ ಬೇನಾಮಿ ಖಾತೆಗಳಿಗೆ ವರ್ಗಾಯಿಸಿಕೊಂಡ ಬಗ್ಗೆ ವಿಜಯವಾಣಿ ವಿಸõತವಾಗಿ ವರದಿ ಮಾಡಿತ್ತು.
ಬೆಳಗಾವಿ ವಿಭಾಗದಿಂದ ಬರುವ ಮಾಹಿತಿ ಆಧರಿಸಿ ಆ ನಂತರ ಉಳಿದ ಮೂರು ವಿಭಾಗಗಳ ವ್ಯಾಪ್ತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಬಿಎಸ್​ವೈ ನಿಲುವಾಗಿದೆ. ರಾಜ್ಯದ 23 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿ ಪ್ರವಾಹ ಸೃಷ್ಟಿಯಾದ ಪರಿಣಾಮ ಲಕ್ಷಾಂತರ ಎಕರೆಯಲ್ಲಿ ಬೆಳೆ ಹಾನಿಯಾಗಿತ್ತು. ಒಟ್ಟಾರೆ 32 ಸಾವಿರ ಕೋಟಿ ರೂ.ಗಳ ನಷ್ಟವಾಗಿತ್ತು. ಕೇಂದ್ರ ಸರ್ಕಾರ 1800 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರೆ, ರಾಜ್ಯ ಸರ್ಕಾರ 6000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ವೆಚ್ಚ ಮಾಡಿದೆ. ಬೆಳೆ ಹಾನಿ ಹಾಗೂ ಮನೆಗಳ ಹಾನಿ ಪರಿಹಾರಕ್ಕೆ ಬಿಡುಗಡೆ ಆದ ಹಣ ವರ್ಗಾವಣೆ ಮಾಡುವಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಸರ್ಕಾರಿ ಜಾಗಕ್ಕೆ ರೈತರೊಬ್ಬರ ಹೆಸರಿನಲ್ಲಿ ಪರಿಹಾರ ನೀಡಲಾಗಿದೆ. ಮುಸ್ಲಿಮ್ ರೈತರ ಜಮೀನಿನ ಪರಿಹಾರ ಹಿಂದುಗಳಿಗೆ, ಹಿಂದುಗಳ ಜಮೀನಿನ ಪರಿಹಾರ ಮುಸ್ಲಿಮರಿಗೆ ನೀಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳಿಂದ ಹಿಡಿದು ಹಿರಿಯ ಅಧಿಕಾರಿಗಳ ತನಕ ಲೋಪದಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಫಸಲ್ ಬಿಮಾ ತನಿಖೆ:ಫಸಲ್ ಬಿಮಾ ವಿಮಾ ಯೋಜನೆಯ ಪರಿಹಾರ ವಿತರಣೆಯಲ್ಲೂ ಲೋಪಗಳಾಗಿರುವ ದೂರುಗಳಿರುವುದರಿಂದ ಅದರ ಬಗ್ಗೆಯೂ ತನಿಖೆ ನಡೆಸುವುದು ಯಡಿಯೂರಪ್ಪ ನಿರ್ಧಾರವಾಗಿದೆ.
ನೆರೆ ಪರಿಹಾರ ವಿತರಣೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ಇದೊಂದು ಬೃಹತ್ ಸೈಬರ್ ಅಪರಾಧವಾಗಿದೆ. ಆದ್ದರಿಂದ ಎಲ್ಲ ಜಿಲ್ಲೆಗಳಲ್ಲೂ ಆಯಾ ಜಿಲ್ಲಾಧಿಕಾರಿಗಳಿಂದ ತನಿಖೆ ನಡೆಸಿ ತಕ್ಷಣ ವರದಿ ನೀಡುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ತಪು್ಪ ಮಾಡಿರುವ ಯಾವ ಅಧಿಕಾರಿಯನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ.
