ಬೆಂಗಳೂರು:ವಿಶೇಷ ಅಭಿವೃದ್ಧಿ ಯೋಜನೆ (ಎಸ್​ಡಿಪಿ) ಮುಂದುವರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗ್ರೀನ್​ಸಿಗ್ನಲ್ ನೀಡಿದ್ದಾರೆ. ಆದರೆ, ಕಾರ್ಯಕ್ರಮ ಅನುಷ್ಠಾನ ವಿಧಾನದಲ್ಲಿ ಕೆಲವು ಮಾರ್ಪಾಟುಗಳಾಗಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಂದಾಯ ವಿಭಾಗದ ಬದಲಿಗೆ ಆಯಾ ತಾಲೂಕುಗಳ ಹಿಂದುಳಿದ ಶ್ರೇಯಾಂಕ ಆಧರಿಸಿ ಅನುದಾನ ಹಂಚಿಕೆ, ನೆರೆಪೀಡಿತ ತಾಲೂಕುಗಳ ಸೇರ್ಪಡೆ ಹಾಗೂ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಕ್ರಮಗಳು ರೂಪುಗೊಳ್ಳಲಿರುವುದು ಪರಿಷ್ಕೃತ ವಿಶೇಷ ಅಭಿವೃದ್ಧಿ ಯೋಜನೆಯ ಮುಖ್ಯಾಂಶಗಳು. ಯೋಜನೆ, ಯೋಜನೇತರ ವೆಚ್ಚದಲ್ಲಿ ಆಯಾ ಇಲಾಖೆಗೆ ನಿಗದಿಪಡಿಸಿದ ಅನುದಾನ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಎಸ್​ಡಿಪಿ ಅನುಷ್ಠಾನಕ್ಕೆ ಬರಲಿದ್ದು, ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂಬ ತಜ್ಞರ ಸಲಹೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಈ ಬಾರಿ ಅನುದಾನದ ಮೊತ್ತ 5,000 ಕೋಟಿ ರೂ.ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ.
ಈ ಯೋಜನೆ ಜಾರಿಗೆ ಬಂದಾಗಿನಿಂದ ವಾರ್ಷಿಕ 3 ಸಾವಿರ ಕೋಟಿ ರೂ.ಗಿಂತ ಹೆಚ್ಚು ಮೊತ್ತ ಮೀಸಲಿರಿಸಿರುವುದು ವಿರಳ ಎಂದು ಇಲಾಖೆ ಮೂಲಗಳು ಹೇಳಿವೆ. ಡಾ. ಡಿ.ಎಂ. ನಂಜುಂಡಪ್ಪ ಪ್ರಾದೇಶಿಕ ಅಸಮತೋಲನ ನಿವಾರಣೆಯ ಉನ್ನತಾಧಿಕಾರ ಸಮಿತಿ ವರದಿ ಆಧರಿಸಿ ವಿಶೇಷ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ. ಇಲಾಖಾವಾರು ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂಬ ಶಿಫಾರಸು ಈವರೆಗೆ ಪರಿಗಣನೆಯಾಗಿರಲಿಲ್ಲ.
ಚರ್ಚೆ ಬಳಿಕ ರೂಪರೇಷೆ ಸ್ಪಷ್ಟ:ಇಲಾಖಾಮಟ್ಟದ ಆಂತರಿಕ ಮೌಲ್ಯಮಾಪನ ಸಮಿತಿ ಸರ್ಕಾರದ ಮುಂದಿಟ್ಟಿರುವ ವರದಿ ಬಗ್ಗೆ ಸಿಎಂ ಕುತೂಹಲಗೊಂಡಿದ್ದಾರೆ. ಕಳೆದ 12 ವರ್ಷಗಳಲ್ಲಿ ಈ ಯೋಜನೆಯ ಅನುಷ್ಠಾನಗೊಂಡ ಪರಿ ಹಾಗೂ ಫಲಿತಾಂಶಗಳ ಕುರಿತ ವರದಿ ಇದಾಗಿದೆ. ಹಾಗಾಗಿ, ವರದಿಯ ಕುರಿತು ಸಮಗ್ರವಾಗಿ ಸಮಾಲೋಚಿಸಿದ ನಂತರವೇ ಮುಂದಿನ ವರ್ಷದ ಕಾರ್ಯಕ್ರಮಗಳ ರೂಪರೇಷೆ ಸ್ಪಷ್ಟವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಭಾವನಾತ್ಮಕವಾಗಿ ಅನುದಾನ ನಿಗದಿಪಡಿಸುವುದರಿಂದ ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕುಗಳನ್ನು ಪ್ರಗತಿಯ ಮುಖ್ಯವಾಹಿನಿಗೆ ತರಲಾಗದು. ವೈಜ್ಞಾನಿಕವಾಗಿ ಅನುದಾನ ನಿಗದಿಪ ಡಿಸಿ ಅದಕ್ಕೆ ಕಾನೂನಿನ ಬಲ ಕೊಟ್ಟಾಗ ಮಾತ್ರ ಅದು ಸಾಧ್ಯವಾಗುತ್ತದೆ.
| ಮನೋಹರ ಮಸ್ಕಿ ಮಾಜಿ ಶಾಸಕ
ಕಹಿ ಅನುಭವದ ಪಾಠ
ಯೋಜನೆ, ಯೋಜನೇತರ ವೆಚ್ಚದ ಪ್ರಕಾರ, ಆಯಾ ಇಲಾಖೆಗೆ ನಿಗದಿಪಡಿಸಿದ ಅನುದಾನ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಿಷ್ಟು ಭಾಗ ‘ಎಸ್​ಡಿಪಿ’ ಹೆಸರಿನಲ್ಲಿ ಖರ್ಚಾಗಿದೆ. ಹಿಂದುಳಿದ ತಾಲೂಕುಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಯೋಜನೆ ಉದ್ದೇಶ ಈಡೇರಿಲ್ಲವೆಂಬ ಕಹಿ ಅನುಭವ ಸರ್ಕಾರಕ್ಕೆ ಪಾಠ ಕಲಿಸಿದೆ. ನಂಜುಂಡಪ್ಪ ಸಮಿತಿ ವರದಿ ಪ್ರಕಾರ, ಅತ್ಯಂತ ಹಿಂದುಳಿದ 39, ಅತಿ ಹಿಂದುಳಿದ 41 ಹಾಗೂ ಹಿಂದುಳಿದ 35 ಸೇರಿ ಹಿಂದುಳಿದಿರುವ ಒಟ್ಟು 114 ತಾಲೂಕುಗಳಿವೆ. ಇವುಗಳ ಅಭಿವೃದ್ಧಿಗೆ ಕಳೆದ 12 ವರ್ಷಗಳಲ್ಲಿ 30 ಸಾವಿರ ಕೋಟಿ ರೂ. ವಿನಿಯೋಗಿಸಲಾಗಿದೆ. ಆದರೂ ಕೇವಲ 18 ತಾಲೂಕುಗಳ ಅಭಿವೃದ್ಧಿ ಸಾಧ್ಯವಾಗಿದೆ ಎಂಬ ಸಂಗತಿಯನ್ನು ಇಲಾಖಾ ಮಟ್ಟದ ಆಂತರಿಕ ಮೌಲ್ಯಮಾಪನ ಸಮಿತಿ ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ತಜ್ಞರು ಹಾಗೂ ಉನ್ನತಾಧಿಕಾರಿಗಳ ಸಲಹೆಯನ್ನು ಸಿಎಂ ಗಂಭೀರವಾಗಿ ಪರಿಗಣಿಸಿದ್ದಾರೆ. ತೀವ್ರ ಪ್ರವಾಹ ಹಾಗೂ ಭೂಕುಸಿತದ ಪರಿಣಾಮ ಅಭಿವೃದ್ಧಿಯಲ್ಲಿ ಹಿಂದಕ್ಕೆ ಹೋಗಿರುವ ಕೊಡಗು, ಬೆಳಗಾವಿ ಮತ್ತಿತರ ಜಿಲ್ಲೆಗಳ ಕೆಲವು ತಾಲೂಕುಗಳನ್ನು ಎಸ್​ಡಿಪಿ ವ್ಯಾಪ್ತಿಗೆ ತರಲು ಚಿಂತನೆ ನಡೆಸಿದ್ದಾರೆ.
| ಮೃತ್ಯುಂಜಯ ಕಪಗಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
