ಬೆಂಗಳೂರು:ವಿಧಾನ ಪರಿಷತ್​ನಲ್ಲಿ ಆಡಳಿತ ಬಿಜೆಪಿ ನಿಚ್ಚಳ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶವು ಪಕ್ಷದ ಸ್ಥಾನ ಅಬಾಧಿತಗೊಳಿಸಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಪೈಕಿ ಪಶ್ಚಿಮ ಶಿಕ್ಷಕರ ಮತ್ತು ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಗೆದ್ದಿದ್ದು, ಆ ಮೂಲಕ ಮೇಲ್ಮನೆಯಲ್ಲಿ ಕಮಲ ಪಡೆದ ನಡೆದಿದ್ದೇ ಹಾದಿ ಎಂಬಂತಾಗಿದೆ.
ವಾಯವ್ಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಿಸಿದ್ದು, ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಪತ್ರಿಕೆ ಮುದ್ರಣಕ್ಕೆ ತೆರಳುವ ವೇಳೆಗೆ ಪ್ರಕಟಗೊಂಡಿರಲಿಲ್ಲ. ಸದ್ಯದ ಲೆಕ್ಕಾಚಾರ ಪ್ರಕಾರ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸೇರಿ ಸದಸ್ಯ ಬಲ 39ಕ್ಕೆ ಏರಿಕೆಯಾಗಿದೆ. ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲ ಸೇರಿದರೆ 40 ಆಗಲಿದೆ.
ಪರಿಷತ್​ನ ಒಟ್ಟು ಸದಸ್ಯರ ಸಂಖ್ಯೆ 75. ಬಹುಮತಕ್ಕೆ 38 ಸದಸ್ಯ ಬಲ ಅಗತ್ಯವಿದ್ದು, ನಿರೀಕ್ಷೆಯಂತೆ ಬಿಜೆಪಿ ಗುರಿ ಮುಟ್ಟಿದೆ. ಇದರಿಂದಾಗಿ ಮಸೂದೆಗಳು, ನೀತಿ-ನಿರ್ಧಾರಗಳಿಗೆ ಅಂಗೀಕಾರದ ಮಾರ್ಗ ಸುಗಮವಾಗಿದೆ. ಮೇಲ್ಮನೆಯಲ್ಲಿ ಬಹುಮತವಿಲ್ಲದ ಕಾರಣಕ್ಕೆ ಹಿಂದೆಲ್ಲ ಮಹತ್ವದ ಮಸೂದೆಗಳು ಪ್ರತಿಪಕ್ಷಗಳಿಂದ ತಿರಸ್ಕೃತಗೊಂಡು ಬಿಜೆಪಿ ನಾಯಕರು ಇರಿಸುಮುರುಸು ಅನುಭವಿಸಿದ್ದರು.
ಹಣಮಂತ ನಿರಾಣಿ ಗೆಲುವು:ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಇನಾಮ್ ಹಂಚಿನಾಳ ಗ್ರಾಮದ ಕೃಷಿಕ ಕುಟುಂಬದಿಂದ ಬಂದವರು. 1967ರ ಜೂನ್ 1ರಂದು ಜನಿಸಿರುವ 55ರ ಹರೆಯದ ಹಣಮಂತ ನಿರಾಣಿ, ಎಂ.ಕಾಂ. ಎಲ್​ಎಲ್​ಬಿ ಪದವಿ ಪಡೆದಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಎಂಎಲ್​ಸಿಯಾಗಿ ಮೇಲ್ಮನೆ ಪ್ರವೇಶಿಸಿದ್ದರು. ಐವರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ. ನಿರಾಣಿ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ, ವಿಜಯ ಸೌಹಾರ್ದ ಬ್ಯಾಂಕ್ ಅಧ್ಯಕ್ಷರಾಗಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಮೈಸೂರು:ತೀವ್ರ ಕುತೂಹಲ ಕೆರಳಿಸಿದ ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಪತ್ರಿಕೆ ಮುದ್ರಣಕ್ಕೆ ತೆರಳುವ ವೇಳೆಗೆ ಶೇ.50 ಮತಗಳ ಎಣಿಕೆ ಪೂರ್ಣಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ 2,958 ಮತಗಳ ಮುನ್ನಡೆ ಪಡೆದುಕೊಂಡಿತ್ತು.
