|ಹರೀಶ್ ಬೇಲೂರುಬೆಂಗಳೂರು
ಸಹಕಾರ ಇಲಾಖೆ ಅಧೀನದ ಸಂಸ್ಥೆಗಳ ನೇಮಕಾತಿಯಲ್ಲಿ ನಡೆಯುವ ಅಕ್ರಮ ತಡೆಯಲು ರಾಜ್ಯ ಸರ್ಕಾರ ‘ಸಹಕಾರ ಪರೀಕ್ಷಾ ಪ್ರಾಧಿಕಾರ’ ರಚಿಸಲು ಮುಂದಾಗಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್), ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕಲಬುರಗಿ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಹಾಲು ಒಕ್ಕೂಟ, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಬ್ಯಾಂಕ್(ಡಿಸಿಸಿ ಬ್ಯಾಂಕ್), ಕೋ ಆಪರೇಟಿವ್ ಸೊಸೈಟಿ, ಪಟ್ಟಣ ಸಹಕಾರ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳ ಮತ್ತು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಸೇರಿ ಎಲ್ಲ ಸಹಕಾರ ಕ್ಷೇತ್ರಗಳಲ್ಲಿ ನಡೆಯುವ ನೇಮಕಾತಿಗಳನ್ನು ಒಂದೇ ವೇದಿಕೆಯಡಿ ತರಲು ಸರ್ಕಾರ ಆಲೋಚಿಸಿದೆ.
ಇಲಾಖೆ ವ್ಯಾಪ್ತಿಯ ಸಂಸ್ಥೆಗಳಲ್ಲಿ ಅಂದಾಜು 2.5 ಲಕ್ಷ ಖಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಜನಪಕ್ಷಪಾತ, ಲಂಚ, ನೇಮಕಾತಿ ಅವ್ಯವಹಾರ ಮತ್ತು ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿಬರುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ವ್ಯಾಪ್ತಿಗೆ ಬರುವ ಬ್ಯಾಂಕ್​ಗಳಲ್ಲಿ ಈಗಾಗಲೇ ಪರೀಕ್ಷೆ ಪ್ರಾಧಿಕಾರ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆರ್​ಬಿಐ ಮಾದರಿಯಲ್ಲಿ ಪ್ರಾಧಿಕಾರ ರಚಿಸಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯಮಾಪನ ಹಾಗೂ ಫಲಿತಾಂಶ ಪ್ರಕಟಿಸಲು ಇವರಿಗೆ ವಹಿಸಿದರೆ ಅಕ್ರಮಗಳಿಗೆ ಬ್ರೇಕ್ ಬೀಳುವ ಜತೆಗೆ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆ ಲಭಿಸಲಿದೆ.
ಪ್ರತಿಭಾವಂತರಿಗೆ ಅನುಕೂಲ:ಪರೀಕ್ಷೆಗಳಲ್ಲಿ ಇಂತಹ ಅಕ್ರಮ ನಡೆಯುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಸಹಕಾರ ಪರೀಕ್ಷಾ ಪ್ರಾಧಿಕಾರ ಮೂಲಕ ಪರೀಕ್ಷೆ ನಡೆಸಿದರೆ ಪ್ರತಿಭಾನ್ವಿತರಿಗೆ ಸಹಾಯವಾಗಲಿದೆ.
ಯಾವ ಹುದ್ದೆ ಎಷ್ಟು ಡೀಲ್?:ಡಿಸಿಸಿ ಬ್ಯಾಂಕಿನ ಗ್ರೂಪ್ ’ಬಿ’ ಹುದ್ದೆಗೆ 30-35 ಲಕ್ಷ ರೂ, ಸಿ ‘ಗ್ರೂಪ್’ ಹುದ್ದೆಗೆ 15-20 ಲಕ್ಷ ರೂ, ವಿವಿಧ ರೀತಿಯ ಸಹಕಾರ ಮಹಾಮಂಡಳ ಸ್ವಾಗತಕಾರರ ಹುದ್ದೆಗೆ 8-10 ಲಕ್ಷ ರೂ, ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆಗೆ (ಪಿಆರ್​ಒ) 10-15 ಲಕ್ಷ ರೂ, ಕೆಎಂಎಫ್​ನ ವಿವಿಧ ಹುದ್ದೆಗಳಿಗೆ 15 ಲಕ್ಷ ರೂ.ನಿಂದ 30 ಲಕ್ಷ ರೂ, ಬಮೂಲ್​ನಲ್ಲಿ 10 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಡೀಲ್ ನಡೆಯುವ ಆರೋಪವಿದೆ.
