|ವಿಲಾಸ ಮೇಲಗಿರಿಬೆಂಗಳೂರು
ಗ್ರಾಮೀಣ ಸ್ಥಳೀಯ ಸಂಸ್ಥೆಗಳ 2 ಮತ್ತು 3ನೇ ಮೆಟ್ಟಿಲುಗಳೆಂದೇ ಕರೆಯಲ್ಪಡುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಗೊಂದಲದ ಗೂಡಾಗಿದೆ. ಕರೊನಾ 3ನೇ ಅಲೆ ಭಯದ ಕಾರಣದಿಂದ ತಾಪಂ, ಜಿಪಂಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಡಿಸೆಂಬರ್ ಅಂತ್ಯದವರೆಗೆ ಮುಂದೂಡಲು ಸರ್ಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಸಲ್ಲಿಸಿದೆ.
ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ ಶಿಕ್ಷಕರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದು ಸರ್ಕಾರದ ಇಮೇಜಿಗೆ ಧಕ್ಕೆ ತಂದಿತ್ತಲ್ಲದೆ ಪ್ರತಿಪಕ್ಷಗಳ ಟೀಕೆಗೆ ಆಹಾರವಾಗಿತ್ತು. ಅಲ್ಲದೆ, 3ನೇ ಅಲೆ, ಡೆಲ್ಟಾ ಪ್ಲಸ್ ತೀವ್ರತೆ ಲಕ್ಷಣಗಳು ಗೋಚರಿಸತೊಡಗಿವೆ. ಗಡಿ ಜಿಲ್ಲೆಗಳಲ್ಲಿ ಸರ್ಕಾರ ವಾರಾಂತ್ಯ ಲಾಕ್​ಡೌನ್ ಕೂಡ ಘೋಷಣೆ ಮಾಡಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ ಕಳಂಕ ಬರಬಹುದೆಂಬ ದೃಷ್ಟಿಯಿಂದ ಚುನಾವಣೆ ಮುಂದೂಡುವುದು ಸೂಕ್ತ ಎಂಬುದು ಸರ್ಕಾರದ ನಿಲುವು.
ಕೋವಿಡ್ 2ನೇ ಅಲೆ ನಿರ್ವಹಣೆ ಬಗ್ಗೆ ಜನರಲ್ಲಿ ಸಮಾಧಾನವಿಲ್ಲ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ ಸರ್ಕಾರದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಬಹುದೆಂಬ ಭಯವೂ ಒಳಗೊಳಗೇ ಬಿಜೆಪಿಗಿದೆ. ಇದು ಕೂಡ ಚುನಾವಣೆ ಮುಂದೂಡಲು ಮತ್ತೊಂದು ಕಾರಣ ಎಂದು ಹೇಳಲಾಗುತ್ತಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಸಂಪುಟ ರಚನೆ ವಿಚಾರದಲ್ಲಿ ಸಣ್ಣ ಪುಟ್ಟ ಗೊಂದಲಗಳು ಉಳಿದಿವೆ. ಇದೂ ಕೆಲವೆಡೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಆತಂಕವೂ ಬಿಜೆಪಿ ವರಿಷ್ಠರನ್ನು ಕಾಡುತ್ತಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.ಕರೊನಾ ಹಿನ್ನೆಲೆ ಅಸಾಧಾರಣ ಪರಿಸ್ಥಿತಿ ಎಂದು ಪರಿಗಣಿಸಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಮುಂದೂಡಿತ್ತು. 3ನೇ ಅಲೆ ತೀವ್ರವಾದರೆ ಅದೇ ಮಾನದಂಡ ಅನುಸರಿಸಿ ಚುನಾವಣೆ ಮುಂದೂಡಲೂ ಅವಕಾಶಗಳಿವೆ.