ಬೆಳಗಾವಿ:ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವಾಯವ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅಂದಾಜು 5 ಸಾವಿರ ಮತಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗರ ಬೆವರಿಳಿಸಿದ್ದಾರೆ. ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೋರಾಟ ನಡೆಸಿ ಸೋಲು ಅನುಭವಿಸಿದ್ದಾರೆ.
ಬನ್ನೂರಗೆ 3ನೇ ಬಾರಿ ಸೋಲು:ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎನ್. ಬಿ.ಬನ್ನೂರ 1,009 ಮತ ಪಡೆಯಲಷ್ಟೇ ಶಕ್ತವಾದರು. ಇನ್ನುಳಿದ ಪಕ್ಷೇತರ ಅಭ್ಯರ್ಥಿಗಳು ಸರಾಸರಿ ಮೂರಂಕಿ ದಾಟಲಿಲ್ಲ. ಆ ಮೂಲಕ ಬನ್ನೂರ ವಿಧಾನ ಪರಿಷತ್ ಚುನಾವಣೆಯಲ್ಲಿ 3ನೇ ಬಾರಿ ಸೋಲು ಅನುಭವಿಸಿದರು.
1,270 ಮತ ತಿರಸ್ಕೃತ:ವಾಯವ್ಯ ಶಿಕ್ಷಕರ ಕ್ಷೇತ್ರದ ಶಿಕ್ಷಕ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದ 21,401 ಮತಗಳ ಪೈಕಿ, 1,270 ಮತಗಳು ತಿರಸ್ಕೃತಗೊಂಡಿವೆ. ಕೆಲ ಶಿಕ್ಷಕರು ಮತ ಪತ್ರದಲ್ಲಿ ಅಂಕಿ ಬರೆಯುವ ಬದಲು ರೈಟ್ ಮಾರ್ಕ್ ಹಾಕಿ ತಪ್ಪಾಗಿ ಮತಚಲಾವಣೆ ಮಾಡಿದ್ದೇ ಮತಗಳು ತಿರಸ್ಕೃತಗೊಳ್ಳಲು ಕಾರಣವಾಗಿದೆ.
ಡಿಸಿ ಜತೆ ಜಗಳ ಮಾಡಿದ ಪಿಎ ಹೊರಕ್ಕೆ:ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಹೆಸರು ಹೇಳಿಕೊಂಡು, ಯಾವುದೇ ಪಾಸ್ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಗುರು ಎಂಬ ಹೆಸರಿನ ಆಪ್ತಸಹಾಯಕನನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ತೀವ್ರ ತರಾಟೆಗೆ ತೆಗೆದುಕೊಂಡರು. ಮೊಂಡು ವಾದ ನಡೆಸಿದ್ದರಿಂದ ಕೆರಳಿದ ಡಿಸಿ, ಪೊಲೀಸರು
ಈತನನ್ನು ಹಿಡಿದ ಹೊರಗೆ ಹಾಕ್ರಿ ಎಂದು ಸೂಚನೆ ನೀಡಿದರು. ಸ್ಥಳದಲ್ಲಿದ್ದ ಪೊಲೀಸರು ಮತ ಎಣಿಕೆ ಕೇಂದ್ರದಿಂದ ಆತನನ್ನು ಹೊರಗೆ ಕಳುಹಿಸಿದರು.
