| ಡಾ. ವಿ.ವಿ. ಹಿರೇಮಠ
ಕನ್ನಡ ನಾಡು-ನುಡಿ, ಧರ್ಮ, ಕಲೆ, ಸಂಗೀತ ಸಾಧನೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದವರು ಪಂಡಿತ್ ಪುಟ್ಟರಾಜ ಕವಿಗವಾಯಿ. ಗದಗ ವೀರೇಶ್ವರ ಪುಣ್ಯಾಶ್ರಮದ ಕುಲಪತಿಯಾಗಿ, ಅಂಧರ ಬಾಳಿನ ಕಣ್ಣುಗಳಾಗಿ, ಕನ್ನಡ, ಸಂಸ್ಕೃತಿ, ಹಿಂದಿ ಭಾಷೆಗಳಲ್ಲಿ ಕವಿವರ್ಯರೂ ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತಗಳ ಆಚಾರ್ಯ ಪುರುಷರು, ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಶಿಷ್ಯರೂ ಆಗಿರುವ ಪದ್ಮಭೂಷಣ ಪುರಸ್ಕೃತರಾದ ಪುಟ್ಟರಾಜರ ಸಾಧನೆ ಅಗಣಿತ. ತಾವೇ ರಚಿಸಿದ ಹಿಂದಿ ಬಸವ ಪುರಾಣದಲ್ಲಿ ‘ಮೈ ಛೋಟೋ ಮೆ ಛೋಟಾ ಹೂಂ’ ಎಂದು ವಿನಯಶೀಲತೆಯಿಂದ ತಮ್ಮನ್ನು ತಾವು ಕರೆದುಕೊಂಡಿದ್ದರು. ಅವರ ಹೆಸರು ಪುಟ್ಟರಾಜರಾದರೂ ಅಂಧ ಅನಾಥರು, ದೀನ ದಲಿತರ ಬಹುದೊಡ್ಡ ರಾಜರಾಗಿದ್ದರು. ಅಂಧ ಅನಾಥರಿಂದ ತುಂಬಿದ ಪುಣ್ಯಾಶ್ರಮವೇ ಇವರಿಗೆ ಅರಮನೆಯಾಗಿತ್ತು. ಸಂಗೀತ ವಾದ್ಯಗಳೇ ಇವರ ಕತ್ತಿ ಕಠಾರಿಗಳು, ಅಂಧ ಶಿಷ್ಯರೇ ಸೈನಿಕರು, ಜಗದ ಜನರ ಹೃದಯ ಸಾಮ್ರಾಜ್ಯವನ್ನು ಧರ್ಮ, ಸಂಗೀತ, ಸಾಹಿತ್ಯ ಸಮಾಜ ಸೇವೆಯಿಂದ ಗೆದ್ದು ಸಾಮ್ರಾಟರಾಗಿದ್ದರು ಪುಟ್ಟರಾಜರು.
ಪರಶಿವನ ಅವತಾರಿಯಾಗಿ ಲೋಕ ಉದ್ಧ್ದಸಲು ಬಂದ ಧರೆಯ ದೇವರು, ಜ್ಞಾನವೇ ಮೂರ್ತಿವೆತ್ತಂತೆ ಧರೆಗಿಳಿದ ‘ಜ್ಞಾನ ದೇಗುಲ’ ಇವರು. ಈ ದೇಗುಲದಲ್ಲಿ ಬಡವ- ಬಲ್ಲಿದ, ಮೇಲು- ಕೀಳು ಇತ್ಯಾದಿ ತಾರತಮ್ಯವಿರಲಿಲ್ಲ. ಎಲ್ಲರಿಗೂ ಮುಕ್ತ ಪ್ರವೇಶ, ಕರುಣಾಮಯಿ ವಿಶ್ವಮಾನವ ರಸಋಷಿ, ದೇವಮಾನವ ಮಹಿಮಾ ಪುರುಷರು. ಕಾರಣೀಕ ಯುಗ ಪುರುಷ ಎಂದು ನಾಡಿಗೆ ಗೊತ್ತಿದೆ. ಸಂಗೀತ, ಸಾಹಿತ್ಯ, ಶೈಕ್ಷಣಿಕ, ಧರ್ಮ, ಸಾಮಾಜಿಕ ರಂಗದಲ್ಲಿ ಜಗದ್ಗುರುವಾಗಿ ಅಮರರಾಗಿರುವ ಮಹಾ ಮಾನವತಾವಾದಿಯೇ ಗುರುಪುಟ್ಟರಾಜರು.
