ಸ್ವಾತಂತ್ರ್ಯಪ್ರಾಪ್ತಿಯ 75 ವರ್ಷಗಳಲ್ಲಿ ಭಾರತದ ಸಾಧನೆ ಜಗತ್ತಿನ ಗಮನ ಸೆಳೆಯುತ್ತಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಯುವಜನರು, ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಆರ್ಥಿಕತೆ, ಹೂಡಿಕೆಗೆ ಪೂರಕ ವಾತಾವರಣ, ಕೌಶಲಗಳನ್ನು ಹೊಂದಿದ ಮಾನವ ಸಂಪನ್ಮೂಲ, ಹೀಗೆ ಮುಂದಿನ 25 ವರ್ಷಗಳಲ್ಲಿ ವಿಕಾಸದ ಹೊಸ ಎತ್ತರವನ್ನು ತಲುಪಲು ಭಾರತದ ಬಳಿ ಅದ್ಭುತ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 2047ರ ಹೊತ್ತಿಗೆ ಅಂದರೆ ಭಾರತ ಸ್ವತಂತ್ರಗೊಂಡ ನೂರು ವರ್ಷಗಳ ಅಮೃತಕಾಲದ ಸಂದರ್ಭದಲ್ಲಿ ಏನೆಲ್ಲ ಸಾಧಿಸಬಹುದು ಎಂಬುದರ ಭವಿಷ್ಯತ್ ನೋಟ ದೇಶದ ಮುಂದಿಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಯಾವೆಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೊಸ ದಾರಿಗಳಿವೆ, ಆ ಹಾದಿಯಲ್ಲಿ ಕ್ರಮಿಸುವುದು ಹೇಗೆ ಎಂಬುದರ ಬಗ್ಗೆ ವಿಜಯವಾಣಿ ಬೆಳಕು ಚೆಲ್ಲುವುದರ ಮೂಲಕ ಹೊಸವರ್ಷವನ್ನು ಆಶಾವಾದದಿಂದ, ತಾಜಾ ಚಿಂತನೆಗಳೊಂದಿಗೆ ಬರಮಾಡಿಕೊಳ್ಳುತ್ತಿದೆ.
ಶಿಕ್ಷಣಕ್ಕೆ ತಂತ್ರಜ್ಞಾನದ ಪವರ್​
ಚಾಟ್ ಜಿಪಿಟಿ, ಬಾರ್ಡ್​ನಂಥ ತಂತ್ರಾಂಶಗಳನ್ನು ಮಾಡಿದ ಕೃತಕ ಬುದ್ಧಿಮತ್ತೆ (ಎಐ) ಜಗತ್ತನ್ನು ವೇಗವಾಗಿ ಆವರಿಸಿಕೊಳ್ಳುತ್ತಿದೆ. ಮಷಿನ್ ಲರ್ನಿಂಗ್, ಬ್ಲಾ್ಯಕ್ ಚೈನ್ ಹೀಗೆ. ಸೈಬರ್ ಸೆಕ್ಯುರಿಟಿ ಮುಂದುವರಿದ ಭಾಗವಾಗಿ ಕನ್ವರ್ಸೆಶನಲ್ ಎಕ್ಸ್​ಪೀರಿಯನ್ಸ್ ಡಿಸೈನ್, ಯೂಸರ್ ಬಿಹೇವಿಯರ್ ಸ್ಟಡಿ, ಯುಐ ಮತ್ತು ಯುಎಕ್ಸ್​ನಂಥ ತಂತ್ರಜ್ಞಾನಗಳು ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳಿಗೂ ಪಸರಿಸುತ್ತಿವೆ. ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಹಿಂದೆಲ್ಲ ಹೊಸ ತಂತ್ರಜ್ಞಾನಗಳು ಬಂದ ಸಮಯದಲ್ಲಿ ಅನುಷ್ಠಾನ ಮಾಡಲು ಹೆಚ್ಚಿನ ಅಧ್ಯಯನ ಮಾಡುತ್ತಿದ್ದರು. ಆದರೆ ಈಗ ಬರುತ್ತಿರುವ ತಂತ್ರಾಂಶಗಳು ಯೂಸರ್ ಬಿಹೇವಿಯರ್ ಸ್ಟಡಿಗಳಾಗಿವೆ. ತಂತ್ರಜ್ಞಾನದ ಅಳವಡಿಕೆಯಿಂದಾಗುವ ಪರಿಣಾಮಗಳು ಮತ್ತು ಪರಿಹಾರಗಳನ್ನು ಕೂಡ ನೀಡಲಿವೆ. ಹೀಗಾಗಿ, ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಕೋರ್ಸ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ರೊಬೊಟಿಕ್, ಆಟೋಮೇಷನ್​ನಿಂದ ಆರೋಗ್ಯ, ಕೃಷಿ ಸೇರಿ ಇತರ ಕ್ಷೇತ್ರಗಳಲ್ಲಿಯೂ ಬೇಡಿಕೆ ಸೃಷ್ಟಿಯಾಗುತ್ತಿದೆ.
