ಬೆಳಗಾವಿ:‘ರಾಜ್ಯವನ್ನು ಆವರಿಸಿರುವ ಬರವನ್ನು ಗಂಭೀರವಾಗಿ ಪರಿಗಣಿಸಿ, ತೆರಿಗೆ ಸಂಗ್ರಹಣೆ ಕಡೆ ಗಮನ ಹರಿಸಿ, ಕಡತಗಳು ಕನ್ನಡದಲ್ಲಿಯೇ ಇರುವಂತೆ ನೋಡಿಕೊಳ್ಳಿ, ಜನರಿಂದ ಬರುವ ದೂರುಗಳಿಗೆ ಸಹಾನುಭೂತಿಯಿಂದ ಪರಿಹಾರ ನೀಡಿ….’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಾಗಿ ನೀಡಿದ ಸೂಚನೆಗಳಿವು.
ರಜನೀಶ್ ಗೋಯಲ್ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಈ ಸಭೆ ಆಯೋಜನೆಯಾಗಿತ್ತು. ಬುಧವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳ ಕಾರ್ಯ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಿಎಂ, ಆಡಳಿತದಲ್ಲಿ ಗಮನಾರ್ಹ ಬದಲಾವಣೆ ತರುವುದಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಇದನ್ನು ಎದುರಿಸಲು ಜಿಲ್ಲಾಡಳಿತದೊಂದಿಗೆ ಇದ್ದು ಸಮರ್ಪಕವಾದ ಮಾರ್ಗದರ್ಶನ ನೀಡಬೇಕು. ಯಾವುದೇ ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಮುಂದಿನ ಬೇಸಿಗೆಯನ್ನು ನಿಭಾಯಿಸಬೇಕು. ಪ್ರತಿ ತಿಂಗಳು ಜನಸ್ಪಂದನ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.
ಜನರಿಂದ ದೂರುಗಳು ಸ್ವೀಕೃತವಾದಾಗ ಅವುಗಳ ಕುರಿತು ಸಹಾನುಭೂತಿಯಿಂದ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ. ಅವುಗಳಿಗೆ ಯಾವುದೇ ಕುಂದು ಬರದಂತೆ ಅನುಷ್ಠಾನ ಮಾಡುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ ಎಂದು ಎಚ್ಚರಿಸಿದರು. ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಸುರಕ್ಷತಾ ಕಾರ್ಯಕ್ರಮಗಳಿಂದ 2 ಕೋಟಿಗೂ ಹೆಚ್ಚು ಕುಟುಂಬಗಳ 4.5 ರಿಂದ 5 ಕೋಟಿ ಜನ ಅನುಕೂಲ ಪಡೆಯುತ್ತಿದ್ದಾರೆ. ಈ ಕುಟುಂಬಗಳಿಗೆ ತಿಂಗಳಿಗೆ 5 ರಿಂದ 6 ಸಾವಿರ ರೂ.ಗಳ ತನಕ ನೆರವು ಸಿಗುತ್ತಿದೆ. ಈ ಮಟ್ಟದ ಹಣವು ಗ್ರಾಮೀಣ ಆರ್ಥಿಕತೆಯನ್ನು ಸಶಕ್ತಗೊಳಿಸಬೇಕು. ಆ ನಿಟ್ಟಿನಲ್ಲಿ ಕಾರ್ಯದರ್ಶಿಗಳು ಕಾರ್ಯೋನ್ಮುಖರಾಗಬೇಕು. ತೆರಿಗೆ ಸಂಗ್ರಹಣೆ ಮಾಡುವ ಇಲಾಖೆಗಳು ಯಾವುದೇ ಕಾರಣಕ್ಕೂ ಎಚ್ಚರ ತಪ್ಪದಂತೆ ನೋಡಿಕೊಳ್ಳಿ ಎಂದು ಸಿಎಂ ಹೇಳಿದರು. ಬಜೆಟ್​ನಲ್ಲಿ ಘೋಷಣೆಯಾಗಿದ್ದ ಯೋಜನೆಗಳಿಗೆ ಸಂಬಂಧಿಸಿದಂತೆ ಆದೇಶಗಳು ಆಗಿಲ್ಲದಿದ್ದರೆ ಕೂಡಲೇ ಆದೇಶಗಳನ್ನು ಹೊರಡಿಸಿ ಎಂದು ಹೇಳಿದರು.
