ಬೆಂಗಳೂರು/ಮೈಸೂರು:ನಂಜನಗೂಡು ತಾಲೂಕು ಪ್ರಭಾರಿ ಆರೋಗ್ಯಾಧಿಕಾರಿ ಡಾ.ಎಸ್.ಆರ್. ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದು, ಕರೊನಾ ಮುಂಚೂಣಿ ಯೋಧರಾದ ಸರ್ಕಾರಿ ವೈದ್ಯರ ಸಿಟ್ಟು ತಣಿಸಲು ಮುಂದಾಗಿದ್ದಾರೆ.
ಮೈಸೂರು ಪ್ರಾದೇಶಿಕ ಆಯುಕ್ತರಿಗೆ ತನಿಖೆ ಹೊಣೆ ಒಪ್ಪಿಸಿ, ಒಂದು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಹಿರಿಯ ಅಧಿಕಾರಿಗಳ ಒತ್ತಡವೇ ಡಾ.ನಾಗೇಂದ್ರ ಆತ್ಮಹತ್ಯೆಗೆ ಕಾರಣವೆಂಬ ಗಂಭೀರ ಆರೋಪದ ಸತ್ಯಾಂಶ ಹೊರಗೆಡಹಿ, ಅಗತ್ಯ ಕ್ರಮಕ್ಕೂ ಬದ್ಧವೆಂಬ ಸಂದೇಶವನ್ನೂ ಸಿಎಂ ರವಾನಿಸಿದ್ದಾರೆ.
ಪ್ರಕರಣ ರಾಜಕೀಯ ತಿರುವು ಪಡೆದು ರಾಜ್ಯವ್ಯಾಪಿ ಪ್ರತಿಭಟನೆ ಕಿಚ್ಚು ಹೊತ್ತಿಸುವ ಮುನ್ನವೇ ಮಹತ್ವದ ನಿರ್ಧಾರ ಕೈಗೊಂಡಿರುವ ಸಿಎಂ, ಪರಿಹಾರದ ಮೊತ್ತ 50 ಲಕ್ಷ ರೂ.ಗೆ ಹೆಚ್ಚಿಸಿದ್ದಾರೆ. ಅಲ್ಲದೆ, ಕುಟುಂಬದ ಒಬ್ಬರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ನಿರ್ಧರಿಸಿದ್ದಾರೆ. ಸರ್ಕಾರಿ ವೈದ್ಯರು-ಸಿಬ್ಬಂದಿ ಜೀವದ ಹಂಗು ತೊರೆದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಅವರ ಸಾಧನೆಯನ್ನು ಮೇಲಧಿಕಾರಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂಬ ಕೊರಗಿದೆ. ಅಲ್ಲದೆ, ಆಂಟಿಜನ್ ಟೆಸ್ಟ್ ವಿಚಾರದಲ್ಲೂ ಕಾರ್ಯಸಾಧುವಲ್ಲದ ಗುರಿ ನಿಗದಿಪಡಿಸಿದ ಅಸಮಾಧಾನವಿದೆ. ಆದ್ದರಿಂದ ಸರ್ಕಾರಿ ವೈದ್ಯಾಧಿಕಾರಿಗಳಲ್ಲಿ ಮಡುಗಟ್ಟಿದ ಅಸಹನೆ-ಆತಂಕ ‘ಆತ್ಮಹತ್ಯೆ ಪ್ರಕರಣ’ದ ಮೂಲಕ ಸ್ಪೋಟವಾಗಿದೆ ಎನ್ನುವ ಮಾಹಿತಿ ಸರ್ಕಾರಕ್ಕೆ ಲಭಿಸಿದೆ. ಹೀಗಾಗಿ ಕರೊನಾ ಕರ್ತವ್ಯದಿಂದ ವೈದ್ಯರು ವಿಮುಖವಾಗದಂತೆ ನೋಡಿಕೊಳ್ಳಲು ಸಿಎಂ ಒತ್ತು ನೀಡಿದ್ದಾರೆನ್ನಲಾಗಿದೆ.
ಅಂತ್ಯಸಂಸ್ಕಾರ:ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದ ನಾಗೇಂದ್ರರ ಶವವನ್ನು ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಆಡಿಯೋ ವೈರಲ್:ಕೆಲಸದ ವಿಷಯದಲ್ಲಿ ನಾಗೇಂದ್ರ ಅವರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡು, 150 ಟೆಸ್ಟ್ ಮಾಡುವಲ್ಲಿ 20-30 ಟೆಸ್ಟ್ ಮಾತ್ರ ಮಾಡಿದರೆ ಹೇಗೆ ಎಂದು ಪ್ರಶ್ನಿಸಿ, ನಿಂದಿಸಿರುವ ಆಡಿಯೋ ಈ ಮಧ್ಯೆ ವೈರಲ್ ಆಗಿದೆ.