ತಂತ್ರಜ್ಞಾನ ಪ್ರತಿ ಕ್ಷೇತ್ರದಲ್ಲಿ ಅಳವಡಿಕೆಯಾಗುತ್ತಿರು ವುದರಿಂದ ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ ಸೇರಿ ಸೇವೆಗಳನ್ನು ನೀಡುವ ಕ್ಷೇತ್ರಗಳಲ್ಲಿ ನವೋದ್ಯಮಗಳು ಅಸಂಖ್ಯಾತವಾಗಿ ಆರಂಭವಾಗುತ್ತಿವೆ. ಜನರ ಶ್ರಮವನ್ನು ಸುಲಭಗೊಳಿಸುವ, ಸುರಕ್ಷತೆ, ಭದ್ರತೆಯನ್ನು ಕಲ್ಪಿಸುವುದಕ್ಕಾಗಿ ಮತ್ತು ಈಗಾಗಲೇ ಇರುವ ತಂತ್ರಜ್ಞಾನಗಳ ಅಪ್​ಡೇಟ್ ವರ್ಷನ್​ಗಳ ಸಂಶೋಧನೆಗಾಗಿಯೂ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೊಬೈಲ್​ನಲ್ಲಿ ವಿವಿಧ ಆಪ್​ಗಳನ್ನು ಒತ್ತುವ ಮೂಲಕ ಹಣ ಕಳೆದುಕೊಳ್ಳುವ ಸೈಬರ್ ಅಪರಾಧಗಳ ಪತ್ತೆಗಾಗಿ, ರಿಯಲ್ ಎಸ್ಟೇಟ್​ನಲ್ಲಿ ಒಂದೇ ನಿವೇಶನ ಮತ್ತು ಫ್ಲ್ಯಾಟ್​ಗಳು ಒಂದಕ್ಕಿಂತ ಹೆಚ್ಚಿನ ಮಂದಿಗೆ ಮಾರಾಟವಾದ ಸಂದರ್ಭದಲ್ಲಿ ಪತ್ತೆ ಹಚ್ಚುವುದಕ್ಕಾಗಿ ಬ್ಲಾ್ಯಕ್ ಚೈನ್ ತಂತ್ರಜ್ಞಾನ ಬಳಕೆಗೆ ಬರಲಿದೆ. ಹೀಗೆ ಹತ್ತಾರು ಬಗೆಯ ಪ್ರೋಗ್ರಾಂಗಳು ಪ್ರತಿ ಕ್ಷಣ ಆವಿಷ್ಕಾರಗೊಳ್ಳುತ್ತಿವೆ. ತಂತ್ರಜ್ಞಾನ ಅಳವಡಿಕೆಯಲ್ಲಿ ಇಂದು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.
ಹಿಂದೆಲ್ಲ ಹೊಸ ತಂತ್ರಾಂಶ ಸಂಶೋಧಿಸಿದಾಗ ಹೆಚ್ಚಿನ ಮಾಹಿತಿಗೆ ಅಧ್ಯಯನ ನಡೆಸಬೇಕಿತ್ತು. ಆದರೆ, ಹೊಸ ತಂತ್ರಜ್ಞಾನಗಳು ಸಂಬಂಧಪಟ್ಟ ಕ್ಷೇತ್ರದ ಅಭಿವೃದ್ಧಿ, ತಂತ್ರಾಂಶ ಬಳಕೆಯಿಂದಾಗುವ ಲಾಭ, ನಷ್ಟಗಳು ಮತ್ತು ಮಾನವನ ದೇಹದ ಮೇಲಾಗುವ ಪರಿಣಾಮಗಳು ಮತ್ತು ಪರಿಹಾರಗಳನ್ನು ಕೂಡ ಸೂಚಿಸುತ್ತಿವೆ.
