ವಿಜಯವಾಣಿ ಸುದ್ದಿಜಾಲ ಮಂಡ್ಯ
ಮುಡಾದಲ್ಲಿ ಅಕ್ರಮ ನಿವೇಶನ ಪಡೆದಿರುವ ಹಗರಣ ಹಾಗೂ ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ‘ಮೈಸೂರು ಚಲೋ ಪಾದಯಾತ್ರೆ’ ನೂರು ಕಿಮೀ ಪೂರೈಸಿತು. ಅಂತೆಯೇ ಇಂದು ಮೈಸೂರು ಜಿಲ್ಲೆಗೆ ಪ್ರವೇಶ ಪಡೆಯಲಿದೆ.
ಪಾದಯಾತ್ರೆಯ ಆರನೇ ದಿನವಾದ ಗುರುವಾರ ಶ್ರೀರಂಗಪಟ್ಟಣ ವಿಧಾನಸಭಾ ವ್ಯಾಪ್ತಿಯ 17 ಕಿ.ಮೀ. ಬೃಹತ್ ರ‍್ಯಾಲಿ ನಡೆಯಿತು. ಬೆಳಗ್ಗೆ ತೂಬಿನಕೆರೆ ಕೈಗಾರಿಕಾ ಪ್ರದೇಶದಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆ.ಸಿ.ನಾರಾಯಣಗೌಡ, ಸಿ.ಎಸ್.ಪುಟ್ಟರಾಜು, ಶಾಸಕರಾದ ಅರವಿಂದ ಬೆಲ್ಲದ್, ಸುರೇಶ್​ಬಾಬು, ಮುಖಂಡ ಇಂಡುವಾಳು ಸಚ್ಚಿದಾನಂದ ಹೆಜ್ಜೆ ಹಾಕಿದರು.
ಇಂದಿನ ಪಾದಯಾತ್ರೆಗೂ ವಿವಿಧ ಕಲಾತಂಡಗಳು ಸಾಥ್ ನೀಡಿದವು. ಡೊಳ್ಳು ಕುಣಿತ, ತಮಟೆ, ಪೂಜಾ ಕುಣಿತ, ಗಾರುಡಿಗೊಂಬೆ ಸೇರಿ ವಿವಿಧ ಕಲಾತಂಡಗಳು ಭಾಗಿಯಾದವು. ಪಾದಯಾತ್ರೆ ನಡುವೆ ತಮಟೆ ಸದ್ದಿಗೆ ಬಿಜೆಪಿ ನಾಯಕರು ಹೆಜ್ಜೆ ಹಾಕಿದರು. ಅಂತೆಯೇ ಎರಡು ಪಕ್ಷದ ನಾಯಕರಿಗೆ ಕ್ರೇನ್ ಮೂಲಕ ಸೇಬಿನ ಹಾರ ಹಾಕಿ, ಜೆಸಿಬಿ ಮೂಲಕ ಹೂವಿನ ಮಳೆ ಸುರಿಸಲಾಯಿತು. ಸಂಜೆ ಶ್ರೀರಂಗಪಟ್ಟಣದಲ್ಲಿ ಬಹಿರಂಗ ಸಮಾವೇಶ ನಡೆಯಿತು. ಶುಕ್ರವಾರ ಬೆಳಗ್ಗೆ ಪಾದಯಾತ್ರೆಗೆ ಮರು ಚಾಲನೆ ಸಿಗಲಿದ್ದು, ಸಂಜೆ ಹೊತ್ತಿಗೆ ಮೈಸೂರು ಜಿಲ್ಲೆ ಪ್ರವೇಶಿಸಲಿದೆ.
ನಾಳೆ ಸಮಾವೇಶ:ಪಾದಯಾತ್ರೆ ಶುಕ್ರವಾರ ಸಂಜೆ ಮೈಸೂರು ನಗರವನ್ನು ಪ್ರವೇಶಿಸಲಿದೆ. ಶನಿವಾರ ಬೆಳಗ್ಗೆ 11ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ.
