|ಡಾ. ಎಲ್.ಎಚ್.ಮಂಜುನಾಥ್
ಮದ್ಯಸೇವನೆಯನ್ನು ಹವ್ಯಾಸವಾಗಿಸಿಕೊಂಡ ಒಂದು ವರ್ಗದ ಜನರಿರುತ್ತಾರೆ. ಆದರೆ ಹೆಚ್ಚಿನವರಿಗೆ ಈ ಹವ್ಯಾಸ ಚಟವಾಗಿ ಪರಿವರ್ತನೆಯಾಗಿ ಗಂಭೀರವಾದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇನ್ನು ಹವ್ಯಾಸಿಗಳಾಗಿ ಮದ್ಯಪಾನ ಮಾಡಿದರೂ ಅರಿವಿಲ್ಲದಂತೆ ಕೆಲವೊಂದು ದುಷ್ಕೃತ್ಯಗಳನ್ನು ಮಾಡಿಸುತ್ತದೆ. ಅಂಕಿಅಂಶಗಳ ಪ್ರಕಾರ ಶೇ.49ರಷ್ಟು ಅಪಘಾತಗಳಿಗೆ ಮದ್ಯಸೇವನೆ ಮಾಡಿ ವಾಹನ ಚಲಾಯಿಸುವುದೇ ಕಾರಣ. ಶೇ.40ರಷ್ಟು ಕ್ರಿಮಿನಲ್ ಅಪರಾಧಗಳು ಮದ್ಯದ ಅಮಲಿನಲ್ಲಿ ಸಂಭವಿಸುತ್ತವೆ.
ಮದ್ಯಪಾನ ನಿಯಂತ್ರಿಸಬೇಕೆಂಬ ಆಶಯ ಸರ್ಕಾರಕ್ಕೂ ಇದೆ. ಯಾಕೆಂದರೆ ಸರ್ಕಾರವೇ ಮದ್ಯಪಾನ ಸಂಯಮ ಮಂಡಳಿಯನ್ನೂ ಮಾಡಿದೆ. ಮದ್ಯ ಮಾರಾಟಕ್ಕೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿದೆ. ಶಾಲಾ – ಕಾಲೇಜು, ದೇವಸ್ಥಾನ, ಆಸ್ಪತ್ರೆಗಳ ಬಳಿ, ಹೆದ್ದಾರಿಯಲ್ಲಿ ಮಾರಾಟ ಮಾಡಬಾರದು. ಸುಪ್ರೀಂ ಕೋರ್ಟ್ ಸಹ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡಿದೆ. ಆದರೆ ನಿಯಮಗಳಿಗೊಂದು ಪರ್ಯಾಯ ಕಂಡುಕೊಂಡು ಶರಾಬು ಅಂಗಡಿ ತೆರೆಯುತ್ತಾರೆ, ಮಾರಾಟ ಮಾಡುತ್ತಾರೆ. ಸರ್ಕಾರ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಅಂಗಡಿ ಮಾಡಲು ಗ್ರಾಮ ಪಂಚಾಯತ್ ಅನುಮತಿ ಕಡ್ಡಾಯ ಎಂಬ ನಿಯಮ ಮಾಡಿದೆ. ಆದರೆ ಮದ್ಯದಂಗಡಿ ತೆರೆಯಲು ಗ್ರಾಪಂ ಅನುಮತಿಯ ಅಗತ್ಯವಿಲ್ಲ ಎಂಬ ದ್ವಂದ್ವ ನೀತಿ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಜನಾಂದೋಲನ ಪ್ರಮುಖ ಪಾತ್ರ ವಹಿಸುತ್ತದೆ.