| ಡಾ. ಕೆ.ಎನ್. ಸುಬ್ರಹ್ಮಣ್ಯ ಆರ್.ವಿ. ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ
ಏಕರೂಪ ಶಿಕ್ಷಣ ನೀತಿ ಅಗತ್ಯದೇಶದಲ್ಲಿ ಒಂದೇ ರೀತಿಯ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವುದು ಅತ್ಯಗತ್ಯ. ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯ ಶಿಕ್ಷಣ ನೀತಿ ಇವುಗಳ ನಡುವಿನ ಗೊಂದಲದಿಂದ ಮಕ್ಕಳಿಗೆ ನಷ್ಟವಾಗುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಗುಣಮಟ್ಟದ ಶಿಕ್ಷಣವನ್ನೇ ಆದ್ಯತೆಯಾಗಿಸಿಕೊಂಡು, ಕೊರತೆಗಳನ್ನು ನಿವಾರಿಸಿಕೊಳ್ಳಲು ಸಂಬಂಧಪಟ್ಟ ವ್ಯವಸ್ಥೆ ಮುಂದಾಗಬೇಕು.
ಕೌಶಲ ಹೊಂದಿದವನೇ ಮಹಾಶೂರ
ಬಹು ಕೌಶಲ ಹೊಂದಿದವನೇ ಮಾರ್ಕೆಟ್​ನಲ್ಲಿ ಮಹಾಶೂರ ಎಂಬುದು ಈಗಿನ ಟ್ರೆಂಡ್. ಯಾವುದೋ ಒಂದು ಕ್ಷೇತ್ರದಲ್ಲಿ ಪರಿಣಿತರಾಗಿರುವ ಜತೆಗೆ ಪೂರಕ ಕೌಶಲಗಳನ್ನು ಕಲಿತುಕೊಳ್ಳುವ ಅನಿವಾರ್ಯತೆ ಇದೆ. ಹಾಗೆಯೇ, ಇಂಟರ್​ನೆಟ್ ಬಳಕೆ ಹೆಚ್ಚಾದಂತೆ ಜ್ಞಾನದ ಹರಿವು ವೇಗವಾಗಿ ಲಭ್ಯವಾಗುತ್ತಿದ್ದು, ಯಾರ ಹಂಗಿಲ್ಲದೆ ಕಲಿತುಕೊಳ್ಳುವ ಅವಕಾಶವಿದೆ. ಒತ್ತಡದ ಬದುಕಿನ ನಡುವೆ ಸಮಯ ಹೊಂದಿಸಿಕೊಂಡು ಕೌಶಲ ಕಲಿತುಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶಗಳು ಒದಗಿಬಂದಿವೆ. ಸರ್ಕಾರ ಹಾಗೂ ಸರ್ಕಾರೇತರ ಅಸಂಖ್ಯಾತ ವೆಬ್​ಸೈಟ್​ಗಳು ಕೌಶಲ ಕಲಿಕೆಗೆ ಅವಕಾಶ ಒದಗಿಸುತ್ತಿವೆ. ಯೂಟ್ಯೂಬ್ ಗುರುಗಳ ಸಂಖ್ಯೆಗೆ ಕಡಿಮೆ ಇಲ್ಲ. ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ರೂಪಿಸಿದ ವೆಬ್​ಸೈಟ್ (https://www.skillindiadigital.gov.in/courses) ಮೂಲಕ ಇಂದು ಲಕ್ಷಾಂತರ ಮಂದಿ ಕೋರ್ಸ್​ಗಳನ್ನು ಮಾಡಿಕೊಂಡು ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದಾರೆ.