ಪುಟ್ಟರಾಜ ಗವಾಯಿಗಳವರು ಕ್ರಿ.ಶ. 1914 ಮಾ. 3ರಂದು ಈಗಿನ ಹಾವೇರಿ ತಾಲೂಕಿನ ಕರ್ಜಗಿಯ ಹತ್ತಿರದ ‘ದೇವಗಿರಿ’ಯಲ್ಲಿ ಜನಿಸಿದರು. ಇವರ ತಂದೆಯ ಊರು ಹಾನಗಲ್ಲ ತಾಲೂಕಿನ ದೇವರ ಹೊಸಪೇಟೆ ಎಂಬ ಹಳ್ಳಿ. ಮಗುವಿಗೆ ಪುಟ್ಟಯ್ಯನೆಂದು ನಾಮಕರಣ ಮಾಡಿದರು. ಹುಟ್ಟಿದ ಆರು ತಿಂಗಳಿಗೆ ಕಣ್ಣು ಬೇನೆ ಬಂದು ಕಣ್ಣಲ್ಲಿ ಪೊರೆಬೆಳೆದವು. ಹಳ್ಳಿಯ ನಾಟಿ ವೈದ್ಯರ ಸಲಹೆಯಂತೆ ಕಣ್ಣಿನ ತೋನಸಿ ಔಷಧವನ್ನು ಬಳಸಿದರು. ಆ ತೋನಸಿ ಪೊರೆ ಹರಿಯುವ ಬದಲು ಇವರ ಕಣ್ಣುಗುಡ್ಡೆಯನ್ನೇ ಕಳೆದವು. ಕೂಸು ಕುರುಡಾಗಿ ದೃಷ್ಟಿ ಬರಡಾಯಿತು. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಾಗ ಸೋದರ ಮಾವ ಚಂದ್ರಶೇಖರಯ್ಯನವರೇ ಈ ಅನಾಥ ಮಗುವಿನ ಪೋಷಣೆಯ ಭಾರ ಹೊತ್ತುಕೊಂಡರು. ಪಂಡಿತ ಪಂಚಾಕ್ಷರ ಗವಾಯಿಗಳ ಶಿಷ್ಯರಾಗಿದ್ದ ಚಂದ್ರಶೇಖರಯ್ಯನವರು ಸಂಗೀತ ಮತ್ತು ಸಾಹಿತ್ಯದಲ್ಲಿ ಪುಟ್ಟರಾಜರಿಗೆ ಮೊದಲ ಗುರುವಾದರು. ತಮ್ಮಲ್ಲಿದ್ದ ಎಲ್ಲ ವಿದ್ಯೆಯನ್ನು ಪುಟ್ಟರಾಜರಿಗೆ ಧಾರೆ ಎರೆದರು. 8ನೇ ವಯಸ್ಸಿಗೆ ಪುಟ್ಟರಾಜರು ಸಂಗೀತ ಮತ್ತು ಸಾಹಿತ್ಯ ಕುರಿತು ವಚನ, ಚೀಜ್, ತತ್ವಪದಗಳನ್ನು ಸರಳವಾಗಿ ಬಾರಿಸುತ್ತಾ ಹಾಡುವುದಕ್ಕೆ ಸಮರ್ಥರಾದರು.
