|ಮೃತ್ಯುಂಜಯ ಕಪಗಲ್ಬೆಂಗಳೂರು
ರಾಜ್ಯದಲ್ಲಿ ಮಳೆ ಕುಂಠಿತಗೊಂಡು ದೈನಂದಿನ ವಿದ್ಯುತ್ ಬೇಡಿಕೆ ಸರಾಸರಿ 10,000 ಮೆಗಾವಾಟ್ ದಾಟಿದ್ದು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಬದಲಾದ ನೀತಿ ಪ್ರಕಾರ, ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಸಿಲುಕಿದೆ. ಜಲ ಮೂಲದ ವಿದ್ಯುದಾಗಾರಗಳನ್ನು ಆಪತ್ಕಾಲದ ನಿಧಿಯಂತೆ ಸದ್ಯಕ್ಕೆ ಬಳಸಿಕೊಳ್ಳಬೇಕಿದೆ. ಮತ್ತೆ ಮಳೆ ಅಬ್ಬರಿಸಲಾರಂಭಿಸಿದರೆ ಬೇಡಿಕೆ ತಗ್ಗಿ, ಜಲ ಸಂಗ್ರಹವೂ ಹೆಚ್ಚಲಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಸರಾಸರಿ ಶೇ.12.5 ವೃದ್ಧಿಸುವ ಅಂದಾಜಿದೆ. ಸೌರ, ಪವನ ಮೂಲದ ವಿದ್ಯುತ್ ಉತ್ಪಾದನೆ ಏರಿಕೆ ಹಾದಿಯಲ್ಲಿದ್ದರೂ ಉಷ್ಣ ಸ್ಥಾವರಗಳು ನಿರ್ಣಾಯಕ ಪಾತ್ರವಹಿಸುತ್ತಿವೆ. ಕರೊನೋತ್ತರ ಕಾಲಘಟ್ಟದಲ್ಲಿ ಉದ್ಯಮ-ವಹಿವಾಟು ಮತ್ತಿತರ ಆರ್ಥಿಕ ಚಟುವಟಿಕೆಗಳು, ಸೆಕೆಯ ಕಾರಣಕ್ಕೆ ಹೆಚ್ಚೆಚ್ಚು ಹವಾ ನಿಯಂತ್ರಕಗಳ ಬಳಕೆಯಾಗುತ್ತಿದ್ದು, ಕೃಷಿ ವಲಯವೂ ಚುರುಕಾಗಿದೆ. ಇದರಿಂದಾಗಿ ಗರಿಷ್ಠ ಬಳಕೆ ಅವಧಿಯಲ್ಲಿ ಬೇಡಿಕೆ 10,600 ಮೆಗಾವಾಟ್ ದಾಟಿದೆ. ಶನಿವಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 205 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ.
ಕೇಂದ್ರ ಸರ್ಕಾರದ ತಾಕೀತು:ಬೇಡಿಕೆ ಸರಿದೂಗಿಸಲು ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಹೆಚ್ಚಳ, ಅದಕ್ಕೆ ಅನುಗುಣವಾಗಿ ಕಲ್ಲಿದ್ದಲು ಉತ್ಪಾದನೆಯನ್ನು ಕೇಂದ್ರ ಸರ್ಕಾರ ಏರಿಸಿದೆ. ಅಲ್ಲದೆ, ಶಾಖೋತ್ಪನ್ನ ಸ್ಥಾವರಗಳನ್ನು ಹೊಂದಿರುವ ರಾಜ್ಯಗಳಿಗೆ ದೇಶೀಯ ಕಲ್ಲಿದ್ದಲು ಜತೆಗೆ ಶೇಕಡ 30 ರಷ್ಟು ವಿದೇಶಿ ಕಲ್ಲಿದ್ದಲು ಮಿಶ್ರಣ (ಬ್ಲೆಂಡ್) ಮಾಡಿ ಬಳಸಬೇಕು ಎಂದು ತಾಕೀತು ಮಾಡಿದೆ. ಕೋಲ್ ಇಂಡಿಯಾ ಲಿಮಿಟೆಡ್ ಪ್ರಸಕ್ತ ವರ್ಷ 14.46 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ತೀರ್ವನಿಸಿದ್ದು, ಈ ಪೈಕಿ ಎರಡು ದಶಲಕ್ಷ ಮೆಟ್ರಿಕ್ ಟನ್ ಖರೀದಿಗೆ ಟೆಂಡರ್ ಕರೆದಿದೆ. ಸಿಐಎಲ್​ನೊಂದಿಗೆ ಆಯಾ ರಾಜ್ಯಗಳು ಪ್ರತ್ಯೇಕವಾಗಿ ವಿದೇಶಿ ಕಲ್ಲಿದ್ದಲು ಅಮದು ಮಾಡಿಕೊಳ್ಳಲು ತಿಳಿಸಿದ್ದು, ಈ ಕ್ರಮಕೈಗೊಂಡರೆ ದೇಶೀಯ ಗಣಿಗಳಿಂದ ನಿಗದಿತ ಪ್ರಮಾಣದ ಕಲ್ಲಿದ್ದಲು ಪೂರೈಕೆ ಖಾತರಿ ಸಾಧ್ಯವೆಂದು ಸ್ಪಷ್ಟಪಡಿಸಿದೆ. ಒಂದು ವರ್ಷದ ಮಟ್ಟಿಗೆ 0.64 ದಶಲಕ್ಷ ಟನ್ ವಿದೇಶಿ ಕಲ್ಲಿದ್ದಲು (ಪ್ರತಿ ಕೆಜಿಗೆ 6,200 ಕಿಲೋ ಕ್ಯಾಲರಿ) ಖರೀದಿಗೆ ಕೆಪಿಸಿಎಲ್ ಟೆಂಡರ್ ಕರೆಯುವ ಮೂಲಕ ಫರ್ಮಾನು ಪಾಲಿಸುತ್ತಿರುವ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿದೆ.
