ಬೆಂಗಳೂರು:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಬಿಜೆಪಿ ವರಿಷ್ಠರ ಮನದಲ್ಲೇನಿದೆ ಎಂಬುದು ಬಹಿರಂಗವಾಗಿಲ್ಲವಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಲ ಮತ್ತು ಬೆಂಬಲ ವ್ಯಾಪಕವಾಗಿ ಹೆಚ್ಚುತ್ತಿರುವ ಪರಿಣಾಮ ಆಡಳಿತಾರೂಢ ಪಕ್ಷಕ್ಕೆ ಆಂತರಿಕವಾಗಿ ಮರು ಚಿಂತನೆ ಮಾಡುವ ಸನ್ನಿವೇಶ ಎದುರಾಗಿದೆ.
ಬಿಎಸ್​ವೈ ದೆಹಲಿಯಿಂದ ಹಿಂದಿರುಗಿದ ಬಳಿಕ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ನಾಯಕತ್ವ ವಿಚಾರದಲ್ಲಿ ಇದೀಗ ದೊಡ್ಡ ಸಂಖ್ಯೆಯಲ್ಲಿ ಮಠಾಧಿಪತಿಗಳ ಮಧ್ಯ ಪ್ರವೇಶವಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಜತೆಗೆ ರಾಜ್ಯಾದ್ಯಂತ ಬೇರೆ ಬೇರೆ ಸಮುದಾಯದ ಮಠಾಧೀಶರೂ ಕೂಡ ಸಭೆ ನಡೆಸಿ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಅಭಿಪ್ರಾಯ ರವಾನಿಸುತ್ತಿದ್ದಾರೆ.
ಮಂಗಳವಾರ ನಡೆದ ಬೆಳವಣಿಗೆಯಲ್ಲಿ 35ಕ್ಕೂ ಹೆಚ್ಚು ಮಠಾಧೀಶರು ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು. ‘ನಾವು ನಿಮ್ಮೊಂದಿಗಿದ್ದೇವೆ, ನಿಮ್ಮ ಬದಲಾವಣೆ ಕೂಡದು’ ಎಂದು ಬಿಎಸ್​ವೈಗೆ ನೈತಿಕ ಧೈರ್ಯ ತುಂಬಿದರು. ಇನ್ನೊಂದು ಕಡೆ ಪ್ರಮುಖ ಪೀಠಾಧಿಪತಿಗಳು ಪ್ರತ್ಯೇಕ ಹೇಳಿಕೆ ನೀಡಿ ಸ್ಥೈರ್ಯ ತುಂಬುವ ಜತೆಗೆ ಬಿಎಸ್​ವೈ ಪರ ಜನಾಭಿಪ್ರಾಯ ಮತ್ತು ಭಾವನೆಗಳಿಗೆ ಇಂಬು ನೀಡಿದರು. ಸೋಮವಾರವಷ್ಟೇ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ಕೆಲವು ಸ್ವಾಮೀಜಿಗಳು ಮುಖ್ಯಮಂತ್ರಿ ಪರ ಅಭಿಪ್ರಾಯ ನೀಡಿ ಆಡಳಿತ ಪಕ್ಷವನ್ನು ಚಿಂತನೆಗೆ ದೂಡಿದ್ದರು. ಅದರ ಮುಂದುವರಿದ ಭಾಗ ಮಂಗಳವಾರ ಕೂಡ ಅಂಥದ್ದೇ ವಿದ್ಯಮಾನ ನಡೆಯಿತು. ಏನೇ ಸಮಸ್ಯೆಗಳಿದ್ದರೂ ಮುಖಾಮುಖಿ ರ್ಚಚಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಬಿಎಸ್​ವೈ ಅವರೇ ಉಳಿದ ಅವಧಿಯನ್ನು ಮುನ್ನಡೆಸಬೇಕು. ಇದರಿಂದ ಪಕ್ಷಕ್ಕೂ ಹಿತ, ಈಗಷ್ಟೇ ಸಂಕಷ್ಟದಿಂದ ಹೊರಬರುತ್ತಿರುವ ರಾಜ್ಯಕ್ಕೂ ಅನುಕೂಲಕರ ಎಂಬ ಅಭಿಪ್ರಾಯಗಳು ಸಾರ್ವಜನಿಕರ ನಡುವೆ ಗಂಭೀರವಾಗಿ ಚರ್ಚೆಯಾಗುತ್ತಿದೆ. ರಾಜ್ಯ ಕರೊನಾದಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ನಾಯಕತ್ವ ಬದಲಾವಣೆಯಂತಹ ತೀರ್ಮಾನ ಕೈಗೊಂಡರೆ ಆಡಳಿತ ಯಂತ್ರದ ಮೇಲೂ ಸಹ ಪರಿಣಾಮ ಬೀರಲಿದೆ. ಉದ್ದೇಶಿತ ಎಲ್ಲ ಕೆಲಸಗಳು ಮಂದವಾಗಿ ಜನರ ಆಕ್ರೋಶ ಹೆಚ್ಚಾಗುವ ಸಾಧ್ಯತೆಗಳಿವೆ ಎಂಬ ವಾದವೂ ಸಹ ಪಕ್ಷದಲ್ಲಿದೆ.
ಬಿಎಸ್​ವೈ ಸಕ್ರಿಯ:ಗುರುವಾರ ಸಂಪುಟ ಸಭೆ ನಡೆಯಲಿದ್ದು, ಬಿಎಸ್​ವೈ ಪ್ರಮುಖ ನಿರ್ಧಾರ ಕೈಗೊಳ್ಳುವ ಮೂಲಕ ರಾಜ್ಯದ ಜನರಿಗೆ ಸಂದೇಶ ಕಳಿಸುವ ಸಾಧ್ಯತೆಯೂ ಇದೆ. ಈ ನಡುವೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಘೋಷಣೆ, ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನಾ ಸಭೆ, ನೆರೆ ಪೀಡಿತ ಪ್ರದೇಶಗಳ ಡಿಸಿಗಳ ಜತೆ ಸಭೆಯಂತ ಮಹತ್ವದ ಚಟುವಟಿಕೆಗಳಲ್ಲಿ ಸಿಎಂ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ‘ಅಂಥದ್ದೇನಿಲ್ಲ…’ ಎಂಬ ಚರ್ಚೆಗೂ ಸಹ ಪುಷ್ಟಿ ನೀಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ, ಸರ್ಕಾರದ ಕಾರ್ಯವೈಖರಿ, ತೀರ್ವನಗಳ, ನೇಮಕಗಳ ಬಗ್ಗೆ ಆಗಿಂದಾಗ್ಗೆ ಅಪಸ್ವರ ಇದ್ದವು. ಕೆಲವರಂತೂ ಅತಿರೇಕದ ಹೇಳಿಕೆ ಕೊಟ್ಟರು. ಇನ್ನೇನು ಗೊಂದಲ ಬಗೆಹರಿದು ವರಿಷ್ಠರ ಅಪೇಕ್ಷೆಯಂತೆ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ಆದ್ಯತೆ ಸಿಗಲಿದೆ ಎಂಬ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವ ರೀತಿ ಅಸಹಜ ಬೆಳವಣಿಗೆ ನಡೆದಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿಬಂದ ನಂತರ ಅದೇನೋ ಆಗುತ್ತಿದೆ ಎಂಬ ಸಂದೇಹ ರಾಜಕೀಯ ವಲಯದಲ್ಲಿ ಚರ್ಚೆಯಾಯಿತು. ಆದರೆ ಬಿಜೆಪಿ ರಾಜ್ಯದ ಮುಂಚೂಣಿ ನಾಯಕರಿಗೆ ಸ್ಪಷ್ಟತೆ ಇಲ್ಲ. ಎಲ್ಲರೂ ಗಾಳಿಯಲ್ಲೇ ಗುಂಡು ಹಾರಿಸುವವರೇ. ಇದರ ಪರಿಣಾಮ ಆಡಳಿತ ಮೇಲೆ ಉಂಟಾಗಲಿದೆ. ಬಿಎಸ್​ವೈ ತೆಗೆದುಕೊಂಡ ದಿಟ್ಟ ಹಾಗೂ ಗಟ್ಟಿ ನಿರ್ಧಾರಗಳೂ ಕೂಡ ಮರೆಯಾಗುವ ಆತಂಕ ಪಕ್ಷಕ್ಕಿದೆ.
