ಬೆಂಗಳೂರು:ಮಹಾಮಾರಿ ಕೋವಿಡ್​ ಪಿಡುಗು ನಮ್ಮನ್ನು ಕಾಡಿಸದೇ ಇದ್ದಿದ್ದರೆ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಮಾಡಬಹುದಿತ್ತು. ಕರೊನಾ ಪಿಡುಗು ರಾಜ್ಯದ ಅಭಿವೃದ್ಧಿಗೆ ಕಂಟಕವಾಯಿತು ಎಂಬ ನೋವು ನನ್ನನ್ನು ಕಾಡುತ್ತಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ವಿಷಾದ ವ್ಯಕ್ತಪಡಿಸಿದರು.
‘ಜನಸ್ನೇಹಿ ಆಡಳಿತದ 1 ವರ್ಷ: ಸವಾಲುಗಳ ವರ್ಷ – ಪರಿಹಾರದ ಸ್ಪರ್ಶ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್​ವೈ, ನಿಮ್ಮೆಲ್ಲರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದು ನಿನ್ನೆಗೆ ಒಂದು ವರ್ಷ ತುಂಬಿರುವ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳು ವಿಶೇಷವಾದ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ ಎಂದು ಧನ್ಯವಾದಗಳು ತಿಳಿಸಿ, ಎ.ಪಿ.ಜೆ ಅಬ್ದುಲ್​ ಕಲಾಂ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಲಾಂ ಸೇವೆಯನ್ನು ಸ್ಮರಿಸಿದರು.
ಸರ್ಕಾರ ಬಂದು ನಿನ್ನೆಗೆ ಒಂದು ವರ್ಷವಾಗಿದೆ. ಉಳಿದ ಅವಧಿಯಲ್ಲಿ ಸುಭದ್ರ ಸರ್ಕಾರ ನೀಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಕೋವಿಡ್​ ಸಂದರ್ಭದಲ್ಲೂ ರಾಜ್ಯದ ಅಭಿವೃದ್ಧಿಯಾಗಿದೆ ಅಂದರೆ, ನಮ್ಮ ಶಾಸಕರು, ಸಚಿವ ಸಂಪುಟದ ನಾಯಕರುಗಳು, ಪ್ರತಿಪಕ್ಷದ ನಾಯಕರುಗಳು ಹಾಗೂ ಸಂಸತ್​ ಸದಸ್ಯರ ಸಹಕಾರದಿಂದ ಒಂದು ಗುರಿ ಮುಟ್ಟಲು ಸಾಧ್ಯವಾಗಿದೆ. ಅಲ್ಲದೆ, ಮಾಡಬೇಕಾದ ಕೆಲಸ ಇನ್ನು ಬಹಳಷ್ಟಿದೆ ಎಂದರು.
ಈ ಕೋವಿಡ್​ ಪಿಡುಗು ನಮ್ಮನ್ನು ಕಾಡಿಸದೇ ಇದ್ದಿದ್ದರೆ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಮಾಡಬಹುದಿತ್ತು. ಕರೊನಾ ಪಿಡುಗು ರಾಜ್ಯದ ಅಭಿವೃದ್ಧಿಗೆ ಕಂಟಕವಾಯಿತು ಎಂಬ ನೋವು ನನ್ನನ್ನು ಕಾಡುತ್ತಿದೆ. ಇದರ ನಡುವೆಯೂ ಸಹ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಕೊಂಚ ಮಟ್ಟಿಗೆ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ತಿಳಿಸಿದರು.
ಬರಗಾಲ ಅವಧಿಯಲ್ಲಿ ನಾನು ಅಧಿಕಾರಕ್ಕೆ ಬಂದೆ, ಕೆಲವೇ ದಿನಗಳಲ್ಲಿ ಕೆರೆ-ಕಟ್ಟೆ ಹಾಗೂ ಜಲಾಶಯಗಳು ತುಂಬಿ ತುಳುಕಿದವು. ಆದರೆ, ಸಾವಿರಾರು ಗ್ರಾಮಗಳು ಜಲಾವೃತಗೊ0ಡು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದನ್ನು ನಾನು ನೋಡಬೇಕಾಯಿತು. ಬಹುಶಃ ಇದೊಂದು ನನಗೆ ಅಗ್ನಿ ಪರೀಕ್ಷೆಯಂತಾಯಿತು. ಆ ವೇಳೆ ನನ್ನ ಸಚಿವ ಸಂಪುಟ ಸಹೋದ್ಯೋಗಿಗಳು ಇರಲಿಲ್ಲ. ಮೂರು ತಿಂಗಳು ಕಾಲ ಆ ಭಾಗದಲ್ಲಿ ಓಡಾಟ ಮಾಡಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಾಂತ್ವಾನ ನೀಡಿದೆವು. ಅಲ್ಲದೆ, ಪರಿಹಾರ ಹಣವನ್ನು ನೀಡಿದೆವು ಎಂದು ಸ್ಮರಿಸಿದರು.
