‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ?’ ಎಂಬ ಗಿರೀಶ್ ಕಾರ್ನಾಡರ ಯಯಾತಿ ನಾಟಕದ ಸಾಲುಗಳನ್ನು ಬಜೆಟ್ ಮಂಡನೆ ವೇಳೆ ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ, ಓದುವ ಹೆಣ್ಣುಮಕ್ಕಳ ಕನಸುಗಳಿಗೆ ‘ಶಕ್ತಿ’ ಯೋಜನೆಯು ರೆಕ್ಕೆ ಮೂಡಿಸಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಸಾರಿಗೆ ವೇಗದೂತ ಮತ್ತು ಸಾಮಾನ್ಯ ಬಸ್​ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆಯು ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡುವುದು ಪಕ್ಕ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನ ಮಹತ್ವಾಕಾಂಕ್ಷಿ ಐದು ಗ್ಯಾರಂಟಿಗಳ ಪೈಕಿ ‘ಶಕ್ತಿ’ ಒಂದಾಗಿದ್ದು, ಬಜೆಟ್​ಗೆ ಮುನ್ನ ಜಾರಿಗೆ ಬಂದ ಹೆಗ್ಗಳಿಕೆಗೆ ಪಾತ್ರವಾಗಿ, ಸರ್ಕಾರದ ಉಮೇದು ಹೆಚ್ಚಿಸಿದೆ.
ಆರ್ಥಿಕತೆಗೆ ವೇಗ:ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ತೊಡಗಿದರೆ ಬಡ ಮತ್ತು ಮಧ್ಯಮ ವರ್ಗಗಳ ಕೊಳ್ಳುವ ಸಾಮರ್ಥ್ಯ ಹೆಚ್ಚಲಿದೆ. ಇದು, ಸಹಜವಾಗಿ ಆರ್ಥಿಕತೆ ಚಲನಶೀಲತೆಗೆ ಹೆಚ್ಚಿನ ವೇಗ ನೀಡಲಿದೆ. ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎನ್​ಡಬ್ಲ್ಯುಕೆಆರ್​ಟಿಸಿ ಹಾಗೂ ಕೆಕೆಆರ್​ಟಿಸಿ ವೇಗದೂತ, ಸಾಮಾನ್ಯ ಬಸ್​ಗಳಲ್ಲಿ ಎಲ್ಲ ವರ್ಗದ ಮಹಿಳೆಯರಿಗೆ ಉಚಿತ ಸೌಲಭ್ಯ ಬಹುಪಯೋಗಿಯಾಗಲಿದೆ. ಬಡತನದ ಕಾರಣ ತಮ್ಮ ಸುತ್ತ ತಾವೇ ನಿರ್ವಿುಸಿಕೊಂಡ ಬೇಲಿಯನ್ನು ಅಳಿಸಿ, ನಿರ್ಬಂಧಗಳನ್ನು ಹೋಗಲಾಡಿಸಲಿದೆ. ಶಿಕ್ಷಣ, ಉದ್ಯೋಗ, ಪ್ರವಾಸ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತಮ ಅವಕಾಶ ಹಾಗೂ ದೂರದ ಸ್ಥಳಗಳಿಗೂ ಹೋಗಿ ಉದ್ಯೋಗ ಕೈಗೊಳ್ಳಲು ಸಾಧ್ಯವಾಗಲಿದೆ ಎಂದಿದ್ದಾರೆ.