ಮೈಸೂರು:ಬಿಜೆಪಿ-ಜೆಡಿಎಸ್​ನ ‘ಮೈಸೂರು ಚಲೋ’ ಪಾದಯಾತ್ರೆಗೆ ಟಕ್ಕರ್ ನೀಡಲು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶ ಹಮ್ಮಿಕೊಂಡಿದೆ. ಈ ಸಮಾವೇಶಕ್ಕೆ ಎರಡು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಬೃಹತ್ ಜನಸ್ತೋಮದ ಎದುರು ಬಿಜೆಪಿ-ಜೆಡಿಎಸ್ ನಾಯಕರ ಆರೋಪಗಳಿಗೆ ಉತ್ತರ ನೀಡಲು ಕಾಂಗ್ರೆಸ್ ನಾಯಕರು ತಯಾರಿ ನಡೆಸಿದ್ದಾರೆ. ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಎಲ್ಲ ಸದಸ್ಯರು, ಕಾಂಗ್ರೆಸ್​ನ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, 9 ಸಂಸದರು ಹಾಗೂ ಪಕ್ಷದ ಎಲ್ಲ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ.
‘ಸಂಚು’ ಹೊತ್ತಗೆ ಬಿಡುಗಡೆ:ಬೆಂಗಳೂರು: ಬಿಜೆಪಿ, ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಕಾಂಗ್ರೆಸ್ ಮೈಸೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಜನಾಂದೋಲನ ಸಭೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪ ಪಟ್ಟಿಯನ್ನು ಬಹಿರಂಗಪಡಿಸಲು ನಿರ್ಧರಿಸಲಾಗಿದೆ. ಜತೆಗೆ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪ ಮಾಡುವ ‘ಸಂಚು’ ಹೊತ್ತಗೆ ಬಿಡುಗಡೆ ಮಾಡಲಾಗುತ್ತಿದೆ. ಶಕ್ತಿ ಪ್ರದರ್ಶನ ರೂಪದಲ್ಲಿಯೇ ಕಾರ್ಯಕ್ರಮ ನಡೆಸಲು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಆಪ್ತ ಸಚಿವ ಮಹದೇವಪ್ಪ ಪಣತೊಟ್ಟಿದ್ದು ಶ್ರಮ ಹಾಕಿದ್ದಾರೆ.
ಬೆಂಗಳೂರು:ಜನಪರ ಉದ್ದೇಶ, ಅರ್ಥಗರ್ಭಿತ ಕಾರಣವಿಲ್ಲದ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆಯ ವಿಚಾರವೇನು? ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆ ನೋಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಜನತಾದಳದ ಕಾರ್ಯಕರ್ತರೇ ಇಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಿಜೆಪಿ ಕಾರ್ಯಕರ್ತರನ್ನು ಕರೆಸಲಾಗಿದೆ. ಅವರಲ್ಲಿ ಹೊಂದಾಣಿಕೆ, ಒಗ್ಗಟ್ಟು ಎಲ್ಲಿದೆ? ಅವರ ನಡುವೆ ಸಮನ್ವಯತೆ ಇಲ್ಲ ಎಂದು ಅವರೇ ಹೇಳಿದ್ದಾರೆ ಎಂದರು. ಎಚ್.ಡಿ.ಕುಮಾರಸ್ವಾಮಿ ಸಹೋದರನ ಆಸ್ತಿ ದಾಖಲೆ ಬಿಡುಗಡೆ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಖಂಡಿತವಾಗಿಯೂ ಶುಭದಿನ, ಶುಭ ಗಳಿಗೆ, ಶುಭ ನಕ್ಷತ್ರ ನೋಡಿ ಬಿಡುಗಡೆ ಮಾಡಬೇಕು. ಅದಕ್ಕಿಂತ ಮುಂಚೆ ನಮ್ಮ ಬಗ್ಗೆ ಮಾಡುತ್ತಿರುವ ಆರೋಪಗಳ ದಾಖಲೆ ಬಿಚ್ಚಿ ಎಂದು ಹೇಳಿದ್ದೇನೆ ಎಂದರು.
ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ 14 ಸೈಟ್ ಪಡೆದ ಆರೋಪದ ಮೇಲೆ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಸೇರಿ ಐವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಖಾಸಗಿ ದೂರು ಸಲ್ಲಿಸಿದ್ದಾರೆ. ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ದೂರು ಸ್ವೀಕರಿಸಿದ್ದು, ಶುಕ್ರವಾರ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ವಕೀಲ ವಸಂತ್ ಕುಮಾರ್ ವಕಾಲತ್ತು ಹಾಕಿದ್ದಾರೆ.
