ಹಾಸನ:ಎಂಟು ಬಾರಿ ದಸರಾ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತು ಮೆರೆದಿದ್ದ ಎಲ್ಲರ ನೆಚ್ಚಿನ ಅರ್ಜುನ ಇನ್ನು ನೆನಪು ಮಾತ್ರ. ಇಂದು ಮದವೇರಿದ ಕಾಡಾನೆಯೊಂದಿಗೆ ನಡೆದ ಕಾಳಗದಲ್ಲಿ ಅರ್ಜುನ ಕೊನೆಯುಸಿರೆಳೆದಿದ್ದಾನೆ. ಅರ್ಜುನನ ಸಾವು ಕೋಟ್ಯಂತರ ಕನ್ನಡಿಗರ ಕಂಗಳಲ್ಲಿ ಕಣ್ಣೀರು ತರಿಸಿದೆ. ತನ್ನ ಗಾಂಭೀರ್ಯ ನಡೆ, ದೈತ್ಯ ಆಕಾರದಿಂದಲೇ ಎಲ್ಲರ ಗಮನ ಸೆಳೆದಿದ್ದ ಅರ್ಜುನನ ಸಾವಿಗೆ ಎಲ್ಲರು ಸಂತಾಪ ಸೂಚಿಸುತ್ತಿದ್ದಾರೆ. ತನ್ನ ಉಸಿರು ಚೆಲ್ಲುವಾಗಲೂ ಅರ್ಜುನ ಬೇರೆಯವರ ಉಸಿರು ಕಾಪಾಡುವ ಮೂಲಕ ಅರ್ಜುನ ಪ್ರಾಣ ತ್ಯಾಗ ಮಾಡಿ, ಮರೆಯಾಗಿದ್ದಾನೆ.
ಇತ್ತೀಚೆಗೆ ಹಾಸನದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಜಮೀನುಗಳಿಗೆ ದಾಂಗುಡಿ ಇಡುತ್ತಿದ್ದು, ಸಾಕಷ್ಟು ಬೆಳೆಗಳನ್ನು ನಾಶಮಾಡುತ್ತಿವೆ. ಇದರ ನಡುವೆ ಕಾಡಾನೆಗಳ ಉಪಟಳಕ್ಕೆ ಬ್ರೇಕ್​ ಹಾಕಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾರ್ಯಾಚರಣೆ ಮುಂದುವರಿದಿತ್ತು. ಈ ವೇಳೆ ಒಂಟಿಸಲಗವೊಂದರ ದಾಳಿಗೆ ಅರ್ಜುನ ಬಲಿಯಾಗಿದ್ದಾನೆ.
ನಾಲ್ಕು ಸಾಕಾನೆಗಳ ಮೂಲಕ ಸೋಮವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮಧ್ಯಾಹ್ನ ಎಸಳೂರು ಬಳಿ ಕಾಡಾನೆಗೆ ಅರಿವಳಿಕೆ ನೀಡುವ ಸಂದರ್ಭದಲ್ಲಿ ಏಕಾಏಕಿ ಒಂಟಿ ಸಲಗ ಅರ್ಜುನನ ಮೇಲೆ ದಾಳಿ ಮಾಡಿದೆ. ಇದರಿಂದ ಬೆದರಿದ ಇತರೆ ಮೂರು ಸಾಕಾನೆಗಳು ಓಡಿ ಹೋಗಿವೆ. ಆಗ ಅರ್ಜುನ ಮತ್ತು ಒಂಟಿ ಸಲಗದ ನಡುವೆ ಕಾದಾಟ ನಡೆದಿದೆ. ಮಾವುತನಿಗೂ ಕೂಡ ನಿಯಂತ್ರಿಸಲಾಗದೆ ಆನೆಯಿಂದ ನೆಗೆದು ಸ್ಥಳದಿಂದ ಓಡಿಹೋಗಿದ್ದಾರೆ.