ಸೃಜನಶೀಲ ಕಾರ್ಯಕ್ರಮ:ಶಿಕ್ಷಣ, ಉದ್ಯೋಗ, ಆರೋಗ್ಯ, ರಸ್ತೆ, ನೀರು ಮುಂತಾದವುಗಳ ಸ್ಥಿತಿ ಸುಧಾರಿಸಲು ಉಸ್ತುವಾರಿ ಕಾರ್ಯದರ್ಶಿಗಳು ಸಮರ್ಪಕವಾಗಿ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕು. ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.
ಅಪೌಷ್ಟಿಕತೆ ತಡೆಗೆ ಕ್ರಮ:ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಅಪೌಷ್ಟಿಕತೆಯ ಪ್ರಮಾಣವು ಶೇ.5ರಷ್ಟು ಇದೆ. ಇದನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯದರ್ಶಿಗಳು ಸಮರ್ಪಕವಾಗಿ ಹಾಗೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದರು.
ನೋಡಲ್ ಅಧಿಕಾರಿಗಳು:ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ನೆರವಾಗುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳಾಗಿ ಹಿರಿಯ ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಅವರ ನೆರವು ಪಡೆದುಕೊಂಡು ಉತ್ತಮ ಆಡಳಿತ ನೀಡಲು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿ ಎಂದು ಸಿದ್ದರಾಮಯ್ಯ ಸೂಚಿಸಿದರು. ರಾಜ್ಯದಲ್ಲಿ ಸಣ್ಣ, ಅತಿಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಪ್ರಾರಂಭಿಸಲು ಸೂಕ್ತ ವಾತಾವರಣವನ್ನು ರೂಪಿಸಲು ಸರ್ಕಾರಕ್ಕೆ ನೆರವಾಗಬೇಕು. ಆಯಾ ವರ್ಷದ ಯೋಜನೆಗಳು ಅದೇ ವರ್ಷದಲ್ಲಿ ಅನುಷ್ಠಾನವಾಗಬೇಕು ಎಂದು ಸಿಎಂ ತಿಳಿಸಿದರು.
ಕನ್ನಡದಲ್ಲಿಯೇ ಕಡತ:ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಈ ಮಾತನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಕನ್ನಡದಲ್ಲಿಯೇ ಕಡತ ಮಂಡಿಸುವಂತೆ ಸೂಚನೆ ನೀಡಿದ್ದರೂ ಅನೇಕರು ಪಾಲಿಸುತ್ತಿಲ್ಲವೆಂದು ಸಿದ್ದರಾಮಯ್ಯ ಅಸಹನೆ ವ್ಯಕ್ತಪಡಿಸಿದರು. ಇನ್ನು ಮುಂದೆ ಎಲ್ಲ ಕಡತಗಳು ಕನ್ನಡದಲ್ಲಿಯೇ ಮಂಡಿಸಬೇಕೆಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ಅಧೀನ ಸಿಬ್ಬಂದಿಯ ಮಾಹಿತಿ ಆಧರಿಸಿ ಅವಗಾಹನೆ, ಅನುಮೋದನೆ ಎಂಬ ಪದಗಳನ್ನು ಬರೆದು ಕಳುಹಿಸುತ್ತಾರೆ. ಅದರ ಬದಲು ಸ್ಪಷ್ಟವಾದ ಮತ್ತು ಸಮರ್ಪಕವಾದ ಅಭಿಪ್ರಾಯ ದಾಖಲಿಸಿ ಕಡತಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ಅತೀಕ್​ಗೆ ಆಗಿದ್ದು ನಿಮಗೇಕೆ ಆಗಲ್ಲ?:ಮುಖ್ಯಮಂತ್ರಿ ಕಚೇರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಎಲ್.ಕೆ. ಅತೀಕ್ ಅವರು ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲಿ 108 ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ಅವರಿಗೆ ಸಾಧ್ಯವಾಗಿದ್ದು ಇತರ ಅಧಿಕಾರಿಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ತ್ವರಿತವಾಗಿ ಕಡತಗಳ ವಿಲೇವಾರಿ ಕಡೆ ಗಮನ ಹರಿಸಿ ಎಂದು ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + two =
Remember me
