ರಾಮರಾಜ್ಯದಲ್ಲಿ ಪ್ರಜೆಗಳೆಲ್ಲರೂ ಸದ್ಗುಣ ಸಂಪನ್ನರಾಗಿದ್ದರು ಹಾಗೂ ಸತ್ಯವಂತರಾಗಿದ್ದರು. ರಾಜನಾದ ಶ್ರೀರಾಮನು ಸ್ವತಃ ಧರ್ವಿುಷ್ಠನಾಗಿ, ಧರ್ಮಕ್ಕೆ ಅನುಗುಣವಾಗಿ ಆಳ್ವಿಕೆ ನಡೆಸುತ್ತಿದ್ದ ಕಾರಣದಿಂದಲೇ ಪ್ರಜೆಗಳೆಲ್ಲರೂ ಧರ್ಮಪಾಲಕರಾಗಿ ಇರಲು ಸಾಧ್ಯವಾಗಿತ್ತು ಎಂಬುದು ಗಮನಾರ್ಹ.
ಪತಿಧರ್ಮವನ್ನು ಪಾಲಿಸಲು, ರಾಮನು ಸುಗ್ರೀವನ ವಾನರ ಸೈನ್ಯದ ಬಲದಿಂದ, ಸಮುದ್ರದ ಮೇಲೆಯೇ ಸೇತುವೆಯನ್ನು ನಿರ್ವಿುಸಿ, ಅದರ ಮೇಲೆ ನಡೆದು ಸೈನ್ಯದೊಂದಿಗೆ ಲಂಕೆಗೆ ಹೋಗಿ, ಪರಾಕ್ರಮಿ ರಾವಣ ಹಾಗೂ ಅವನ ಅಜೇಯ ಸೈನ್ಯದೊಡನೆ ಘನಘೊರ ಯುದ್ಧವನ್ನು ಮಾಡಿ, ಅದರಲ್ಲಿ ಗೆದ್ದು ಸೀತೆಯನ್ನು ರಕ್ಷಿಸಿದನು. ಪತಿಧರ್ಮಪಾಲನೆಗಾಗಿ ಅವನು ಅನುಭವಿಸಿದ ಕಷ್ಟ-ನಷ್ಟಗಳು ಅಪಾರ. ಯುದ್ಧಾನಂತರ, ಸೀತಾಮಾತೆಯ ಚಾರಿತ್ರ್ಯದ ಬಗೆಗಿನ ಜನರ ಸಲ್ಲದ ಊಹಾಪೋಹಗಳ ಶಮನಕ್ಕಾಗಿ ರಾಮನು ಅವಳನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದಾಗ, ಸ್ವಯಂ ಅಗ್ನಿದೇವನೇ ಎದ್ದುಬಂದು, ‘ವಿಶುದ್ಧಭಾವಾಂ ನಿಷ್ಪಾಪಾಂ ಪ್ರತಿಗೃಹಣೀಷ್ವ ಮೈಥಿಲೀಂ – ಪರಿಶುದ್ಧ ಚಾರಿತ್ರ್ಯವಂತಳೂ, ಪಾಪರಹಿತಳೂ ಆದ ಸೀತೆಯನ್ನು ಇದೋ ಸ್ವೀಕರಿಸು’ ಎಂದು ಆ ಆದರ್ಶ ಪತಿ-ಪತ್ನಿಯರನ್ನು ಹರಸುತ್ತಾನೆ. ಪ್ರತಿಯಾಗಿ ರಾಮನು, ‘ವಿಶುದ್ಧಾ ತ್ರಿಷು ಲೋಕೇಷು ಮೈಥಿಲೀ ಜನಕಾತ್ಮಜಾ -ಮಿಥಿಲಾ ದೇಶದ ಮಹರಾಜ ಜನಕನ ಮಗಳಾದ ಸೀತೆ ಮೂರು ಲೋಕಗಳಲ್ಲೇ ಪರಿಶುದ್ಧ ಚಾರಿತ್ರ್ಯವನ್ನು ಹೊಂದಿದವಳು’ ಎನ್ನುತ್ತ ಅವಳನ್ನು ಸ್ವೀಕರಿಸಿ ಅಯೋಧ್ಯೆಗೆ ಮರಳುತ್ತಾನೆ.
ಧರ್ಮಸ್ವರೂಪನಾದ ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯ ರಾಮರಾಜ್ಯದ ಪರಿಯನ್ನು ಮಹರ್ಷಿ ವಾಲ್ಮೀಕಿ ಹೀಗೆ ವರ್ಣಿಸಿದ್ದಾನೆ:
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾ ಲೋಭವಿವರ್ಜಿತಾಃ |ಸ್ವಕರ್ಮಸು ಪ್ರವರ್ತತೇ ತುಷ್ಠಾಃ ಸೈ ್ವೆವ ಕರ್ಮಭಿಃ ||ಆಸನ್ ಪ್ರಜಾ ಧರ್ಮಪರಾ ರಾಮೇ ಶಾಸತಿ ನಾನೃತಾಃ |ಸರ್ವೆ ಲಕ್ಷಣಸಂಪನ್ನಾಃ ಸರ್ವೆ ಧರ್ಮಪರಾಯಣಾಃ || (ವಾಲ್ಮೀಕಿ ರಾಮಾಯಣ 6.128.104-106)
ಬ್ರಾಹ್ಮಣರು (ಬುದ್ಧಿಜೀವಿಗಳು), ಕ್ಷತ್ರಿಯರು (ದೇಶ ನಾಯಕರು), ವೈಶ್ಯರು (ವ್ಯಾಪಾರಸ್ಥರು ಮತ್ತು ಕೃಷಿಕರು), ಶೂದ್ರರು (ಕಾರ್ವಿುಕರು)- ಇವರೆಲ್ಲರೂ ಸಮಾಜದಲ್ಲಿ ಲೋಭರಹಿತರಾಗಿ ತಮ್ಮ ಕರ್ತವ್ಯಗಳನ್ನು ಧರ್ಮದೃಷ್ಟಿಯಿಂದ ನಿರ್ವಹಿಸುತ್ತ ಸಂತೃಪ್ತಿಮಯ ಹಾಗೂ ಸಂತೋಷಕರ ಜೀವನ ನಡೆಸುತಿದ್ದರು.
ರಾಮರಾಜ್ಯದಲ್ಲಿ ಪ್ರಜೆಗಳೆಲ್ಲರೂ ಸದ್ಗುಣ ಸಂಪನ್ನರಾಗಿದ್ದರು ಹಾಗೂ ಸತ್ಯವಂತರಾಗಿದ್ದರು. ರಾಜನಾದ ಶ್ರೀರಾಮನು ಸ್ವತಃ ಧರ್ವಿುಷ್ಠನಾಗಿ, ಧರ್ಮಕ್ಕನುಗುಣವಾಗಿ ಆಳ್ವಿಕೆ ನಡೆಸುತ್ತಿದ್ದ ಕಾರಣದಿಂದಲೇ ಪ್ರಜೆಗಳೆಲ್ಲರೂ ಧರ್ಮಪಾಲಕರಾಗಿರಲು ಸಾಧ್ಯವಾಗಿತ್ತು.
ಸೀತಾಮಾತೆಯ ಚಾರಿತ್ರ್ಯದ ಮೇಲೆ ಸಾಮಾನ್ಯ ಪ್ರಜೆಗಳ ಆರೋಪವನ್ನು ಪರಿಗಣಿಸಿ ಶ್ರೀರಾಮನು ಸೀತೆಯನ್ನು ಪರಿತ್ಯಾಗ ಮಾಡಿದ ಘಟನೆ ಅಂದಿನಿಂದ ಇಂದಿನವರೆಗೆ ಸಾಕಷ್ಟು ವಾದ-ವಿವಾದಗಳಿಗೆ ಗುರಿಯಾಗಿದ್ದು, ರಾಮನು ತನ್ನನ್ನೇ ನಂಬಿದ್ದ ಆದರ್ಶ ಪತ್ನಿಗೆ ಅನ್ಯಾಯವನ್ನೆಸಗಿದ ಕ್ರೂರ ಪತಿ ಎಂಬ ಆಪಾದನೆಗಳು ಬಂದಿರುವುದೂ ಹೌದು. ಆದರೆ ನಾವು ಆ ಸನ್ನಿವೇಶವನ್ನು ಧರ್ಮದ ದೃಷ್ಟಿಕೋನದಿಂದ ನೋಡಬೇಕಾಗಿದೆ.