ಕಾಂಗ್ರೆಸ್ ಪಕ್ಷದಿಂದ 1988ರಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯ ಚುನಾವಣೆ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದ್ದ ಪ್ರಕಾಶ ಹುಕ್ಕೇರಿ, 1992-94ರವರೆಗೆ ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದಾರೆ. 1994-2014ರ ವರೆಗೆ ಸತತ ಐದು ಬಾರಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಎಪಿಎಂಸಿ ಸಚಿವರಾಗಿ, ಸಕ್ಕರೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಹುಕ್ಕೇರಿ, ಈಗ ಮತ್ತೆ ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿ ಸುವ ಮೂಲಕ 2ನೇ ಬಾರಿ ಮೇಲ್ಮನೆ ಪ್ರವೇಶ ಮಾಡಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿ.ಬಿ.ಶಂಕರಾನಂದ ಜತೆ ಕಾಂಗ್ರೆಸ್ ಪಕ್ಷ ಸೇರಿದ್ದ ಹುಕ್ಕೇರಿ, 4 ದಶಕಗಳಿಂದ ಕಾಂಗ್ರೆಸ್​ನಲ್ಲೇ ಇದ್ದಾರೆ.
ಕೌಟುಂಬಿಕ ವಿವರ:ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ 1947ರ ಮಾರ್ಚ್ 5ರಂದು ಕೃಷಿ ಕುಟುಂಬದಲ್ಲಿ ಜನಿಸಿರುವ ಪ್ರಕಾಶ ಬಾಬಣ್ಣ ಹುಕ್ಕೇರಿ ಅವರಿಗೆ ಈಗ 75 ವರ್ಷ ವಯಸ್ಸು. 12ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ನಾಲ್ವರು ಪುತ್ರಿಯರನ್ನು ಹೊಂದಿರುವ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.
|ಆನಂದ ಅಂಗಡಿಹುಬ್ಬಳ್ಳಿ
ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತ 8ನೇ ಬಾರಿ ಗೆಲುವು ಸಾಧಿಸಿ ವಿಧಾನ ಪರಿಷತ್ ಪ್ರವೇಶಿಸುವ ಮೂಲಕ ಬಸವರಾಜ ಹೊರಟ್ಟಿ, ಈ ಹಿಂದೆ 7 ಬಾರಿ ಗೆಲುವು ಸಾಧಿಸಿ ನಿರ್ವಿುಸಿದ್ದ ತಮ್ಮದೇ ದಾಖಲೆ ಮುರಿದಿದ್ದಾರೆ. ಪಕ್ಷೇತರರಾಗಿ, ಜನತಾ ಪಕ್ಷ, ಲೋಕಶಕ್ತಿ, ನವ ನಿರ್ಮಾಣ ವೇದಿಕೆಯಿಂದ ತಲಾ ಒಂದು ಬಾರಿ ಹಾಗೂ ಜೆಡಿಎಸ್​ನಿಂದ 3 ಬಾರಿ ಹೊರಟ್ಟಿ ಗೆಲುವು ಸಾಧಿಸಿದ್ದರು. ಇದೀಗ ಮೊದಲ ಬಾರಿ ಬಿಜೆಪಿಯಿಂದ ವಿಜೇತರಾಗಿದ್ದಾರೆ. ಸತತ 42 ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.