| ಬಸವರಾಜ ಬೊಮ್ಮಾಯಿ ಗೃಹ ಸಚಿವ
ಫೆ.8ರಿಂದ ಸರಣಿ ವರದಿ
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದಾಗಿರುವ ಬೆಳೆ ಹಾನಿ, ಮನೆ ಹಾನಿ ಪರಿಹಾರದಲ್ಲಿ ನಡೆದ ಅಕ್ರಮಗಳ ಕುರಿತು ‘ವಿಜಯವಾಣಿ’ ಫೆ. 8ರಿಂದ ಸರಣಿ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಜಿಲ್ಲೆಯಲ್ಲಿ ಒಟ್ಟು 1.40 ಲಕ್ಷ ರೈತರ 1,82,961 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಇದಕ್ಕೆ ಪರಿಹಾರ ನೀಡಲೆಂದು ಸರ್ಕಾರ 174 ಕೋಟಿ ರೂ.ಗಳ ಅನುದಾನ ಕೊಟ್ಟಿತ್ತು. ಆದರೆ, ಎಲ್ಲ ರೈತರಿಗೂ ಪರಿಹಾರ ಸಿಕ್ಕಿರಲಿಲ್ಲ. ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ಸಹಕಾರದಿಂದ ಅರ್ಹ ರೈತರ ಹೆಸರಿನಲ್ಲಿ ತಮಗೆ ಬೇಕಾದವರ ಖಾತೆಗೆ ಹಣವನ್ನು ಜಮೆ ಮಾಡಿಸಿಕೊಂಡಿದ್ದರು. ಇಂತಹ ಸಾವಿರಾರು ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿದ್ದು, ಕೋಟ್ಯಂತರ ರೂ. ಗೋಲ್ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಬಯಲಾಗಿದ್ದು ಹೇಗೆ?:ಅಕ್ಟೋಬರ್​ನಲ್ಲೇ ಪರಿಹಾರ ವಿತರಣೆ ಆರಂಭಗೊಂಡಿದ್ದರೂ ಡಿಸೆಂಬರ್ ಆದರೂ ಹಲವು ರೈತರಿಗೆ ಪರಿಹಾರ ಬಂದಿರಲಿಲ್ಲ. ಆಗ ಹಾನಗಲ್ಲ ತಾಲೂಕಿನ ಅನೇಕ ರೈತರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡಿದ್ದರು. ಸರ್ಕಾರದ ಪರಿಹಾರ ವೆಬ್​ಸೈಟ್​ನಲ್ಲಿ ಪರಿಶೀಲಿಸಿದಾಗ ರೈತರ ಹೆಸರಿಗೆ 50 ಸಾವಿರ ರೂ.ಗಟ್ಟಲೇ ಪರಿಹಾರ ಜಮೆಯಾಗಿರುವ ಮಾಹಿತಿ ಇತ್ತು. ಯಾರಿಗೋ ಸಂದಾಯವಾಗಬೇಕಾದ ಹಣ ಇನ್ಯಾರಿಗೋ, ಜಮೀನು ಯಾರದ್ದೋ ಪರಿಹಾರ ಇನ್ಯಾರದೋ ಖಾತೆಗೆ ಸಂದಾಯವಾಗಿರುವ ಮಾಹಿತಿ ‘ವಿಜಯವಾಣಿ’ಗೆ ದೊರೆತಿತ್ತು. ಪರಿಹಾರ ನೀಡಲು ಶಿಗ್ಗಾಂವಿ ತಹಸೀಲ್ದಾರ್​ಗೆ ಸರ್ಕಾರ ನೀಡಿದ್ದ ಲಾಗಿನ್​ನ ಯೂಸರ್ ಐಡಿ, ಪಾಸ್​ವರ್ಡ್​ನ್ನು ಅಕ್ರಮವಾಗಿ ಬಳಸಿ ಅಲ್ಲಿನ ಸಿಬ್ಬಂದಿಯೇ ಅನರ್ಹರನ್ನು ಸೇರ್ಪಡೆಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು.
ಆಪ್ತರ ಖಾತೆಗೆ ಜಮೆ:ಸರ್ಕಾರ ಪರಿಹಾರ ವಿತರಣೆ ಸಾಫ್ಟ್​ವೇರ್​ನಲ್ಲಿ ಆಧಾರ್ ನಂಬರ್ ಲಿಂಕ್ ಮಾಡಿ ಅವರ ಖಾತೆಗೆ ಹಣ ಜಮೆ ಮಾಡಲು ಕ್ರಮ ಕೈಗೊಂಡಿತ್ತು. ಆದರೆ, ಕೆಲ ಪ್ರಕರಣಗಳಲ್ಲಿ ಪೋತಿ ಆದವರು ಹಾಗೂ ಜಮೀನು, ಮನೆ ಖರೀದಿಸಿದವರ ಹೆಸರಿನಲ್ಲಿ ಖಾತೆ ಆಗದೇ ಇದ್ದರೆ ಅಂತಹ ಪ್ರಕರಣಗಳಲ್ಲಿ ಆಧಾರ್ ನಂಬರ್ ಲಿಂಕ್ ಇಲ್ಲದೇ ಅವರ ಬ್ಯಾಂಕ್ ಖಾತೆಗೆ ಹಣ ಹಾಕಲು ಅವಕಾಶ ಕಲ್ಪಿಸಿತ್ತು. ಇದನ್ನೇ ದುರುಪಯೋಗ ಪಡಿಸಿಕೊಂಡ ಕೆಳಹಂತದ ಅಧಿಕಾರಿಗಳು ತಮ್ಮ ಆಪ್ತರ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಿಸಿದ್ದಾರೆ.