ಶ್ರೀರಾಮನು ಪಿತೃವಾಕ್ಯ ಪರಿಪಾಲನೆ ಮಾಡಿ ಪುತ್ರಧರ್ಮವನ್ನು ಪಾಲಿಸಿದನು. ವನವಾಸದ ಸಮಯದಲ್ಲಿ ಸೀತೆಗಾಗಿ ಘೊರ ಯುದ್ಧವನ್ನೇ ಮಾಡಿ, ಆಕೆಯನ್ನು ಸಂರಕ್ಷಿಸಿ ಪತಿಧರ್ಮ ಪಾಲಿಸಿದನು. ಅದೇ ರೀತಿ ಅಯೋಧ್ಯೆಯ ಅರಸನಾಗಿ ಅವನು ತನ್ನ ವೈಯಕ್ತಿಕ ಹಾಗೂ ಕೌಟುಂಬಿಕ ಧರ್ಮ-ಕರ್ತವ್ಯಗಳನ್ನು ಬದಿಗೊತ್ತಿ, ಸದಾ ರಾಜಧರ್ಮ ಪಾಲಿಸಿದನು. ತನ್ನ ಅತ್ಯುನ್ನತ ಧರ್ಮವಾದ ರಾಜಧರ್ಮ ಪಾಲನೆಗಾಗಿ ಕುಟುಂಬಧರ್ಮವನ್ನು ತ್ಯಜಿಸಿದುದು ಸೀತಾ ಪರಿತ್ಯಾಗಕ್ಕೆ ಕಾರಣವಾಯಿತು.
ತನ್ನ ಗೂಢಚಾರರ ಮೂಲಕ ಸೀತೆಯ ಚಾರಿತ್ರ್ಯದ ಬಗೆಗಿನ ಪ್ರಜೆಗಳ ಆಪಾದನೆಗಳನ್ನು ತಿಳಿದು ಅವಳನ್ನು ಪರಿತ್ಯಾಗ ಮಾಡಿ ಲಕ್ಷ್ಮಣನಿಗೆ ಕಾಡಿನಲ್ಲಿ ಬಿಡಲು ಆದೇಶಿಸಿದ ರಾಮನು, ಅವಳನ್ನು ಕಾಡಿನಲ್ಲಿ ಎಲ್ಲೆಂದರಲ್ಲಿ ಬಿಡುವಂತೆ ಆಜ್ಞಾಪಿಸಲಿಲ್ಲ. ಬದಲಿಗೆ ವಾಲ್ಮೀಕಿ ಋಷಿಯ ಆಶ್ರಮದ ಪರಿಸರದಲ್ಲಿ ಬಿಡಲು ಆದೇಶಿಸಿದ. ತನ್ಮೂಲಕ ಅವನು ಸೀತೆಗೆ ವಾಲ್ಮೀಕಿ ಮಹರ್ಷಿಯ ಪವಿತ್ರ ಆಶ್ರಯವನ್ನು ಕಲ್ಪಿಸಿ, ಆಕೆಗೆ ಭದ್ರತೆ-ರಕ್ಷಣೆಗಳನ್ನು ಒದಗಿಸಿದ. ಬ್ರಹ್ಮಾಂಡ ಪುರಾಣದ ಪೂರ್ವಾರ್ಧದಲ್ಲಿ ಬರುವ ಅಧ್ಯಾತ್ಮ ರಾಮಯಣದ ಉತ್ತರ ಕಾಂಡದಲ್ಲಿ ಮೇಲಿನ ಸನ್ನಿವೇಶವನ್ನು ಹೀಗೆ ವರ್ಣಿಸಲಾಗಿದೆ:
ತತೋ ವಿಸೃಜ್ಯ ಸಚಿವನ್ವಿಜಯಂ ಸುಹೃದಸ್ತಥಾ |ಆಹೂಯ ಲಕ್ಷ್ಮಣಂ ರಾಮೋ ವಚನಂ ಚೇದಮಬ್ರವೀತ್ ||
ಲೋಕಾಪವಾದಸ್ತು ಮಹಾನ್ಸೀತಾಮಾಶ್ರಿತ್ಯ ಮೇಭವತ್ |ಸೀತಾಂ ಪ್ರಾತಃ ಸಮಾನೀಯ ವಾಲ್ಮೀಕೇರಾಶ್ರಮಾಂತಿಕೇ ||
ತ್ಯಕ್ತಾ ್ವ ಶೀಘ್ರಂ ರಥೇನ ತ್ವಂ ಪುನರಾಯಾಹಿ ಲಕ್ಷ್ಮಣ |ವಕ್ಷ್ಯಸೇ ಯದಿ ವಾ ಕಿಂಚಿತ್ತದಾ ಮಾಂ ಹತವಾನಸಿ ||
