ಬೆಂಗಳೂರು:ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಾಗಿರುವ ‘ಆನ್​ಲೈನ್ ಬೋಧನೆ’ಗೆ ತಜ್ಞರ ಸಮಿತಿ ಹಸಿರು ನಿಶಾನೆ ತೋರಿದ್ದು, ಹತ್ತು ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ತಂತ್ರಜ್ಞಾನ ಬಳಕೆ ಮಾಡುವ ನೆಪದಲ್ಲಿ ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ವಯೋಮಿತಿ ಆಧಾರದ ಮೇಲೆ ಆನ್​ಲೈನ್ ಬೋಧನೆ ಮಾಡಬೇಕು ಎಂದು ಸಮಿತಿ ಪ್ರಮುಖವಾಗಿ ಶಿಫಾರಸು ಮಾಡಿದೆ.
‘ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಕಲಿಕೆಯ ಮುಂದುವರಿಯುವಿಕೆ- ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕಾಗಿ ಮಾರ್ಗಸೂಚಿಗಳು’ ಎಂಬ ಶೀರ್ಷಿಕೆ ಅಡಿ ಸಿದ್ಧಪಡಿಸಲಾಗಿರುವ ವರದಿಯನ್ನು ಸಮಿತಿ ಅಧ್ಯಕ್ಷ ಡಾ. ಎಂ.ಕೆ. ಶ್ರೀಧರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಮಂಗಳವಾರ ಸಲ್ಲಿಸಿದರು. ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯ, ಮಕ್ಕಳ ಶಿಕ್ಷಣದ ಹಕ್ಕು, ವಿಭಿನ್ನ ವಯೋಮಾನದವರಿಗೆ ವಿಭಿನ್ನ ಕಲಿಕೆಯ ತಂತ್ರಗಳು ಸೇರಿ ಸಮಗ್ರವಾದ ಚಿತ್ರಣವನ್ನು ವರದಿಯಲ್ಲಿ ನೀಡಲಾಗಿದೆ.
3 ರಿಂದ 6 ವರ್ಷದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಟ, ಕಥೆ, ಪ್ರಾಸ ಸೇರಿ ನವೀನ ಚಟುವಟಿಕೆಗಳನ್ನು ಮಾತ್ರ ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ ಅಥವಾ ಮುದ್ರಿತ ಬೋಧನಾ ವಿಧಾನಗಳ ಮೂಲಕ ವಾರಕ್ಕೆ ಮೂರು ದಿನ ಒಂದು ಅವಧಿಯಂತೆ ಕಲಿಸಬಹುದು. 1 ರಿಂದ 2ನೇ ತರಗತಿಯ ವಿದ್ಯಾರ್ಥಿಗಳಿಗೆ ಆಟ, ಕಥೆಯ ರೂಪದ ನವೀನ ಚಟುವಟಿಕೆಗಳನ್ನು ವಾರಕ್ಕೆ ಮೂರು ದಿನ ಪ್ರತಿದಿನ ಎರಡು ಅವಧಿಯಲ್ಲಿ ಕಲಿಕೆಗೆ ಅವಕಾಶ ನೀಡಬಹುದು. 3 ರಿಂದ 5ನೇ ತರಗತಿಗಳಿಗೆ ವಾರಕ್ಕೆ 5 ದಿನ, ಪ್ರತಿದಿನ 30 ನಿಮಿಷದ 2 ಅವಧಿಗಳಂತೆ ಆನ್​ಲೈನ್ ಬೋಧನೆ, ಪಠ್ಯಕ್ಕೆ ಪೂರಕ ಬೋಧನೆಯನ್ನು ಅಳವಡಿಸಿಕೊಳ್ಳಬಹುದು. 6ರಿಂದ 8ನೇ ತರಗತಿಗೆ 30 ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ ಹಾಗೂ 9-10ನೇ ತರಗತಿಗೆ 30-45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿ ಪರ್ಯಾಯ ಕಲಿಕೆಯನ್ನು ಸಮಿತಿ ಶಿಫಾರಸು ಮಾಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಪ್ರಮುಖ ಶಿಫಾರಸುಗಳು
* ತಂತ್ರಜ್ಞಾನದ ಬಳಕೆ ಏಕೈಕ ಆಯ್ಕೆಯಾಗಬಾರದು. ಎಲ್ಲ ಕಾರ್ಯಸಾಧುವಾದ ಆಯ್ಕೆಗಳನ್ನು ಬಳಕೆ ಮಾಡಬೇಕು.
* ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು.
* ವಯೋಮಿತಿಗೆ ಅನುಗುಣವಾಗಿ ಕಲಿಕಾ ವಿಧಾನ ಬಳಸಬೇಕು.
* ಕರೊನಾ ವಿಚಾರ ಗಮನದಲ್ಲಿಟ್ಟುಕೊಂಡು ಪಠ್ಯಕ್ರಮದ ಉದ್ದೇಶ ಪರಿಷ್ಕರಿಸಬೇಕಾಗಿದೆ. ಪ್ರತಿ ಶಾಲೆ ಪರ್ಯಾಯ ಶೈಕ್ಷಣಿಕ ಪಠ್ಯಕ್ರಮ ಕ್ಯಾಲೆಂಡರ್ ಮತ್ತು ವೇಳಾಪಟ್ಟಿ ರಚಿಸಬೇಕು.
* ‘ಕಲಿಯಲು ಕಲಿಯುವುದು’ ನಂತಹ ಕೌಶಲ್ಯದೊಂದಿಗೆ ಸಕ್ರಿಯವಾದ ಕಲಿಕಾ ನಿಯೋಗಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಬೇಕು.
* ಏಕಮುಖ ಸಂವಹನದಂತಹ ತಂತ್ರಜ್ಞಾನ ಬಳಕೆ ಮಾಡಬಾರದು. ಉಭಯ ಸಂವಹನ ಏರ್ಪಡಬೇಕು. ಅಸಿಂಕ್ರೋನ್ಸ್ (ಪೂರ್ವಮುದ್ರಿತ ಅವಧಿ) ವಿಧಾನದಲ್ಲೂ ಮಕ್ಕಳಿಗಾಗಿ ಸಂವಾದನಾತ್ಮಕ ಚಟುವಟಿಕೆಗಳನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ಉನ್ನತ ತರಗತಿಯಲ್ಲಿ ಕೆಲವೊಂದು ನಿಷ್ಕ್ರಿಯ ಅವಧಿಯನ್ನು ಬಳಸಬಹುದಾಗಿದೆ.
* ಹೈಬ್ರಿಡ್ ಆಯ್ಕೆಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಚಟುವಟಿಕೆಗಳನ್ನು ಕೈಗೊಳ್ಳಲು ಸಾಕಷ್ಟು ಅವಕಾಶಗಳನ್ನು ಒದಗಿಸುವ ವರ್ಕ್​ಶೀಟ್ ಚಟುವಟಿಕೆ, ಹಾಳೆಗಳು, ಶಾಲೆಯಿಂದ ಪಾಲಕರಿಗೆ ಹ್ಯಾಂಡ್-ಔಟ್​ಗಳನ್ನು ನೀಡಬೇಕಾಗುತ್ತದೆ.
* ತಂತ್ರಜ್ಞಾನ ಆಧಾರಿತ ವಿಧಾನವನ್ನು ಬಳಸಲು ಸಾಧ್ಯವಾಗದ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು.
* ವಿಶೇಷ ಅಗತ್ಯವಿರುವ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಬೇಕು.
* ಪ್ರತಿ ಮಗುವಿಗೆ ಶಿಕ್ಷಣ ದೊರೆಯಬೇಕು.
ಇಲಾಖೆ ಜವಾಬ್ದಾರಿ ಏನು?
* ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯು ಶಿಕ್ಷಣದ ಮುಂದುವರಿಕೆಗೆ ನೆರವಾಗಲು ವಿವಿಧ ವೇದಿಕೆ ಸ್ಥಾಪಿಸಬೇಕು. ಉದಾಹರಣೆಗೆ ಪ್ರಸಕ್ತ ಕಾಲಕ್ಕೆ ಸೂಕ್ತವಾದ ಬೋಧನಾ, ಕಲಿಕಾ ಸಾಮಗ್ರಿಗಳನ್ನು ಸಂಗ್ರಹಿಸುವ ಮೂಲಕ ದೂರದರ್ಶನ ಮತ್ತು ರೇಡಿಯೋ ಪ್ರಸಾರವನ್ನು ಮರು ಆರಂಭಿಸಬೇಕು.
* ಗ್ರಾಮೀಣ ಅಥವಾ ನಗರ, ಜನದಟ್ಟಣೆ ಅಥವಾ ವಿರಳ ಜನದಟ್ಟಣೆ ಶಾಲೆಗಳು ಮತ್ತು ಸೋಂಕಿನ ವಲಯಗಳ ಪ್ರಕಾರ (ಕೆಂಪು-ಹೆಚ್ಚಿನ ಅಪಾಯ, ಕಿತ್ತಳೆ-ಮಧ್ಯಮ ಅಪಾಯ ಹಾಗೂ ಹಸಿರು-ಕಡಿಮೆ ಅಪಾಯ) ಶಾಲೆಗಳು ಕಾರ್ಯ ನಿರ್ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್​ಒಪಿ) ಅಭಿವೃದ್ಧಿಪಡಿಸಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರ ಶಾಲೆ ಆರಂಭಕ್ಕೆ ಅನುಮತಿ ನೀಡಿದ ನಂತರ ಈ ಎಸ್​ಒಪಿಯಂತೆ ಶಾಲೆ ನಡೆಸಬಹುದು. ಶಾಲಾದಿನಗಳ ಸಂಖ್ಯೆ, ಸುರಕ್ಷತಾ ಮತ್ತು ನೈರ್ಮಲ್ಯ ಕಾರ್ಯವಿಧಾನ, ಹಣ ಮತ್ತು ಮಕ್ಕಳ ಮನೆಗೆ ಕಲಿಕಾ ಸಾಮಗ್ರಿ ತಲುಪಿಸುವುದು ಸೇರಿ ಎಸ್​ಒಪಿ ವಿವರವಾದ ಮಾರ್ಗಸೂಚಿ ಹೊಂದಿರಬೇಕು.
* ಶಾಲೆಗಳು ಮಾಡುವ ಕೆಲಸದಲ್ಲಿ ಪಾರದರ್ಶಕತೆ ಇರಬೇಕು. ಯೋಜನೆ ಮತ್ತು ವಿಧಾನಗಳನ್ನು ಸಾರ್ವಜನಿಕ ವಿಮರ್ಶೆಗೆ ಒಳಪಡಿಸಬೇಕು. ಇತರ ಶಾಲೆಗಳೊಂದಿಗೂ ಕೈಜೋಡಿಸಬೇಕು ಮತ್ತು ಮಗುವಿನ ಹಿತಾಶಕ್ತಿ ಗಮನದಲ್ಲಿಟ್ಟುಕೊಂಡು ನವೀನ ಪರಿಹಾರಗಳನ್ನು ಹುಡುಕಬೇಕು.
* ಮಾರ್ಗಸೂಚಿಗಳ ಉಲ್ಲಂಘನೆ ಸಂಬಂಧ ಪಾಲಕರು ನೀಡುವ ದೂರಿನಂತೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
* ಪಾಲಕರು ಮತ್ತು ಶೈಕ್ಷಣಿಕ ತಜ್ಞರು ಶಾಲೆಗಳಿಗೆ ಸದಾ ಸಹಕಾರ ನೀಡಬೇಕು ಮತ್ತು ಸರ್ಕಾರದ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು.
ವಿಜಯವಾಣಿ ಅಭಿಯಾನ
ಪೂರ್ವ ಪ್ರಾಥಮಿಕ ಶಾಲೆಗಳಿಗೆ ಆನ್​ಲೈನ್​ನಲ್ಲಿ ಸುದೀರ್ಘ ತರಗತಿ ನಡೆಸುವುದನ್ನು ವಿರೋಧಿಸಿ ವಿಜಯವಾಣಿ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕೆ ಪಾಲಕರು, ಶಿಕ್ಷಣತಜ್ಞರು ಸಹಮತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ತಜ್ಞರ ಸಮಿತಿ ರಚಿಸಿ ಆನ್​ಲೈನ್ ತರಗತಿಗಳಿಗೆ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಿತ್ತು.
ಶಾಲೆ ಆರಂಭಿಸಬಹುದು
ಕರೊನಾ ಸೋಂಕು ಇಲ್ಲದ ಗ್ರಾಮೀಣ ಭಾಗದಲ್ಲಿ ಸುರಕ್ಷಿತ ಕ್ರಮ ಅನುಸರಿಸಿ ಶಾಲೆ ತೆರೆಯಬಹುದು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಕುರಿತು ಎಸ್​ಓ ಪಿ ರೂಪಿಸಲು ತಿಳಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ…?
ಚೀನಾ ಆಮದು ದ್ವಾರ ಬಂದ್?: ವಾಣಿಜ್ಯ ಸಚಿವಾಲಯದ ಸಲಹೆ ಕೋರಿದ ಪಿಎಂಒ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
