ಬೆಳಗಾವಿ:ರಾಜ್ಯದ ರೈತರ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ, ನಂಜುಂಡಪ್ಪ ವರದಿ ಅನುಷ್ಠಾನದ ಅಧ್ಯಯನಕ್ಕೆ ಸಮಿತಿ ರಚನೆ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು, ಪ್ರವಾಸೋದ್ಯಮ ಅಭಿವೃದ್ಧಿ… ವಿಧಾನಮಂಡಲದಲ್ಲಿ ಮೂರು ದಿನಗಳ ಕಾಲ ನಡೆದ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯ ಮೇಲೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಘೋಷಣೆಗಳಿವು.
ಈ ಭಾಗದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಟ್ಟುಕೊಂಡು ಮತ್ತೊಂದು ಉನ್ನತಾಧಿಕಾರ ಸಮಿತಿ ರಚಿಸಿ ವರದಿ ಪಡೆದು ತಾರತಮ್ಯ ತಗ್ಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಹಿಂದೆ ರಚಿಸಿದ್ದ ಡಾ.ನಂಜುಂಡಪ್ಪ ವರದಿ ಯಿಂದ ಸಂಪೂರ್ಣ ತಾರತಮ್ಯ ತಗ್ಗಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೆಸರಾಂತ ಅರ್ಥಶಾಸ್ತ್ರಜ್ಞರೊಬ್ಬರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿ ಆರು ತಿಂಗಳ ಒಳಗೆ ವರದಿ ಪಡೆದು ಅತ್ಯಂತ ಹಿಂದುಳಿದ, ಅತೀ ಹಿಂದುಳಿದ, ಹಿಂದುಳಿದ ತಾಲೂಕು ಮಾತ್ರವಲ್ಲದೆ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಬಿಜೆಪಿಗೂ ಟಾಂಗ್:ಕರ್ನಾಟಕ ಏಕೀಕರಣದಿಂದ ಇತ್ತೀಚಿನವರೆಗಿನ ರಾಜ್ಯದ ಅಭಿವೃದ್ಧಿ ಮತ್ತು ರಾಜಕಾರಣವನ್ನು ಸ್ಥೂಲವಾಗಿ ಬಿಚ್ಚಿಡುವ ಮೂಲಕ ಬಿಜೆಪಿಯವರಿಗೆ ಮಧ್ಯಮಧ್ಯ ಟಾಂಗ್ ಕೊಡುತ್ತಲೇ ಸಿಎಂ ಹಲವು ಮಹತ್ವದ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರು. 2022ರಲ್ಲಿ ಒಂದಷ್ಟು ಚರ್ಚೆಯಾಗಿದ್ದು ಹೊರತು ಪಡಿಸಿದರೆ ಉಳಿದಂತೆ ಉತ್ತರ ಕರ್ನಾಟಕದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯೇ ಆಗಿಲ್ಲ. ಹಿಂದೆ ನಡೆದ ಚರ್ಚೆಗೆ ಆಗಿನ ಸಚಿವ ಜೆ.ಸಿ. ಮಾಧುಸ್ವಾಮಿ 54 ಪದಗಳಲ್ಲಿ ಮಾತ್ರ ಉತ್ತರ ನೀಡಿದ್ದಾರೆ. ಬೇಕಿದ್ದರೆ ಆ ಉತ್ತರವನ್ನು ಓದುತ್ತೇನೆ ಎಂದು ಬಿಜೆಪಿಯವರ ಕಾಲೆಳೆದರು. ಮಧ್ಯ ಪ್ರವೇಶಿಸಿದ ಬಿಜೆಪಿಯ ಅರವಿಂದ ಬೆಲ್ಲದ್, ಚರ್ಚೆ ಮಾಡಿದ 42 ಮಂದಿಯೂ ರಾಜಕೀಯ ಮಾತನಾಡಿಲ್ಲ ನೀವೇಕೆ ಮಾತನಾಡುತ್ತೀರಿ ಎಂದು ತಿರುಗೇಟು ನೀಡಿದರು.
ಅದಕ್ಕೆ ಪೂರಕವಾಗಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಬೆಳಗಾವಿಯಲ್ಲಿ 11 ಬಾರಿ ಅಧಿವೇಶನ ನಡೆದಿದೆ. ಮೊದಲ ದಿನವೇ ಚರ್ಚೆಯಾಗಬೇಕಿತ್ತು. ಆಗ ಮಾತ್ರ ಅದು ಫಲಪ್ರದವಾಗುತ್ತದೆ. ಬಾದಾಮಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಋಣ ಅವರ ಮೇಲೆ ಹೆಚ್ಚಿದೆ ಎಂದು ಟಾಂಗ್ ಕೊಟ್ಟರು.
ಅದಕ್ಕೆ ಸಿದ್ದರಾಮಯ್ಯ, ನಮ್ಮ ಸರ್ಕಾರ ಉತ್ತರ ಕರ್ನಾಟಕ ಭಾಗದ ಅಭಿವೖದ್ಧಿಗೆ ಅವಶ್ಯ ಇರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ನೀವು 2013ರಿಂದ 2018ರ ನಡುವೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಭಾಷಣಗಳನ್ನು ಓದಿ. ಹೆೆಚ್ಚು ಅವಧಿ ಆಡಳಿತ ಮಾಡಿದ್ದು ನಿಮ್ಮ ಪಕ್ಷ. ಈ ಭಾಗ ಹಿಂದುಳಿಯಲು ನೀವೇ ಕಾರಣ ಎಂದು ತಿವಿದರು. ಆಗ ಸಿದ್ದರಾಮಯ್ಯ, ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎರಡು ಗಂಟೆ ಕಾಲ ದೀರ್ಘ ಕಾಲ ಉತ್ತರ ನೀಡಿದ್ದೇನೆ. ಮಾಧುಸ್ವಾಮಿ ಯಾಕೆ ಆ ರೀತಿ ಉತ್ತರ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಬಳಿಕ ಮಾತು ಮುಂದುವರಿಸಿದ ಸಿದ್ದರಾಮಯ್ಯ, ರಾಜ್ಯದ ಸರಾಸರಿ ಆದಾಯ 2.66 ಲಕ್ಷ ರೂಪಾಯಿಗಳಾದರೆ, ಉತ್ತರ ಕರ್ನಾಟಕ ಭಾಗದಲ್ಲಿ ಆದಾಯ 1.67 ಲಕ್ಷ ರೂ. ಆಗಿದೆ. ತಾರತಮ್ಯ ಇದೆ ಎಂಬ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಕೂಗು ಪರಿಹಾರವಲ್ಲ. ನಾವು ಎಲ್ಲರೂ ಸೇರಿ ಸಮಗ್ರ ಅಭಿವೖದ್ಧಿ ಮಾಡಬೇಕು ಎಂದು ಸ್ಪಷ್ಟಪಡಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನಮ್ಮ ಬಜೆಟ್ ಭರವಸೆಯಂತೆ ಐದು ಸಾವಿರ ಕೋಟಿ ರೂಪಾಯಿ ನೀಡಲಾಗುವುದು ಎಂದರು. ಕಲ್ಯಾಣ ಕರ್ನಾಟಕ ಭಾಗದ ಪ್ರಮಾಣದಲ್ಲೇ ಕಿತ್ತೂರು ಕರ್ನಾಟಕ ಭಾಗಕ್ಕೂ ಅನುದಾನ ನೀಡಬೇಕು. ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen + 3 =
Remember me
