ಬೆಂಗಳೂರು:ಸರ್ಕಾರ ಆರು ತಿಂಗಳು ಪೂರೈಸಿದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ವರದಿ ಸಿಎಂ-ಡಿಸಿಎಂ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ. ಒಕ್ಕಲಿಗ ಸಮುದಾಯ ಹಾಗೂ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವರದಿ ಅವೈಜ್ಞಾನಿಕ ಎಂದು ದನಿ ಎತ್ತಿದ್ದು, ಸಿದ್ದರಾಮಯ್ಯ ಸಂಪುಟದ ಪ್ರಮುಖ ಸದಸ್ಯರೇ ಒಕ್ಕಲಿಗ ಸಂಘದ ಮನವಿಗೆ ಸಹಿ ಹಾಕಿರುವುದು ವಿವಾದದ ಕೇಂದ್ರಬಿಂದುವಾಗಿದೆ. ಈ ನಡುವೆ ಸಿಎಂ, ತಮ್ಮ ನಿಲುವನ್ನು ರಾಹುಲ್ ಗಾಂಧಿ ಹೇಳಿಕೆ ಆಧರಿಸಿ ಖಚಿತಪಡಿಸಿದ್ದಾರೆ.
ಜಾತಿ ಗಣತಿ ವರದಿ ತಿರಸ್ಕರಿಸುವಂತೆ ಒಕ್ಕಲಿಗ ಸಂಘ ಸಿಎಂ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿಗೆ ಸಲ್ಲಿಸಿರುವ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಡಾ. ಎಂ.ಸಿ. ಸುಧಾಕರ್, ಚಲುವರಾಯಸ್ವಾಮಿ, ಮೂವರು ಸ್ವಾಮೀಜಿಗಳು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂಗಳಾದ ಎಸ್.ಎಂ. ಕೃಷ್ಣ, ಸದಾನಂದಗೌಡ, ಎಚ್​ಡಿ ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಅಶೋಕ್, ಮಾಜಿ ಸಚಿವ ಅಶ್ವತ್ಥನಾರಾಯಣ್, ಡಿ.ಕೆ. ಸುರೇಶ್ ಸೇರಿ ಸಂಸದರು, ಮೂರೂ ಪಕ್ಷದ ಶಾಸಕರು ನಿವೃತ್ತ ನ್ಯಾ. ಗೋಪಾಲಗೌಡ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಸಹಿತ ಅನೇಕರು ಸಹಿ ಹಾಕಿದ್ದಾರೆ.
ಕಾಂಗ್ರೆಸ್​ನಲ್ಲಿ ದ್ವಂದ್ವ:ಈ ಸಮೀಕ್ಷೆ ವರದಿಯ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿ ಎರಡು ಗುಂಪುಗಳಾಗಿ ಮಾರ್ಪಟ್ಟಿದೆ. ಜಾತಿ ಗಣತಿ ಹಳೆಯದಾಗಿದೆ ಮತ್ತು ಸರಿಯಾದ ರೀತಿಯಲ್ಲಿ ನಡೆದಿಲ್ಲ. ಹೀಗಾಗಿ ಹೊಸದಾಗಿ ಗಣತಿ ನಡೆಸಲಿ ಎಂದು ಒಕ್ಕಲಿಗರ ಸಂಘ ಹಾಗೂ ವೀರಶೈವ ಮಹಾಸಭಾ ವಾದ ಒಂದು ಕಡೆಯಾದರೆ, ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಸೇರಿದವರು ಕಾಂತರಾಜು ವರದಿ ಜಾರಿ ಆಗಬೇಕೆಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಸಹಿತ ಅನೇಕರು ಈ ನಿಟ್ಟಿನಲ್ಲಿ ಪಟ್ಟು ಹಿಡಿದಿದ್ದಾರೆ. ವರದಿಯಲ್ಲಿ ಏನಿದೆ ಎಂಬುದು ಬಹಿರಂಗವಾಗದೇ ವಿರೋಧ ಸರಿಯಲ್ಲ ಎಂಬುದು ಸಚಿವ ಶಿವರಾಜ ತಂಗಡಗಿ ಅಭಿಪ್ರಾಯವಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹೆಚ್ಚೆಚ್ಚು ಜಾತಿ ಗಣತಿ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಲಾಗಿದೆ. ಹೀಗಾಗಿ ಪಕ್ಷದ ತೀರ್ವನವನ್ನು ಬಹಿರಂಗವಾಗಿ ವಿರೋಧಿಸುವ ಸ್ಥಿತಿಯಲ್ಲಿ ಡಿ.ಕೆ ಶಿವಕುಮಾರ್ ಸೇರಿ, ಒಕ್ಕಲಿಗ, ಲಿಂಗಾಯತ ಶಾಸಕರು ಮತ್ತು ಮಂತ್ರಿಗಳಿಲ್ಲ.