ಪರಿಷತ್ ಚುನಾವಣೆ ಅಬಾಧಿತ: ಡಿಸೆಂಬರ್​ವೊಳಗೆ ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ 25 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಈ ಚುನಾವಣೆಗೆ ತಾಪಂನ 3,285 ಮತ್ತು ಜಿಪಂನ 1191 ಸದಸ್ಯರು ಮತದಾರರಾಗಿದ್ದಾರೆ. ಚುನಾವಣೆಯನ್ನು ಆರು ತಿಂಗಳು ಮುಂದೂಡಿದಲ್ಲಿ ಈ ಸಂಸ್ಥೆಗಳನ್ನು ಕೈಬಿಟ್ಟು ಮೇಲ್ಮನೆ ಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ಮೂರೂ ಪಕ್ಷದಲ್ಲಿ ವಿರೋಧವಿದೆ. ಹಾಗಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಗೊಂದಲದ ಗೂಡಾಗಿದೆ. ವಿಧಾನಪರಿಷತ್ತಿನ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ನಡೆಸಲಿದೆ. 75 ಸದಸ್ಯ ಬಲವುಳ್ಳ ಮೇಲ್ಮನೆಯಲ್ಲಿ 25 ಸ್ಥಾನಗಳನ್ನು ಖಾಲಿ ಇಡುವ ಸಾಧ್ಯತೆಗಳು ತೀರಾ ಕಮ್ಮಿ. ಹಾಗಾಗಿ ಪರಿಷತ್ ಚುನಾವಣೆ ನಿಗದಿತ ಕಾಲಾವಧಿಗೆ ನಡೆಯುವುದು ಬಹುತೇಕ ನಿಶ್ಚಿತ. ಆದರೆ, ಸರ್ಕಾರದ ಚುನಾವಣೆ ಶಿಫಾರಸಿನ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯ ಚುನಾವಣಾ ಆಯೋಗ ಸಿದ್ಧಪಡಿಸಿ ಪ್ರಕಟಿಸಿರುವ ಮೀಸಲಾತಿ ಕರಡಿಗೆ 2,500ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇವೆಲ್ಲವೂ ಇತ್ಯರ್ಥಗೊಂಡು ಅಂತಿಮ ಅಧಿಸೂಚನೆ ಪ್ರಕಟಿಸಿದ 45 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕೆಂಬ ನಿಯಮವಿದೆ. ಇನ್ನೊಂದೆಡೆ ಮೂರೂ ರಾಜಕೀಯ ಪಕ್ಷಗಳು ತಾಲೀಮು ಪ್ರಾರಂಭಿಸಿದ್ದವು. ಆಕಾಂಕ್ಷಿಗಳು ಅಖಾಡಕ್ಕಿಳಿಯಲು ಸಜ್ಜಾಗಿದ್ದರು. ಚುನಾವಣೆ ಮುಂದೂಡಬೇಕೆಂಬ ಸರ್ಕಾರದ ಪ್ರಸ್ತಾವನೆಯಿಂದ ಈ ಎಲ್ಲ ಪ್ರಕ್ರಿಯೆಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸ್ಪರ್ಧಾಕಾಂಕ್ಷಿಗಳೂ ನಿರಾಶರಾಗಿದ್ದಾರೆ.
ಧಾರ್ವಿುಕ ಕೇಂದ್ರಗಳಿಗೆ ಜನ ಹೋಗಬಹುದು, ಮತಗಟ್ಟೆಗಳಿಗೆ ಹೋಗುವಂತಿಲ್ಲವೇ? ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ ಕಾರಣ ಧಾರ್ವಿುಕ ಸ್ಥಳಗಳು, ಶಾಪಿಂಗ್ ಮಾಲ್ ಇನ್ನಿತರ ಚಟುವಟಿಕೆ ಆರಂಭಿಸಲಾಗಿದೆ. ಹೀಗಿರುವಾಗ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ, ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕೆಂಬ ಸಾಂವಿಧಾನಿಕ ಬಾಧ್ಯತೆಯಿಂದ ಕರ್ನಾಟಕ ಅತೀತವಾಗಿದೆಯೇ? ಎಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ವೇಳೆ ಹೈಕೋಟ್ ಚಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಗೆ ಚುರುಕಿನ ಚಾಲನೆ ನೀಡಿದೆ.
ರಾಜ್ಯದಲ್ಲಿ ಮತ್ತೊಬ್ಬ ತಹಸೀಲ್ದಾರ್​ರಿಂದ ಕೋವಿಡ್​ ನಿಯಮ ಉಲ್ಲಂಘನೆ; ಕಾನೂನಿಗೂ ಮೀರಿ ಅದ್ಧೂರಿ ಕಾರ್ಯಕ್ರಮ

ಆತ್ಮಹತ್ಯೆಗೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ; ಶಾಸಕರ ಬೆಂಬಲಿಗರ ಕಿರುಕುಳ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 8 =
Remember me