ಮುಷ್ಕರಕ್ಕೆ ಕರೆ:ಆತ್ಮಹತ್ಯೆಗೆ ಜಿಪಂ ಸಿಇಒ ಕಾರಣ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಶುಕ್ರವಾರ ದಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಮುಷ್ಕರಕ್ಕೆ ಕರೆ ನಡೆಸಿದೆ. ಸಿಇಒ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸದಿದ್ದರೆ ಆ.24ರಿಂದ ರಾಜ್ಯಾದ್ಯಂತ ಮುಷ್ಕರ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.
6 ಮೃತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಆರು ಪತ್ರಕರ್ತರಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಜೂರು ಮಾಡಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂ್ಯಜೆ) ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಭೇಟಿ ಮಾಡಿದ್ದ ಪತ್ರಕರ್ತರ ನಿಯೋಗದ ಮನವಿಗೆ ಸಿಎಂ ಕೂಡಲೇ ಸ್ಪಂದಿಸಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಈ ಹಣವನ್ನು ಬಿಡುಗಡೆಗೆ ಆದೇಶಿಸಿದ್ದಾರೆ. ಪತ್ರಕರ್ತರಾದ ಸೋಮಶೇಖರ ಯಡವಟ್ಟಿ, ವಿ.ಸಿ.ಹಿರೇಮಠ, ಕೆ.ಎಂ.ಹಾಲಪ್ಪ, ಪರ್ವತಯ್ಯಸ್ವಾಮಿ, ಎಚ್.ಎಚ್.ಜಯಣ್ಣ, ಬಿ.ಎಂ.ತ್ರಿಮೂರ್ತಿ ಅವರ ಕುಟುಂಬಕ್ಕೆ ಸೌಲಭ್ಯ ದೊರೆಯಲಿದೆ. ಪತ್ರಕರ್ತರಾದ ನ.ವಿನಯ್, ಚಿದಾನಂದ ಪಟೇಲ್ ಮತ್ತಿತರರು ಸಿಎಂ ಭೇಟಿಯ ನಿಯೋಗದಲ್ಲಿದ್ದರು. ಪತ್ರಕರ್ತರ ನೋವಿಗೆ ಕೂಡಲೆ ಸ್ಪಂದಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಮಸ್ತ ಪತ್ರಕರ್ತರ ಪರವಾಗಿ ಅಭಿನಂದನೆ ಸಲ್ಲಿಸಿದೆ.
ಡಿಕೆಶಿ-ಸುಧಾಕರ್ ಜಟಾಪಟಿ
ಡಾ.ನಾಗೇಂದ್ರ ಆತ್ಮಹತ್ಯೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪ್ರಾಣ ಒತ್ತೆ ಇಟ್ಟು ಸೇವೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು. ತಪ್ಪಿತಸ್ಥರನ್ನು ಬಂಧಿಸಲು ಎಷ್ಟು ದಿನ ಬೇಕು? ವೈದ್ಯಕೀಯ ಶಿಕ್ಷಣ ಸಚಿವರು ಅಲ್ಲಿ ಹೋಗಿ ನಿಂತರೆ ಸಾಕೇ? ಕೇಸನ್ನು ಮುಚ್ಚಿಹಾಕುವ ಪ್ರಯತ್ನವೇಕೆ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ನಾನೂ ಒಬ್ಬ ವೈದ್ಯನಾಗಿ, ಸರ್ಕಾರದ ಪ್ರತಿನಿಧಿಯಾಗಿ, ಈ ಸಂಕಷ್ಟದಲ್ಲಿ ನಾಗೇಂದ್ರ ಕುಟುಂಬಕ್ಕೆ ಮತ್ತು ವೈದ್ಯ ಸಮೂಹಕ್ಕೆ ಸಹಾನುಭೂತಿ, ನೈತಿಕ ಸ್ಥೈರ್ಯ ತುಂಬಲಿಕ್ಕೆ ಹೋಗಿದ್ದು. ಕೇಸ್ ಮುಚ್ಚಿ ಹಾಕುವುದು ನಮ್ಮ ಕಾರ್ಯವೈಖರಿಯಲ್ಲ, ಅವೆಲ್ಲ ನಿಮ್ಮ ಕಾರ್ಯಗಳು ಎಂದು ಸುಧಾಕರ್ ಎದಿರೇಟು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
