| ಮೃತ್ಯುಂಜಯ ಕಪಗಲ್ ಬೆಂಗಳೂರುರಾಜ್ಯದ ಶಾಖೋತ್ಪನ್ನ ನೆಲೆಯ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಬಿಕ್ಕಳಿಕೆ ಶುರುವಾಗಿದೆ. ಮೂರು ಸ್ಥಾವರಗಳಲ್ಲಿ ಒಟ್ಟಾರೆ ಮೂರು ಲಕ್ಷ ಟನ್ ಕಲ್ಲಿದ್ದಲು ಅಂದರೆ, ನಾಲ್ಕು ದಿನಗಳಿಗೆ ಬೇಕಾಗುವಷ್ಟೇ ದಾಸ್ತಾನಿದೆ.
ಉನ್ನತ ಮೂಲವೊಂದರ ಪ್ರಕಾರ ಕೆಪಿಸಿಎಲ್ ಸುಸ್ತಿ ಬಾಕಿದಾರ. ಒಂದು ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಬಾಕಿ ಉಳಿಸಿಕೊಂಡಿರುವುದು ಕಲ್ಲಿದ್ದಲು ಪೂರೈಕೆ ಬಿಕ್ಕಟ್ಟಿನ ಮೂಲ.
ಕಲ್ಲಿದ್ದಲು ಪೂರೈಸಿದ ಕಂಪನಿಗಳು ಬಾಕಿ ಪಾವತಿಗೆ ಪದೇಪದೆ ವಿನಂತಿಸುತ್ತಿವೆ. ಆದರೆ, ಕೆಪಿಸಿಎಲ್ ಸರ್ಕಾರದ ಕಡೆಗೆ ಮುಖ ಮಾಡಿ ಕುಳಿತಿದ್ದು, ವಿನಂತಿಗೆ ಸೂಕ್ತ ಸ್ಪಂದನೆ ಸಿಗದ ಕಾರಣ ಕಂಪನಿಗಳು ದೈನಂದಿನ ಕಲ್ಲಿದ್ದಲು ಪೂರೈಕೆ ಪ್ರಮಾಣವನ್ನೇ ಕಡಿತಗೊಳಿಸಿವೆ. ಇದರಿಂದಾಗಿ ಪ್ರತಿ ಸ್ಥಾವರದಲ್ಲಿ 10 ರಿಂದ 15 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿಲ್ಲ. ಆದರೆ, ಇಂಧನ ಇಲಾಖೆ, ಕಲ್ಲಿದ್ದಲು ಕೊರತೆಯಾಗಿಲ್ಲ. ವಿದ್ಯುತ್ ಬಳಕೆ ಹಾಗೂ ಬೇಡಿಕೆ ಕಡಿಮೆಯಾಗಿದ್ದು, ಥರ್ಮಲ್ ವಿದ್ಯುತ್ ಉತ್ಪಾದನೆ ತಗ್ಗಿಸಲಾಗಿದೆ ಎಂದು ಹೇಳುತ್ತಿದೆ.
ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಒದ್ದೆ ಕಲ್ಲಿದ್ದಲು ಪೂರೈಕೆಯಿಂದ ಬಳಕೆ ಕಷ್ಟವಾಗಿದೆ ಎನ್ನುವುದು ನಿಗಮದ ಮೂಲಗಳ ಸಮಜಾಯಿಷಿಯಾಗಿದೆ. ಆದರೆ, ಗರಿಷ್ಠ ಬೇಡಿಕೆಯು 13 ಸಾವಿರ ಮೆಗಾವಾಟ್​ಗೆ ಅಸಾಧಾರಣ ದಾಖಲೆ ಸೃಷ್ಟಿಸಿದ್ದು, ದಿನದ ಬಳಕೆ 229.56 ದಶಲಕ್ಷ ಯೂನಿಟ್​ಗಳೆಂದು ಅಧಿಕೃತ ಅಂಕಿ-ಅಂಶಗಳು ಸಾರುತ್ತವೆ.
