ಬೆಂಗಳೂರು:ಕಾವೇರಿ ನೀರು ವಿಚಾರವಾಗಿ ಕರೆ ನೀಡಿರುವ ಬಂದ್ ಸಂಬಂಧ ಸಂಘಟನೆಗಳಲ್ಲೇ ಗೊಂದಲ ಶುರುವಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮಂಗಳವಾರ (ಸೆ.26) ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದೆ. ಆದರೆ, ಸೆ.29ಕ್ಕೆ ಕರ್ನಾಟಕ ಬಂದ್ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ಮಂಗಳವಾರ ಬೆಂಗಳೂರು ಬಂದ್ ಮಾಡುವ ಬಗ್ಗೆ ಸೋಮವಾರ ನಡೆಯುವ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ. ಈ ಮಧ್ಯೆ ಬಿಜೆಪಿಯ ಏಳು ಮೋರ್ಚಾಗಳು ಸೋಮವಾರ ಬೆಂಗಳೂರಿನ ‘ಕಾವೇರಿ ಭವನ’ಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿವೆ.
ಸೆ.26ರ ಬೆಂಗಳೂರು ಬಂದ್ ಹಿಂಪಡೆಯುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು ಬಂದ್, ಕರ್ನಾಟಕ ಬಂದ್ ಪ್ರತ್ಯೇಕವಾಗಿ ಬೇಡ ಅಂತ ಮನವಿ ಮಾಡಲಾಗಿದೆ. ಎರಡು ಬಾರಿ ಬಂದ್ ಮಾಡುವ ಬದಲು ಒಂದೇ ಬಾರಿ ರಾಜ್ಯ ಬಂದ್ ಮಾಡೋಣ. ಈ ಬಗ್ಗೆ ವಾಟಾಳ್ ನಾಗರಾಜ್ ಸೇರಿ ಎಲ್ಲ ಸಂಘಟನೆಗಳ ಜತೆ ರ್ಚಚಿಸುತ್ತೇವೆ ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ. ಆದರೆ, ಜಲಸಂರಕ್ಷಣಾ ಸಮಿತಿ ಬೆಂಗಳೂರು ಬಂದ್ ಮಾಡುವುದು ಖಚಿತ ಎಂದು ಹೇಳಿದೆ. ಹೀಗಾಗಿ ಗೊಂದಲ ಮುಂದುವರಿದಿದೆ. ಕರ್ನಾಟಕ ಬಂದ್ ನಡೆಸುವ ಬಗ್ಗೆ ಸೋಮವಾರ ದಿನಾಂಕ ಘೊಷಣೆಯಾಗಲಿದೆ. ಸೆ.29 ಅಥವಾ 30ರಂದು ಅಖಂಡ ಕರ್ನಾಟಕ ಬಂದ್ ನಡೆಸುವ ಸಾಧ್ಯತೆ ಇದೆ. ಸೆ.26 ರಂದು ಬೆಂಗಳೂರು ಬಂದ್​ಗೆ ಕರೆ ನೀಡಿರುವುದಕ್ಕೆ ನನ್ನ ವಿರೋಧವಿಲ್ಲ. ಅವರ ಜತೆಗೆ ಮಾತಾಡುತ್ತೇವೆ. ಎಲ್ಲರೂ ಒಟ್ಟಿಗೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡೋಣ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್​ನಲ್ಲಿ ಸೋಮವಾರ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಎಲ್ಲ ಸಂಘಟನೆಗಳ ಜತೆ ರ್ಚಚಿಸಿ ಕರ್ನಾಟಕ ಬಂದ್ ದಿನಾಂಕ ನಿಗದಿ ಮಾಡಲಾಗುತ್ತದೆ. ಈ ಸಭೆಯಲ್ಲಿ ಡಾ. ರಾಜ್​ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಡಿಕೆಶಿಗೆ ಪತ್ರ ಚಳವಳಿ:ಕಾವೇರಿ, ಮೇಕೆದಾಟು ವಿಚಾರವಾಗಿ ಪ್ರತಿಪಕ್ಷದಲ್ಲಿದ್ದಾಗ ಪಾದಯಾತ್ರೆ ನಡೆಸಿದ್ದ ಡಿ.ಕೆ. ಶಿವಕುಮಾರ್, ಆಗಿನ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಧ್ವನಿಯಲ್ಲಿ ಗುಡುಗಿದ್ದರು. ಅಧಿಕಾರದ ಗದ್ದುಗೆ ಏರಿದ ತಕ್ಷಣವೇ ಧ್ವನಿ ಬದಲಾಯಿಸಿದ್ದಾರೆ. ಕಾವೇರಿಗಾಗಿ ಪ್ರತಿಭಟನೆ ನಡೆಸುತ್ತಿರುವ ರಾಜಕೀಯ ಪಕ್ಷಗಳು, ಸಂಘಟನೆಗಳ ವಿರುದ್ಧವೇ ಹರಿಹಾಯುತ್ತಿದ್ದಾರೆ. ಈ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪತ್ರ ಚಳವಳಿ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬಂದ್ ಸಂಬಂಧ ವಾಟಾಳ್ ನಾಗರಾಜ್ ಸೋಮವಾರ ಸಭೆ ಕರೆದಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಬಂದ್ ಮಾಡುವುದು ಪ್ರತಿಷ್ಠೆಯಾಗಬಾರದು. ಎಲ್ಲರೂ ಒಟ್ಟಾಗಿ ಸೇರಿ ಬಂದ್ ಮಾಡಬೇಕು ಎಂಬುದು ನನ್ನ ಅಭಿಪ್ರಾಯ.
