ನವದೆಹಲಿ:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಲಕ್ಷಣಗಳು ಗೋಚರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಮುಖಂಡರು, ಸಚಿವರು, ಕಾರ್ಯಕರ್ತರೆಲ್ಲರೂ ಈಗ ದೆಹಲಿಯತ್ತ ದೃಷ್ಟಿ ನೆಟ್ಟಿದ್ದಾರೆ. ಹೊಸ ನಾಯಕತ್ವದ ಬಗ್ಗೆ ವರಿಷ್ಠರು ಗಂಭೀರ ಚಿಂತನೆ ನಡೆಸಿರುವುದರಿಂದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆ ವ್ಯಾಪಕಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಆಯ್ಕೆಗಳ ಬಗ್ಗೆ ಕುತೂಹಲ ಗರಿಗೆದರಿದೆ.
ಯಡಿಯೂರಪ್ಪ ಅವರನ್ನು ಬೆಂಬಲಿಸಿ ಲಿಂಗಾಯತ ಸಮುದಾಯದ ಮಠಾಧೀಶರ ದೊಡ್ಡ ವರ್ಗವೇ ದೆಹಲಿ ವರಿಷ್ಠರ ಮೇಲೆ ಒತ್ತಡ ಹೇರುವ ಚಿಂತನೆ ನಡೆದಿರುವ ಹಿನ್ನೆಲೆಯಲ್ಲಿ ವರಿಷ್ಠರು ಕೂಡ ನಾಯಕತ್ವದ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಜಾತಿ ಆಧರಿಸಿ ಸಿಎಂ ಆಯ್ಕೆ ಮಾಡುತ್ತಾರೋ ಅಥವಾ ಪಕ್ಷನಿಷ್ಠೆ, ಕ್ಲೀನ್ ಇಮೇಜ್ ಹಾಗೂ ವರಿಷ್ಠರ ಆಣತಿಯಂತೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬಲ್ಲ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೋ ಎಂಬ ಮಾತುಕತೆ ಶಾಸಕರು, ಮುಖಂಡರ ಮಧ್ಯೆ ನಡೆಯುತ್ತಿದೆ.
ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನೂ 1 ವರ್ಷ 8 ತಿಂಗಳು ಬಾಕಿ ಇರುವುದರಿಂದ ಸಿಎಂ ಸ್ಥಾನ ಬದಲಾವಣೆಗೆ ಕಾಲ ಪಕ್ವವಾಗಿದೆ ಎಂದು ವರಿಷ್ಠರು ಭಾವಿಸಿದ್ದಾರೆ. 8 ತಿಂಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೊನೆಯ 1 ವರ್ಷ ಚುನಾವಣೆಗೆ ಪಕ್ಷ ಮತ್ತು ಕಾರ್ಯಕರ್ತರನ್ನು ಸಜ್ಜುಗೊಳಿಸಲು ಅನುಕೂಲವಾಗಲಿದೆ ಎನ್ನುವುದು ಹೈಕಮಾಂಡ್ ಚಿಂತನೆ.
ರಾಜ್ಯ ಸರ್ಕಾರದಲ್ಲಿ ಆಗಲಿರುವ ಬದಲಾವಣೆಗಳ ಕುರಿತು ಸಂಸತ್ತಿನ ಸೆಂಟ್ರಲ್ ಹಾಲ್​ನಲ್ಲೂ ಬಿಜೆಪಿ ಸಂಸದರ ಮಧ್ಯೆ ಚರ್ಚೆ, ಸಮಾಲೋಚನೆಗಳು ಜೋರಾಗಿ ನಡೆದಿದ್ದರೂ, ವರಿಷ್ಠರ ಮನದಾಳದಲ್ಲೇನಿದೆ ಎಂಬುದು ಬಹುತೇಕರಿಗೆ ಊಹಿಸಲು ಸಾಧ್ಯವಾಗುತ್ತಿಲ್ಲ. ಹಲವು ರಾಜ್ಯಗಳಲ್ಲಿನ ಮಹತ್ವದ ಹುದ್ದೆಗಳಿಗೆ ಸಂಬಂಧಿಸಿ ಅಚ್ಚರಿಯ ಹಾಗೂ ಕಲ್ಪನೆಗೂ ಸಿಗದ ಆಯ್ಕೆಗಳನ್ನು ಮೋದಿ-ಷಾ ನಾಯಕತ್ವ ಮಾಡಿರುವುದರಿಂದ ಕರ್ನಾಟಕ ವಿಷಯದಲ್ಲೂ ಇಂಥವರೇ ಸಿಎಂ ಆಗಬಹುದು ಎಂದು ಹೇಳಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ.
