ಬೆಂಗಳೂರು:ಗಡಿ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಹೊಸ ಉಪತಳಿ (ಜೆಎನ್.1) ಸೋಂಕು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ತೀವ್ರ ನಿಗಾವಹಿಸಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಮಧ್ಯಾಹ್ನ 1ಕ್ಕೆ ಸಭೆ ನಿಗದಿಯಾಗಿದ್ದು, ಸಚಿವರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಜನಸಂದಣಿ ಹೆಚ್ಚಿಸಲಿರುವ ಕ್ರಿಸ್​ವುಸ್, ಹೊಸ ವರ್ಷಾಚರಣೆ ಸಮೀಪಿಸುತ್ತಿವೆ. ಬೇರೆ ಕಾಯಿಲೆಗಳ ಜತೆಗೆ ಕೋವಿಡ್ ಸೋಂಕಿನಿಂದ ಬೆಂಗಳೂರಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಸಿಎಂ ಕರೆದಿರುವ ಸಭೆ ಮಹತ್ವ ಪಡೆದುಕೊಂಡಿದೆ. ಈಗಾಗಲೆ ಹೊರಡಿಸಿದ ಮಾರ್ಗಸೂಚಿ, ಸಾರ್ವಜನಿಕರಿಗೆ ಸಲಹೆ ಹೊರತುಪಡಿಸಿ ಬೇರೆ ಕ್ರಮಗಳ ಅವಶ್ಯಕತೆ ಬಗ್ಗೆ ರ್ಚಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿಗೊಳಿಸುವ ಪರಿಸ್ಥಿತಿ ತಲೆದೋರಿಲ್ಲ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಆರ್​ಟಿಪಿಸಿಆರ್ ಟೆಸ್ಟ್ ದರ ನಿಗದಿ ಮುಂತಾದ ಕ್ರಮಗಳ ಬಗ್ಗೆ ಸಭೆಯಲ್ಲಿ ರ್ಚಚಿಸಿ ನಿರ್ಧರಿಸಲಾಗುವುದು.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರೊಂದಿಗೆ ಆನ್​ಲೈನ್ ವೇದಿಕೆ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಪಾಲ್ಗೊಂಡರು. ನಂತರ ವಿಕಾಸಸೌಧದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಮಕ್ಷಮ ಸಭೆ, ರ್ಚಚಿಸಲಿರುವ ವಿಷಯಗಳ ಮಾಹಿತಿ ಹಂಚಿಕೊಂಡರು.
ವೇಗವಾಗಿ ಹರಡುವಿಕೆ:ವಿಶ್ವದ 36 ರಾಷ್ಟ್ರಗಳು, ದೇಶದ ಮೂರು ರಾಜ್ಯಗಳಲ್ಲಿ ವರದಿಯಾಗಿರುವ ಕೋವಿಡ್ ಒಮಿಕ್ರಾನ್ ಹೊಸ ಉಪತಳಿಯಿಂದ ಸೋಂಕು ವೇಗವಾಗಿ ಹರಡುತ್ತದೆ. ಆದರೆ ಒಮಿಕ್ರಾನ್ ವೈರಾಣು ರೀತಿ ಪ್ರಾಣಾಂತಕವಲ್ಲ ಎಂದು ದಿನೇಶ್ ಗುಂಡೂರಾವ್ ಅಭಯ ನೀಡಿದರು. ಗೋವಾದಲ್ಲಿ 18, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ರೂಪಾಂತರಿ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಅಂತಹ ಪ್ರಕರಣಗಳು ವರದಿಯಾಗಿಲ್ಲ ಎಂದರು.
ವೃದ್ಧನ ಸಾವಿಗೆ ಕೋವಿಡ್ ಕಾರಣವಲ್ಲಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 64 ವರ್ಷದ ವ್ಯಕ್ತಿಯೊಬ್ಬರು ಡಿ.15ರಂದು ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ರೋಗ, ಅಸ್ತಮಾ, ಕ್ಷಯ, ಶ್ವಾಸಕೋಶದ ಸಮಸ್ಯೆ ಜತೆಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಕೇರಳದಲ್ಲಿ ಐದು ಜನ ಮೃತಪಟ್ಟಿದ್ದಾರೆ ಎಂದು ಆ ಆರೋಗ್ಯ ಸಚಿವರು ಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೋವಿಡ್ ಪಾಸಿಟಿವ್ ಜತೆಗೆ ಬೇರೆ ಬೇರೆ ಕಾಯಿಲೆಗಳಿದ್ದವು ಎಂದು ವಿವರಿಸಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು. ಅಧ್ಯಯನಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದ್ದು, ಅಲ್ಲಿಂದ ಲಭಿಸುವ ಮಾಹಿತಿ ಮುಖ್ಯವಾಗುತ್ತದೆ ಎಂದರು.