ನಮ್ಮ ದೇಶದಲ್ಲಿ ಮದ್ಯದ ವಿರುದ್ಧ ಜನಾಂದೋಲನಗಳು ಆಗಿಂದಾಗ್ಗೆ ನಡೆದಿರುವ ದಾಖಲೆಗಳಿವೆ. ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ಪಕ್ಷವೇ ದೊಡ್ಡ ಹೋರಾಟ ಮಾಡಿತ್ತು. ಗಾಂಧೀಜಿಯವರ 18 ರಚನಾತ್ಮಕ ಕಾರ್ಯಕ್ರಮಗಳಲ್ಲಿ 3ನೇ ಕಾರ್ಯಕ್ರಮವೇ ಪಾನನಿಷೇಧವಾಗಿದೆ. ಗಾಂಧೀಜಿಯವರ ಜನ್ಮಭೂಮಿ ಗುಜರಾತ್ ರಾಜ್ಯದಲ್ಲಿ ಇಂದಿಗೂ ಪಾನನಿಷೇಧವಿದೆ. ಬಿಹಾರದಲ್ಲಿ ಒಂದು ದಶಕದಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬಳಿಕ ಈ ರಾಜ್ಯದಲ್ಲಿ ಕ್ರಿಮಿನಲ್ ಅಪರಾಧಗಳು ಮತ್ತು ರಸ್ತೆ ಅಪಘಾತಗಳ ಪ್ರಮಾಣ ಶೇ. 60ರಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಚಿಂತಕ ಕಾರ್ಲ್​ವಾರ್ಕ್ಸ್ ಹೇಳಿರುವಂತೆ- ‘ಮದ್ಯಪಾನ ದುಡಿಯುವ ವರ್ಗದ ಶತ್ರು’. ಮದ್ಯವ್ಯಸನದ ವಿರುದ್ಧ ಸಮುದಾಯವನ್ನು ಸಂಘಟಿಸಿದ ಕೀರ್ತಿ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ. 1993ರಲ್ಲಿ ಸಮಾನಮನಸ್ಕರೊಡನೆ ಚಿಂತಿಸಿ ಜನಜಾಗೃತಿ ವೇದಿಕೆಯನ್ನು ಹುಟ್ಟು ಹಾಕಿದರು. ಕಾಲಕ್ರಮೇಣ ವೇದಿಕೆಯು ಬಲಿಷ್ಠವಾಗಿ ಬೆಳೆದಿದ್ದು, ಮದ್ಯಪಾನದ ವಿರುದ್ಧ ಸಾಮಾಜಿಕ ಆಂದೋಲನವನ್ನು ಪ್ರಬಲವಾಗಿ ಸಂಘಟಿಸುತ್ತಿದೆ.
ಹೆಗ್ಗಡೆಯವರು ದೈವಿಕ ಮತ್ತು ಸಾಮಾಜಿಕ ಮನ್ನಣೆ ಪಡೆದಿರುವ ವ್ಯಕ್ತಿ. ಮದ್ಯಮುಕ್ತ ಸಮಾಜದ ಅವರ ನಿಲುವನ್ನು ಜನರು ಸುಲಭವಾಗಿ ಒಪ್ಪಿಕೊಳ್ಳಲು ಇದರಿಂದ ಸಾಧ್ಯವಾಗಿದೆ. ಪ್ರಾರಂಭದಲ್ಲಿ ಸರ್ಕಾರದ ಮದ್ಯ ಮಾರಾಟದ ವಿರುದ್ಧವೇ ಜನಜಾಗೃತಿ ವೇದಿಕೆ ಹೋರಾಟ ನಡೆಸಿತು. ಅಂದಿನ ಸರ್ಕಾರ ಬೆಳ್ತಂಗಡಿ ತಾಲೂಕು ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕುಗಳನ್ನು ಸಾರಾಯಿಮುಕ್ತ ತಾಲೂಕುಗಳನ್ನಾಗಿ ಘೊಷಣೆ ಮಾಡಿತು. ಆದರೆ ಮದ್ಯಪಾನ ನಿಲ್ಲಲಿಲ್ಲ. ಹೊರಗಿನಿಂದ ತಂದು ಮದ್ಯ ಮಾರುವುದು, ಅಕ್ರಮವಾಗಿ ಕಳ್ಳಭಟ್ಟಿ ತಯಾರಿ-ಮಾರಾಟ ಇವುಗಳನ್ನು ನಿಯಂತ್ರಿಸುವ ಜವಾಬ್ದಾರಿ ಅನಾಯಾಸವಾಗಿ ಜನಜಾಗೃತಿ ವೇದಿಕೆಯ ಹೆಗಲಿಗೇರಿತು. ಮದ್ಯಪರ ಮತ್ತು ವಿರೋಧಿಗಳ ಬೀದಿ ಕಾಳಗ ತಾರಕಕ್ಕೇರಿದಾಗ ಹೆಗ್ಗಡೆಯವರು ಈ ರೀತಿಯ ಕಾಳಗ ನಮ್ಮ ಉದ್ದೇಶವಲ್ಲ ಎಂದು ಮದ್ಯ ಮಾರಾಟ ವಿರೋಧಿ ನಿಲುವಿನಿಂದ ಹಿಂದೆ ಸರಿದರು. ಬದಲಾಗಿ ಮನಪರಿವರ್ತನೆಯ ಮೌನಕ್ರಾಂತಿಗೆ ನಾಂದಿ ಹಾಡಿದರು. ಗ್ರಾಮ ಗ್ರಾಮಗಳಲ್ಲಿ ವ್ಯಸನದ ವಿರುದ್ಧ ಜಾಗೃತಿ ಉಂಟು ಮಾಡುವ ಸಂಸ್ಥೆಯಾಗಿ ಜನಜಾಗೃತಿ ವೇದಿಕೆ ಬೆಳೆಯಿತು.