ಕಂಪನಿಗಳಿಂದ ಒತ್ತಡ:ಒಡಿಶಾದ ಮಹಾನದಿ ಕೋಲ್ ಫೀಲ್ಡ್ (ಎಂಸಿಎಲ್), ಮಹಾರಾಷ್ಟ್ರದ ವೆಸ್ಟರ್ನ್ ಕೋಲ್ ಫೀಲ್ಡ್ ಮತ್ತು ತೆಲಂಗಾಣದ ಸಿಂಗರೇಣಿ ಕೋಲಾರೀಸ್​ಗಳನ್ನು ರಾಜ್ಯ ನೆಚ್ಚಿಕೊಂಡಿದೆ. ವೆಸ್ಟರ್ನ್ ಫೀಲ್ಡ್ ಪ್ರದೇಶದಲ್ಲಿ ಬಿಟಿಪಿಎಸ್​ಗೆ ಗಣಿ ಗುತ್ತಿಗೆ ಪಡೆಯಲಾಗಿದ್ದು, ಪೂರ್ಣಪ್ರಮಾಣದಲ್ಲಿ ಗಣಿಗಾರಿಕೆ ಹಾಗೂ ಪೂರೈಕೆ ಇನ್ನೂ ಶುರುವಾಗಿಲ್ಲ ಎಂದು ಹೇಳಲಾಗುತ್ತಿದೆ. ಮಳೆಗಾಲಕ್ಕೆ ಮುನ್ನವೇ ಕನಿಷ್ಠ ಒಂದು ವಾರದಮಟ್ಟಿಗೆ ಕಲ್ಲಿದ್ದಲು ದಾಸ್ತಾನಿಟ್ಟುಕೊಳ್ಳಲು ಕೆಪಿಸಿಎಲ್ ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸಿದರೂ ಪ್ರಯೋಜನವಾಗಿಲ್ಲ.
ಬಿಜೆಪಿ ಆಡಳಿತಾವಧಿಯಲ್ಲಿ ಕಂಪನಿಗಳು ಬಿಗಿಪಟ್ಟು ಹಿಡಿದ ನಂತರವೇ ಬಾಕಿ ಮೊತ್ತದಲ್ಲಿ ಒಂದಿಷ್ಟು ಪಾವತಿಯಾಗಿತ್ತು. ನಂತರ ಬಾಕಿ ಮೊತ್ತ ಯಥಾಸ್ಥಿತಿಗೆ ತಲುಪಿದೆ. ಬಾಕಿ ಕಟ್ಟಿಸಿಕೊಳ್ಳಲು ಕಂಪನಿಗಳು ಒತ್ತಡ ತಂತ್ರ ಪ್ರಯೋಗಿಸಿದ್ದರಿಂದ ಕಲ್ಲಿದ್ದಲು ಪೂರೈಸುವ ರೇಕ್​ಗಳು ಗಣನೀಯ ಇಳಿಮುಖವಾದವು ಎಂದು ಮೂಲಗಳು ತಿಳಿಸಿವೆ.
ಕೆಪಿಸಿಎಲ್ ಕಸರತ್ತು:ಕಲ್ಲಿದ್ದಲು ದಾಸ್ತಾನು ‘ಕೈಗೆ ಬಾಯಿಗೆ’ ಎಂಬ ಪರಿಸ್ಥಿತಿಯನ್ನು ಸರಿದೂಗಿಸಲು ಕೆಪಿಸಿಎಲ್ ಕಸರತ್ತು ನಡೆಸಿದ್ದು, ಒದ್ದೆ ಕಲ್ಲಿದ್ದಲು ಹಾಗೂ ಬೇಡಿಕೆ ಕಡಿಮೆ ಎನ್ನುವುದು ಮೇಲ್ನೋಟದ ನೆಪವಾಗಿದೆ. ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಇದೇ ಮೊದಲ ಬಾರಿ ಹೆಚ್ಚು ಮಳೆಯಾಗುತ್ತಿಲ್ಲ. ಜತೆಗೆ ಮಳೆಗಾಲದಲ್ಲಿ ಒದ್ದೆ ಕಲ್ಲಿದ್ದಲು ಪೂರೈಕೆ ಸರ್ವೆ ಸಾಮಾನ್ಯವಾದ ಸಂಗತಿ.