ನಷ್ಟದ ಭೀತಿ:ವಿದೇಶಿ ಕಲ್ಲಿದ್ದಲು ತರಿಸಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿರುವ ಕಾರಣ ಕೆಪಿಸಿಎಲ್ ಇನ್ನಷ್ಟು ನಷ್ಟದ ಭೀತಿಗೆ ಸಿಲುಕಿದೆ. ದೇಶೀಯವಾಗಿ ಉತ್ಕೃ್ಟ ದರ್ಜೆಯ ಕಲ್ಲಿದ್ದಲು ಪ್ರತಿ ಮೆಟ್ರಿಕ್ ಟನ್​ಗೆ 5,600 ರೂ.ಗಳಿಗೆ ಲಭ್ಯವಾಗುತ್ತಿದೆ. ಸಾಗಣೆ ವೆಚ್ಚವೂ ಸೇರಿ ವಿದೇಶಿ ಕಲ್ಲಿದ್ದಲು ದರ ಪ್ರತಿ ಟನ್​ಗೆ 28,000 ರೂ.ಗಳಾಗಲಿದೆ. ಕಲ್ಲಿದ್ದಲು ವೆಚ್ಚಕ್ಕಿಂತ ಸಾಗಣೆ ವೆಚ್ಚದ ಹೊರೆಯೇ ಹೆಚ್ಚು. ಕಲ್ಲಿದ್ದಲು ದುಬಾರಿಯಾದರೆ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಳವೂ ಸಹಜ. ದೇಶೀಯ ಕಲ್ಲಿದ್ದಲು ಬಳಸಿ ಉತ್ಪಾದಿಸುವ ಪ್ರತಿ ಯೂನಿಟ್ ವಿದ್ಯುತ್​ಗೆ 2.90 ರೂ.ನಿಂದ 3.40 ರೂ.ಗಳಾಗಲಿದೆ. ಇದು ದುಬಾರಿಯಾಯಿತು ಎಂದು ಖಾಸಗಿ ಮೂಲದ ಸೌರ ಮತ್ತು ಪವನ ವಿದ್ಯುತ್​ನ್ನು ಹೆಚ್ಚಿನ ಪ್ರಮಾಣದಲ್ಲಿ ಎಸ್ಕಾಮ್ಳು ಖರೀದಿಸುತ್ತಿವೆ. ಮೆರಿಟ್ ಆರ್ಡರ್ ಡಿಸ್ಪಾಚ್​ನಲ್ಲಿ (ಎಂಒಡಿ) ಉಳಿದುಕೊಳ್ಳಲೆಂದು ಕೆಪಿಸಿಎಲ್ ಪ್ರತಿ ಯೂನಿಟ್​ಗೆ ಸರಾಸರಿ 2.90 ರೂ. ದರ ನಿಗದಿಪಡಿಸಿದ್ದು, 600-700 ಕೋಟಿ ರೂ. ನಷ್ಟ ಸರಿದೂಗಿಸಿಕೊಳ್ಳಲು ತಾಂತ್ರಿಕ ಹಾಗೂ ಆಡಳಿತಾತ್ಮಕವಾಗಿ ಹೆಣಗಾಡುತ್ತಿದೆ. ವಿದೇಶಿ ಕಲ್ಲಿದ್ದಿಲಿನಿಂದ ವಿದ್ಯುತ್ ದುಬಾರಿಯಾಗಿ ಎಸ್ಕಾಮ್ಳು ಹಿಂಜರಿಯಲಿವೆ. ಆಗ ಇನ್ನಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದು ಕೆಪಿಸಿಎಲ್ ಭೀತಿಗೆ ಕಾರಣವೆಂದು ಮೂಲಗಳು ಹೇಳಿವೆ.