ಮದ್ಯಮುಕ್ತರನ್ನು ನೋಡುವುದೇ ಒಂದು ಆನಂದ. ವ್ಯಸನಮುಕ್ತರಾಗುವ ಜೊತೆಗೆ ದುಶ್ಚಟಹೊಂದಿದ ಹತ್ತೋ, ಇಪ್ಪತ್ತೋ ಮಂದಿಯನ್ನು ಶಿಬಿರಕ್ಕೆ ಸೇರಿಸಬೇಕು. ಅವರನ್ನು ಪಾನಮುಕ್ತರನ್ನಾಗಿ ಮಾಡಿ ಅವರ ಸಂಸಾರದ ಕೃಪೆಗೆ ಪಾತ್ರರಾಗಬೇಕು.
|ಡಾ.ಡಿ.ವೀರೇಂದ್ರ ಹೆಗ್ಗಡೆ
ವ್ಯಸನವುಳ್ಳವರು ತಾವು ಅದನ್ನು ಬಿಟ್ಟು ಇನ್ನೊಬ್ಬರನ್ನೂ ವ್ಯಸನಮುಕ್ತರನ್ನಾಗಿಸಬೇಕು. ಅನೇಕ ಸಲ ನಾವು ಹೇಳುತ್ತೇವೆ-‘ಅವರು ಒಳ್ಳೆಯವರು, ಸ್ನೇಹಿತರಿಂದ ಹಾಳಾದರು’ ಎಂದು. ಆದರೆ ಕೆಟ್ಟವರನ್ನೂ ಒಳ್ಳೆಯವರನ್ನಾಗಿ ಪರಿವರ್ತಿಸಲು ಸ್ನೇಹಿತರಿಂದ ಸಾಧ್ಯವಾಗುತ್ತದೆ ಎನ್ನುವುದು ಜನಜಾಗೃತಿ ವೇದಿಕೆಯಿಂದ ಸಾಬೀತಾಗಿದೆ.
|ಹೇಮಾವತಿ ವೀ. ಹೆಗ್ಗಡೆ
ಜನಜಾಗೃತಿ ವೇದಿಕೆ ರಾಜ್ಯದ 30 ಜಿಲ್ಲೆಗಳಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಸಾರ್ಥಕ ಸೇವೆ ನೀಡುತ್ತಾ ಬಂದಿದೆ. ರಾಜ್ಯದಲ್ಲಿ 10,500 ಸ್ವಯಂಸೇವಕರು ಸಹಕಾರ ನೀಡುತ್ತಿದ್ದಾರೆ. ಈಗಾಗಲೆ 1644 ಶಿಬಿರಗಳ ಮೂಲಕ 1.25 ಲಕ್ಷ ಜನರಿಗೆ ಮದ್ಯಮುಕ್ತ ಸಮಾಜದಲ್ಲಿ ಬದುಕಲು ಅವಕಾಶ ಕಲ್ಪಿಸಲಾಗಿದೆ.