ಹಾವೇರಿ ಅಕ್ರಮವೂ ತನಿಖೆಗೆ
ಹಾವೇರಿ: ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ದೂರಿನ ಪರಿಶೀಲನೆ ಪ್ರಗತಿಯಲ್ಲಿದ್ದು, ಯಾರದ್ದೋ ಪರಿಹಾರವನ್ನು ಇನ್ಯಾರಿಗೋ ಜಮೆ ಮಾಡಲಾಗಿದೆ. ಇದು ಕ್ರಿಮಿನಲ್ ಅಪರಾಧವಾಗಿರುವುದರಿಂದ ಪೂರ್ಣ ತನಿಖೆಗೆ ಪೊಲೀಸ್ ಇಲಾಖೆಗೆ ವಹಿಸಲಾಗುವುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ನಮ್ಮ ಸಿಬ್ಬಂದಿ ಮೂರ್ನಾಲ್ಕು ತಾಲೂಕುಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದು ಹೊರಬರಲಿದೆ. ಇದರ ತನಿಖೆಯ ಹೊಣೆಯನ್ನು ಪೊಲೀಸರಿಗೆ ವಹಿಸಲಾಗುವುದು ಎಂದರು.
ಶಿಗ್ಗಾಂವಿಯಲ್ಲಿ ಅತಿಹೆಚ್ಚು:ನೆರೆವು ಅಕ್ರಮದ ಹೆಚ್ಚಿನ ಪ್ರಕರಣಗಳು ಶಿಗ್ಗಾಂವಿ ತಾಲೂಕಿನಲ್ಲಿ ವರದಿಯಾಗಿವೆ. ಕೆಲವೊಂದು ಪೋತಿ ಹಾಗೂ ಜಮೀನು ಖರೀದಿ ಪ್ರಕರಣಗಳಲ್ಲಿ ಅರ್ಹರಿಗೆ ಪರಿಹಾರ ಸಿಗಲಿ ಎಂಬ ಉದ್ದೇಶದಿಂದ ಪರಿಶೀಲನೆ ಮಾಡಿ ಪರಿಹಾರ ಜಮೆ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅದನ್ನು ದುರುಪಯೋಗ ಪಡಿಸಿಕೊಂಡಿರುವ ಸಾಧ್ಯತೆ ಇದೆ. ನಮ್ಮ ಕಚೇರಿ ಅಧಿಕಾರಿಗಳು ನಡೆಸಿರುವ ತನಿಖೆಯ ವರದಿಯನ್ನು ಜಿಲ್ಲಾಧಿಕಾರಿಗೆ ಶೀಘ್ರ ಕಳಹಿಸುತ್ತೇವೆ ಎಂದರು.
ತಹಸೀಲ್ದಾರ್ ಐಡಿ ಕಳ್ಳತನದ ಕುರಿತು ಅಲ್ಲಿನ ಕಂದಾಯ ನಿರೀಕ್ಷಕರು ದೂರು ಕೊಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಸ್ವಾಸ್, ಅದ್ಹೇಗೆ ಸಾಧ್ಯ. ಒಂದೊಮ್ಮೆ ಕಳ್ಳತನವಾಗಿದ್ದು ಗಮನಕ್ಕೆ ಬಂದಿದ್ದರೆ ಕೂಡಲೇ ಬದಲಾಯಿಸಲು ಅವಕಾಶವಿತ್ತು. ಇದರ ಕುರಿತು ಅವರೇ ಖುದ್ದು ದೂರು ನೀಡಬಹುದಿತ್ತು ಎಂದರು.
ಬೆಳಗಾವಿಯಲ್ಲೂ ಅಕ್ರಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + four =
Remember me