ದಿಲ್ಲಿ ರಾಜಕೀಯ ಅಂಗಳದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರು ಸದ್ದು ಮಾಡಿವೆ. ಲಿಂಗಾಯತ ಸಮುದಾಯದ ಸಿಎಂ ಕೆಳಗಿಳಿಸಿ ಅದೇ ಸಮುದಾಯದವರನ್ನೇ ಉನ್ನತ ಹುದ್ದೆಗೆ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಪಕ್ಷಕ್ಕೆ ಹಾನಿಯಾಗಬಹುದು ಎಂಬ ಆತಂಕವೂ ಅನೇಕರಿಗಿದೆ. ಹೀಗಿದ್ದರೂ ಬ್ರಾಹ್ಮಣ ಅಥವಾ ಒಕ್ಕಲಿಗ ಗೌಡ ಸಮುದಾಯದ ನಾಯಕರನ್ನೇ ಪರಿಗಣಿಸಿದರೆ, ಉಪ ಮುಖ್ಯಮಂತ್ರಿ ಹಾಗೂ ಲಿಂಗಾಯತ ಸಮುದಾಯದ ವಿವಿಧ ಉಪ ಜಾತಿಗಳ ಮುಖಂಡರಿಗೆ ಮಂತ್ರಿ ಮಂಡಲದಲ್ಲಿ ಆದ್ಯತೆ ನೀಡಿ ಅವರನ್ನು ತೃಪ್ತಿಪಡಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಎಸ್​ವೈ ಬೆಂಬಲಕ್ಕೆ ನಿಂತ ಮಠಾಧೀಶರು:ಬೆಳಗಾವಿಯ ಕಿತ್ತೂರಿನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು, ಮನಗೂಳಿಯ ಸಂಗನಬಸವ ಶಿವಾಚಾರ್ಯರು, ಬುರಾಣ ಪುರದ ಯೋಗೇಶ್ವರಿ ಮಾತಾಜಿ, ಇಂಡಿಯ ಡಾ.ಸ್ವರೂಪಾನಂದ ಸ್ವಾಮೀಜಿ, ಕಮರಿಮಠದ ಸಿದ್ದಲಿಂಗ ದೇವರು, ಡಾ.ಸ್ವರೂಪಾನಂದ ಸ್ವಾಮೀಜಿ, ತಿಕೋಟಾ ವಿರಕ್ತ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಬ್ಬೆತುಮಕೂರು ವಿಶ್ವಾರಾಧ್ಯ ಮಠದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಮಹಾಸ್ವಾಮೀಜಿ, ಹೆಡಗಿಮದ್ರಾದ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ, ಗುರುಮಠಕಲ್ ಖಾಸಾಮಠದ ಶ್ರೀ ಶಾಂತಗುರು ಮುರುಘರಾಜೇಂದ್ರ ಸ್ವಾಮೀಜಿ, ಅರಸೀಕೆರೆಯ ಯಳನಡು ಮಹಾಸಂಸ್ಥಾನದ ಡಾ.ಶ್ರೀಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ.
ಅನ್ಯಾಯ ಆಗಿಲ್ಲ!:ಈ ಮಧ್ಯೆ, ಬಿಜೆಪಿಯಲ್ಲಿ ಯಡಿಯೂರಪ್ಪ ನವರಿಗೆ ಅನ್ಯಾಯವಾಗಿದೆ ಎಂಬ ಮಾತನ್ನು ನಾನು ಒಪ್ಪಲಾರೆ ಎಂದು ಸಿ.ಟಿ.ರವಿ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಬಿಎಸ್​ವೈ ಅವರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಂಡಿದೆ ಮತ್ತು ಅವರು ಪಕ್ಷಕ್ಕಾಗಿ ಅವಿರತ ದುಡಿದವರು. ಪಕ್ಷವನ್ನು ಉನ್ನತ ಸ್ತರಕ್ಕೆ ಕೊಂಡೊಯ್ದಲ್ಲಿ ಅವರ ಪಾತ್ರ ದೊಡ್ಡದು. ಹಾಗಂತ ಅವರಿಗೆ ಅನ್ಯಾಯವನ್ನೇನೂ ಮಾಡಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಗಣಿ ಸಚಿವ ಮುರುಗೇಶ್ ನಿರಾಣಿ ವಾರಾಣಸಿಗೆ ತೆರಳಿ ವಾಪಸಾದ ಬೆನ್ನಲ್ಲೇ ಶಾಸಕ ಅರವಿಂದ ಬೆಲ್ಲದ್ ವಾರಾಣಸಿಗೆ ತೆರಳಿ ದೆಹಲಿಗೆ ಮರಳಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿ.ಟಿ. ರವಿ ಭೇಟಿ ಮಾಡಿರುವ ಬೆಲ್ಲದ್, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ರ್ಚಚಿಸಿರುವುದು ಕುತೂಹಲಕ್ಕೆಡೆ ಮಾಡಿದೆ.