ಹೇಗೆ ನಡೆಯುತ್ತೆ ಅಕ್ರಮ?:ಇಲಾಖೆ ಅಧೀನದ ಸಂಸ್ಥೆಗಳಲ್ಲಿ ಪ್ರತಿ ವರ್ಷವೂ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಇದಕ್ಕಾಗಿ ಪರೀಕ್ಷೆ ನಡೆಸಲು, ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯಮಾಪನ ಹಾಗೂ ಫಲಿತಾಂಶ ಪ್ರಕಟಿಸುವ ಹೊಣೆಯನ್ನು ಆಯಾ ಸಂಸ್ಥೆ, ಕಾಲೇಜು ಮತ್ತು ವಿದ್ಯಾಸಂಸ್ಥೆ, ಖಾಸಗಿ ಏಜೆನ್ಸಿಯವರಿಗೆ ವಹಿಸಲಾಗುತ್ತಿದೆ. ಪರೀಕ್ಷೆ ನಡೆಯುವ ಮುನ್ನ ಆಡಳಿತ ಮಂಡಳಿ ಸದಸ್ಯರು, ಸಚಿವರು ಮತ್ತು ಶಾಸಕರು ಸೇರಿದಂತೆ ಪ್ರಭಾವಿಗಳು ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಳ್ಳಲು ಒಳಗೊಳಗೆ ವ್ಯವಹಾರ ಕುದುರಿಸಲಾಗುತ್ತದೆ. ಪರೀಕ್ಷೆ ನಡೆಯುವ ಸಂಸ್ಥೆಗಳ ಜತೆ ಮೊದಲೇ ಒಪ್ಪಂದ ಮಾಡಿಕೊಂಡು ವ್ಯವಹಾರ ನಡೆಸುತ್ತಾರೆ.
ಅರ್ಜಿ ಹಾಕುವ ಅಭ್ಯರ್ಥಿಗಳು ನೆಪ ಮಾತ್ರಕ್ಕೆ ಪರೀಕ್ಷೆ ಎದುರಿಸುತ್ತಾರೆ. ಕೆಲವಡೆ ಅಭ್ಯರ್ಥಿಗಳ ಹೆಸರಿನಲ್ಲಿ ಬೇರೆ ಯಾರೋ ಪರೀಕ್ಷೆ ಬರೆಯುತ್ತಾರೆ. ಅಭ್ಯರ್ಥಿಗಳ ನೇಮಕಾತಿಗೆ 1:5 ಅನುಪಾತ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ದೂರವಾಣಿ ಮೂಲಕ ಆಮಿಷವೊಡ್ಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಪರೀಕ್ಷೆಯ ಒಎಂಆರ್ ಶೀಟ್​ನಲ್ಲಿ 3ನೇ ವ್ಯಕ್ತಿಯಿಂದ ಉತ್ತರ ಭರ್ತಿ ಮಾಡಿಸುತ್ತಾರೆ. ಮೌಲ್ಯಮಾಪನ ವೇಳೆ ಸಮರ್ಪಕವಾಗಿ ಉತ್ತರ ಬರೆಯದಿದ್ದರೂ ಪೂರ್ತಿ ಅಂಕ ನೀಡಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಪಾಸ್ ಮಾಡಲಾಗುತ್ತದೆ. ಇಂಥ ಅಭ್ಯರ್ಥಿಗೆ ಹುದ್ದೆ ನೀಡಬೇಕೆಂದು ಮೊದಲೇ ನಿರ್ಧಾರವಾಗುತ್ತದೆ ಎಂದು ಇಲಾಖೆಯ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಹೇಳುತ್ತಾರೆ. ಎಂಟು ತಿಂಗಳ ಹಿಂದೆ ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘ ನೇಮಕಾತಿಯಲ್ಲಿ (ಬಮೂಲ್) ಅಕ್ರಮ ನಡೆದಿರುವ ಸಂಬಂಧ ರಾಜ್ಯ ಸರ್ಕಾರ ತನಿಖೆ ನಡೆಸಲು ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದು. ಅಲ್ಲದೆ, ಸರ್ಕಾರದ ಅನುಮತಿ ಇಲ್ಲದೆ ಮಂಡ್ಯ ಹಾಲು ಒಕ್ಕೂಟದಲ್ಲಿ ನೇಮಕಾತಿ ನಡೆದಿರುವುದು ಹಾಗೂ ಹಿಂದೆ ಹಲವು ಸಂಸ್ಥೆಗಳ ನೇಮಕಾತಿ ಅಕ್ರಮಗಳು ಬೆಳಕಿಗೆ ಬಂದಿರುವುದನ್ನು ಕಾಣಬಹುದು.
ಅಸ್ತಿತ್ವಕ್ಕಾಗಿ ಹೋರಾಡುವ ಪಕ್ಷಗಳನ್ನು ನೋಡಿ ನಗಬೇಡಿ: ಮೋದಿ ಹೀಗಂದಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − fourteen =
Remember me