|ವಿವೇಕ್ ವಿನ್ಸೆಂಟ್ ಪಾಯಸ್ಪ್ರಾದೇಶಿಕ ನಿರ್ದೇಶಕರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ
ಸಮುದಾಯ ಮದ್ಯವರ್ಜನ ಶಿಬಿರ: ಮದ್ಯಪಾನದ ವಿರುದ್ಧ ಜಾಗೃತಿ ಜೊತೆಯಲ್ಲಿ ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬಗ್ಗೆಯೂ ಹೆಗ್ಗಡೆಯವರು ವೇದಿಕೆಯ ಮುಖಾಂತರ ಗಮನ ಹರಿಸಿದರು. ತಜ್ಞರ ಮುಖಾಂತರ ವ್ಯಸನಿಗಳಿಗೆ ಕೌನ್ಸಿಲಿಂಗ್ ಮಾಡಿ ಮನಪರಿವರ್ತನೆ ಮಾಡುವ ವಿನೂತನ ಕಾರ್ಯಕ್ರಮಕ್ಕೆ ವೇದಿಕೆ ಕೈಹಾಕಿತು.
ಧ್ಯಾನ, ಯೋಗ, ಭಜನೆ ಮುಂತಾದ ಪ್ರಕ್ರಿಯೆಗಳಿಂದ ಸ್ವಲ್ಪ ಕಾಲದಲ್ಲಿಯೇ ವ್ಯಸನಿಗಳ ಮನಸ್ಥಿತಿ ಬದಲಾಗುವುದನ್ನು ಕಾಣಬಹುದಾಗಿದೆ. ಗ್ರಾಮ ಗ್ರಾಮಗಳಲ್ಲಿ ಮದ್ಯವರ್ಜಿತರನ್ನು ಒಗ್ಗೂಡಿಸಿ, ಆಯೋಜಿಸಲಾಗುವ ನವಜೀವನ ಸಮಿತಿಗಳು ಸಮಾಜದಲ್ಲಿ ಹೊಸ ರೀತಿಯ ಪೀರ್ ಪ್ರೆಶರ್ (ಸಾಮಾಜಿಕ ಒತ್ತಡ)ತರುತ್ತದೆ.
2009ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಸರ್ಕಾರ ಸಾರಾಯಿ ಮಾರಾಟ ರದ್ದುಮಾಡಿತು. ಕೆಲವರ ಪ್ರಕಾರ ಸಾರಾಯಿ ರದ್ದತಿ ಮಾಡಿದ್ದರಿಂದ ಕುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಕೆಲವರ ಪ್ರಕಾರ-ಕುಡಿಯುವವರ ಸಂಖ್ಯೆ ಕಡಿಮೆಯಾಗಿಲ್ಲ ಆದರೆ ಅವರ ಖರ್ಚು ಹೆಚ್ಚಾಗಿದೆ. ಯಾಕೆಂದರೆ ಅವರು ಈಗ ದುಬಾರಿ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ (ಐಎಂಎಫ್​ಎಲ್)ನ್ನು ಕುಡಿಯುತ್ತಾರೆ. ಏನೇ ಇದ್ದರೂ ಜನಜಾಗೃತಿ ವೇದಿಕೆಯ ಮೌನಕ್ರಾಂತಿಗೆ ಸರ್ಕಾರದಿಂದ ಸಂದಾಯವಾದ ದೊಡ್ಡ ಮನ್ನಣೆ ಇದು.