ಪ್ರತಿಕ್ರಿಯೆಗೆ ಅರುಣ್ ಸಿಂಗ್ ನಕಾರ:ಸಾಮಾನ್ಯವಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಿವಾಸದ ಬಳಿ ಕನ್ನಡದ ಪತ್ರಕರ್ತರು ತೆರಳಿದಾಗಲೆಲ್ಲ, ಅವರನ್ನು ಮನೆಗೆ ಕರೆದು ಚಹಾ ಹೀರುತ್ತಾ ರಾಜಕೀಯದ ಬಗ್ಗೆ ವಿಚಾರ-ವಿನಿಮಯ ನಡೆಸುತ್ತಿದ್ದರು. ಈ ಬಾರಿ ಪತ್ರಕರ್ತರೊಂದಿಗೆ ಮಾತನಾಡಲು ಹಿಂದೇಟು ಹಾಕಿದ ಸಿಂಗ್, ‘ನಾವು ಇನ್ನೊಂದು ದಿನ ಚಹಾ ಕುಡಿಯಲು ಸೇರೋಣ. ನಿಮಗೆಲ್ಲರಿಗೂ ನಮಸ್ಕಾರ’ ಎಂದು ಕಾರಿನಲ್ಲಿ ಹೊರಹೋದರು. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಅನೇಕ ಸಂದರ್ಭಗಳಲ್ಲಿ ಬಹಿರಂಗ ಹೇಳಿಕೆ ನೀಡುತ್ತಿದ್ದ ಅರುಣ್ ಸಿಂಗ್, ಈ ಬಾರಿ ನಾಯಕತ್ವದ ವಿಷಯದಲ್ಲಿ ಮೌನ ವಹಿಸಿರುವುದು ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ವರಿಷ್ಠರ ಸೂಚನೆಗೆ ತಲೆಬಾಗೋಣ:ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ತೆಗೆದರೆ ಬಿಜೆಪಿ ಸರ್ವನಾಶವಾಗುತ್ತದೆ ಎಂಬ ಮಠಾಧೀಶರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಅನೇಕ ಲಿಂಗಾಯತ ಶಾಸಕರೇ ಬಿಎಸ್​ವೈ ಘನತೆಗೆ ಚ್ಯುತಿ ತರುವ ಹೇಳಿಕೆ ನೀಡಿದಾಗ ಏಕೆ ಮೌನವಾಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವೆಂದು ನೀಡಿರುವ ಹೇಳಿಕೆ. ಅತ್ಯಂತ ಸಮಾಧಾನ ಹಾಗೂ ಖುಷಿ ತಂದಿದೆ. ಸಿಎಂ ಸೇರಿ ನಾವೆಲ್ಲರೂ ವರಿಷ್ಠರ ಸೂಚನೆಗೆ ತಲೆ ಬಾಗುತ್ತೇವೆ. ರಾಜೀನಾಮೆ ನೀಡಬೇಕು ಎಂದು ಆದೇಶಿಸಿದರೆ ಅದರಂತೆ ನಡೆದುಕೊಳ್ಳುತ್ತೇವೆ. ಬಿಎಸ್​ವೈ ಹೇಳಿಕೆ ಬಗ್ಗೆ ಹೆಚ್ಚೇನು ಹೇಳಲಾಗದು ಎಂದು ಸುದ್ದಿಗಾರರಿಗೆ ತಿಳಿಸಿದರು. ಇದುವರೆಗೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಯಾರೂ ಹೇಳಿಲ್ಲ. ಮಾಧ್ಯಮದವರು ಚರ್ಚೆ ಮಾಡಬೇಡಿ. ಅದು ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವಿನ ವಿಚಾರ. ಅದನ್ನು ಅವರಿಬ್ಬರೇ ನಿರ್ಧಾರ ಮಾಡುತ್ತಾರೆ. ನಾವು, ನೀವು ಚರ್ಚೆ ಮಾಡಲು ಯಾರು ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ಶಿವಮೊಗ್ಗ:ಯಡಿಯೂರಪ್ಪ ಅವರಿಗೆ ವೈಯಕ್ತಿಕವಾದ ಯಾವುದೇ ಅಜೆಂಡಾ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಎರಡೂ ತಿಂಗಳ ಹಿಂದೆಯೇ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈಗಲೂ ಹೈಕಮಾಂಡ್ ಅಪೇಕ್ಷೆಪಟ್ಟರೆ ರಾಜೀನಾಮೆ ನೀಡುತ್ತಾರೆ. ಆದರೆ ವರಿಷ್ಠರಿಂದ ಅಂತಹ ಸಂದೇಶ ಇದುವರೆಗೆ ಬಂದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ರಾಜೀನಾಮೆ ಬಗ್ಗೆ ಯಡಿಯೂರಪ್ಪ, ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿಲ್ಲ. ಸಹಜವಾಗಿ ಅವರು ಎಂದಿಗೂ ರಾಜಕೀಯ ವಿಚಾರವಾಗಿ ಕುಟುಂಬದವರೊಂದಿಗೆ ಮಾತನಾಡುವುದಿಲ್ಲ ಎಂದರು.
ಬಿಜೆಪಿ ಆಂತರಿಕ ವಿಷಯಗಳ ಬಗ್ಗೆ ಮತ್ತು ಯಡಿಯೂರಪ್ಪರನ್ನು ಬೆಂಬಲಿಸಿ ಕಾಂಗ್ರೆಸ್​ನ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್ ಮಾತನಾಡುವ ಅಗತ್ಯವೇ ಇರಲಿಲ್ಲ. ಶಾಸಕರಾಗಿ ನಾವು ಧರ್ಮದ ಆಧಾರದಲ್ಲಿ ಮಾತನಾಡಲೇಬಾರದು. ಇಬ್ಬರೂ ತಮ್ಮ ಹೇಳಿಕೆಗಳನ್ನು ಹಿಂಪಡೆದುಕೊಳ್ಳಬೇಕು.
|ಬಸವರಾಜ ರಾಯರಡ್ಡಿಮಾಜಿ ಸಚಿವ, ಕಾಂಗ್ರೆಸ್
ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಬಿಜೆಪಿ ವರಿಷ್ಠರ ನಿರ್ಧಾರ ಅಪ್ರಸ್ತುತ. ಯಡಿಯೂರಪ್ಪ ಅವರು ಕೇವಲ ವೀರಶೈವ ಲಿಂಗಾಯತ ಸಮಾಜದ ನಾಯಕರಲ್ಲ. ರಾಜ್ಯದ ಎಲ್ಲ ಸಮುದಾಯದ ನೆಚ್ಚಿನ ನಾಯಕರು. ಅವರನ್ನು ಪೂರ್ಣಾವಧಿಗೆ ಮುಂದುವರಿಸಬೇಕು. ಒಂದೊಮ್ಮೆ ಬದಲಾಯಿಸಿದರೆ ಬಿಜೆಪಿಗೆ ಗಂಡಾಂತರ ಕಟ್ಟಿಟ್ಟ ಬುತ್ತಿ.
|ಡಾ.ರಾಜಶೇಖರ ಶಿವಾಚಾರ್ಯರುಸಂಚಾಲಕರು, ಶ್ರೀ ಅಕ್ಕ ಮಹಾದೇವಿ ಚೈತನ್ಯ ಕೇಂದ್ರ, ಶ್ರೀಶೈಲಂ
ನಾನು ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವುದಷ್ಟೇ ಗುರಿ. ಸಿಎಂ ಸ್ಥಾನಕ್ಕಾಗಿ ಹಗಲುಗನಸು ಕಂಡವನೂ ಅಲ್ಲ. ಹೊಸ ಅಂಗಿ ಹೊಲಿಸಿಕೊಂಡು ಕೂತವನೂ ಅಲ್ಲ.
|ಸಿ.ಟಿ.ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nineteen =
Remember me