ಸರ್ಕಾರಿ ಬಸ್​ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಹೆಚ್ಚಳದಿಂದ ಸ್ತ್ರೀಯರು ನಿರ್ಭೀತಿಯಿಂದ ಯಾವುದೇ ಸಮಯದಲ್ಲೂ ಪ್ರಯಾಣಿಸಲು ಸುರಕ್ಷಿತ ವಾತಾವರಣ ಮೂಡಿದೆ. ರಸ್ತೆ ಸುರಕ್ಷತೆ ಕಾಮಗಾರಿಗಳನ್ನು ಕೈಗೊಳ್ಳಲು ಸಾರಿಗೆ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ ಇಲಾಖೆಗಳಿಗೆ ಪ್ರತ್ಯೇಕವಾಗಿ ಅನುದಾನ ಒದಗಿಸಲು ಉದ್ದೇಶಿಸಿದ್ದು, ಇದಕ್ಕಾಗಿ 450 ಕೋಟಿ ರೂ. ಕಾದಿರಿಸಲಾಗಿದೆ ಎಂದಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಯುಗುಣಮಟ್ಟ ಸುಧಾರಿಸುವ ಯೋಜನೆಗೆ ಸ್ಥಾಪಿಸಿರುವ ಹಸಿರು ತೆರಿಗೆ ನಿಧಿಯಲ್ಲಿ ಲಭ್ಯವಿರುವ ಮೊತ್ತದಲ್ಲಿ 2023-24ನೇ ಸಾಲಿಗೆ 35 ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಲಿದೆ ಎಂದು ಹೇಳಿದ್ದಾರೆ.
ಬಡವರು ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನಗದು ವರ್ಗಾವಣೆ ಮಾಡುವುದು ಸ್ತ್ರೀಸಬಲೀಕರಣ ಹಾಗೂ ಅವರ ಖರೀದಿ ಸಾಮರ್ಥ್ಯ ಹೆಚ್ಚಿಸುವ ಪರಿಣಾಮಕಾರಿ ಮಾರ್ಗವೆಂಬುದು ಸಾಬೀತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಯವ್ಯಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಜನಪರ ಸರ್ಕಾರಗಳ ನೀತಿ ಭಾಗವಾಗಿದೆ. ಸಂಪತ್ತು ಮರು ಹಂಚಿಕೆ ಖಾತರಿಪಡಿಸಲಿದೆ ಎಂದು 2023-24ರ ಬಜೆಟ್​ನಲ್ಲಿ ಒತ್ತಿ ಹೇಳಿದ್ದಾರೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆ, ನೂಕುನುಗ್ಗಲು ತಪ್ಪಿಸಲೆಂದು ‘ಗೃಹಲಕ್ಷ್ಮಿ’ಗೆ ಕಾಲಾವಕಾಶ ಪಡೆಯಲಾಗಿದ್ದು, ಯೋಜನೆಯಡಿ ಹೆಸರು ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ, ಅರ್ಹ ಕುಟಂಬದ ಮನೆಯೊಡತಿ ಬ್ಯಾಂಕ್ ಖಾತೆಗೆ ಆ.16ರಿಂದಲೇ ಮೊತ್ತ ಜಮೆಯಾಗಲಿದೆ ಎಂದು ಬಜೆಟ್ ನಂತರದ ಸುದ್ದಿಗೋಷ್ಠಿಯಲ್ಲಿ ಪುನರುಚ್ಚರಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಬಡವರಿಗೆ ಸಂಪತ್ತಿನ ಮರುಹಂಚಿಕೆಯಾಗಲಿದೆ. ಮಹಿಳಾ ತಾರತಮ್ಯ ನಿವಾರಣೆಯಲ್ಲಿ ಆರ್ಥಿಕ ಸ್ವಾವಲಂಬನೆ ಪ್ರಮುಖ ಪಾತ್ರ ವಹಿಸಲಿದೆ. ಕುಟುಂಬದ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ. ನೆರವು ನೇರ ವರ್ಗಾಯಿಸುವ ಮೂಲಕ ಮಹಿಳೆಯರನ್ನು ನಿಜವಾದ ಅರ್ಥದಲ್ಲಿ ರಾಜ್ಯ ಸರ್ಕಾರ ‘ಗೃಹಲಕ್ಷ್ಮಿ’ಯಾಗಿಸಿದೆ ಎಂದಿದ್ದಾರೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಾಜಿ ದೇವದಾಸಿಯರೂ ಈ ಯೋಜನೆ ವ್ಯಾಪ್ತಿಗೆ ಸೇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ದೇಶದಲ್ಲೇ ದೊಡ್ಡ ಯೋಜನೆ:ಗೃಹಲಕ್ಷ್ಮಿ ಯೋಜನೆಗಾಗಿ ವಾರ್ಷಿಕ 30 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಇಡೀ ದೇಶದಲ್ಲೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಳದಿಂದ ಬಡತನ ಗಣನೀಯ ಇಳಿಕೆಯಾಗಿ, ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ನೆಮ್ಮದಿ ಸಿಗಲಿದೆ. ಖರೀದಿಸುವ ಸಾಮರ್ಥ್ಯ ವೃದ್ಧಿಯಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿದೆ. ಪಶುಪಾಲನೆ, ಗುಡಿಕೈಗಾರಿಕೆಗಳಂಥ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಲು ಪ್ರೇರಣೆ ನೀಡುತ್ತದೆ. ಗರ್ಭಿಣಿಯರು, ಮಹಿಳಾ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತ ಸ್ತ್ರೀಯರು ಕೆಲಸ ಮಾಡುವ ಅನಿವಾರ್ಯತೆ ನಿವಾರಿಸಲಿದೆ. ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಬದುಕಿನ ನಿರ್ವಹಣೆ ಸುಗಮಗೊಳಿಸಿ, ಆರ್ಥಿಕ ಭದ್ರತೆ ಒದಗಿಸಲಿದೆ ಎಂದು ಸಿಎಂ ವಿವರಿಸಿದ್ದಾರೆ.
ಸಾಲದ ಮಿತಿ ಹೆಚ್ಚಳ:ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಉತ್ತೇಜಿಸಲು ಸಾಲದ ಮಿತಿ ಹೆಚ್ಚಿಸಲಾಗಿದೆ. ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವ ಸಾಲದ ಮಿತಿ 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳಿಗೆ ಏರಿಸಲಾಗಿದೆ.
ಚುನಾವಣೆ ಸಂದರ್ಭ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಗೆ ವೆಚ್ಚವಾಗುವ ಅಂದಾಜು 10 ಸಾವಿರ ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಮೀಸಲಿಟ್ಟಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​ದಾರರಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅಕ್ಕಿ ಸಿಗದಿರುವುದು ಹಾಗೂ ಬೇರೆಡೆ ಅಕ್ಕಿ ಲಭ್ಯವಾಗದ ಕಾರಣಕ್ಕೆ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿಗೆ 34 ರೂ. ನಂತೆ 170 ರೂ.ಗಳನ್ನು ಫಲಾನುಭವಿಗಳ ಲೆಕ್ಕಾಚಾರದಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಜು.10ರಂದು ಯೋಜನೆ ಜಾರಿ ಮಾಡುವುದಾಗಿಯೂ ಹೇಳಿದೆ.