ಜನಜಾಗೃತಿ ವೇದಿಕೆಯಿಂದ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ, ಮದ್ಯವರ್ಜನ ಶಿಬಿರಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಯುವಜನತೆಗೆ ದುಶ್ಚಟಗಳ ವಿರುದ್ಧ ಅರಿವು ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ- ಇವು ರಾಜ್ಯದಲ್ಲಿ ಜನಾಭಿಪ್ರಾಯ ಮೂಡಿಸಲು ಪ್ರಮುಖ ಪಾತ್ರ ವಹಿಸಿದೆ. ಧರ್ಮಸ್ಥಳದ ಬಳಿ ಜನಜಾಗೃತಿ ಮದ್ಯಮುಕ್ತ ಸಂಶೋಧನಾ ಕೇಂದ್ರ ಪ್ರಾರಂಭಿಸಲಾಗಿದೆ. ಮದ್ಯಪಾನ ಸಂಯಮ ಮಂಡಳಿಯು ಜನಜಾಗೃತಿ ವೇದಿಕೆಯೊಡನೆ ಕೈಜೋಡಿಸಿದೆ. ಇದಲ್ಲದೆ, ರಾಜ್ಯದ ಅನೇಕ ಮಠಾಧೀಶರು ಸಹ ಮದ್ಯವಿರೋಧಿ ಆಂದೋಲನ ನಡೆಸುತ್ತಿದ್ದಾರೆ.
ಕೌಟುಂಬಿಕ ಸಮ್ಮಿಲನ:ಪ್ರತಿವರ್ಷ ಸಾವಿರಗಟ್ಟಲೆ ಮದ್ಯವ್ಯಸನಿಗಳು ಮದ್ಯಮುಕ್ತರಾದ ನಂತರ ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಡುತ್ತಾರೆ. ಇಂಥದ್ದೊಂದು ನವಜೀವನ ಸಮಾವೇಶ ಕಾರ್ಯಕ್ರಮ ಧರ್ಮಸ್ಥಳದಲ್ಲಿ ಇದೇ ಫೆ. 15 ರಂದು ನಡೆಯಿತು. ಈ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಬಂದಿದ್ದರು. ಅವರು ಏಳು ವರ್ಷಗಳ ಕಾಲ ಕೇಂದ್ರ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವರಾಗಿದ್ದವರು. ಗೆಹ್ಲೋಟ್​ರು ಸಣ್ಣ ಪ್ರಾಯದಲ್ಲಿಯೇ ತಮ್ಮ ಗ್ರಾಮದಲ್ಲಿ ಮದ್ಯವಿರೋಧಿ ಹೋರಾಟ ಮಾಡಿದವರು. ಅವರೇ ಹೇಳುವಂತೆ ಇದರ ಪರಿಣಾಮ ಅವರ ಗ್ರಾಮದಲ್ಲಿ ಶೇ.90ರಷ್ಟು ಮದ್ಯಮುಕ್ತರಿದ್ದಾರೆ. ಇನ್ನು ಧರ್ಮಸ್ಥಳದಲ್ಲೂ ಶೇ.100 ರಷ್ಟು ಜನರು ಮದ್ಯಮುಕ್ತರೇ ಇದ್ದಾರೆ. ಧರ್ಮಸ್ಥಳದಲ್ಲಿ ಯಾರೂ ಮದ್ಯಪಾನ ಮಾಡುವುದಿಲ್ಲ, ಬೀಡಿ, ಸಿಗರೇಟ್ ಸೇದುವುದಿಲ್ಲ. ಹೀಗೆ ದುಶ್ಚಟಮುಕ್ತ ಗ್ರಾಮವನ್ನಾಗಿ ಹೆಗ್ಗಡೆಯವರು ಧರ್ಮಸ್ಥಳವನ್ನು ಪರಿವರ್ತಿಸಿದ್ದಾರೆ. ಜನಜಾಗೃತಿ ವೇದಿಕೆಯ ಪ್ರಯತ್ನದಿಂದ ರಾಜ್ಯದ ಇತರ ಗ್ರಾಮಗಳೂ ಮದ್ಯಮುಕ್ತವಾಗಲಿ, ಜನರ ಒತ್ತಾಸೆಯೊಂದಿಗೆ ಸರ್ಕಾರ ಕರ್ನಾಟಕವನ್ನು ಮದ್ಯಮುಕ್ತವೆಂದು ಘೊಷಿಸಲಿ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು)
ರಾಜಧಾನಿಯಲ್ಲಿ ಬಿಬಿಎಂಪಿ ಖಾತಾ ಆಂದೋಲನ, ಆಸ್ತಿವಂತರಿಗೆ ಸದವಕಾಶ: ಎಂದಿನಿಂದ, ಎಲ್ಲೆಲ್ಲಿ?; ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 1 =
Remember me
