ಬೆಳಗಾವಿ:ಶೋಷಿತ ಸಮುದಾಯಗಳ ಬಗ್ಗೆ ಕೇಂದ್ರ ಸರ್ಕಾರ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ನೈಜ ಕಾಳಜಿಯಿದ್ದರೆ ಕರ್ನಾಟಕ ಮಾದರಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಉಪಹಂಚಿಕೆ (ಎಸ್​ಸಿಎಸ್​ಪಿ, ಟಿಎಸ್​ಪಿ) ಕಾಯ್ದೆ ಜಾರಿಗೆ ತರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ವಿಧಾನ ಪರಿಷತ್​ನಲ್ಲಿ ಪೂರಕ ಅಂದಾಜು (ಕರ್ನಾಟಕ ಧನ ವಿನಿಯೋಗ (ಸಂಖ್ಯೆ-4) ವಿಧೇಯಕ, 2023) ಮಾತಿನ ಗದ್ದಲದಲ್ಲಿ ಗುರುವಾರ ಅಂಗೀಕಾರವಾಯಿತು. ಇದಕ್ಕೂ ಮುನ್ನ ನಡೆದ ಸುದೀರ್ಘ ಚರ್ಚೆ, ಪ್ರತಿಪಕ್ಷಗಳು ಪ್ರಸ್ತಾಪಿಸಿದ ವಿಷಯಗಳ ಪೈಕಿ ಎಸ್​ಸಿಎಸ್​ಪಿ, ಟಿಎಸ್​ಪಿಗೆ ಮೀಸಲಿಟ್ಟ ಅನುದಾನದಲ್ಲಿ 11,500 ಕೋಟಿ ರೂ. ಬಳಕೆ ಆಕ್ಷೇಪಕ್ಕೆ ಸಿಎಂ ಏರುಧ್ವನಿಯಲ್ಲಿ ಉತ್ತರಿಸಿ, ಇದು ಬಜೆಟ್ ಅಲ್ಲ, ಪೂರಕ ಅಂದಾಜು. ಆದರೂ ನೀವೆಲ್ಲ ಮಾತನಾಡಿದ್ದನ್ನು ಕೇಳಿದ್ದೇನೆ. ಪರಿಶಿಷ್ಟ ಜಾತಿ, ವರ್ಗಗಳು, ವಂಚಿತರ ಏಳಿಗೆ ಬಗ್ಗೆ ಬಿಜೆಪಿಯವರು ಮಾತನಾಡಿದ್ದಾರೆ.
ಅವಕಾಶ ವಂಚಿತರು, ಅಕ್ಷರ ಸಂಸ್ಕೃತಿಯಿಂದ ದೂರವಾದವರೆಲ್ಲ ನನ್ನ ಜನ ಎಂದು ಭಾವೋದ್ವೇಗದಿಂದ ಮಾತನಾಡಿದರು. ಅದಕ್ಕಾಗಿ ಸಭಾಪತಿ ಕ್ಷಮೆಯಾಚಿಸಿದ ಪ್ರಸಂಗ ಕೂಡ ನಡೆಯಿತು. ರಾಜಕೀಯ ಅಲ್ಲ, ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವೂ ಸಿಗಬೇಕು. ಇಲ್ಲವಾದರೆ ಪ್ರಜಾಪ್ರಭುತ್ವದ ದೇಗುಲವನ್ನು ವಂಚಿತರು ಧ್ವಂಸಗೊಳಿಸುತ್ತಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಎಚ್ಚರಿಸಿದ್ದಾರೆ. ಅಂಬೇಡ್ಕರ್ ಆಶಯ, ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಹಾಗೂ ಶೋಷಿತ ಸಮುದಾಯಗಳ ಏಳಿಗೆಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಯ್ದೆ ಜಾರಿಗೆ ಬಂದಿದೆ. ನನ್ನ ನೇತೃತ್ವದ (2013) ಸರ್ಕಾರ ಅದನ್ನು ಅನುಷ್ಠಾನಕ್ಕೆ ತಂದಿದೆ. ನೀವೂ ಜಾರಿಗೆ ತನ್ನಿ ಎಂದು ಬಿಜೆಪಿ ರಾಜ್ಯಗಳಿಗೆ ಹೇಳುವುದಕ್ಕೆ ಹೋಗೋಣ ಬನ್ನಿ ಎಂದು ಬಿಜೆಪಿಗೆ ಸಿಎಂ ಸೆಡ್ಡು ಹೊಡೆದರು.