ಎಲ್ಲವೂ ಗುಪ್ತಗುಪ್ತ:ನಾಯಕತ್ವ ಬದಲಾವಣೆ ಆಗಿಯೇ ಬಿಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ಮುಂದ್ಯಾರು ಎಂಬ ಗುಸುಗುಸು ದಟ್ಟವಾಗಿದೆ. ಹಲವು ಹೆಸರು ಮುನ್ನೆಲೆಗೆ ಬಂದರೂ ಕಿಂಚಿತ್ತೂ ಖಚಿತತೆ ಇಲ್ಲ. ಉತ್ತರಾಧಿಕಾರಿ ವಿಷಯದಲ್ಲಿ ಬಿಜೆಪಿ ನಾಯಕರಲ್ಲೂ ಅನಿಶ್ಚಿತತೆ ಎದ್ದುಕಾಣಿಸಿದೆ.
500-600 ಮಠಾಧೀಶರ ಸಭೆಗೆ ಸಿದ್ಧತೆ:ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಬೆಂಬಲದ ಮಹಾಪೂರವೇ ಹರಿದು ಬರುತ್ತಿದ್ದು, ವಿವಿಧ ಸಮುದಾಯಗಳ 500-600 ಮಠಾಧೀಶರು ಶೀಘ್ರದಲ್ಲೇ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ರ್ಚಚಿಸಲಿದ್ದಾರೆ. ರಾಜ್ಯಾದ್ಯಂತ ಮಠಾಧೀಶರು ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದರೆ, 35ಕ್ಕೂ ಹೆಚ್ಚು ಮಠಾಧೀಶರು ಬಿಎಸ್​ವೈ ಅವರನ್ನು ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆಯುವುದು, ಬಿಜೆಪಿ ವರಿಷ್ಠರ ಮೇಲೆ ಒತ್ತಡ ತರಲೆಂದು ಬೃಹತ್ ಸಂಖ್ಯೆಯಲ್ಲಿ ಮಠಾಧೀಶರು ಸಮಾವೇಶಗೊಳ್ಳಲು ಸಿದ್ಧತೆಗಳಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಬೆನ್ನಿಗೆ ಶ್ರೀಶೈಲ ಸೇರಿ ಪಂಚಪೀಠಗಳು ಇವೆ. ಬೆಳವಣಿಗೆ ಬಗ್ಗೆ ಇನ್ನಷ್ಟು ದಿನ ಕಾಯ್ದು ಸಮಪೀಠಾಧಿಪತಿ ಗಳೊಂದಿಗೆ ಸಮಾ ಲೋಚಿಸಿ ಪ್ರತಿಕ್ರಿಯೆ ನೀಡಲಾಗುವುದು.
|ಡಾ.ಶ್ರೀ ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿಶ್ರೀಶೈಲ ಪೀಠ
ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಮಾತು ಸುಲಭವಲ್ಲ. ಇಳಿಸಿದ ನಂತರ ಮುಂದೇನು? ಯಾವ ಯಾವ ಸಮುದಾಯದವರು ತಮ್ಮ ಭಾವನೆ ವ್ಯಕ್ತ ಪಡಿಸುತ್ತಾರೆ ಎಂದು ಹೇಳಲಾಗದಷ್ಟು ಅಗ್ನಿಪರೀಕ್ಷೆ ನಾಯಕರಿಗೆ ಎದುರಾಗುತ್ತದೆ.
|ಬಾಳೆಹೊನ್ನೂರುಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು
ರಾಜ್ಯದ ಸಿಎಂ ಬದಲಾದರೆ ಯಡಿಯೂರಪ್ಪ ನವರಿಗೇನು ನಷ್ಟ ಇಲ್ಲ. ಆದರೆ ಪಕ್ಷಕ್ಕೆ ನಷ್ಟ ಆಗಬಹುದು. ಇದ್ದಕ್ಕಿದ್ದಂತೆ ಒಬ್ಬ ನಾಯಕ ಹುಟ್ಟುವುದಿಲ್ಲ. ಯಡಿಯೂರಪ್ಪನವರನ್ನು ಮಧ್ಯದಲ್ಲಿ ಬದ ಲಾಯಿಸಿದರೆ ತೊಂದರೆ ಖಚಿತ.