ಈ ವೆಬ್​ಸೈಟ್ ಪ್ರತಿಯೊಬ್ಬ ನಾಗರಿಕರಿಗೆ ಉಚಿತ ಆನ್​ಲೈನ್ ಕೋರ್ಸ್ ಮೂಲಕ ತಾಂತ್ರಿಕ ಕೌಶಲಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೋರ್ಸ್​ಗಳು 14 ವರ್ಷದಿಂದ 80 ಪ್ಲಸ್​ವರೆಗಿನ ಪ್ರತಿಯೊಂದು ವಯೋಮಾನದ ವರ್ಗಕ್ಕೆ ಉಪಯುಕ್ತವಾಗಿವೆ. ಈ ವೇದಿಕೆ ಮೂಲಕ ತರಬೇತಿ ಪಡೆದವರಿಗೆ ಸ್ಕಿಲ್ ಇಂಡಿಯಾ ಪ್ರಮಾಣೀಕರಿಸುತ್ತದೆ. ಇದು ನಿರ್ದಿಷ್ಟ ವ್ಯಾಪಾರ ಅಥವಾ ಕೌಶಲದಲ್ಲಿ ಕೌಶಲ ಮತ್ತು ಜ್ಞಾನವನ್ನು ಮೌಲ್ಯೀಕರಿಸುವ ಸರ್ಕಾರಿಮಾನ್ಯತೆ ಪಡೆದ ಪ್ರಮಾಣೀಕರಣವಾಗಿದೆ. ಉದ್ಯೋಗ ಪಡೆಯಲು, ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. 18 ವಿಭಿನ್ನ ರೀತಿಯ ಅವಕಾಶಗಳು ಇಲ್ಲಿವೆ. ಆಸಕ್ತಿ ಇರುವ ವಿಷಯದಲ್ಲಿ ತರಬೇತಿ ಪಡೆದುಕೊಳ್ಳಬಹುದು. ವಿಶೇಷ ಎಂದರೆ ಮುಂದೊಂದು ದಿನ ಇದೊಂದು ರೀತಿ ಕಡ್ಡಾಯವಾದರೂ ಅಚ್ಚರಿ ಪಡಬೇಕಿಲ್ಲ. ಅಂದರೆ, ಯಾವುದೇ ಶಿಕ್ಷಣ ಪಡೆದುಕೊಂಡರೂ ಕೌಶಲ ಸಂಬಂಧಿತ ಸರ್ಟಿಫಿಕೇಟ್ ಕೋರ್ಸ್ ಪಡೆದುಕೊಂಡಿರಬೇಕೆಂಬ ನಿಯಮ ಬರಬಹುದು. ಕೌಶಲ ಕಲಿಕೆಯಿಂದ ನೈಪುಣ್ಯ ಹೆಚ್ಚುತ್ತದೆ, ಇದು ವ್ಯಕ್ತಿಯನ್ನು ಆ ಕ್ಷೇತ್ರದಲ್ಲಿ ಬಲಗೊಳಿಸುತ್ತದೆ. ಹೀಗಾಗಿ ವಯಸ್ಸು ಯಾವುದೇ ಇರಲಿ ಕೌಶಲವಂತರಾಗುವುದು ಉತ್ತಮ. ಶಾಲೆ-ಕಾಲೇಜಿನಲ್ಲಿ ಕಲಿಕೆ ಒಂದು ಹಂತದವರೆಗೆ ಇರುತ್ತದೆ ಅಥವಾ ಅದು ಆಯಾ ಕ್ಷೇತ್ರದಲ್ಲಿ ಉಪಯೋಗಕ್ಕೆ ಬಾರದೇ ಇರಬಹುದು. ಹೀಗಾಗಿ ಸಾಂಪ್ರದಾಯಿಕ ಶಿಕ್ಷಣದ ಹೊರತಾಗಿ ಕೌಶಲ ಕಲಿಕೆ ಅನಿವಾರ್ಯ. ಈ ರೀತಿ ಕಲಿತುಕೊಂಡಾಗ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ, ಆದ್ಯತೆ ಸಿಗುತ್ತದೆ ಅಥವಾ ಸ್ವಂತ ಉದ್ಯೋಗಕ್ಕೂ ಲಾಭಕರ. ರಾಜ್ಯದಲ್ಲಿ ಸ್ಕಿಲ್ ಡೆವಲಪ್​ವೆುಂಟ್ ಕಾರ್ಪೆರೇಷನ್ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ವಿವಿಧ ಯೋಜನೆಗಳನ್ನು ಹೊಂದಿದೆ. ಇಲ್ಲಿ ಹೆಸರು ನೋಂದಾಯಿಸಿದವರಿಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತದೆ. ಆಸಕ್ತರು ಇದರ ಲಾಭವನ್ನೂ ಪಡೆದುಕೊಳ್ಳಬಹುದು.