ಸೀತೆಯ ಮೇಲಿನ ಆರೋಪದ ವಾರ್ತೆಯನ್ನು ಕೇಳಿದ ರಾಮನು ಗೂಢಚಾರನಾದ ವಿಜಯ ಹಾಗೂ ಅಲ್ಲಿದ್ದ ಸಚಿವರನ್ನು ಹೊರಗೆ ಕಳುಹಿಸಿ ಲಕ್ಷ್ಮಣನನ್ನು ಬಳಿಗೆ ಕರೆದು, ‘ಅಪಹರಿಸಲ್ಪಟ್ಟ ಸೀತೆಯನ್ನು ಮರಳಿ ಕರೆತಂದು ಅವಳೊಂದಿಗೆ ನಾನು ಅರಮನೆಯಲ್ಲಿ ಇರುವುದರಿಂದ ಪ್ರಜೆಗಳು ಆ ಕುರಿತಾಗಿ ತಪ್ಪಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ನೀನು, ನಾಳೆಯ ದಿನ ಪ್ರಾತಃಕಾಲ ಅವಳನ್ನು ವಾಲ್ಮೀಕಿ ಮುನಿಯ ಆಶ್ರಮದ ಆಸುಪಾಸಿನ ಪರಿಸರದಲ್ಲಿ ಬಿಟ್ಟು ಬಾ. ಈ ಕುರಿತು ನೀನು ಏನನ್ನಾದರೂ ನನ್ನ ಬಳಿ ವಾದಮಾಡಿದರೆ, ನನ್ನನ್ನು ನೀನು ಕೊಂದಂತೆಯೇ ಸರಿ!’
ಶ್ರೀರಾಮನು ಪತಿಯಾಗಿ ತೆಗೆದುಕೊಂಡ ಈ ಕ್ರಮವನ್ನು ಖಂಡಿಸುವವರು, ಅವನು ತೊಟ್ಟಿದ್ದ ಏಕಪತ್ನೀವ್ರತವನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು. ಆ ಕಾಲದಲ್ಲಿನ ರಾಜರು ಬಹುಪತ್ನಿಯರನ್ನು ಹೊಂದಿರುವುದು ಸಾಮಾನ್ಯವಾಗಿತ್ತು. ಆದರೆ ಅದೇ ಕಾಲದವನಾದ ಶ್ರೀರಾಮನು ತನ್ನ ಪತಿಧರ್ಮವನ್ನು ಪಾಲಿಸಲು ಹಾಗೂ ಸೀತೆಯ ಮೇಲಿನ ಗಾಢಪ್ರೇಮದ ಪ್ರತೀಕವಾಗಿ ಏಕಪತ್ನೀವ್ರತವನ್ನು ಪಾಲಿಸಲು ಸಂಕಲ್ಪಿಸಿದ್ದ. ಆದರೆ ಅರಸನಾಗಿ ಅವನು, ಪ್ರಜೆಗಳೆಲ್ಲರೂ ಇದೇ ನೀತಿಯನ್ನು ಪಾಲಿಸಬೇಕೆಂಬ ನಿಯಮವೇನೂ ಹಾಕಿರಲಿಲ್ಲ. ಏಕೆಂದರೆ, ರಾಜನಾಗಿ ತಾನು ಹೇಗೆ ಬದುಕಿ ತೋರಿಸುವನೋ ಅದನ್ನೇ ಪ್ರಜೆಗಳು ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆಂಬ ವಿಷಯ ಅವನಿಗೆ ಸ್ಪಷ್ಟವಾಗಿತ್ತು.