ತೀವ್ರ ಮಾತಿನ ಕದನ:ಸಿದ್ದರಾಮಯ್ಯ ಸವಾಲಿಗೆ ಬಿಜೆಪಿ ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ಕೇಶವ ಪ್ರಸಾದ್, ಡಾ.ವೈ.ಎ.ನಾರಾಯಣಸ್ವಾಮಿ ಗಟ್ಟಿಧ್ವನಿಯಲ್ಲಿ ಆಕ್ಷೇಪಿಸಿದರು. ಸುದೀರ್ಘ ಚರ್ಚೆಗೆ ಉತ್ತರಿಸಲು ಸಿಎಂಗೆ ಅವಕಾಶ ಕೊಡುತ್ತಿಲ್ಲವೆಂದು ಆಡಳಿತ ಪಕ್ಷದವರು ಆಕ್ಷೇಪಿಸಿದರು. ಮಧ್ಯೆ ಪ್ರವೇಶಿಸಿದ ಸಭಾಪತಿ, ಸಿಎಂ ಬಿಟ್ಟು ಬೇರೆ ಯಾರೂ ಮಾತನಾಡುವಂತಿಲ್ಲ ಎಂದರು. ಸಿದ್ದರಾಮಯ್ಯ ಮಾತು ಮುಂದುವರಿಸಲು ನಿಂತಾಗ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕಾಯ್ದೆಯಲ್ಲಿನ 7ಡಿ ಉಪಬಂಧ ಬಳಸಿಕೊಂಡು 10 ಸಾವಿರ ಕೋಟಿ ರೂ.ಗಳನ್ನು ಬಿಜೆಪಿ ಆಡಳಿತದಲ್ಲಿ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ಆಗ ದಲಿತರ ಬಗ್ಗೆ ಕಾಳಜಿ ಎಲ್ಲಿ ಹೋಗಿತ್ತು ? ಎಂದು ಕೆಣಕಿದರು.
ಈ ಮಾತಿಗೆ ಬಿಜೆಪಿ ಸದಸ್ಯರು ಒಟ್ಟಿಗೆ ಎದ್ದು ನಿಂತು, ಕಾಯ್ದೆ ಜಾರಿಗೊಳಿಸಿದ ಸಿದ್ದರಾಮಯ್ಯ ಅವರೇ 7ಡಿ ಸೇರಿಸಿದ್ದಾರೆ ಎಂದು ದೂರಿದರೆ ಸಚಿವರಾದಿಯಾಗಿ ಆಡಳಿತ ಪಕ್ಷದ ಸದಸ್ಯರು ಪ್ರತಿಯಾಗಿ ವಾಗ್ವಾದಕ್ಕೆ ಇಳಿದರು. ಪರಸ್ಪರ ಬಿರುನುಡಿಗಳು ಕೋಲಾಹಲದ ವಾತಾವರಣ ಸೃಷ್ಟಿಸಿತು. ಬಿಜೆಪಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಸಿದ್ದರಾಮಯ್ಯ ಅಬ್ಬರಿಸಿದರು.
ಪರಿಸ್ಥಿತಿ ತಿಳಿಗೊಳಿಸಲು ಸಭಾಪತಿ ಪ್ರಯತ್ನಿಸುತ್ತಿದ್ದರೆ, ಸಿದ್ದರಾಮಯ್ಯ ಸ್ವಯಂ ಸಮಾಧಾನಿತರಾಗಿ ತಮ್ಮ ಕಡೆಯವರತ್ತ ಕೈಸನ್ನೆ ಮಾಡಿ ಸುಮ್ಮನಾಗಿಸಿ, ಧನವಿನಿಯೋಗ ಮಸೂದೆಗೆ ಸದನದ ಒಪ್ಪಿಗೆ ಪಡೆದರು. ವಿಧೇಯಕಕ್ಕೆ ಸಹಕರಿಸುತ್ತೇವೆ, ಚರ್ಚೆಗೆ ಅವಕಾಶ ನೀಡದಿರುವುದು ಸರಿಯಲ್ಲವೆಂದು ಬಿಜೆಪಿಯವರು ಹೇಳುತ್ತಿದ್ದರೂ ಸಭಾಪತಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.
ದಮನಿತರಿಗೆ ಮೋಸ:ಇದಕ್ಕೂ ಮುನ್ನ ಬಿಜೆಪಿಯ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಕಸಿದುಕೊಂಡಿದ್ದಾರೆ. ಎಸ್​ಸಿಎಸ್​ಪಿ, ಟಿಎಸ್​ಪಿಗೆ ಕಾಯ್ದಿರಿಸಿದ್ದ 34 ಸಾವಿರ ಕೋಟಿ ರೂ.ಗಳಲ್ಲಿ 11,500 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಬಳಸಿರುವುದು ದಲಿತರಿಗೆ ಮಾಡಿದ ಮೋಸವೆಂದು ಆರೋಪಿಸಿದರು. ಚರ್ಚೆಯಲ್ಲಿ ಜೆಡಿಎಸ್​ನ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಬಿಜೆಪಿಯ ಕೆ.ಎಸ್.ನವೀನ್, ಕೇಶವ ಪ್ರಸಾದ್, ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್​ನ ನಾಗರಾಜ ಯಾದವ್ ಭಾಗವಹಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 3 =
Remember me