ಭಾರತದಲ್ಲಿ ಮಾರುಕಟ್ಟೆ ಅಥವಾ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ ಶೈಕ್ಷಣಿಕವಾಗಿ ಕಲಿಸಲಾಗುತ್ತಿಲ್ಲ. ಹೀಗಾಗಿ ಉದ್ಯೋಗಿಯಾಗಲು ಅಥವಾ ಹೆಚ್ಚಿನ ಅರಿವಿಗಾಗಿ ಅಗತ್ಯವಾದ ಸ್ಕಿಲ್ ಪ್ರತ್ಯೇಕವಾಗಿ ಕಲಿತುಕೊಳ್ಳಬೇಕಾಗುತ್ತದೆ. ಇದರಿಂದ ಅವರ ಅರಿವಿನ ಮಟ್ಟ ಹೆಚ್ಚಾಗಿ, ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ.
| ಡಾ.ಮುರಳೀಧರ್ ಬಿ.ಎಲ್. ಹಿರಿಯ ಪ್ರಾಧ್ಯಾಪಕ, ಗಣಕಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ
ವೈದ್ಯಕೀಯ ಕ್ಷೇತ್ರದಿಂದ ಆರೋಗ್ಯ ಭಾಗ್ಯ
ತಂತ್ರಜ್ಞಾನ ಬಳಕೆಯಾದಂತೆಲ್ಲ ವೈದ್ಯಕೀಯ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು, ಭವಿಷ್ಯದಲ್ಲಿ ಮನೆಬಾಗಿಲಿಗೇ ಆರೋಗ್ಯ ಸೇವೆ ದೊರೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಕೋರ್ಸ್​ಗಳು ಪರಿಚಯವಾಗಲಿದ್ದು, ಉದ್ಯೋಗ ಹಾಗೂ ಉದ್ಯಮ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶ ದೊರೆಯಲಿವೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕಮ್ಯುನಿಟಿ ಮೆಡಿಸಿನ್​ನ ಅವಶ್ಯಕತೆ ಇದೆ. ಮೊದಲಿಗೆ ಕಾಯಿಲೆ ಬರದಂತೆ ಜನರ ಆರೋಗ್ಯ ಕಾಪಾಡುವ ಕೆಲಸ ಆಗಬೇಕು, ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಹಾಗೂ ಕಾಯಿಲೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಬೇಗ ಗುಣಪಡಿಸುವಂತಾಗಬೇಕು. ಇದಕ್ಕಾಗಿ ಭವಿಷ್ಯದಲ್ಲಿ ಇನ್ನೂ ಹೊಸ ಆವಿಷ್ಕಾರ, ಬದಲಾವಣೆ ತರುವ ನಿಟ್ಟಿನಲ್ಲಿ ವಿಜ್ಞಾನ, ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರಗಳು ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ.
ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸ್ತುತ ಆಗುತ್ತಿರುವ ಬದಲಾವಣೆ ಹಾಗೂ ಆವಿಷ್ಕಾರಗಳನ್ನು ಗಮನಿಸಿದರೆ, ಭವಿಷ್ಯದಲ್ಲಿ ಕಾಯಿಲೆಗಳ ಜತೆಗೆ ಆಸ್ಪತ್ರೆಗಳ ಸಂಖ್ಯೆಯೂ ಕಡಿಮೆಯಾಗಲಿದ್ದು, ಮನೆಯಲ್ಲೇ ವೈದ್ಯಕೀಯ ಸೇವೆ ದೊರೆಯುವಂತಾಗಲಿದೆ. ಇದಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರಗಳು ಜೊತೆಗೆ ಸಾಗಬೇಕಿದೆ.
