ಬೆಂಗಳೂರು:ಭವಿಷ್ಯದ ರಾಜಕೀಯ ದೃಷ್ಟಿಯಿಂದ ಒಕ್ಕಲಿಗ ಬಾಹುಳ್ಯ ಪ್ರದೇಶದಲ್ಲಿ ಜೆಡಿಎಸ್ ಹಿಡಿತ ತಪ್ಪಿಸಲು ರಾಜರಾಜೇಶ್ವರಿನಗರ ಉಪಚುನಾವಣೆಯನ್ನೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲು ಮೆಟ್ಟಿಲು ಮಾಡಿಕೊಂಡಿದ್ದಾರೆ. ರಾಜರಾಜೇಶ್ವರಿನಗರ ಒಕ್ಕಲಿಗರ ಪ್ರಾಬಲ್ಯ ಇರುವ ವಿಧಾನಸಭಾ ಕ್ಷೇತ್ರ. ಅವರೇ ನಿರ್ಣಾಯಕ. ಇಲ್ಲಿಂದಲೇ ಭವಿಷ್ಯದ ಲೆಕ್ಕಾಚಾರ ಗಮನದಲ್ಲಿಟ್ಟುಕೊಂಡು ದಾಳ ಉರುಳಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಪೈಪೋಟಿ ಹೆಚ್ಚಾಗುವ ಸಾಧ್ಯತೆ ಇದೆ.
ಶಿವಕುಮಾರ್ ಅಧ್ಯಕ್ಷರಾದಾಗಿನಿಂದಲೇ ಅವರ ಮುಂದಿನ ಗಮನ ಏನೆಂಬುದನ್ನು ಊಹಿಸಿದ ಜೆಡಿಎಸ್, ಡಿಕೆಶಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ತಮ್ಮ ಶಾಸಕರ ವಿಶ್ವಾಸ ಬೆಳೆಸುವಲ್ಲಿ ಡಿಕೆಶಿ ನಿರತರಾಗಿದ್ದಾರೆಂಬ ಸುಳಿವರಿತ ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಸಖ್ಯಕ್ಕೆ ಹೊರಳಿದರು. ಸಿಎಂ ಮನವೊಲಿಸಿ ಒಂದಷ್ಟು ಅನುದಾನ ಬಿಡುಗಡೆ ಮಾಡಿಸಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಅವರದಾಗಿತ್ತು. ಆ ಕಾರ್ಯದಲ್ಲಿ ತಕ್ಕಮಟ್ಟಿನ ಯಶಸ್ಸನ್ನೂ ಸಾಧಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ತಾವು ಮಾಡಿದ ತಂತ್ರವನ್ನೇ ಮುಂದಿನ ಚುನಾವಣೆಯಲ್ಲಿ ಡಿಕೆಶಿ ಮಾಡಿದರೆ, ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಆಲೋಚನೆಯಲ್ಲೇ ಕುಮಾರಸ್ವಾಮಿ ಈಗ ಕಾಂಗ್ರೆಸ್ ವಿರುದ್ಧ ದನಿ ದೊಡ್ಡದು ಮಾಡಲಾರಂಭಿಸಿದ್ದಾರೆ. ಹಳೇ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ತಾವು ಸಿಎಂ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ಒಕ್ಕಲಿಗ ಮತ ಚದುರದಂತೆ ನೋಡಿಕೊಂಡಿದ್ದರು. ಶಿವಕುಮಾರ್ ಕೂಡ ಹಳೆಯ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಇದೇ ಕೆಲಸ ಮಾಡಬೇಕಿದೆ. ಈ ಕೆಲಸದ ಮೊದಲ ಪ್ರಯತ್ನವಾಗಿ ರಾಜರಾಜೇಶ್ವರಿನಗರ ಉಪಚುನಾವಣೆ ಎದುರಾಗಿದೆ. ಇಲ್ಲಿ 1.35 ಲಕ್ಷ ಒಕ್ಕಲಿಗ ಮತದಾರಿದ್ದಾರೆ. ಕಳೆದ ಚುನಾ ವಣೆಯಲ್ಲಿ ಜೆಡಿಎಸ್​ನಿಂದ ರಾಮಚಂದ್ರ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಬಂದಿದ್ದ ರಾಮಚಂದ್ರಗೆ ಶೇ.50 ಒಕ್ಕಲಿಗ ಮತ ಕೊಡಿಸಲು ದೇವೇಗೌಡರು ಸಫಲರಾಗಿದ್ದರು.
ಈ ಬಾರಿ ರಾಜಕೀಯ ಬೆಳವಣಿಗೆ ಬೇರೆಯಾಗಿದೆ. ಕುಸುಮಾರನ್ನು ಕಣಕ್ಕಿಳಿಸಿರುವ ಶಿವಕುಮಾರ್, ಯುವ ಮತದಾರರು ಹಾಗೂ ಒಕ್ಕಲಿಗ ಮತಗಳನ್ನು ಒಟ್ಟು ಮಾಡಿ ಗೆಲ್ಲುವ ತವಕದಲ್ಲಿದ್ದಾರೆ. ಅವರ ಪಾಲಿಗೆ ಇದೊಂದು ಪ್ರಯೋಗವೂ ಆಗಲಿದೆ. ಸಿಬಿಐ ದಾಳಿ ಬಳಿಕ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳನ್ನು ಮನೆಗೆ ಬರ ಮಾಡಿಕೊಂಡ ಡಿಕೆಶಿ, ತಮ್ಮ ಪ್ರಾಬಲ್ಯ ಕುರಿತು ಒಕ್ಕಲಿಗ ಸಮಾಜಕ್ಕೆ ಸಂದೇಶ ಕಳುಹಿಸುವ ಪ್ರಯತ್ನ ನಡೆಸಿದ್ದಾರೆ.
ಕನಕಪುರ ಸ್ಪೈಗಳ ಬಳಕೆ
ಉಪ ಚುನಾವಣೆ ನಡೆಯುತ್ತಿರುವ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕನಕಪುರ, ರಾಮನಗರ ಭಾಗದ ಕಾಂಗ್ರೆಸ್​ನ ಮುಖಂಡರು ಕ್ಷೇತ್ರ ಸುತ್ತಾಟ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ. ಪಕ್ಷದ ನೆಟ್​ವರ್ಕ್ ಹೊರತು ತಮ್ಮದೇ ನೆಟ್​ವರ್ಕ್ ಬಳಸಿ ಚುನಾವಣೆಗೆ ಧುಮುಕುವ ಡಿಕೆಶಿ, ಈ ಬಾರಿಯೂ ತಮ್ಮ ಹಳೆಯ ತಂತ್ರ ಮುಂದುವರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದಿಂದ ಜವಾಬ್ದಾರಿ ಕೊಟ್ಟವರು ತಮ್ಮ ಕರ್ತವ್ಯ ಸರಿಯಾಗಿ ಮಾಡುತ್ತಿದ್ದಾರೆಯೇ ಎಂಬ ವಿವರವನ್ನು ಈ ತಂಡ ಡಿಕೆಶಿಗೆ ನೀಡಲಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