ಪ್ರತ್ಯೇಕ ಪ್ಲ್ಯಾನ್​ಸರ್ಕಾರದ ಕೆಲವು ಕೋರಿಕೆಗಳಿಗೆ ಕೇಂದ್ರ ಆರೋಗ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ವೈದ್ಯಕೀಯ ಪರಿಕರ ಇನ್ನಿತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಆರ್​ಟಿಪಿಸಿಆರ್, ಪಿಪಿಇ ಮತ್ತಿತರ ಪರಿಕರ, ಔಷಧಗಳಿಗೆ ಸಂಬಂಧಿಸಿದಂತೆ ತಿಂಗಳಿಗೆ ಎಷ್ಟು ಬೇಕು, ಮೂರು ತಿಂಗಳಿಗೆ ಎಷ್ಟು ಬೇಕಾಗುತ್ತದೆ ಎಂದು ಪ್ರತ್ಯೇಕವಾಗಿ ಪ್ಲಾ್ಯನ್ ಮಾಡಲಿದ್ದು, ಸದ್ಯಕ್ಕೆ ದಾಸ್ತಾನು ಕೊರತೆ ತಲೆದೋರಿಲ್ಲ ಎಂದರು. ರಾಜ್ಯದಲ್ಲಿ ಕಳೆದ 24 ತಾಸುಗಳಲ್ಲಿ 1,020. ಆರ್​ಟಿಸಿಪಿಆರ್ ಟೆಸ್ಟ್​ಗಳಾಗಿವೆ. ದೇಶದಲ್ಲಿಯೇ ಇದು ಅತ್ಯಧಿಕವಾಗಿದ್ದು, ಶನಿವಾರದ ವೇಳೆಗೆ ಈ ಪ್ರಮಾಣ ಪ್ರತಿದಿನ ಐದು ಸಾವಿರಕ್ಕೆ ತಲುಪಿಸಬೇಕೆಂಬ ಗುರಿ ನಿಗದಿಪಡಿಸಲಾಗಿದೆ. ಕನಿಷ್ಠ 50 ಮಾದರಿ ಸಂಗ್ರಹಿಸಿದರೆ ಜೀನೋಮ್ ಸೀಕ್ವೆನ್ಸ್ಗೆ ಅನುಕೂಲವಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬಸ್​ಗಳಲ್ಲಿ ವೃದ್ಧರಿಗೆ ಮಾಸ್ಕ್ ಕಡ್ಡಾಯ…ಅರವತ್ತು ವರ್ಷ ಮೇಲ್ಪಟ್ಟವರು ಬಸ್​ಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಾರಿಗೆ ಸಚಿವ ರಾಮಲಿಗಾ ರೆಡ್ಡಿ ತಿಳಿಸಿದ್ದಾರೆ. ಅಯ್ಯಪ್ಪ ಸ್ವಾಮಿ ದರ್ಶನ ಮುಗಿಸಿ ಕೇರಳದಿಂದ ವಾಪಸಾಗುವ ಎಲ್ಲರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. 60 ವರ್ಷ ದಾಟಿದವರು ಬಸ್​ಗಳಲ್ಲಿ, ಮೆಟ್ರೋ ದಲ್ಲಿ ಪ್ರಾಯಾಣಿ ಸುವಾಗ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಕೋವಿಡ್ ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಬೆಂಗಳೂರು: ರಾಜ್ಯದಲ್ಲಿ ಬುಧವಾರ 20 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಬೆಂಗಳೂರಿನ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ಹೃದಯ ಸಂಬಂಧಿ ಸಮಸ್ಯೆ ಹೊಂದಿದ್ದ 44 ವರ್ಷದ ವ್ಯಕ್ತಿ ನ.23ರಂದು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಡಿ.16ರಂದು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದ 76 ವರ್ಷದ ವೃದ್ಧ, ಸೆ.12ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಡಿ.17ರಂದು ಮೃತಪಟ್ಟಿದ್ದಾರೆ. ಇಬ್ಬರಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು, ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 808 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸೋಂಕಿನ ಪ್ರಮಾಣ ಶೇ. 2.47 ವರದಿಯಾಗಿದೆ. ಬೆಂಗಳೂರಿನಲ್ಲಿ 359 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, 19 ಮಂದಿಗೆ ಸೋಂಕು ತಗುಲಿದ್ದು, ಬಳ್ಳಾರಿಯಲ್ಲಿ ಎರಡು, ಚಿಕ್ಕಮಗಳೂರಲ್ಲಿ 4, ದಕ್ಷಿಣ ಕನ್ನಡ ಹಾಗೂ ತುಮಕೂರಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಸೋಂಕಿತರಲ್ಲಿ 72 ಮಂದಿ ಮನೆ ಆರೈಕೆಗೆ ಒಳಗಾದರೆ, 20 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಏಳು ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಸೋಂಕಿತರಲ್ಲಿ ಐವರು ಬುಧವಾರ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಒಂದೇ ಕಲ್ಲಿನಿಂದ ಹಲವು ಹಕ್ಕಿ ಹೊಡೆದ ಮಮತಾ, ಕೇಜ್ರಿವಾಲ್​: ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಹೆಸರು ಬಿಂಬಿಸಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
