ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಯೋಧ್ಯೆ ಹೋರಾಟದ ನೆನಪುಗಳ ಪುಟ ತಿರುವಿದ್ದಾರೆ. ಹೋರಾಟದಲ್ಲಿ ಖುದ್ದು ಪಾಲ್ಗೊಂಡಿದ್ದ ಅವರು ತಮ್ಮ ಅನುಭವಗಳನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.
| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳು
ಅಯೋಧ್ಯೆಯಲ್ಲಿ ಶ್ರೀರಾಮ ಪ್ರಭುವಿನ ಮಂದಿರವನ್ನು ನಿರ್ವಿುಸಲೇ ಬೇಕೆಂದು ದೇಶಾದ್ಯಂತ ನಡೆದ ಹೋರಾಟದಲ್ಲಿ ಭಾಗವಹಿಸುವಂತಹ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯವೇ ಆಗಿದೆ. ದೇಶಾದ್ಯಂತ ಜನರ ಮನಸ್ಸಿನಲ್ಲಿ ರಾಮಮಂದಿರ ನಿರ್ವಣವಾಗಬೇಕೆಂಬ ಬಯಕೆ ಇತ್ತು. ರಾಜ್ಯದಲ್ಲೂ ಎಂಬತ್ತರ ದಶಕದಿಂದಲೇ ಹೋರಾಟ ಆರಂಭವಾಗಿತ್ತು. ನಮ್ಮ ಅನೇಕ ಹಿರಿಯರು ಹಂತಹಂತವಾಗಿ ಹೋರಾಡುತ್ತಲೇ ಸಂಘಟನೆ ಮಾಡುತ್ತಿದ್ದರು. ಅದೆಲ್ಲವೂ ನನಗೆ ಪ್ರೇರಣೆಯಾಗಿತ್ತು. ರಾಜ್ಯದಲ್ಲಿ ನಡೆದ ಎಲ್ಲ ಹೋರಾಟಗಳಲ್ಲೂ ನಾನು ಭಾಗವಹಿಸಿದ್ದೇನೆ.
ಶ್ರೀರಾಮ ಜ್ಯೋತಿಯಾತ್ರೆ, ಶ್ರೀರಾಮ ಪಾದುಕಾ ಯಾತ್ರೆ, ಶ್ರೀರಾಮ ಶಿಲಾಯಾತ್ರೆ, ಲಾಲಕೃಷ್ಣ ಆಡ್ವಾಣಿಜಿ ನಡೆಸಿದ ರಥಯಾತ್ರೆಗಳಲ್ಲಿ ಸಾವಿರಾರು ಜನ ಸ್ವಯಂ ಪ್ರೇರಣೆಯಿಂದ ಭಾಗವಹಿಸುವುದನ್ನು ನೋಡಿ ನನಗೆ ಹಾಗೂ ನಮ್ಮಂತಹ ಹೋರಾಟಗಾರರಲ್ಲಿ ಇನ್ನಷ್ಟು ಕಿಚ್ಚು ಹೆಚ್ಚಿಸಿತ್ತು. ಆರ್​ಎಸ್​ಎಸ್, ವಿಎಚ್​ಪಿ ಸೇರಿದಂತೆ ಅನೇಕ ಸಂಘಟನೆಗಳ ನೂರಾರು ಮುಖಂಡರು ತಮ್ಮ ಭಾಷಣದ ಮೂಲಕ ಜನರಲ್ಲಿ ಮೂಡಿಸುತ್ತಿದ್ದ ಹೋರಾಟದ ಶಕ್ತಿಯನ್ನು ಹತ್ತಿರದಿಂದ ನೋಡಿದ್ದೇನೆ. ರಾಜ್ಯದ ಅನೇಕ ಮಠಾಧೀಶರು ನಮ್ಮ ಹೋರಾಟದಲ್ಲಿ ಕೈ ಜೋಡಿಸಿ ಆಶೀರ್ವಾದ ಮಾಡಿದ್ದನ್ನು ಎಂದಿಗೂ ಮರೆಯಲಾಗದು.