ಕೇಸರಿ ಪಡೆಯಿಂದ ಚುನಾವಣೆ ಕಣಕ್ಕೆ ಧುಮುಕಿದ್ದ ಹೊರಟ್ಟಿ, ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಗೂ ಗೆಲುವು ತಂದುಕೊಟ್ಟಿದ್ದಾರೆ. ತಮ್ಮ ಗೆಲುವಿಗೆ ರಾಜಕೀಯ ಪಕ್ಷಗಳು ಲೆಕ್ಕಕ್ಕಿಲ್ಲ, ಶಿಕ್ಷಕರ ಪಡೆಯೊಂದೆ ಸಾಕೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮತಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡದಲ್ಲಿ ಕಮಲ ಪಡೆ ಬೃಹತ್ ಕಾರ್ಯಕರ್ತರನ್ನು ಹೊಂದಿದೆ. ಇದು ಹೊರಟ್ಟಿ ಪ್ರಥಮ ಪ್ರಾಶಸ್ಱದ ಮತಗಳಿಂದ ಗೆಲುವು ಸಾಧಿಸಲು ಸಾಕಷ್ಟು ನೆರವಾಗಿದೆ. ಜೆಡಿಎಸ್​ನ ಶ್ರೀಶೈಲ ಗಡದಿನ್ನಿ ನಿರೀಕ್ಷಿಸಿದಂತೆ ಸ್ಪರ್ಧೆ ಒಡ್ಡುವಲ್ಲಿ ವಿಫಲರಾಗಿದ್ದಾರೆ. ಚುನಾವಣೆ ಘೋಷಣೆಗೆ ಸಾಕಷ್ಟು ಮುಂಚೆಯೇ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಆದರೆ, ಅದ್ಯಾವುದೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿಲ್ಲ. ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಕಣಕ್ಕಿಳಿದರೂ ಇರುವ ಕಡಿಮೆ ಅವಧಿಯಲ್ಲೇ ಕ್ಷೇತ್ರದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವ ಜಗದೀಶ ಶೆಟ್ಟರ್, ಶಿಕ್ಷಣ ಸಚಿವ ನಾಗೇಶ ಸೇರಿ ಹಲವಾರು ಸಚಿವರು, ಮುಖಂಡರು ಹೊರಟ್ಟಿ ಪರ ಪ್ರಚಾರ ನಡೆಸಿದರು.
ಹೋರಾಟದ ಹೊರಟ್ಟಿ:ಹೋರಾಟದ ಹೊರಟ್ಟಿ ಎಂದೇ ಖ್ಯಾತರಾಗಿರುವ ಬಸವರಾಜ ಹೊರಟ್ಟಿ 1980ರಿಂದ ಈವರೆಗೆ ನಿರಂತರವಾಗಿ ವಿಧಾನ ಪರಿಷತ್​ನಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ, ವಿವಿಧ ಖಾತೆಗಳ ಸಚಿವರಾಗಿ, ಸಭಾಪತಿಯಾಗಿ ಇವರು ಮಾಡಿರುವ ಸಾಧನೆಗಳು ಹಲವಾರು. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಶಿವಲಿಂಗಪ್ಪ ಹಾಗೂ ಗುರಮ್ಮ ದಂಪತಿ ಪುತ್ರನಾಗಿ 1949ರ ಏ.14ರಂದು ಜನಿಸಿದ ಹೊರಟ್ಟಿ ಬಿಎ, ಎಂಪಿಇಡಿ ಪದವೀಧರರು.
ಬೆಂಗಳೂರು:ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ವಿಜೇತರಾಗಿರುವ ಬಸವರಾಜ ಹೊರಟ್ಟಿ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್್ಸ) ಒತ್ತಾಯಿಸಿದೆ. 8ನೇ ಬಾರಿ ವಿಜೇತರಾಗಿರುವುದಕ್ಕೆ ಹೊರಟ್ಟಿ ಅವರಿಗೆ ಒಕ್ಕೂಟವು ಅಭಿನಂದನೆ ಸಲ್ಲಿಸಿದೆ. ಸರ್ಕಾರದ ಧೋರಣೆಯಿಂದ ಖಾಸಗಿ ಶಾಲೆಗಳು ಸಾಕಷ್ಟು ನಲುಗಿದೆ. ಮಾನ್ಯತೆ ನವೀಕರಣ, ಆರ್​ಟಿಇ ಶುಲ್ಕ ಮರುಪಾವತಿ, ಪಠ್ಯಪುಸ್ತಕ ಇದ್ಯಾವುದು ಕಾಲಕಾಲಕ್ಕೆ ದೊರೆಯುತ್ತಿಲ್ಲ. ತಾವು ತಕ್ಷಣ ಖಾಸಗಿ ಶಾಲೆಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂದು ಕ್ಯಾಮ್್ಸ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