ನಮ್ಮ ಪ್ರಧಾನಿಯವರ ಕಿಸಾನ್​ ಸಮ್ಮಾನ್​ ಯೋಜನೆ ಒಂದು ಐತಿಹಾಸಿಕ ಯೋಜನೆಯಾಗಿದೆ. ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ 6 ಸಾವಿರ ರೂ. ಕೊಡುವಂತಹ ಯೋಜನೆಯನ್ನು ತಂದರು. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಇದೇ ಯೋಜನೆಯಡಿ ಕರ್ನಾಟಕದಲ್ಲಿ 50 ಲಕ್ಷ ರೈತರಿಗೆ ತಲಾ ನಾಲ್ಕು ಸಾವಿರ ರೂ ನೀಡಲಾಗುತ್ತಿದೆ. ರೈತರು ಹಾಗೂ ನೇಕಾರರು ನಮ್ಮ ಸರ್ಕಾರದ ಎರಡು ಕಣ್ಣುಗಳಿದ್ದಂತೆ ಎಂದರು.
ದಲಿತರ ‌ಮನೆಗಳಿಗೆ ಭೇಟಿ‌‌ ನೀಡಿ ಅವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ‌ ಮಾಡಲಾಗಿದೆ. ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಬಡವರಿಗೂ ಸೂರು ಒದಗಿಸುವ ಗುರಿ ನಮ್ಮದಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಟೀಕೆಗಳು ಬಂದರೂ ರೈತರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಹೊಸ ಕೈಗಾರಿಕಾ ‌ನೀತಿ ಜಾರಿ ಮಾಡಲಾಗುತ್ತಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ೧೦೮ ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ವಿಮಾನ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗುತ್ತಿದೆ. ದಿವಂಗತ ಅನಂತಕುಮಾರ್ ಕನಸಿನ ಸಬರ್ಬನ್ ರೈಲು ಯೋಜನೆಗೆ‌ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆಗಳ ಅಭಿವೃದ್ಧಿ ಹಾಗೂ ೯೭೦ ಕಿಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಲಾಗುತ್ತಿದೆ.
ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದೆ. ‌ಮಹಾದಾಯಿ‌ ಜಲ ವಿವಾದ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮೇಕೆ ದಾಟು ಯೋಜನೆ ಜಾರಿಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಬೆಂಗಳೂರು ಮಾದರಿ ನಗರವಾಗಿ ಹೊರ ಹೊಮ್ಮಲಿದೆ.
ಡಾ.ನಂಜುಂಡಪ್ಪ ವರದಿ ಜಾರಿಗೆ ಒತ್ತು ನೀಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಗುರಿಯಾಗಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೇರಳ ಅವಕಾಶವಿದೆ.‌ ಕೆಮ್ಮಣ್ಣುಗುಂಡಿ, ಜೋಗ, ನಂದಿಬೆಟ್ಟ ಸೇರಿ ಪ್ರಮುಖ ಸ್ಥಳಗಳ ಅಭಿವೃದ್ಧಿ ಮಾಡಲಾಗುವುದು.
ನಾನು ದ್ವೇಷದ ರಾಜಕಾರಣ ಮಾಡಿಲ್ಲ.‌ ಸರ್ಕಾರದ ವಿರುದ್ದ ಟೀಕೆ ಟಿಪ್ಪಣಿ ಮಾಡುವವರನ್ನು ನಾನು ಸ್ನೇಹದಿಂದಲೇ ನೋಡಿದ್ದೇನೆ.‌ ಕಳೆದ ಲೋಕಸಭಾ ಚುನಾವಣೆಯಲ್ಲಿ ೨೫ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಇದರ ಹಿಂದೆ ನಮ್ಮ ಕಾರ್ಯಕರ್ತರ ಶ್ರಮ‌ ಅಪಾರವಾಗಿದೆ. ರಾಜ್ಯದ ಜನರ ಅಪಾರ ಋಣ ನಮ್ಮ ಮೇಲಿದೆ. ಕೊರೊನಾ ಬಾರದಿದ್ದರೆ ಅಭಿವೃದ್ಧಿ ಕಾರ್ಯ ವೇಗವಾಗಿ ನಡೆಯುತ್ತಿತ್ತು. ಆದರೂ ನಾವು ಧೃತಿಗೆಡದೆ ನಮ್ಮ ಕೆಲಸ ಮುಂದುವರೆಸಿದ್ದೇವೆ.
ಜನರ ಮುಂದೆ ವರದಿ ಇಂದು; ವರ್ಚುವಲ್​ ವೇದಿಕೆಯಲ್ಲಿ ಸಮಾರಂಭ

Sign in to your account
Please enter an answer in digits:three × 5 =
Remember me