| ಡಾ. ವಿಶಾಲ್ ರಾವ್ ಕ್ಯಾನ್ಸರ್ ರೋಗ ತಜ್ಞ
ಸುಧಾರಣೆಗಳು ಅಗತ್ಯ‘ಒಂದು ದೇಶ, ಒಂದು ಕಾನೂನು’, ‘ಒಂದು ದೇಶ ಒಂದು ಚುನಾವಣೆ’ಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ‘ಒಂದು ದೇಶ, ಒಂದು ಆರೋಗ್ಯವಿಮೆ’ ಬಗ್ಗೆ ಚಿಂತನೆ ಮಾಡಲು ಇದು ಸಕಾಲ. ಪ್ರಸಕ್ತ, ರಾಜ್ಯ ಸರ್ಕಾರಗಳ ಮತ್ತು ಕೇಂದ್ರದ ಪ್ರತ್ಯೇಕ ಆರೋಗ್ಯ ವಿಮೆ ಯೋಜನೆಗಳು ಚಾಲ್ತಿಯಲ್ಲಿವೆ. ಇದರಿಂದ, ಫಲಾನುಭವಿಗಳಿಗೆ ಗೊಂದಲವಾಗುತ್ತಿದ್ದು, ಸರಿಯಾದ ಸೌಲಭ್ಯದಿಂದಲೂ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಕೇಂದ್ರವೇ ಎಲ್ಲ ಕುಟುಂಬಗಳಿಗೆ ಒಂದೇ ಮಾದರಿಯ ಆರೋಗ್ಯ ವಿಮೆಯನ್ನು (ಅವಶ್ಯವಿದ್ದಲ್ಲಿ ಪ್ರಿಮಿಯಂ ಶುಲ್ಕ ಭರಿಸಿಕೊಂಡು) ಒದಗಿಸುವುದು ಹೆಚ್ಚು ಸೂಕ್ತ.
ಡ್ರೋನ್ ಬಳಕೆವೈದ್ಯಕೀಯ ಕ್ಷೇತ್ರದಲ್ಲಿ ಡ್ರೋನ್ ಬಳಕೆ ಮಹತ್ವದ ಪಾತ್ರ ವಹಿಸಲಿದೆ. ಗುಡ್ಡಗಾಡು ಪ್ರದೇಶಗಳು, ಕುಗ್ರಾಮಗಳಲ್ಲಿ ವಾಸಿಸುವವರಿಗೆ ಅಗತ್ಯ ವೈದ್ಯಕೀಯ ಸೇವೆ ನೀಡಲು ಇದು ಉತ್ತಮ ರೀತಿಯಲ್ಲಿ ಬಳಕೆಯಾಗಲಿದೆ.
ಸಂಶೋಧನೆಗಳು ನಡೆಯಲಿಕರೊನಾ ಸಂಕಷ್ಟದ ಹೊತ್ತಲ್ಲಿ ಭಾರತವೇ ಲಸಿಕೆ ಕಂಡುಹಿಡಿದ ಪರಿಣಾಮ, ಕೋವಿಡ್ ಶೀಘ್ರ ಹತೋಟಿಗೆ ತರಲು ಸಾಧ್ಯವಾಯಿತು. ಇದೇ ರೀತಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚಬೇಕಿದೆ. ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಲ್ಲ; ಸೂಕ್ತ ಚಿಕಿತ್ಸೆ ಮೂಲಕ ಕಾಯಿಲೆ ಗುಣಪಡಿಸಲು ಸಾಧ್ಯ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ. ಇದು ಇಷ್ಟಕ್ಕೆ ಸೀಮಿತಗೊಳ್ಳದೆ, ಇತರ ಗಂಭೀರ ಕಾಯಿಲೆಗಳ ವಿಷಯದಲ್ಲೂ ಸೂಕ್ತ ಸಂಶೋಧನೆ ನಡೆದು, ಚಿಕಿತ್ಸಾಕ್ರಮ ಸರಳ ಹಾಗೂ ಅಗ್ಗಗೊಳ್ಳಬೇಕು.