ಕೇಂದ್ರ ಸರ್ಕಾರದಿಂದ ಈಗಾಗಲೇ ಒದಗಿಸುತ್ತಿರುವ 5 ಕೆಜಿ ಅಕ್ಕಿ ಜತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿ ವಿತರಿಸಲು ಬದ್ಧರಾಗಿದ್ದೇವೆ. ಭತ್ತ ಬೆಳೆಯುವ ವಿವಿಧ ರಾಜ್ಯಗಳನ್ನು ಸಂರ್ಪಸಿದ್ದು, ಅಕ್ಕಿ ಖರೀದಿಸಲು ಮಾತುಕತೆ ನಡೆಯುತ್ತಿದೆ. ಅಕ್ಕಿ ಸಿಗುವವರೆಗೂ ಪ್ರತಿ ಕೆಜಿ ಅಕ್ಕಿಗೆ ವೆಚ್ಚವಾಗುವ ಮೊತ್ತವನ್ನು ಪ್ರಸಕ್ತ ತಿಂಗಳಿನಿಂದಲೇ ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗುವುದು ಎಂದು ಸಿದ್ದರಾಮಯ್ಯ ವಾಗ್ದಾನ ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯಿಂದ ಬಡತನ ರೇಖೆಗಿಂತ ಕೆಳಗಿರುವ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ. ಇದಕ್ಕಾಗಿ ವರ್ಷಕ್ಕೆ ಅಂದಾಜು 10 ಸಾವಿರ ಕೋಟಿ ರೂ.ವೆಚ್ಚವಾಗಲಿದೆ ಎಂದು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯ ಸರ್ಕಾರ ಗುರುತಿಸಿರುವ ಅಂದಾಜು 40 ಲಕ್ಷ ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಯೋಜನೆಯಡಿ ಆ ಫಲಾನುಭವಿಗಳಿಗೆ ತಲಾ 10 ಕೆಜಿ ಆಹಾರ ಧಾನ್ಯ ವಿತರಿಸಲು ರಾಜ್ಯ ಸರ್ಕಾರ ವಾರ್ಷಿಕ 1,680 ಕೋಟಿ ರೂ. ಭರಿಸಲಿದೆ. ಕೇಂದ್ರವು ಹೆಚ್ಚುವರಿ ಬಡ ಕುಟುಂಬಗಳನ್ನೂ ಆದ್ಯತಾ ವಲಯದಡಿ ಪರಿಗಣಿಸಿ ಸೌಲಭ್ಯ ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ.
ಅನುಪಾತದಲ್ಲಿ ಹಣ: ಅಂತ್ಯೋದಯ ಕಾರ್ಡ್ ಇರುವ ಕುಟುಂಬದಲ್ಲಿ 3 ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರು ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯ ಪಡೆಯುತ್ತಿದ್ದರೆ ಅಂಥವರಿಗೆ ನಗದು ಸೌಲಭ್ಯ ಇಲ್ಲ. ಆದರೆ, ಈ ಕಾರ್ಡ್​ನಲ್ಲಿ 4 ಸದಸ್ಯರಿದ್ದರೆ 170 ರೂ., ಐದು ಸದಸ್ಯರಿದ್ದರೆ 510 ರೂ. ಸಿಗಲಿದೆ. ಅಲ್ಲದೆ, ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತದಲ್ಲಿ ಹಣ ನೀಡಲಾಗುತ್ತದೆ.
ಗೃಹಜ್ಯೋತಿ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಈಗಾಗಲೆ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ ಶುಕ್ರವಾರದವರೆಗೆ 1.3 ಕೋಟಿ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಜು.1ರಿಂದ ಬಳಕೆಯಾಗುವ ವಿದ್ಯುತ್ ಬಿಲ್​ಗೆ
ಇದು ಅನ್ವಯವಾಗುತ್ತದೆ. 200 ಯೂನಿಟ್​ವರೆಗಿನ ವಿದ್ಯುತ್ ಬಳಸುತ್ತಿರುವ ಗ್ರಾಹಕರಿಗೆ ಯೋಜನೆಯ ಲಾಭ ಸಿಗಲಿದೆ. ಅಂದಾಜು 2 ಕೋಟಿಗಿಂತ ಅಧಿಕ ಗೃಹ ಬಳಕೆದಾರರಿಗೆ ಉಪಯೋಗವಾಗುವ ಈ ಯೋಜನೆ ಜಾರಿಗೆ ವಾರ್ಷಿಕ ವೆಚ್ಚ 13,910 ಕೋಟಿ ರೂ.ಗಳನ್ನು ಸಿದ್ದರಾಮಯ್ಯ ಸರ್ಕಾರ ಬಜೆಟ್​ನಲ್ಲಿ ಕಾದಿರಿಸಿದೆ.