ಅಸಾಧಾರಣ ಉಬ್ಬರ:ಮಳೆ ಕಡಿಮೆಯಾದಾಗ ವಿದ್ಯುತ್ ಬೇಡಿಕೆ, ಬಳಕೆ ಹೆಚ್ಚಳ ಸಹಜ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜುಲೈ ಕೊನೆ, ಆಗಸ್ಟ್ ಮೊದಲ ವಾರದಲ್ಲಿ ಅಸಾಧಾರಣ ಉಬ್ಬರವಾಗಿದೆ.10 ಸಾವಿರ ಮೆಗಾವಾಟ್ ಆಸುಪಾಸಿನಲ್ಲಿದ್ದ ಗರಿಷ್ಠ ಬೇಡಿಕೆ ಪ್ರಮಾಣ 13 ಸಾವಿರ ಮೆಗಾವ್ಯಾಟ್​ಗೆ ಜಿಗಿದಿದೆ. ಬಳಕೆಯೂ 230 ದಶಲಕ್ಷ ಯೂನಿಟ್ ಸಮೀಪಿಸಿದೆ. ಶೇ.10 ರಿಂದ 12 ಹೆಚ್ಚಳವಾಗುತ್ತಿದ್ದ ಗರಿಷ್ಠ ಬೇಡಿಕೆಯು ಶೇ.30 ರಿಂದ 32ಕ್ಕೆ ಏರಿರುವುದು ‘ಗೃಹಜ್ಯೋತಿ’ ಎಫೆಕ್ಟ್ ಇರಬಹುದು ಎಂದು ಮೂಲಗಳು ಅಂದಾಜಿಸಿವೆ.
ಬೇಡಿಕೆ, ಬಳಕೆ ಸರಿದೂಗಿಸುವುದಕ್ಕೆ ಆಷಾಢ ಮಾಸ ವರದಾನವಾಗಿದೆ. ಪವನ ಮೂಲದಿಂದ 49 ದಶಲಕ್ಷ ಯೂನಿಟ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಟಿಸಿಎಲ್-ಎಸ್​ಎಲ್​ಡಿಸಿ ಮೂಲಗಳು ತಿಳಿಸಿವೆ. ಸೌರಶಕ್ತಿ ಮೂಲದಿಂದ 41 ದಶಲಕ್ಷ ಯೂನಿಟ್ ಹಾಗೂ ಕೇಂದ್ರೀಯ ಸ್ಥಾವರಗಳಿಂದ 73 ದಶಲಕ್ಷ ಯೂನಿಟ್ ಲಭ್ಯವಾದ ಕಾರಣ ಬಳಕೆ ಸಮರ್ಥವಾಗಿ ನಿಭಾಯಿಸಲು ರಾಜ್ಯ ಶಕ್ತವಾಗಿದೆ.
ಸಂಬಳ ಪಾವತಿಸಲು ಸಾಲ:ಆರ್​ಟಿಪಿಎಸ್, ವೈಟಿಪಿಎಸ್ ಹಾಗೂ ಬಿಟಿಪಿಎಸ್​ನ ಒಟ್ಟು 12 ಘಟಕಗಳ ಸ್ಥಾಪಿತ ಸಾಮರ್ಥ್ಯದಂತೆ ವಿದ್ಯುತ್ ಉತ್ಪಾದಿಸಿದರೆ ಒಂದೆರಡು ದಿನಗಳಲ್ಲಿ ಕಲ್ಲಿದ್ದಲು ಬರಿದಾಗುತ್ತದೆ. ಹಾಗಂತ ಎಲ್ಲ ಘಟಕಗಳನ್ನು ನಿಲ್ಲಿಸಿದರೂ ಬೇರೆ ಸಂದೇಶ ರವಾನೆಯಾಗಲಿದೆ. ಈ ಹಿನ್ನೆಲೆ ಮೂರು ಸ್ಥಾವರಗಳು ಸ್ಥಾಪಿತ ಸಾಮರ್ಥ್ಯದಲ್ಲಿ ಶೇ.30 ರಿಂದ 40 ವಿದ್ಯುತ್ ಉತ್ಪಾದಿಸುತ್ತಿವೆ. ವಿದ್ಯುತ್ ಖರೀದಿಸಿದ ಎಸ್ಕಾಂಗಳು 19,000 ಕೋಟಿ ರೂ. ಕೆಪಿಸಿಎಲ್​ಗೆ ಬಾಕಿ ಉಳಿಸಿದ್ದು, ಸರ್ಕಾರ ಕಾಲ ತಳ್ಳುತ್ತಿದೆ. ಉದ್ಯೋಗಿಗಳಿಗೆ ಸಂಬಳ ಪಾವತಿ ಸಲು ಸಾಲ ಮಾಡಬೇಕಾದ ಬಿಕ್ಕಟ್ಟಿಗೆ ನಿಗಮ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ.
ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