|ಡಾ.ಶಿವಮೂರ್ತಿ ಮುರುಘಾ ಶರಣರುಚಿತ್ರದುರ್ಗ
ಬಿಜೆಪಿ ಆಂತರಿಕ ವಿಚಾರ ಗೊತ್ತಿಲ್ಲ. ಆ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಈ ಹಂತದಲ್ಲಿ ಸ್ಥಾನ ಬದಲಾವಣೆ ಸೂಕ್ತವಲ್ಲ ಅನ್ನೋದು ನಮ್ಮ ವೈಯಕ್ತಿಕ ಅಭಿಪ್ರಾಯ.
|ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಪೇಜಾವರ ಮಠಾಧೀಶ
ಕರ್ನಾಟಕದಲ್ಲಿ ಬಿಜೆಪಿ ಬಂದಿದ್ದರೆ ಅದು ಯಡಿಯೂರಪ್ಪನವರ ಶ್ರಮ. ಈ ಅವಧಿ ಯಡಿಯೂರಪ್ಪನವರ ಶ್ರಮದ ಫಲ. ಎಲ್ಲ ಸಮುದಾಯವನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮಧ್ಯದಲ್ಲಿ ಅವರ ಗೌರವಕ್ಕೆ ಧಕ್ಕೆ ತರಬಾರದು. ಅವರನ್ನು ಮುಂದುವರಿಸಬೇಕು.
|ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಮಾದರ ಚೆನ್ನಯ್ಯ ಗುರುಪೀಠ
ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕೆಂದು ಕುತಂತ್ರ ನಡೆಯುತ್ತಿದೆ. ಇದನ್ನು ಅಖಂಡವಾಗಿ ವಿರೋಧಿಸುತ್ತೇವೆ. ಯಡಿಯೂರಪ್ಪರ ಸ್ಥಾನ ಬದಲಾವಣೆಗೆ ಒಳಸಂಚು, ಸಮಾಜ ಇಬ್ಭಾಗ ಮಾಡುವ ಕೆಲಸ ನಡೆಯುತ್ತಿದೆ.
|ಶ್ರೀ ಅಭಿನವ ಹಾಲಸ್ವಾಮಿಗಳುಹೂವಿನ ಹಡಗಲಿ
ಯಡಿಯೂರಪ್ಪ ತಮ್ಮ ಕೈಯಲ್ಲಿ ಏನು ಇಲ್ಲ, ವರಿಷ್ಠರ ಮಾತು ಕೇಳಬೇಕು ಎಂದಿದ್ದಾರೆ. ಲಿಂಗಾಯತರನ್ನು ಯಾವುದೇ ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ. ಯಡಿಯೂರಪ್ಪ ಇದ್ದರೆ ಮಾತ್ರ ಬಿಜೆಪಿ, ಇಲ್ಲದಿದ್ದರೆ ಸರ್ವನಾಶವಾಗುತ್ತದೆ.
|ಶ್ರೀ ದಿಂಗಾಲೇಶ್ವರ ಸ್ವಾಮೀಜಿಬಾಲೆಹೊಸೂರು
ಬಿಎಸ್​ವೈ ಅವರೇ ಮುಂದಿನ ಅವಧಿಗೆ ಮುಂದುವರಿಯಬೇಕು, ಬದಲಾವಣೆ ಬಗ್ಗೆ ತೀರ್ವನಿಸಿದ್ದರೆ ತೀರ್ಮಾನ ಬದಲಿಸಿಕೊಳ್ಳಲಿ. ನಾಡಿನ ಒಳಿತಿಗಾಗಿ ಅವರೇ ಮುಂದುವರಿಯಬೇಕು.
|ಶ್ರೀ ಮಹಾಂತಲಿಂಗೇಶ್ವರ ಸ್ವಾಮೀಜಿ,ಶ್ರೀ ತೇಜೇಶಲಿಂಗ ಶಿವಾಚಾರ್ಯಸ್ವಾಮೀಜಿ
ಪಂಚಪೀಠಗಳೂ ಯಡಿಯೂರಪ್ಪ ಅವರ ಪರ ಇವೆ: ಶ್ರೀಶೈಲ ಜಗದ್ಗುರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
