ರುದ್ರಣ್ಣ ಹರ್ತಿಕೋಟೆಬೆಂಗಳೂರು
‘ಮುಂದಿನ 3 ವರ್ಷ ನಾನೇ ಸಿಎಂ ಆಗಿರುತ್ತೇನೆ. ಸುಭದ್ರ ಆಡಳಿತ, ಅಭಿವೃದ್ಧಿ ನನ್ನ ಆದ್ಯತೆ, ಈ ಘೋಷವಾಕ್ಯ ಅಡಿಪಾಯವಾಗಿಟ್ಟುಕೊಂಡು ಮಾದರಿ ರಾಜ್ಯ ನಿರ್ಮಾಣ ಮಾಡುವ ನನ್ನ ಕನಸಿನ ಸಾಕಾರಕ್ಕೆ ಶ್ರಮಿಸುವೆ. ಮುಂದಿನ ಮೂರು ವರ್ಷದಲ್ಲಿ ರಾಜ್ಯದಲ್ಲಿ ಯಾರೊಬ್ಬರೂ ವಸತಿ ರಹಿತರಿರಬಾರದು, ನಿರುದ್ಯೋಗ ನಿವಾರಣೆ ನನ್ನ ಉದ್ದೇಶ..’ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಒಂದಲ್ಲ ಒಂದು ಸವಾಲು ಎದುರಿಸುತ್ತಲೇ ವರ್ಷದ ಆಡಳಿತ ಪೂರ್ಣಗೊಳಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನದಾಳದ ಮಾತುಗಳಿವು.ಸರ್ಕಾರದ ವಷೋತ್ಸವ ಸಂದರ್ಭದಲ್ಲಿ ವಿಜಯವಾಣಿಗೆ ವಿಶೇಷ ಸಂದರ್ಶನ ನೀಡಿರುವ ಅವರು, ತಮ್ಮ ಆಡಳಿತದ ಸಾಧನೆಗಳನ್ನು ಮೆಲುಕು ಹಾಕುತ್ತಲೇ ಮುಂದಿನ ಮೂರು ವರ್ಷದ ಗುರಿ, ಆಶಯಗಳ ಕನಸನ್ನು ತೆರೆದಿಟ್ಟಿದ್ದಾರೆ. ಕರೊನಾ ಜತೆಜತೆಗೆ ನಾವು ಹೆಜ್ಜೆ ಹಾಕಬೇಕಿರುವುದರಿಂದ ಸೋಂಕಿನ ನಿಯಂತ್ರಣ ಹಾಗೂ ರಾಜ್ಯದ ಆರ್ಥಿಕ ಬೆಳವಣಿಗೆ ಗುರಿಯನ್ನು ಯಶಸ್ವಿಯಾಗಿ ಮುಟ್ಟುವ ಪಣ ತೊಟ್ಟಿದ್ದಾರೆ.
ವರ್ಷದ ಆಡಳಿತ ತೃಪ್ತಿ ತಂದಿದೆಯೇ?
ನಮ್ಮ ಸಾಧನೆ ಮಾತನಾಡಬೇಕೇ ಹೊರತು ಮಾತೇ ಸಾಧನೆಯಾಗ ಬಾರದೆಂದು ನಂಬಿದವನು ನಾನು. ಸಿಎಂ ಆದ ಆರಂಭದಲ್ಲೇ ಪ್ರವಾಹ ಪರಿಸ್ಥಿತಿ ಎದುರಾಯಿತು, ಒಬ್ಬನೇ 3 ತಿಂಗಳು ರಾಜ್ಯ ಸುತ್ತಿದೆ. ನೆರೆ ನಿಯಂತ್ರಣಕ್ಕೆ ಬಂದ ಬಳಿಕ ಚುನಾವಣೆ ಎದುರಾಯಿತು. ಇದೀಗ ಕರೊನಾ ಆವರಿಸಿದೆ. ಎಷ್ಟೇ ಸಮಸ್ಯೆ ಇದ್ದರೂ ಅಭಿವೃದ್ಧಿಗೆ ತೊಂದರೆಯಾಗಿಲ್ಲ. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನಗೆ ಜಾತಿ ಗೊತ್ತಿಲ್ಲ, ರಾಜ್ಯದ ಎಲ್ಲ ಜನ ಒಂದೇ ತಾಯಿ ಮಕ್ಕಳಂತೆ ಬಾಳಬೇಕೆಂಬ ಆಶಯ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದೇನೆ. ಮಾದರಿ ರಾಜ್ಯದ ಕನಸಿಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಎಳ್ಳಷ್ಟೂ ಲೋಪವಾಗದಂತೆ ಆಡಳಿತ ನಡೆಸಿದ ತೃಪ್ತಿ ಇದೆ.