ರಾಮ ಮಂದಿರ ನಿರ್ವಣಕ್ಕೆ ಅಗತ್ಯವಾದ ಇಟ್ಟಿಗೆ ಸಂಗ್ರಹಕ್ಕೆ ರಾಜ್ಯ ಸುತ್ತುವ ಸಂದರ್ಭದಲ್ಲಿ ಜನರಲ್ಲಿರುವ ಭಕ್ತಿಭಾವ, ರಾಮಮಂದಿರ ನಿರ್ವಣವಾಗಲೇಬೇಕೆಂಬ ಅದಮ್ಯ ಆಸೆಯನ್ನು ಕಂಡು ಮೂಕವಿಸ್ಮಿತಗೊಂಡಿದ್ದೇನೆ. ಅದನ್ನು ಎಂದಿಗೂ ಮರೆಯಲಾಗದು.
ಎಲ್.ಕೆ. ಆಡ್ವಾಣಿಜೀ ರಥಯಾತ್ರೆಯಲ್ಲಿ ಅವರೊಂದಿಗೆ ಇರುವ ಅವಕಾಶ ನನಗೆ ದೊರಕಿತ್ತು. ಅವರು ಮಾಡುತ್ತಿದ್ದ ಭಾಷಣ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. 1990ರ ಅ. 2ರಂದು ಹುಮ್ನಾಬಾದ್​ನಲ್ಲಿ ಕಾರ್ಯಕ್ರಮ ನಡೆದಿತ್ತು. ರಾಜ್ಯದಲ್ಲಿ ಬಿಜೆಪಿ ಬಲವರ್ಧನೆಗೊಳ್ಳುತ್ತಿದ್ದ ದಿನಗಳು ಅವು. ಹದಿನೈದು ದಿನಗಳ ಕಾಲ ಪ್ರವಾಸ ಮಾಡಿ ಕಾರ್ಯಕ್ರಮ ಸಂಘಟನೆ ಮಾಡಿದ್ದೆ. ಬಸವರಾಜ ಪಾಟೀಲ್ ಸೇಡಂ, ಡಾ. ವಿ.ಎಸ್. ಆಚಾರ್ಯ, ಡಿ.ಎಚ್. ಶಂಕರಮೂರ್ತಿ, ಡಾ. ಎಂ.ಆರ್. ತಂಗಾ, ರಾಮಚಂದ್ರಗೌಡ ಸೇರಿದಂತೆ ಅನೇಕರು ನನ್ನೊಂದಿಗೆ ಹಗಲುರಾತ್ರಿ ಕೆಲಸ ಮಾಡಿದ್ದರು. ಕಾರ್ಯಕ್ರಮದ ದಿನ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದನ್ನು ಎಂದಿಗೂ ಮರೆಯಲಾಗದು. ಪಕ್ಷಾತೀತವಾಗಿ ಜನ ಬಂದು ಸೇರಿದ್ದರು. ಎಲ್ಲರ ಗುರಿ ರಾಮಮಂದಿರ ಮಾತ್ರವೇ ಆಗಿತ್ತು.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ 1992ರ ಡಿ.6 ರಂದು ರಾಜ್ಯದಿಂದ ಹತ್ತು ಸಾವಿರಕ್ಕೂ ಅಧಿಕ ಮಂದಿ ಆರ್​ಎಸ್​ಎಸ್ ಕಾರ್ಯಕರ್ತರು, ಕರಸೇವಕರು ಬಂದು ಸೇರಿದ್ದರು. ನಾವೆಲ್ಲರೂ ಅಯೋಧ್ಯೆ ತಲುಪಿದ್ದೇ ದೊಡ್ಡ ಸಾಹಸ. ರಾಮಮಂದಿರದ ಹೋರಾಟದ ಇತಿಹಾಸದಲ್ಲಿಯೇ ಆ ದಿನ ಅತ್ಯಂತ ವಿಶೇಷ ಸಂದರ್ಭ. ಸಾವಿರಾರು ಜನ ಕರ ಸೇವಕರು ಎತ್ತರದ ಗೋಪುರವನ್ನು ಕೆಡವಿ ಶ್ರೀರಾಮ ಪ್ರಭುವಿನ ಪ್ರತಿಮೆಯನ್ನು ಹೊತ್ತು ತಂದಾಗ ನಾನು ಅಲ್ಲಿಯೇ ಇದ್ದೆ. ಆಡ್ವಾಣಿ ಮಾಡಿದ ಭಾಷಣ ಈಗಲೂ ನನಗೆ ಪ್ರೇರಣೆಯೇ ಆಗಿದೆ. ಅಂದು ಅಯೋಧ್ಯೆ ಉದ್ದಗಲಕ್ಕೂ ನಡೆಸಿದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸೌಭಾಗ್ಯ ನನ್ನದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ಅಯೋಧ್ಯೆಯಲ್ಲಿ ಆ ದಿನ ಕಲ್ಪನೆಯನ್ನೇ ಮಾಡಿಕೊಳ್ಳಲಾಗದ ವಿಚಿತ್ರ ಸನ್ನಿವೇಶ ಇತ್ತು. ಸಾಮಾನ್ಯ ಕಾರ್ಯಕರ್ತರು ಬಾಬರಿ ಮಸೀದಿಯ ಗೋಪುರ ಕೆಡವಲು ತೋರಿದ ಕಾಳಜಿ, ಪ್ರಾಣದ ಹಂಗು ತೊರೆದು ನಡೆಸಿದ ಹೋರಾಟ ನೆನಪಿಸಿಕೊಂಡರೆ ಈಗಲೂ ಮೈ ಜುಮ್ಮೆನಿಸುತ್ತದೆ.
ಬಾಬರಿ ಮಸೀದಿ ಕೆಡವಿದ ಮಾರನೇ ದಿನ ಶ್ರೀ ಪೇಜಾವಾರ ಶ್ರೀಗಳು ಶ್ರೀರಾಮನ ಪ್ರತಿಷ್ಠಾಪನೆಯನ್ನು ಮಾಡಿದಾಗ ಅವರೊಂದಿಗೆ ಇರುವ ಅವಕಾಶ ಲಭ್ಯವಾಗಿದ್ದು ನನ್ನ ಪೂರ್ವಜನ್ಮದ ಪುಣ್ಯವೇ ಆಗಿದೆ. ಇಡೀ ದೇಶದ ಜನ ಅನೇಕ ವರ್ಷಗಳಿಂದ ಎದುರು ನೋಡುತ್ತಿದ್ದ ದಿನ ಈಗ ಬಂದಿದೆ. ಲಕ್ಷಾಂತರ ಕಾರ್ಯಕರ್ತರ ಹೋರಾಟಕ್ಕೆ ಫಲ ಸಿಗುವ ದಿನ ಇದಾಗಿದೆ. ಸುಪ್ರೀಂಕೋರ್ಟ್ ದೇಶದ ಕೋಟ್ಯಂತರ ಜನಕ್ಕೆ ಮಾನ್ಯವಾಗುವಂತೆ ಅಂತಿಮ ತೀರ್ಪನ್ನು ನೀಡಿತ್ತು. ಅಂದು ದೇಶಕ್ಕೆ ದೇಶವೇ ಸಂತಸ, ಸಂಭ್ರಮಪಟ್ಟಿತ್ತು. ಎಲ್ಲಿಯೂ ಸಣ್ಣ ಗಲಾಟೆ ಸಹ ಆಗಲಿಲ್ಲ. ಇಡೀ ದೇಶದ ಜನ ಜಾತ್ಯತೀತವಾಗಿ ರಾಮಮಂದಿರವನ್ನು ಎದುರು ನೋಡುತ್ತಿದ್ದಾರೆ ಎಂಬುದರ ಸಂಕೇತ ಇದು. ಅನೇಕ ದಶಕಗಳ ಹೋರಾಟದ ಪರಿಣಾಮ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸುವ ಮೂಲಕ ನಾಡಿನ ಜನರ ಕನಸು ನನಸು ಮಾಡುತ್ತಿದ್ದಾರೆ. ಇಂತಹ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ ಎಂಬುದು ನನಗೆ ಆನಂದ, ಸಂತೋಷ, ಸಂಭ್ರಮವನ್ನು ತಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