ತಾಂತ್ರಿಕ ಸವಾಲು:ವಿದೇಶಿ ಕಲ್ಲಿದ್ದಲಿನಲ್ಲಿ ಬೂದಿ ಅಂಶ ಕಡಿಮೆಯಿರುತ್ತದೆ. ಆದರೆ, ದಹನಶಕ್ತಿ (ಕ್ಯಾಲರೀಸ್) ಹೆಚ್ಚು, ಗಂಧಕದ ಪ್ರಮಾಣವನ್ನು ಅಧಿಕ ಪ್ರಮಾಣದಲ್ಲಿ ಹೊರಸೂಸುತ್ತದೆ. ವಾತಾವರಣಕ್ಕೆ ಗಂಧಕ ಹೆಚ್ಚು ಸೇರುವುದನ್ನು ನಿಯಂತ್ರಿಸುವ ವ್ಯವಸ್ಥೆ ಪ್ರಗತಿಯಲ್ಲಿದ್ದು, ಬಳ್ಳಾರಿ, ರಾಯಚೂರು ಮತ್ತು ಯರಮರಸ್ ಶಾಖೋತ್ಪನ್ನ ಸ್ಥಾವರಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಿಲ್ಲ. ದೇಶೀಯ ಕಲ್ಲಿದ್ದಲು ಗುಣಮಟ್ಟದಂತೆ ಮೂರು ಸ್ಥಾವರಗಳ ಬಹುತೇಕ ಟರ್ಬೆನ್, ಹಬೆಯಂತ್ರಗಳು ವಿನ್ಯಾಸಗೊಂಡಿದ್ದು, ಹೆಚ್ಚು ದಹನಶಕ್ತಿ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ.
ವಿದೇಶಿ ಕಲ್ಲಿದ್ದಲು ಮಿಶ್ರಣವನ್ನು ಒದಗಿಸಿದರೆ ಹಬೆಯಂತ್ರದ ಕೊಳವೆ ಮಾರ್ಗಗಳು, ಕಲ್ಲಿದ್ದಲು ನಿರ್ವಹಣೆ ಮತ್ತು ಹಾರುಬೂದಿ ನಿರ್ವಹಣಾ ವಿಭಾಗಗಳಲ್ಲಿ ತಾಂತ್ರಿಕ ಸಮಸ್ಯೆ ತಲೆ ಎತ್ತಲಿವೆ. ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಪದೇಪದೆ ಘಟಕಗಳ ನಿಲುಗಡೆ, ವಿದ್ಯುತ್ ಉತ್ಪಾದನೆ ಕುಸಿತ ಸಾಧ್ಯತೆಗಳಿವೆ ಎಂದೂ ತಾಂತ್ರಿಕ ನಿಪುಣರು ಆತಂಕ ವ್ಯಕ್ತಪಡಿಸುತ್ತಾರೆ.
ನವದೆಹಲಿ:ದೇಶಾದ್ಯಂತ ಈ ವರ್ಷ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ದೈನಂದಿನ ಬಳಕೆಯಲ್ಲಿ ದಾಖಲೆಯ 40- 45 ಸಾವಿರ ಮೆಗಾವಾಟ್​ವರೆಗೆ ಏರಿಕೆ ಕಂಡಿದೆ. ದೇಶದ ಉತ್ತರ ಭಾಗಗಳಲ್ಲಿ ತೀವ್ರವಾಗಿ ಉಷ್ಣ ಮಾರುತಗಳು ಬೀಸುತ್ತಿರುವುದರಿಂದ ಹಾಗೂ ವಿದ್ಯುತ್ ಇಲ್ಲದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ವಿದ್ಯುತ್ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಇಂಧನ ಸಚಿವ ಆರ್.ಕೆ. ಸಿಂಗ್ ತಿಳಿಸಿದ್ದಾರೆ. ದೇಶದ ವಿದ್ಯುತ್ ಬೇಡಿಕೆ ಜೂ.9ರಂದು ಸಾರ್ವಕಾಲಿಕ ಗರಿಷ್ಠ 2,10,792 ಮೆಗಾವಾಟ್ ದಾಖಲಾಗಿತ್ತು. ಒಟ್ಟು 4,712 ದಶಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿದೆ. ಮೋದಿ ಸರ್ಕಾರದ 8 ವರ್ಷಗಳ ಅವಧಿಯಲ್ಲಿ ‘ಒಂದು ದೇಶ ಒಂದು ಪ್ರಸರಣ ಗ್ರಿಡ್’ ಯೋಜನೆ ಜಾರಿಗೊಳಿಸಿ ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಹೀಗಾಗಿ ದಿನಕ್ಕೆ 23ರಿಂದ 23.5 ತಾಸು ವಿದ್ಯುತ್ ಪೂರೈಕೆ ಮಾಡುವಂತಾಗಿದೆ. ಈ ಬೇಡಿಕೆ ಪೂರೈಸಲು ವಿದ್ಯುತ್ ಸ್ಥಾವರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.
ಕದ್ದವರ ಸುಳಿವು ಕೊಟ್ಟ ಬ್ಲೇಡ್​; 400 ಅಂಗಡಿಗಳಿಗೆ ಅಲೆದಾಡಿ ಕಳ್ಳರನ್ನು ಪತ್ತೆ ಮಾಡಿದ ಪೊಲೀಸರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 15 =
Remember me