ಸಚಿವ ಸಂಪುಟ ವಿಸ್ತರಣೆಯೋ? ಪುನಾರಚನೆಯೋ?
ಆ ನಿಟ್ಟಿನಲ್ಲಿ ಆಲೋಚಿಸಿಲ್ಲ, ಕರೊನಾ ಸಂಕಷ್ಟ ಇರುವಾಗ ಅದು ಆದ್ಯತೆಯೂ ಅಲ್ಲ. ಜುಲೈ ಬಳಿಕ ಕೇಂದ್ರದ ನಾಯಕರ ಜತೆ ರ್ಚಚಿಸಿ, ಅವರ ಸೂಚನೆಯಂತೆ ನಡೆದು ಕೊಳ್ಳುತ್ತೇನೆ.
ಕರೊನಾ ಸಂಕಷ್ಟದಲ್ಲಿ ಕುಸಿದಿರುವ ತೆರಿಗೆ ಸಂಗ್ರಹ ಪುನಶ್ಚೇತನ ಹೇಗೆ?
ಸೋರಿಕೆ ತಡೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಿದ್ದೇನೆ. ತೆರಿಗೆ ವಸೂಲಿಗೆ ಬಿಗಿ ಕ್ರಮಗಳೂ ಅನಿವಾರ್ಯ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಲ್ಲಿ ಹೆಚ್ಚಿನ ನೆರವು ಬಳಸಿಕೊಳ್ಳುತ್ತೇವೆ. ‘ನಮ್ಮ ಬೆಳೆ – ನಮ್ಮ ಹಕ್ಕು’ ಯೋಜನೆ ಸಹ ಆತ್ಮನಿರ್ಭರದ ಭಾಗವೇ ಆಗಿದೆ.
ಮುಂದಿನ 3 ವರ್ಷ ನಿಮ್ಮ ಆದ್ಯತೆ ಅಭಿವೃದ್ಧಿಯೋ? ಕಲ್ಯಾಣ ಕಾರ್ಯಕ್ರಮಗಳೋ?
ಮಾದರಿ ರಾಜ್ಯದ ಕಲ್ಪನೆ ಇಟ್ಟುಕೊಂಡಿದ್ದರಿಂದಲೇ ಈ ಬಾರಿ ಬಜೆಟ್​ನಲ್ಲಿ ಹೆಚ್ಚು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಲಿಲ್ಲ. ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಘೋಷಿತ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸುತ್ತ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಭಾಗ್ಯಲಕ್ಷ್ಮೀ, ಹಾಲಿನ ಪ್ರೋತ್ಸಾಹ, ರೈತ ಸಮ್ಮಾನ್​ಗೆ ಹೆಚ್ಚುವರಿ 4000 ರೂ. ನೀಡಿದ್ದು, ನೇಕಾರರ, ಮೀನುಗಾರರ ಸಾಲಮನ್ನಾ ಮಾಡಿದ್ದೇವೆ.
ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿ ಎಂಬ ಭಾವನೆ ಮೂಡಿಸುವ ಪ್ರಯತ್ನ ನಡೆದಿದೆ?
ಪ್ರತಿಪಕ್ಷಗಳದ್ದು ರೈತರನ್ನು ದಿಕ್ಕು ತಪ್ಪಿಸುವ ಪ್ರಯತ್ನ. ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಸಿಗದೆ ಹೊರ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿತ್ತು. ರೈತರು ಫಲವತ್ತಾದ ಭೂಮಿಯನ್ನೇನೂ ನೀಡುವುದಿಲ್ಲ. ಇದರಿಂದ ರೈತರು ಮತ್ತು ಕೈಗಾರಿಕೆ ಬೆಳವಣಿಗೆಗೆ ಅನುಕೂಲ ಆಗುವುದಿಲ್ಲವೇ? ನೀರಾವರಿ ಭೂಮಿ ಖರೀದಿಸಿದರೂ ನೀರಾವರಿ ಉದ್ದೇಶಕ್ಕೆ ಬಳಸಬೇಕು. ರೈತರು ತಮ್ಮ ಬೆಳೆಯನ್ನು ಎಲ್ಲಿ ಬೇಕಾದರೂ ಸ್ಪರ್ಧಾತ್ಮಕ ಬೆಲೆಗೆ ಮಾರಿಕೊಳ್ಳುವುದು ರೈತ ವಿರೋಧಿ ಹೇಗಾಗುತ್ತದೆ? ತಮ್ಮ ಅಸ್ತಿತ್ವಕ್ಕಾಗಿ ತಪು್ಪ ಮಾಹಿತಿ ರವಾನಿಸಬಾರದು.