ಅಂಧ ಗುರುವಿಗೆ ಅಂಧ ಶಿಷ್ಯ:ಪುಟ್ಟರಾಜರಿಗೆ ಎಂಟು ವರ್ಷವಿದ್ದಾಗ ಚಂದ್ರಶೇಖರಯ್ಯನವರು ಅವರನ್ನು ಶ್ರೇಷ್ಠ ಸಂಗೀತಗಾರ ರನ್ನಾಗಿ ಮಾಡಬೇಕೆಂದು ಸಂಕಲ್ಪಿಸಿದರು. ಪುಟ್ಟರಾಜರಿಗೆ ಸಮರ್ಥ ಗುರುವಿನ ಹುಡುಕಾಟದಲ್ಲಿದ್ದಾಗ, ಪಂಚಾಕ್ಷರಿ ಗವಾಯಿಗಳು ಸೂಕ್ತ ಎಂದು ನಿರ್ಧರಿಸಿ ಅವರಿದ್ದ ನವಲಗುಂದ ಕ್ಯಾಂಪ್​ಗೆ ಕರೆತಂದರು. ಗುರು ಕೇಳಿದ ಪ್ರಶ್ನೆಗಳಿಗೆ ಪುಟ್ಟರಾಜರು ದಿಟ್ಟತನದಿಂದಲೇ ಉತ್ತರ ಕೊಟ್ಟರು. ಹುಡುಕುವ ಬಳ್ಳಿ ಕಾಲ್ತೊಡಕಿದಂತಾಯಿತು. ನನ್ನ ಹೆಸರು ಬೆಳಗುವ ಕಂದನನ್ನು(ಶಿಷ್ಯ) ಗುರು ಕುಮಾರೇಶ್ವರನೇ ಕಳಿಸಿಕೊಟ್ಟಿರುವನು ಎಂದು ಆನಂದ ಭಾಷ್ಪ ಸುರಿಸಿದರು.
ಗುರುವಿಗೆ ತಕ್ಕ ಶಿಷ್ಯ:ಪುಟ್ಟರಾಜರ ಆಗಾಧ ಜ್ಞಾನಕ್ಕೆ ಮಾರು ಹೋಗಿ ಅವರಿಗೆ ಕನ್ನಡ, ಸಂಸ್ಕೃತ, ಹಿಂದಿ, ಸಾಹಿತ್ಯವನ್ನು ಕಲಿಸುವ ಏರ್ಪಾಡು ಮಾಡಿದರು. ಬೆರಳು ಕೊಟ್ಟರೆ ಹಸ್ತ ನುಂಗುವ ಪುಟ್ಟರಾಜರು, ಹಿಂದಿ, ಸಂಸ್ಕೃತ ಮತ್ತು ಕನ್ನಡದಲ್ಲಿ ಪಂಡಿತರಾಗಿ ನಂತರ ತಾವೇ ಉಳಿದ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ತೊಡಗಿದರು. ಉಭಯ ಗಾನ ವಿಶಾರದರಾದ ಪಂ. ಪಂಚಾಕ್ಷರ ಗವಾಯಿಗಳು ತಮ್ಮ ಸಂಗೀತ ವಿದ್ಯೆಯೆಲ್ಲವನ್ನೂ ಶಿಷ್ಯನಿಗೆ ಧಾರೆ ಎರೆದರು. ಪುಟ್ಟರಾಜರು ಉಭಯಗಾಯನ ವಿಶಾರದ ಮಾತ್ರ ವಲ್ಲದೆ ಹಾಮೋನಿಯಂ, ತಬಲಾ, ವಯೋಲಿನ್, ಸಾರಂಗಿ ಮುಂತಾದ ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸಬಲ್ಲ ಸಾಮರ್ಥ್ಯ ಹೊಂದಿದ್ದರು. ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ಒಲಿಸಿಕೊಂಡು ಪಂಡಿತ ಪುಟ್ಟರಾಜರಾಗಿ ಗುರುವಿಗೆ ತಕ್ಕ ಶಿಷ್ಯರಾಗಿ ಮೆರೆದರು.
(ಲೇಖಕಿ ಗದಗದ ಅಶ್ವಿನಿ ಪ್ರಕಾಶನದ ಅಧ್ಯಕ್ಷರು)
ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