ಎಲ್ಲೆಲ್ಲೂ ಎಐ
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಭಾಷಿಣಿ’ ತಂತ್ರಜ್ಞಾನ ಬಳಸಿ ಮಾತನಾಡಿದ್ದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಸಾಧ್ಯತೆ ಬಗ್ಗೆ ಅತ್ಯುತ್ತಮ ಉದಾಹರಣೆ. ಅಂದು ಅವರು ಹಿಂದಿಯಲ್ಲಿ ಮಾತನಾಡಿದ್ದು ತಮಿಳಿನಲ್ಲಿ ಕೇಳಿಸುತ್ತಿತ್ತು. ಹೀಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ರಿಯಲ್​ಟೈಮ್ಲ್ಲಿ ಸಂವಹನ ಸಾಧ್ಯವಾಗಿಸಿದ್ದು ಎಐ. ಸರ್ಕಾರವೇ ಅಭಿವೃದ್ಧಿಪಡಿಸಿರುವ ಈ ಭಾಷಿಣಿ ಸದ್ಯ ಹಿಂದಿ-ತಮಿಳಿನಲ್ಲಿ ಸಂವಹನ ನಡೆಸಲಷ್ಟೇ ಅನುಕೂಲವಾಗಿದ್ದರೂ ಮುಂದೆ ಎಲ್ಲ ಭಾಷೆಯಲ್ಲೂ ಇದು ಸಾಧ್ಯವಾಗಲಿದೆ. ಕನ್ನಡದಲ್ಲೂ ಇದು ಬೇಗ ಆಗಬೇಕೆಂದರೆ ಕನ್ನಡಿಗರೂ ಜಠಿಠಿಟಠ://ಚಿಜಚಠಜಜ್ಞಿಜಿ.ಜಟಡ.ಜ್ಞಿ/ ಮೂಲಕ ತಮ್ಮ ಕೊಡುಗೆ ನೀಡಬೇಕಾಗುತ್ತದೆ. ಎಐನ ಈ ಸೌಲಭ್ಯದಿಂದ ಮುಂದೆ ಯಾವ ಭಾಷೆಯವರ ಜೊತೆಗೂ ಕನ್ನಡದಲ್ಲೇ ಸಂವಹನ ನಡೆಸಬಹುದು.
ಎಐನಿಂದ ಭಾಷೆಗಷ್ಟೇ ಅಲ್ಲ, ರೈತರಿಗೂ ಉಪಯೋಗವಿದೆ. ರೈತರಿಗೆ ಹವಾಮಾನದ ಕುರಿತ ಸಮರ್ಪಕ ಮಾಹಿತಿ ಸಿಗದಿರುವುದೇ ಎಷ್ಟೋ ಸಮಸ್ಯೆಗಳಿಗೆ ಕಾರಣ. ಆದರೆ ಈಗ ಎಐನಿಂದಾಗಿ ನಿಖರ ಮುನ್ಸೂಚನೆ ಸಿಗುತ್ತಿದೆ. ಹೈನುಗಾರಿಕೆಯಲ್ಲಿ ಭಾರತ ಬೇರೆಲ್ಲ ದೇಶಗಳಿಗಿಂತ ಹಿಂದಿದೆ. ಹಸುವಿನ ಸಂಖ್ಯೆಗಳು ಕಡಿಮೆ ಇರುವುದಷ್ಟೇ ಅಲ್ಲ, ಒಂದು ಹಸುವಿನ ವಾರ್ಷಿಕ ಸರಾಸರಿ ಹಾಲಿನ ಪ್ರಮಾಣ ಶೇಕಡ 50 ಕಡಿಮೆ ಇದೆ. ಇದಕ್ಕೆ ಇಂಟರ್ ಬ್ರೀಡಿಂಗ್, ಮ್ಯಾಚ್​ವೆುೕಕಿಂಗ್, ರೋಗ ಗುರುತಿಸುವಿಕೆಯಲ್ಲಿನ ಸಮಸ್ಯೆ ಇತ್ಯಾದಿಗಳೇ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಎಐ ಬಳಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೋಳಿಗಳಿಗೆ ಬರುವ ಕಾಯಿಲೆಗಳನ್ನು ಕೂಡ ಎಐ ಮೂಲಕ 3 ತಿಂಗಳ ಮುನ್ನವೇ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಈ ಎಲ್ಲದರ ನಿಟ್ಟಿನಲ್ಲಿ ಎಐ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ.