ನಿಮ್ಮ ಮುಂದಿರುವ ಸವಾಲು?
ಕರೊನಾಮುಕ್ತ ಕರ್ನಾಟಕ, ಸರ್ವಾಂಗೀಣ ಅಭಿವೃದ್ಧಿ ನಮ್ಮ ಮುಂದಿರುವ ಸವಾಲು. ನಾವು ಕರೊನಾ ಜತೆಗೆ ಬದುಕುತ್ತ ಸಾಗಬೇಕಾಗುತ್ತದೆ. ಅಭಿವೃದ್ಧಿಗೆ ಒತ್ತು ನೀಡುವಾಗ ಎಲ್ಲ ಪಕ್ಷಗಳು ಪಕ್ಷಭೇದ ಮರೆತು ಸಹಕರಿಸಬೇಕು.
ನಿರುದ್ಯೋಗ ಸಮಸ್ಯೆ ವ್ಯಾಪಕವಾಗುತ್ತದೆ? ಅದಕ್ಕೆ ನಿಮ್ಮಲ್ಲಿರುವ ಉತ್ತರವೇನು?
ಕರೊನಾದಿಂದಾಗಿ ಸಾಕಷ್ಟು ಸಮಸ್ಯೆ ಆಗಿರುವುದನ್ನು ಕಾಣುತ್ತಿದ್ದೇವೆ. ಕೈಗಾರಿಕೆಗಳು ಮತ್ತು ಉದ್ದಿಮೆಗಳು ನಡೆಯಬೇಕೆಂದೇ ಲಾಕ್​ಡೌನ್ ತೆರವು ಮಾಡಿದ್ದೇನೆ. ಉದ್ದಿಮೆಗಳು ತೆರೆದರೆ ಸ್ವಲ್ಪಮಟ್ಟಿಗೆ ನಿರುದ್ಯೋಗ ಸಮಸ್ಯೆ ಹೋಗುತ್ತದೆ. ಹೊಸ ಕೈಗಾರಿಕಾ ನೀತಿ ತಂದಿದ್ದೇವೆ. 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇದೆ. ಕನ್ನಡಿಗರಿಗೆ ಶೇ.80ರಿಂದ 100 ಉದ್ಯೋಗ ನೀಡಬೇಕೆಂದು ಷರತ್ತು ವಿಧಿಸಿದ್ದೇವೆ.
ಕರೊನಾದಿಂದ ರೈತ ಸಂಕಷ್ಟದಲ್ಲಿದ್ದಾನೆ…
ಕೃಷಿಕರಿಗೆ ಸಾಕಷ್ಟು ನೆರವಾಗಿದ್ದೇವೆ. ಹೂವು ಬೆಳೆಗಾರರು, ತೋಟದ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಿದೆ. ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆ ಇಲ್ಲದಂತೆ ನೋಡಿಕೊಂಡಿದ್ದೇವೆ. ರೈತರು ನಮ್ಮ ಸರ್ಕಾರದ ಆದ್ಯತೆ. ಅವರು ಸಂಕಷ್ಟಕ್ಕೆ ಒಳಗಾಗಲು ಬಿಡುವುದಿಲ್ಲ. ಜತೆಗೆ ಮಡಿವಾಳ, ಸವಿತಾ ಸಮಾಜ, ಆಶಾ ಕಾರ್ಯಕರ್ತೆಯರು, ಚಾಲಕರಿಗೂ ಪರಿಹಾರ ಘೋಷಿಸಿದ್ದೇವೆ.
ಮುಂದಿನ ಮೂರು ವರ್ಷದಲ್ಲಿ ನಿಮ್ಮ ಗುರಿ ಏನು?