ಭಾಗವತ ಪುರಾಣದಲ್ಲಿ ಇದರ ಉಲ್ಲೇಖವಿದೆ:ಜುಗೋಪ ಪಿತೃವದ್ರಾಮೋ ಮೇನಿರೇ ಪಿತರಂ ಚ ತಂ |
ರಾಮನು ಒಬ್ಬ ತಂದೆಯಂತೆ ಪ್ರಜೆಗಳನ್ನು ಪಾಲಿಸುತ್ತಿದ್ದನು. ಅಂತೆಯೇ ಪ್ರಜೆಗಳೂ ಅವನನ್ನು ತಂದೆಯನ್ನಾಗಿ ಸ್ವೀಕರಿಸಿದ್ದರು. ಅಲ್ಲದೆ, ಪತ್ನೀಸಮೇತನಾಗಿ ರಾಜನು ಮಾಡಬೇಕಾದ ಅಶ್ವಮೇಧಯಾಗದ ಸಂಧರ್ಭದಲ್ಲಿಯೂ ಅವನು ಅನ್ಯ ವಿವಾಹವಾಗದೆ, ಸೀತಾಮಾತೆಯ ಸ್ವರ್ಣಪ್ರತಿಮೆಯೊಂದಿಗೆ ತಾನು ಕುಳಿತು ಯಾಗವನ್ನು ಕೈಗೊಂಡನು. ಇದು ಪತ್ನಿಯಾದ ಸೀತೆಯೆಡೆಗೆ ಅವನು ತೋರಿದ ನಿಷ್ಠೆ ಹಾಗೂ ಅವಳ ಮೇಲಿದ್ದ ಪರಿಪೂರ್ಣ ಪ್ರೇಮಕ್ಕೆ ಸಾಕ್ಷಿಯಾಗಿದೆ.
ರಾಮನು ತನ್ನ ಜೀವನದಲ್ಲಿ ನಿರ್ವಹಿಸಬೇಕಾಗಿದ್ದ ಪಾತ್ರ, ಕರ್ತವ್ಯ ಮತ್ತು ಧರ್ಮಗಳು ಹಲವಾರು. ಒಬ್ಬ ಆದರ್ಶ ರಾಜನಾಗಿ (ರಾಜಧರ್ಮ), ಆದರ್ಶ ಪತಿಯಾಗಿ (ಪತಿಧರ್ಮ), ಆದರ್ಶ ಭ್ರಾತೃವಾಗಿ (ಭ್ರಾತೃಧರ್ಮ), ಆದರ್ಶ ತಂದೆಯಾಗಿ (ಪಿತೃಧರ್ಮ), ಆದರ್ಶ ಪುತ್ರನಾಗಿ (ಪುತ್ರಧರ್ಮ), ಇತ್ಯಾದಿ. ಅದೇ ರೀತಿ ಸೀತೆ ಕೂಡ ಆದರ್ಶ ರಾಣಿಯಾಗಿ, ಆದರ್ಶ ಪತ್ನಿಯಾಗಿ, ಆದರ್ಶ ತಾಯಿಯಾಗಿ, ಆದರ್ಶ ಸೊಸೆಯಾಗಿ, ಆದರ್ಶ ಅತ್ತಿಗೆಯಾಗಿ- ಹೀಗೆ ಹಲವಾರು ಧರ್ಮಗಳನ್ನು ಪಾಲಿಸಬೇಕಾಗಿತ್ತು.