ಜಯಪ್ರಕಾಶ ಹೆಗ್ಡೆ ಅವಧಿ ವಿಸ್ತರಣೆ ?:ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅಧಿಕಾರಾವಧಿ ಮತ್ತೊಂದು ತಿಂಗಳು ವಿಸ್ತರಣೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಬೆಳಗಾವಿ ಅಧಿವೇಶನದಲ್ಲಿ ವರದಿ ಅಂಗೀಕಾರ ಆಗುವ ಸಾಧ್ಯತೆಗಳು ಇಲ್ಲ ಎಂದೇ ಹೇಳಲಾಗುತ್ತಿದೆ. ಹಿಂದಿನ ಸರ್ಕಾರದ ಹೊರಡಿಸಿದ ಆದೇಶದ ಪ್ರಕಾರ ಹೆಗ್ಡೆಯವರ ಮೂರು ವರ್ಷಗಳ ಅಧಿಕಾರಾವಧಿ ನ.24ಕ್ಕೆ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳು ವಿಸ್ತರಣೆ ಪ್ರಸ್ತಾವನೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿತಕ್ಕೆ ಕಾದಿದೆ ಎಂದು ಮೂಲಗಳು ತಿಳಿಸಿವೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗೆ (ಜಾತಿ ಗಣತಿ) ಸಂಬಂಧಿಸಿದ ಎಚ್.ಕಾಂತರಾಜು ವರದಿ ಸ್ವೀಕರಿಸಲೇಬೇಕು ಎಂದು ಸಿಎಂ ದೃಢ ನಿಲುವು ತಳೆದಿದ್ದು, ಪೂರಕವಾಗಿ ಹಾಲಿ ಅಧ್ಯಕ್ಷ ಹೆಗ್ಡೆಯವರ ಅಧಿಕಾರದ ಅವಧಿ ಒಂದು ತಿಂಗಳ ಮಟ್ಟಿಗೆ ವಿಸ್ತರಣೆಯಾಗುವ ಚಿಂತನೆ ನಡೆಸಿದ್ದಾರೆ.
ಕಾಲಾವಕಾಶ ಕಡಿಮೆ:ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಎಚ್. ಕಾಂತರಾಜು ವರದಿ ಸಿದ್ಧಪಡಿಸಿ ಒಂಭತ್ತು ವರ್ಷಗಳೇ ಕಳೆದಿವೆ. ನಿಯಮದ ಪ್ರಕಾರ ಯಾವುದೇ ಅಧಿಕೃತ ಸಮೀಕ್ಷಾ ವರದಿ 10 ವರ್ಷಗಳೊಳಗೆ ಸರ್ಕಾರ ಸ್ವೀಕರಿಸದಿದ್ದರೆ ಮರು ಸಮೀಕ್ಷೆ ನಡೆಸಬೇಕಾಗುತ್ತದೆ. ಈ ಕಾರಣಕ್ಕೆ ಸರ್ಕಾರ ನೀಡಿದ ಸೂಚನೆಯಂತೆ ಹಾಲಿ ಅಧ್ಯಕ್ಷ ಹೆಗ್ಡೆ ವರದಿಯನ್ನು ಪರಿಶೀಲನೆ ಮಾಡುತ್ತಿದ್ದು, ನ.24 ಗಡುವು ಮುಗಿದರೆ ವರದಿ ಸಲ್ಲಿಕೆ ಕಷ್ಟವಾಗುತ್ತದೆ. ಹೊಸ ಅಧ್ಯಕ್ಷರ ನೇಮಕ, ಅವರು ಅಧಿಕಾರ ವಹಿಸಿಕೊಂಡು ಮತ್ತೊಮ್ಮೆ ಪರಿಶೀಲಿಸಲು ಕಾಲಾವಕಾಶ ಬೇಕಾಗುತ್ತದೆ. ಕಡಿಮೆ ಕಾಲಾವಕಾಶವಿರುವ ಕಾರಣ ಹಾಲಿ ಅಧ್ಯಕ್ಷರ ಅವಧಿಯನ್ನು ತಿಂಗಳಮಟ್ಟಿಗೆ ವಿಸ್ತರಿಸಿ ವರದಿ ತರಿಸಿಕೊಳ್ಳಬೇಕು ಎಂಬುದು ಸರ್ಕಾರದ ಯೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ತೊಡಕು ನಿವಾರಣೆ?:ಕಾಂತರಾಜು ಸಿದ್ಧಪಡಿಸಿದ ವರದಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದ ಹಿಂದುಳಿದ ವರ್ಗಗಳ ಇಲಾಖೆಯ ಅಂದಿನ ಆಯುಕ್ತ ಸಹಿ ಮಾಡಿಲ್ಲ. ವರದಿ ಸ್ವೀಕರಿಸಿದರೆ ತಾಂತ್ರಿಕ, ಕಾನೂನಾತ್ಮಕ ಕಾರಣಗಳಿಂದ ಬಿದ್ದು ಹೋಗುತ್ತದೆ ಎಂಬ ಮಾಹಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಜ್ಞರೊಂದಿಗೆ ಸಮಾಲೋಚಿಸಿ ಸದಸ್ಯ ಕಾರ್ಯದರ್ಶಿ ಸಹಿಯಿಲ್ಲದ ತೊಡಕು ನಿವಾರಿಸಲಾಗಿದೆ. ಈ ವರದಿ ವಾಸ್ತವಿಕವಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸಮೀಕ್ಷಾ ವರದಿಯೇ ಹೊರತು ಜಾತಿ ಗಣತಿ ವರದಿಯಲ್ಲ. ಅಧಿಕೃತ ಆದೇಶವೇ ಇದನ್ನು ದೃಢಪಡಿಸುತ್ತದೆ. ಜಾತಿ ಗಣತಿ ಎಂದು ತಪು್ಪ ಮಾಹಿತಿ ನೀಡಿ ವಿವಿಧ ಸಮುದಾಯಗಳ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಸರ್ಕಾರ ವರದಿ ಸ್ವೀಕರಿಸಿದರೆ ಸದನ, ಸಾರ್ವಜನಿಕರ ಮುಂದಿಡಲು ಸಾಧ್ಯವಾಗುತ್ತದೆ. ಕಾಂತರಾಜು ವರದಿ ತರಿಸಿಕೊಳ್ಳುವುದು ಖರ್ಚಾಗಿರುವ 166 ಕೋಟಿ ರೂ. ವ್ಯರ್ಥವಾಗುತ್ತದೆ ಎಂದಲ್ಲ. ರಾಜ್ಯದ ಎಲ್ಲ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅರಿತುಕೊಂಡು ಮುಂದಿನ ಯೋಜನೆ ರೂಪಿಸಲು ನೆರವಾಗುತ್ತದೆ ಎಂಬ ಕಾರಣಕ್ಕೆ ವರದಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬಯಸಿದ್ದಾರೆ ಎಂದು ಮೂಲಗಳು ಹೇಳಿವೆ.
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಒಕ್ಕಲಿಗರ ಸಂಘ, ವೀರಶೈವ ಸಮಾಜ ಜಾತಿ ಗಣತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಹೊಸದಾಗಿ ಗಣತಿ ನಡೆಸುವಂತೆ ಒತ್ತಾಯಿಸಿದ ಬೆನ್ನಲ್ಲೇ ಸಿಎಂ ತಮ್ಮ ನಿಲುವು ಬಹಿರಂಗಪಡಿಸಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಪೂರ್ಣ ಸಹಮತವಿದೆ. ದೇಶಾದ್ಯಂತ ಜಾತಿಗಣತಿ ನಡೆದು, ಅದರ ವರದಿಯ ಆಧಾರದ ಮೇಲೆ ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು ದಕ್ಕಿದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂಬುದು ನನ್ನ ಭಾವನೆ ಎಂದು ಹೇಳಿಕೊಂಡಿದ್ದಾರೆ.
ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?

ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 7 =
Remember me