ರಾಜ್ಯದ ಅಭಿವೃದ್ಧಿಯ ಬಗ್ಗೆ ನನ್ನದೇ ಆದ ಕನಸುಗಳಿವೆ. ಸುಭದ್ರ ಆಡಳಿತ, ಸಮಗ್ರ ಅಭಿವೃದ್ಧಿ ಆದ್ಯತೆಯಾಗಿದೆ. ಯಾವುದೇ ಒಬ್ಬ ಬಡವ 3 ವರ್ಷದಲ್ಲಿ ಸ್ವಂತ ಸೂರಿಲ್ಲವೆಂದು ಕೊರಗದಂತೆ ನೋಡಿಕೊಳ್ಳುವುದು ಗುರಿಯಾಗಿದೆ. ಅದಕ್ಕಾಗಿ ಮನೆಗಳ ನಿರ್ವಣಕ್ಕೆ ದೊಡ್ಡ ಪ್ರಮಾಣದಲ್ಲಿ ಯೋಜನೆ ರೂಪಿಸಿದ್ದೇವೆ. ಪ್ರಾದೇಶಿಕ ಅಸಮತೋಲನ ನಿವಾರಣೆ ಪ್ರಮುಖ ಕನಸು. ಹಿಂದುಳಿದ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡಬೇಕೆಂದೇ ಆದ್ಯತೆ ನೀಡಲಾಗುತ್ತಿದೆ.
ಸರ್ಕಾರಕ್ಕೆ ಒಂದು ವರ್ಷ ತುಂಬಿದಾಗ ನಿಮ್ಮ ನಾಯಕತ್ವ ಬದಲಾವಣೆ ಮಾತು ಪಕ್ಷದಲ್ಲಿಯೇ ಕೇಳಿಬರುತ್ತಿದೆ?
ಅಂಥ ಯಾವ ಪ್ರಯತ್ನವೂ ಪಕ್ಷದಲ್ಲಿಲ್ಲ. ಮುಂದಿನ 3 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಅಂತಹ ಮಾತುಗಳಿಗೆ ಮಹತ್ವ ನೀಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಕಟ್ಟುವ ಕೆಲಸ ಮಾಡುತ್ತೇನೆ. ಪಕ್ಷದಲ್ಲಾಗಲಿ, ಹೈಕಮಾಂಡ್ ಮಟ್ಟದಲ್ಲಾಗಲಿ ಯಾರೂ ನನಗೆ ಅಡ್ಡಿ ಮಾಡುತ್ತಿಲ್ಲ. ನಾಯಕತ್ವ ಬದಲಾವಣೆಯ ಚರ್ಚೆಯೇ ನಡೆದಿಲ್ಲ.
ಕರೊನಾ ನಿರ್ವಹಣೆ ಸರಿಯಾಗಿ ನಡೆದಿಲ್ಲ ಎಂಬ ಮಾತಿದೆ?
ಸರ್ಕಾರ ತನ್ನ ಕೈಲಾದ ಎಲ್ಲ ಪ್ರಯತ್ನ ಮಾಡಿದೆ. ಖಾಸಗಿ ಆಸ್ಪತ್ರೆಗಳ ಮನವೊಲಿಸಿ ಶೇ.50 ಹಾಸಿಗೆ ನೀಡುವಂತೆ ಮಾಡಿದೆ. ಆಂಬುಲೆನ್ಸ್ ವ್ಯವಸ್ಥೆ ಮಾಡುತ್ತಿದ್ದೇವೆ. ಕೋವಿಡ್ ಕೇರ್ ಸೆಂಟರ್​ಗಳನ್ನು ಮಾಡಿದ್ದೇವೆ. ಸಾವಿನ ಪ್ರಮಾಣ ತಡೆಯುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
ಸಚಿವರೇ ಉಸ್ತುವಾರಿ ಜಿಲ್ಲೆಗಳಿಗೆ ಹೋಗುತ್ತಿಲ್ಲ?
ನಮ್ಮೆಲ್ಲ ಸಚಿವರು ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿದ್ದಾರೆ, ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದಾರೆ. ಯಾರೋ ಒಂದಿಬ್ಬರು ಸಚಿವರು ಪ್ರವಾಸ ಮಾಡಿಲ್ಲ. ಎಲ್ಲರಿಗೂ ಜಿಲ್ಲೆಗಳ ಅಧಿಕಾರಿಗಳ ಜತೆ ಸಮನ್ವಯದಿಂದ ಕೆಲಸ ಮಾಡುವಂತೆ ಸೂಚನೆ ನೀಡಿದ್ದೇನೆ.
ಸಚಿವರ ಸಾಧನೆಯನ್ನು ಪರಾಮರ್ಶೆಗೆ ಒಳಪಡಿಸುವಿರಾ?