ಅರ್ಜುನ ಎದುರಾಗದಿದ್ದರೆ ಭಾರಿ ಅನಾಹುತಅರಿವಳಿಕೆ ನೀಡುವ ಸಂದರ್ಭದಲ್ಲಿ ಮದವೇರಿದ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಕಾಡಾನೆಯ ರಣಭೀಕರ ಆಕ್ರೋಶಕ್ಕೆ ಎದುರಿದ ಮೂರು ಸಾಕಾನೆಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಸ್ಥಳದಿಂದ ಕಾಲ್ಕಿತ್ತವು. ಈ ವೇಳೆ ಕಾಡಾನೆಯ ದಾಳಿಗೆ ಅರ್ಜುನ ಪ್ರತಿರೋಧ ತೋರದೆ ತಾನೂ ಕೂಡ ಎಸ್ಕೇಪ್​ ಆಗಿದ್ದರೆ, ಸಾಕಾನೆಗಳು ತಪ್ಪಿಸಿಕೊಳ್ಳಲು ಕಷ್ಟವಾಗುತ್ತಿತ್ತು ಮತ್ತು ಮಾವುತರು ಸಹ ಮದವೇರಿದ ಆನೆಯ ಆಕ್ರೋಶಕ್ಕೆ ಬಲಿಯಾಗುವ ಸಾಧ್ಯತೆ ಇತ್ತು. ಆದರೆ, ಅರ್ಜುನ, ಒಂಟಿ ಸಲಗನ ವಿರುದ್ಧ ಕಾದಾಡಿ ಸಂಭಾವ್ಯ ಅಪಾಯವನ್ನು ತಪ್ಪಿಸುವ ಮೂಲಕ ವೀರ ಮರಣ ಹೊಂದಿದ್ದಾನೆ. ಅರ್ಜುನ ಮತ್ತು ಕಾಡಾನೆ ಎರಡರ ನಡುವೆ ಭೀಕರ ಕಾಳಗ ನಡೆಯುತ್ತಿದ್ದಂತೆ ಮಾವುತರು ಇಳಿದು ಅಲ್ಲಿಂದ ಪರಾರಿಯಾಗುವ ಮೂಲಕ ಜೀವ ಉಳಿಸಿಕೊಂಡರು. ಮದವೇರಿದ ಒಂಟಿಸಲಗನ ದಾಳಿಗೆ ನಲುಗಿದ ಅರ್ಜುನ, ಸ್ಥಳದಲ್ಲಿಯೇ ಉಸಿರು ಚೆಲ್ಲಿದನು.
ಅರ್ಜುನ ಬರಿ ಆನೆಯಲ್ಲ ಭಾವನೆಅರ್ಜುನ ಕೇವಲ ಆನೆಯಲ್ಲ ಆತ ಅಸಂಖ್ಯಾತ ಕನ್ನಡಿಗರ ಭಾವನೆಯಾಗಿದ್ದ. ಅರ್ಜುನನ ಗಾಂಭೀರ್ಯ ಹೆಜ್ಜೆ, ಆತನ ದೈತ್ಯ ರೂಪ ಮತ್ತು ತುಂಟತನದಿಂದ ಅಭಿಮಾನಿ ಬಳಗವನ್ನೇ ಹೊಂದಿದ್ದ. ಚಾಮುಂಡಿಯನ್ನು ಹೊತ್ತು ಆತ ಸಾಗುತ್ತಿದ್ದ ರೀತಿ ಇಂದಿಗೂ ಅನೇಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಮತ್ತು ಜನರ ಭಾವನೆಗಳಲ್ಲಿ ಅರ್ಜುನ ಬೆರೆತು ಹೋಗಿದ್ದಾನೆ. ಇನ್ನು ಆತ ನೆನಪು ಎಂಬುದನ್ನು ಕನ್ನಡಿಗರಿಗೆ ಅರಗಿಸಿಕೊಳ್ಳು ಆಗುತ್ತಿಲ್ಲ.