ಅಪಾರ ಉದ್ಯೋಗಾವಕಾಶಎಐ ಕ್ಷೇತ್ರದಲ್ಲೇ ದೇಶದಲ್ಲಿ 4.5 ಕೋಟಿ ಉದ್ಯೋಗಾವಕಾಶಗಳು ಇವೆ. ಅವುಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜನರು ಅಪ್​ಡೇಟ್ ಆಗಬೇಕಷ್ಟೇ. ಎಐ ಕಲಿಯಬೇಕು ಎನ್ನುವವರಿಗೆ ಸರ್ಕಾರದ ವೆಬ್​ಸೈಟ್​ನಲ್ಲೇ ಎಲ್ಲ ಮಾಹಿತಿಗಳಿವೆ, ಕೆಲವು ಉಚಿತ ಕೋರ್ಸ್​ಗಳೂ ಇವೆ. ಡಿಡಿಡಿ.ಜ್ಞಿಛಜಿಚ.ಜಟಡ.ಜ್ಞಿ, ಸ್ವಯಂ ಪೋರ್ಟಲ್, ಫ್ಯೂಚರ್ ಸ್ಕಿಲ್ಸ್ ಪ್ರೖೆಮ್ ಆಪ್​ನಲ್ಲಿ ಮಾಹಿತಿಗಳಿವೆ. ಆಸಕ್ತರು ಯಾವುದೇ ಪದವಿ ಇರದಿದ್ದರೂ ಈ ಸ್ಕಿಲ್ಸ್ ಕಲಿಯಬಹುದು. ಒಂದು ತಂತ್ರಜ್ಞಾನವಾಗಿ ಎಐ ಕಲಿಯಲು ಒಂದಷ್ಟು ತಾಂತ್ರಿಕ ನೈಪುಣ್ಯ ಅಗತ್ಯ. ಅವೆಲ್ಲ ಸಾಧ್ಯವಿಲ್ಲ ಎನ್ನುವವರು ಅದನ್ನೊಂದು ಟೂಲ್ ಆಗಿ ಕಲಿಯಬಹುದು, ಆಗ ಯಾವುದೇ ಕ್ಷೇತ್ರದಲ್ಲಿ ಅನಾಲಿಟಿಕಲ್ ಎಕ್ಸ್​ಪರ್ಟ್ ಕೆಲಸ ಸಿಗುತ್ತದೆ. ಒಟ್ಟಿನಲ್ಲಿ ಜೀವನಕ್ಕೆ ಬೇಕಾದಷ್ಟು ಎಐ ಎಂಥವರೂ ಕಲಿಯಬಹುದು.
ಮನುಷ್ಯರೇ ಸೃಷ್ಟಿಸಿರುವ ಎಐ ಮನುಷ್ಯರು ಹೇಳಿಕೊಟ್ಟಿದ್ದಷ್ಟನ್ನೇ ಮಾಡಲು ಸಾಧ್ಯ. ಅಪಾಯ ಇರುವುದು ಎಐಯಿಂದಲ್ಲ, ಅದನ್ನು ದುರ್ಬಳಕೆ ಮಾಡಿಕೊಳ್ಳುವವರಿಂದ ಮಾತ್ರ. ಎಐಯಿಂದ ಕೆಲಸಕ್ಕೆ ಕುತ್ತಿಲ್ಲ. ಎಐ ಕಲಿತವನಿಂದ ಎಐ ಕಲಿಯದಿರುವವನ ಕೆಲಸಕ್ಕೆ ಮಾತ್ರ ಕುತ್ತು. ಅಸಲಿಗೆ ಎಐ ಕೆಲಸವನ್ನು ಸರಾಗ ಹಾಗೂ ಸುಲಭಗೊಳಿಸುತ್ತದೆ. ಅದನ್ನು ಟೂಲ್ ಆಗಿ ಕಲಿತರೆ ಅಪಾರ ಉದ್ಯೋಗಾವಕಾಶಗಳಿವೆ.
| ಡಾ.ಉದಯ ಶಂಕರ ಪುರಾಣಿಕ ನಿರ್ದೇಶಕ, ಎಐ ಮತ್ತು ಸೈಬರ್ ಸುರಕ್ಷತೆ, ಎಂಜಿಐ, ಅಮೆರಿಕ
717 ಡಿಡಿ ಕೇಸ್ ದಾಖಲು; ಸಂಚಾರ ಪೊಲೀಸರಿಂದ ಶಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