ಸುಳ್ಳನ್ನು ಸತ್ಯ ಮಾಡುವುದಕ್ಕೆ ಹೊರಟಿರುವುದು ನಾವಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಸುಳ್ಳನ್ನು ಸತ್ಯ ಮಾಡುವ ಕೆಲಸ ಮಾಡಿದ್ದು ಕಾಂಗ್ರೆಸ್. ನಾನು ಭ್ರಷ್ಟಾಚಾರ ನಡೆಸಿದ್ದರೆ ತನಿಖೆ ಮಾಡಿಸಲಿ. ಗೊಡ್ಡು ಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಹೋರಾಟ ಮಾಡಿಕೊಂಡು ಬಂದವರು. ವೈಯಕ್ತಿಕ ಆರೋಪ, ಟೀಕೆ ಜೀವನದಲ್ಲಿ ಸಾಕಷ್ಟು ನೋಡಿದ್ದಾರೆ. ಇಂತಹ ಆರೋಪಗಳಿಗೆ ಯಡಿಯೂರಪ್ಪ ಹೆದರುವುದಿಲ್ಲ. ಕಾಂಗ್ರೆಸ್ ಸರ್ಕಾರ ಸಾಕಷ್ಟು ಹಗರಣಗಳನ್ನು ಮಾಡಿದೆ. ಮುಡಾದಲ್ಲೂ ಹಗರಣ ಮಾಡಿ ಸಿದ್ದರಾಮಯ್ಯ ಸೈಟ್ ತೆಗೆದುಕೊಂಡಿದ್ದಾರೆ. ಅವರ ರಾಜೀನಾಮೆಗಾಗಿ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ನಮ್ಮ ತಂದೆ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದಂತೆ, ನಿಮ್ಮ ತಂದೆ ಕೆಂಪೇಗೌಡರ ಬಗ್ಗೆ ನಾನು ಮಾತಾಡಿದರೆ ಏನಾಗಬಹುದು? ನಾವು ರೈತರ ಮಕ್ಕಳೇ.. ನಮ್ಮ ಒಕ್ಕಲುತನ ಪ್ರಶ್ನೆ ಮಾಡಬೇಡಿ. ಅಧಿಕಾರ ಶಾಶ್ವತವಲ್ಲ, ಮಾತಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾತಾಡಿ.
| ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ
ಸಿದ್ದರಾಮಯ್ಯ ರಾಜೀನಾಮೆಗೆ ಜನರಿಂದ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಅನಿವಾರ್ಯವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ನಿಯಮ ಉಲ್ಲಂಘಿಸಿದ್ದಾರೆ. ಮೂವರು ಮಾಲೀಕರಿದ್ದರೂ ಒಬ್ಬರಿಂದ ಮಾತ್ರ ಸಹಿ ಪಡೆದುಕೊಂಡು ಅನ್ಯಾಯ ಮಾಡಿದ್ದಾರೆ. ನಾವು ಸುಳ್ಳು ಆರೋಪ ಮಾಡುತ್ತಿಲ್ಲ, ಎಲ್ಲದಕ್ಕೂ ದಾಖಲೆ ಇವೆ. ನಮ್ಮ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ.
| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ
ಎಷ್ಟು ಬೇಕಾದರೂ ಸುಳ್ಳು ಕೇಸ್ ಹಾಕಲಿ. ಅವುಗಳಿಗೆ ಉತ್ತರ ಕೊಡುವ ಶಕ್ತಿ ಇದೆ. ಸುಳ್ಳು ಪ್ರಕರಣಗಳು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಹೀಗಾಗಿ, ಈ ಕುರಿತು ಹೆಚ್ಚು ಮಾತನಾಡಲು ಹೋಗಲ್ಲ.
| ಸಿದ್ದರಾಮಯ್ಯ ಮುಖ್ಯಮಂತ್ರಿ
Paris Olympics 2024 : ಹಾಕಿಯಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