ದಸರಾದಲ್ಲಿ ಭಾಗಿಯಾಗಿದ್ದಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೈಸೂರು ದಸರಾದಲ್ಲಿಯೂ ಅರ್ಜುನ ಭಾಗಿಯಾಗಿದ್ದ. ಮಾಜಿ ಕ್ಯಾಪ್ಟನ್​ ಅರ್ಜುನನೇ ಈ ಬಾರಿಯೂ ಹೆಚ್ಚು ತೂಕದೊಂದಿಗೆ ಬಲಶಾಲಿ ಎನಿಸಿಕೊಂಡಿದ್ದ. ಮೊದಲ ಹಂತದ ತೂಕದಲ್ಲಿ ಅರ್ಜುನ 5680 ಕೆಜಿ ಇದ್ದ ಅರ್ಜುನ, ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ 5850 ಕೆಜಿ ತೂಕವನ್ನು ಹೊಂದುವ ಮೂಲಕ ಇಡೀ ಗಜಪಡೆಯ ಪೈಕಿ ಅರ್ಜುನನೇ ತುಂಬಾ ಬಲಶಾಲಿಯಾಗಿದ್ದ. ಇಂತಹ ದೈತ್ಯ ಆನೆಯನ್ನು ಕಳೆದುಕೊಂಡಿದ್ದು, ಮೈಸೂರು ದಸರಾ ಪರಂಪರೆಗೆ ಭರಿಸಲಾಗದ ನಷ್ಟವಾಗಿದೆ.
ಅರ್ಜುನನ ಹಿನ್ನೆಲೆ1968ರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಕನಕೋಟೆಯ ಕಾಡುಗಳಿಂದ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಯಿತು. ಆತನನ್ನು ಚೆನ್ನಾಗಿ ಪಳಸಿಗಿದ ನಂತರ 1990ರ ದಶಕದಲ್ಲಿ ಮೈಸೂರಿನಲ್ಲಿ ದಸರಾ ಉತ್ಸವದ ಶಿಬಿರಗಳಿಗೆ ಕರೆತರಲಾಯಿತು. ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತಿತ್ತಾದರೂ ಬಲರಾಮನ ಬಳಿಕ ಅರ್ಜುನನೇ ಅಂಬಾರಿ ಹೊರುತ್ತಿದ್ದ.
ಅರ್ಜುನ ಮೃತಪಟ್ಟ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆಗಳ ಹಿಂಡು ದಾಂಗುಡಿ ಇಡುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಅದರಲ್ಲೂ ರೈತರ ಪಾಲಿಗೆ ದುಸ್ವಪ್ನವಾಗಿವೆ. ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ ವಲನಗಳ ಮೇಲೆ ಗಮನ ಇಡುವ ಕೆಲಸವನ್ನೂ ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬೇಲೂರು ತಾಲ್ಲೂಕಿನ ಅರೇಹಳ್ಳಿ ಬಳಿಯ ಅಣ್ಣಾಮಲೈ ಎಸ್ಟೇಟ್‌ನಲ್ಲಿ ಮತ್ತು ಬೇಲೂರು ತಾಲೂಕಿನ ವಳಲು‌ ಗ್ರಾಮದಲ್ಲಿ ಎರಡು ಕಾಡಾನೆಯೊಂದನ್ನು ಸೆರೆಹಿಡಿಯಲಾಗಿತ್ತು.
ಕಾಡಾನೆಯೊಂದಿಗೆ ಕಾದಾಡಿ ಪ್ರಾಣಬಿಟ್ಟ ಅರ್ಜುನ! 8 ಬಾರಿ ಅಂಬಾರಿ ಹೊತ್ತಿದ್ದ ಮಾಜಿ ಕ್ಯಾಪ್ಟನ್​ ಇನ್ನು ನೆನಪು ಮಾತ್ರ

ನಾನ್​ವೆಜ್​ ಹೋಟೆಲ್​ಗಳನ್ನು ಮುಚ್ಚಿ! ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ BJP ಶಾಸಕರಿಂದ ಖಡಕ್​ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