‘ಗೃಹಜ್ಯೋತಿ’ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಅವರ ವಾರ್ಷಿಕ ಸರಾಸರಿ ಬಳಕೆ ಜತೆಗೆ ಗರಿಷ್ಠ ಶೇ.100 ಹೆಚ್ಚುವರಿ ಯೂನಿಟ್​ಗಳವರೆಗಿನ ಬಳಕೆ ಉಚಿತವಾಗಿ ದೊರೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಂಧನ ಇಲಾಖೆ ಅಧೀನದ ವ್ಯಾಪ್ತಿಗೆ ಬರುವ ಕಂಪನಿಗಳ ಸಾಲದ ಹೊರೆಯು 2018ರ ಮಾರ್ಚ್ ಅಂತ್ಯಕ್ಕೆ 51,086 ಕೋಟಿ ರೂ.ಗಳಷ್ಟಿದ್ದದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ 91,911 ಕೋಟಿ ರೂ.ಗೆ ಏರಿಕೆಯಾಗಿದೆ. ನಮ್ಮ ಸರ್ಕಾರ ವಿದ್ಯುತ್ ಸರಬರಾಜು ಕಂಪನಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ, ಗುಣಮಟ್ಟದ ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ 2035ವರೆಗಿನ ಮುನ್ನೋಟ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ನಾಲ್ಕಕ್ಕೆ ಇಂತಿಷ್ಟು ಅನುದಾನ ಎಂದು ಬಜೆಟ್​ನಲ್ಲಿ ಮೀಸಲಿಟ್ಟಿರುವ ಸರ್ಕಾರ, ‘ಯುವನಿಧಿ’ ಗ್ಯಾರಂಟಿಗೆ ಹಣ ಮೀಸಲಿಟ್ಟಿಲ್ಲ. ಆದರೆ, 2023ರಲ್ಲಿ ಪದವಿ ಪಡೆದು 6 ತಿಂಗಳಾದರೂ ಕೆಲಸ ಸಿಗದ ನಿರುದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದು ಸಿದ್ದರಾಮಯ್ಯ ಮುಂಗಡದಲ್ಲಿ ಪ್ರಸ್ತಾಪಿಸಿದ್ದಾರೆ. ಯುವನಿಧಿ ಯೋಜನೆ ಮೂಲಕ ಉದ್ಯೋಗ ಸಿಗದ ಪದವೀಧರರಿಗೆ 2 ವರ್ಷದವರೆಗೆ ಅಥವಾ ಉದ್ಯೋಗ ಸಿಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾಸಿಕ 3,000 ರೂ. ಮತ್ತು ಡಿಪ್ಲೊಮಾ ಪೂರೈಸಿದವರಿಗೆ 1,500 ರೂ. ನೀಡುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ 50 ವರ್ಷ ಪೂರೈಸಿದ 12 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳೆಂದು ಘೊಷಿಸಿ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲು (ನಿರ್ವಣ ಕಾರ್ಯ, ಹೊಸ ಉಪಕರಣಗಳು, ಯಂತ್ರೋಪಕರಣಗಳ ಖರೀದಿಗೆ) 100 ಕೋಟಿ ರೂ. ವಿನಿಯೋಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಐಟಿಐ, ಜಿಟಿಟಿಸಿ, ಪಾಲಿಟೆಕ್ನಿಕ್ ಸಂಸ್ಥೆಗಳ ಮೂಲಕ ಎಲ್ಲ ಕೌಶಲ ತರಬೇತಿ ನೀಡಿ ಇಂಡಸ್ಟ್ರಿ ಮತ್ತು ಅಕಾಡೆಮಿ ಸಮನ್ವಯಗೊಳಿಸಿ ತರಬೇತಿಯನ್ನು ಹೆಚ್ಚಿನ ಸಾಂಸ್ಥೀಕರಣ ಹಾಗೂ ವ್ಯವಸ್ಥೀಕರಣಗೊಳಿಸಲಾಗುವುದು ಎಂದಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