ಈಗಾಗಲೇ ಪ್ರತಿ ಇಲಾಖೆಯ ಪ್ರಗತಿ ಪರಿಶೀಲನೆ 3 ಬಾರಿ ನಡೆಸಿದ್ದೇನೆ. ಕೊರತೆಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಿದ್ದೇನೆ, ಆದರೆ ಪ್ರಚಾರ ಕೊಟ್ಟಿಲ್ಲ ಅಷ್ಟೇ. ಹೊಸದಾಗಿ ಮತ್ತೆ ಪರಾಮರ್ಶೆ ಮಾಡುವ ಅಗತ್ಯವೇನೂ ಇಲ್ಲ.
ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಏನು ಹೇಳುವಿರಿ?
ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಒಂದೇ ಒಂದು ಕಾನೂನು ಸುವ್ಯವಸ್ಥೆ ಕೆಟ್ಟಿರುವ ಪ್ರಕರಣ ವರದಿಯಾಗಿಲ್ಲ. ಎನ್​ಆರ್​ಸಿ-ಸಿಎಎ ವಿರುದ್ಧ ಹೋರಾಟದ ಸಂದರ್ಭದಲ್ಲೂ ಯಾವುದೇ ಘಟನೆ ವರದಿಯಾಗಿಲ್ಲ.
ಕರೊನಾದಂಥ ಸಂಕಷ್ಟ ಸಂದರ್ಭದಲ್ಲೂ ವ್ಯಾಪಕ ಭ್ರಷ್ಟಾಚಾರಧ ಆರೋಪ ಕೇಳಿ ಬರುತ್ತಿದೆ?
ಕರೊನಾ ನಿಯಂತ್ರಣವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನಾನು ಒಂದೇ ಒಂದು ಶಬ್ದ ಮಾತನಾಡಿಲ್ಲ. ಆದ್ದರಿಂದ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಮ್ಮ ಪಕ್ಷ ಆಲೋಚಿಸುತ್ತಿದೆ.
ನ್ಯಾಯಾಂಗ ತನಿಖೆ ನಡೆಯಲಿ ಎಂಬ ಒತ್ತಾಯ ಇದೆಯಲ್ಲ?
ಭ್ರಷ್ಟಾಚಾರ ಆಗಿದ್ದರೆ ತಾನೇ ತನಿಖೆ.. ನಮ್ಮ ಸಚಿವರೇ ಎಲ್ಲ ದಾಖಲೆ ಕೊಟ್ಟಿಲ್ಲವೇ? ಅವರು ಪ್ರತಿಪಕ್ಷದ ನಾಯಕರು, ದಾಖಲೆ ಪಡೆಯಲು ಸ್ವತಂತ್ರರಿದ್ದಾರೆ. ದಾಖಲೆ ಪಡೆದು ಮಾತನಾಡಬೇಕು, ಸುಳ್ಳು ಆರೋಪ ಮಾಡಬಾರದು. ದಾಖಲೆ ಇಲ್ಲದೆ ಆರೋಪಿಸಿರುವುದರಿಂದ ತನಿಖೆ ಅಗತ್ಯವೇ ಇಲ್ಲ.
ನಿಮ್ಮ ಪಕ್ಷದ ಶಾಸಕರೇ ತನಿಖೆಗೆ ಒತ್ತಾಯಿಸಿದ್ದಾರೆ?
ಯಾರೋ ಒಬ್ಬರು ಯಾವುದೋ ಒಂದು ಕಾರಣಕ್ಕೆ ವಾಸ್ತವ ತಿಳಿಯದೆ ಮಾತನಾಡಿದ್ದಾರಷ್ಟೇ. ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ.
ಕೇಂದ್ರದ ಸಹಕಾರ ಹೇಗಿದೆ?
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ. ನಡ್ಡಾ.. ಹೀಗೆ ಕೇಂದ್ರದ ಯಾರೂ ಯಾವತ್ತೂ ತಲೆ ಹಾಕಿಲ್ಲ. ಕೇಂದ್ರ ಸರ್ಕಾರದಿಂದಲೂ ಸಂಪೂರ್ಣ ಸಹಕಾರ ನೀಡಿದ್ದಾರೆ. ರಾಜ್ಯಕ್ಕೆ ಯಾವುದೇ ಕೊರತೆ ಆಗದಂತೆ ನೋಡಿ ಕೊಂಡಿದ್ದಾರೆ.
ಮುಖ್ಯಮಂತ್ರಿ ಹೇಳಿದ್ದು…
ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