ಎಲ್ಲ ಧರ್ಮಗಳೂ ಒಂದೇ ಮಟ್ಟದವುಗಳಲ್ಲ. ಮೊದಲೇ ಉಲ್ಲೇಖಿಸಿರುವಂತೆ, ಸರ್ವರ ಹಿತವನ್ನು ಕಾಯುವ ಧರ್ಮ ವೈಯಕ್ತಿಕ ಧರ್ಮಕ್ಕಿಂತ ಮೇಲಿನ ಪ್ರಾಶಸ್ಱವನ್ನು ಪಡೆದಿದೆ. ಹಾಗಾಗಿ, ಅಯೋಧ್ಯೆಯ ಅರಸನಾಗಿ ಶ್ರೀರಾಮನ ಧರ್ಮ ತನ್ನ ಹಾಗೂ ಕುಟುಂಬದ ಹಿತಕ್ಕಿಂತ ಮುಖ್ಯವಾಗಿ ರಾಜ್ಯ ಹಾಗೂ ಪ್ರಜೆಗಳ ಹಿತವನ್ನು ಸಾಧಿಸುವುದೇ ಆಗಿತ್ತೆಂಬುದು ಖಚಿತ! ಆದ್ದರಿಂದ ರಾಮನು ಪತಿಧರ್ಮಕ್ಕಿಂತ ಮೇಲಾಗಿ ರಾಜಧರ್ಮವನ್ನೇ ಪಾಲಿಸಬೇಕಾಗಿತ್ತೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಪತಿಯಾಗಿ ಪತ್ನಿಯ ಹಿತವನ್ನು ಕಾಯುವುದು ಧರ್ಮವೇ ಸರಿ. ಆದರೆ, ಒಬ್ಬ ನಾಯಕ ಅಥವಾ ರಾಜನಾಗಿ ತನ್ನ ಪ್ರಾಣಸಖಿಯಾದ ಪತ್ನಿಯನ್ನು ಮತ್ತು ತಮ್ಮಿಬ್ಬರ ಸುಖ-ಸಂತೋಷಗಳನ್ನು ತ್ಯಾಗ ಮಾಡಿ ಪ್ರಜೆಗಳಿಗೆ ಉನ್ನತ ಆದರ್ಶವನ್ನು ಹಾಕಿಕೊಡುವುದು, ಪತಿಧರ್ಮಪಾಲನೆಗಿಂತ ಮಿಗಿಲಾದ ರಾಜಧರ್ಮ. ಪತಿಧರ್ಮವನ್ನು ತ್ಯಜಿಸಿ ರಾಜಧರ್ಮವನ್ನು ಆರಿಸಿಕೊಳ್ಳುವುದು ಧೈರ್ಯಶಾಲಿ ಹಾಗೂ ನಿಸೃ ್ಪ ವ್ಯಕ್ತಿಗೆ ಮಾತ್ರವೇ ಸಾಧ್ಯ.
ಶ್ರೀರಾಮನು, ಮರ್ಯಾದಾ ಪುರುಷೋತ್ತಮನಾಗಿ, ಮೇಲಿನ ಎಲ್ಲ ಉನ್ನತ ಧರ್ಮಗಳನ್ನು ಪಾಲಿಸುವ ಮೂಲಕ ತನ್ನಲ್ಲಿ ಸೀತೆಯೆಡೆಗಿದ್ದ ಉತ್ಕಟ ಅನುರಾಗವನ್ನು ಗೆದ್ದನು. ಆದರೆ, ಅವನಲ್ಲಿ ಸೀತೆಯ ಮೇಲಿದ್ದ ಆಳವಾದ ಪ್ರೇಮಕ್ಕೆ ಒಂದಿಷ್ಟೂ ಚ್ಯುತಿಯಾಗಿರಲಿಲ್ಲ. ಅದೇ ರೀತಿ, ಒಬ್ಬ ಆದರ್ಶ ರಾಣಿಯಾದ ಸೀತೆಗೆ ಈ ಎಲ್ಲ ತತ್ವಗಳ ಕುರಿತು ಅರಿವಿತ್ತು. ಆದ್ದರಿಂದಲೇ ಅವಳು ಎಂದೂ ಒಬ್ಬ ರಾಣಿಯಾಗಿ, ಪತ್ನಿಯಾಗಿ ಅಥವಾ ಒಬ್ಬ ಪ್ರಜೆಯಾಗಿ ಕೂಡ ತನ್ನ ಹಕ್ಕನ್ನು ಪ್ರತಿಪಾದಿಸಿ ಯಾವುದೇ ಬೇಡಿಕೆಗಳನ್ನು ರಾಮನ ಮುಂದಿಡಲಿಲ್ಲ. ಸರ್ವರ ಹಿತಸಾಧನೆಗಾಗಿ ಹಾಗೂ ತನಗೆ ಪ್ರಿಯನಾದ ರಾಮನ ಧರ್ಮಪಾಲನೆಗೆ ಅನುಕೂಲವಾದುದನ್ನು ಮಾತ್ರವೇ ಅವಳು ಮಾಡಿದಳು. ಸೀತೆಯನ್ನು ಗಂಗಾತೀರದಲ್ಲಿರುವ ವಾಲ್ಮೀಕಿ ಋಷ್ಯಾಶ್ರಮದ ಪರಿಸರದಲ್ಲಿ ಬಿಟ್ಟ ಲಕ್ಷ್ಮಣನು, ಆಕೆಗೆ ರಾಮನ ಆಜ್ಞೆಯನ್ನು ತಿಳಿಸಿದಾಗ, ಸೀತೆ ಲಕ್ಷ್ಮಣನಿಗೆ ಹೀಗೆ ಹೇಳಿದಳು: ‘ಸದಾ ನೀತಿಯಲ್ಲಿ ನೆಲೆಗೊಂಡಿರುವ ರಾಜನಾದ ಶ್ರೀರಾಮನಿಗೆ ನೀನು ಇದನ್ನು ತಿಳಿಸು, ನೀವು ನಿಮ್ಮ ಸಹೋದರರ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತೀರೋ, ಅಂತೆಯೇ ನಿಮ್ಮ ಪ್ರಜೆಗಳ ವಿಷಯದಲ್ಲಿಯೂ ನಡೆದುಕೊಳ್ಳಬೇಕು. ಇದು ನಿಮ್ಮ ಕರ್ತವ್ಯವಾಗಿದೆ ಹಾಗೂ ಇದು ನಿಮಗೆ ಅಪಾರ ಖ್ಯಾತಿಯನ್ನು ತರುತ್ತದೆ. ಇದರ ಆಚರಣೆಯಿಂದ ನೀವು ಉತ್ತಮ ಫಲವನ್ನು ಖಂಡಿತವಾಗಿ ಪಡೆಯುವಿರಿ. ಓ ರಘು ರಾಜಕುಮಾರ! ನನಗೊದಗಿ ಬಂದ ಈ ದುಃಸ್ಥಿತಿಗೆ ಎಳ್ಳಷ್ಟೂ ನಾನು ದುಃಖಿತಳಾಗುವುದಿಲ್ಲ ಏಕೆಂದರೆ ನಿಮ್ಮ ಧರ್ಮಯುತವಾದ ಹೆಸರನ್ನು ಕೆಡದಂತೆ ಇಡುವುದು ನನ್ನ ಧರ್ಮವೂ ಆಗಿದೆ!’ (ಉತ್ತರ ಕಾಂಡ)
ಹೀಗೆ ರಾಮಾಯಣವು ಶ್ರೀರಾಮನು ತನ್ನ ಜೀವನದ ಪ್ರತಿ ಹೆಜ್ಜೆಯಲ್ಲಿಯೂ, ಎಂಥ ವಿಷಮ ಪರಿಸ್ಥಿತಿಯಲ್ಲಿಯೂ ಎತ್ತಿ ಹಿಡಿದ ಧರ್ಮದ ಕಥೆಯಾಗಿದೆ. ಆ ಕಾರಣದಿಂದಲೇ ಇಂದಿಗೂ ‘ರಾಮೋ ವಿಗ್ರಹವಾನ್ ಧರ್ಮಃ- ಶ್ರೀರಾಮನು ಧರ್ಮದ ಸಾಕಾರ ರೂಪ’ ಎಂದು ಮಾನವ ಜನಾಂಗವು ರಾಮನನ್ನು ನೆನೆದು, ಇಂದಿಗೂ ಪೂಜಿಸುತ್ತಿದೆ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)
ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಸಿಪಿಐ ಅನ್ನಿ ರಾಜಾ ಕಣಕ್ಕೆ: ಅಭ್ಯರ್ಥಿಗಳನ್ನು ಘೋಷಿಸಿದ ಸಿಪಿಐ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 14 =
Remember me