| ಪ್ರವೀಣ್ ಶೆಟ್ಟಿ, ಕರವೇ ಅಧ್ಯಕ್ಷ
ರಾಜ್ಯ ಹಾಗೂ ಬೆಂಗಳೂರು ನಗರ ಹಿತ ದೃಷ್ಟಿಯಿಂದ ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಲಾಗಿದೆ. ತಡಮಾಡಿದರೆ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತದೆ. ಇದರಿಂದ ಕೆಆರ್​ಎಸ್ ಖಾಲಿಯಾಗುತ್ತದೆ. 26ಕ್ಕೆ ದೆಹಲಿಯಲ್ಲಿ ನೀರು ನಿರ್ವಾಹಣಾ ಮಂಡಳಿ ಸಭೆ ಇದೆ. ಆ ಸಭೆಗೆ ಒತ್ತಡ ತರಬೇಕು ಹಾಗೂ ರಾಜ್ಯ ಸರ್ಕಾರಕ್ಕೆ ಬುದ್ದಿ ಕಲಿಸಲು ಬಂದ್ ಮಾಡಲಾಗುತ್ತಿದೆ. ವಾಟಾಳ್ ನಾಗರಾಜ್ ಕರೆದಿರುವ ಸಭೆಗೆ ಹಾಜರಾಗುತ್ತೇನೆ.
| ಕುರುಬೂರು ಶಾಂತಕುಮಾರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
92 ಸಂಘಟನೆಗಳ ಸಾಥ್:ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಕರೆ ನೀಡಿರುವ ಬೆಂಗಳೂರು ಬಂದ್​ಗೆ ರಾಜ್ಯ ರೈತ ಸಂಘಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಮ್ ಆದ್ಮಿ ಪಕ್ಷ ಸೇರಿ 92 ಸಂಘಟನೆಗಳು ಬೆಂಬಲ ನೀಡಿವೆ. ಬಿಬಿಎಂಪಿ ಕಾರ್ವಿುಕ ಸಂಘ, ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್, ವಾಹನ ಚಾಲಕರ ಮತ್ತು ಮಾಲೀಕರ ಸಂಘಗಳು ಬೆಂಬಲ ನೀಡಿರುವುದರಿಂದ ಸಾರಿಗೆ ಹಾಗೂ ಬಿಬಿಎಂಪಿ ಕಾರ್ಯಗಳಲ್ಲಿ ವ್ಯತ್ಯಯವಾಗಲಿದೆ. ಜತೆಗೆ ಖಾಸಗಿ ಶಾಲೆಗಳ ಸಂಘಟನೆಯಾದ ರುಪ್ಸಾ, ಖಾಸಗಿ ಶಾಲೆಗಳ ಪೋಷಕರ ಸಮನ್ವಯ ಸಮಿತಿ ಬೆಂಬಲ ನೀಡಿವೆ.
ಬಿಜೆಪಿ ಬೆಂಬಲ:ರಾಜ್ಯದ 28 ಲೋಕಸಭೆ ಕ್ಷೇತ್ರಗಳು, ಬೆಂಗಳೂರಿನ ಎಲ್ಲ ವಾರ್ಡ್​ಗಳಲ್ಲಿ ಆಂದೋಲನ, ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ವಿವಿಧ ಹಂತದ ಹೋರಾಟವನ್ನು ಬಿಜೆಪಿ ಹಮ್ಮಿಕೊಳ್ಳಲಿದೆ. ಕಾವೇರಿ ನ್ಯಾಯಕ್ಕಾಗಿ ವಿವಿಧ ಸಂಘಟನೆ ಗಳ ‘ಬೆಂಗಳೂರು ಬಂದ್’ ಬೆಂಬಲಿಸಲು ತೀರ್ಮಾನಿಸಿದೆ.
ವಾರವಿಡೀ ಹುಡುಕಾಡಿದರೂ ನಾಪತ್ತೆಯಾದವ ಸಿಗಲಿಲ್ಲ; ಒಂದು ಕಲ್ಲಿಗೆ ಪೂಜೆ ಮಾಡುತ್ತಿದ್ದಂತೆ ಆತ ಮನೆಗೆ ಮರಳಿದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − five =
Remember me
