ಬೆಂಗಳೂರು:ಬಿಜೆಪಿ ಸರ್ಕಾರದ ಟೆಂಡರ್​ಗಳು, ನೇಮಕ- ಪರೀಕ್ಷೆಗಳನ್ನು ತನಿಖೆಗೊಳಪಡಿಸಿ, ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೂ ಕೈಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಹಿಂದಿನ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಅಂಗಸಂಸ್ಥೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಗೆ ಮಾಡಿದ ಭೂಮಿ ಹಂಚಿಕೆಯನ್ನು ಪರಾಮರ್ಶೆ ಗೊಳಪಡಿಸಲು ನಿರ್ಧರಿಸಿದ್ದಾರೆ.
ಈ ಹಿಂದಿನ ಸರ್ಕಾರವು ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗೆ ಬೇಕಾಬಿಟ್ಟಿಯಾಗಿ ಭೂಮಿ ಹಂಚಿಕೆ ಮಾಡಿದೆ ಎಂಬುದು ಕಾಂಗ್ರೆಸ್​ನ ಗುರುತರ ಆರೋಪ. ಹಾಗೆಯೇ ಸಂಪುಟ ಸದಸ್ಯರೂ ಈ ಬಗ್ಗೆ ದನಿ ಎತ್ತಿದ್ದಾರೆ. ಆರ್​ಎಸ್​ಎಸ್​ನ ಕಟುಟೀಕಾಕಾರರಾದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾದ ಬಳಿಕವೂ ನಿರಂತರ ಮಾತನಾಡುತ್ತಲೇ ಇದ್ದಾರೆ. ಇದೀಗ ಬಿಜೆಪಿ ಸರ್ಕಾರದ ಕೊನೆಯ ಆರು ತಿಂಗಳ ಅವಧಿಯಲ್ಲಿ ಸಂಘ-ಸಂಸ್ಥೆಗಳಿಗೆ ಮಾಡಲಾದ ಭೂ ಹಂಚಿಕೆ ದಾಖಲೆಗಳನ್ನು ಸಂಪುಟದ ಮುಂದೆ ಮಂಡಿಸುವಂತೆ ಕಂದಾಯ ಸಚಿವರಿಗೆ ಸೂಚನೆ ನೀಡಿದ್ದಾರೆ.
ಕಂದಾಯ ಇಲಾಖೆಯೂ ಈ ಸಂಬಂಧ ಕಡತ ಸಿದ್ಧಪಡಿಸುತ್ತಿದ್ದು, ಭೂ ಮಂಜೂರಾತಿ ಪಡೆದ ಸಂಘ ಸಂಸ್ಥೆಗಳು, ಅವುಗಳ ಹಿನ್ನೆಲೆ, ಭೂಮಿ ಪಡೆದ ಉದ್ದೇಶ, ಪಡೆದ ಉದ್ದೇಶಕ್ಕಾಗಿಯೇ ಬಳಕೆಯಾಗಿದೆಯೇ? ಮಂಜೂರಾತಿಗೆ ಅನುಸರಿಸಿದ ಮಾರ್ಗಗಳು, ನಿಯಮಗಳ ಉಲ್ಲಂಘನೆಯಾಗಿದೆಯೇ? ಇತ್ಯಾದಿ ಮಾಹಿತಿ ಕಲೆಹಾಕಲಾಗುತ್ತಿದೆ. ಕಳೆದ ಆರು ತಿಂಗಳಲ್ಲಿ (ಡಿಸೆಂಬರ್​ನಿಂದೀಚೆಗೆ) ಯಾವ ಯಾವ ಸಂಸ್ಥೆಗೆ ಸರ್ಕಾರದಿಂದ ಭೂಮಿ ನೀಡಲಾಗಿದೆ ಎಂದು ಸಂಪುಟ ಸಭೆಗೆ ವರದಿ ಮಂಡಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.
ಬಿಜೆಪಿ ಸರ್ಕಾರದ ಕೊನೆಯ ಹಂತದಲ್ಲಿ ತರಾತುರಿಯಾಗಿ ಭೂಮಿ ಹಂಚಿಕೆಯಾಗಿದೆ ಎಂಬ ಮಾಹಿತಿ ಇದೆ. ಆದರೆ, ಅನೇಕ ಆದೇಶವನ್ನು ಅಧಿಕಾರಿಗಳ ಹಂತದಲ್ಲೇ ತಡೆ ಹಿಡಿಯಲಾಗಿದೆ. ಕಳೆದ ಆರು ತಿಂಗಳಲ್ಲಾದ ಭೂಮಿ ಹಂಚಿಕೆ ನ್ಯಾಯಸಮ್ಮತವಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಬೇಕಾಬಿಟ್ಟಿ ಹಂಚಿಕೆ:ಬಿಜೆಪಿಯವರು ಅಧಿಕಾರಾವಧಿಯಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ತಮ್ಮದೇ ಸಂಸ್ಥೆಗಳಿಗೆ ಪರಭಾರೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗೆ ಹೀಗೆ ಮಾಡಿದ್ದಾರೆ. ಕಾನೂನು ಉಲ್ಲಂಘಿಸಿ ಭೂಮಿ ನೀಡಿರುವುದು ಸತ್ಯ ಎಂದ ಅವರು, ಸಿಎಂ ಹಾಗೂ ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸಲಿದೆ ಎಂದರು.
ಸರ್ಕಾರದ ಭೂಮಿ ಅರ್ಹರಿಗೆ ಸಿಗಬೇಕು. ಯಾವುದೇ ಸಂಘ ಟನೆಯಾದರೂ ಆಗಿರಲಿ, ಸರಿಯಾದ ಉದ್ದೇಶಕ್ಕೆ ಬಳಸುತ್ತಾರೆಯೇ ಎಂಬುದು ಮುಖ್ಯ. ಸದುದ್ದೇಶವಾಗಿದ್ದರೆ ಗೌರವಿಸ ಬೇಕಾಗುತ್ತದೆ. ಶಿಕ್ಷಣ ಸಂಸ್ಥೆಯಾಗಿದ್ದರೆ, ಸೇವಾ ಹಿನ್ನೆಲೆ ನೋಡಬೇಕಾಗುತ್ತದೆ.
| ಕೃಷ್ಣಬೈರೇಗೌಡ, ಕಂದಾಯ ಸಚಿವ
ನಮ್ಮ ಸರ್ಕಾರದಲ್ಲಿ ಕಾನೂನುಬಾಹಿರವಾಗಿ ಯಾವ ಭೂ ಹಂಚಿಕೆಯೂ ನಡೆದಿಲ್ಲ. ಸಂಘದ ಮಾರ್ಗದರ್ಶನದ ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಿಗೆ ಭೂಮಿ ಮಂಜೂರು ಮಾಡಲಾಗಿದೆ. ಬಿಜೆಪಿ ಹಾಗೂ ಸಂಘವನ್ನು ಟೀಕಿಸುವ ಭರದಲ್ಲಿ ಇಂತಹ ಕೆಲಸಕ್ಕೆ ಕೈಹಾಕುವುದು ಸರಿಯಲ್ಲ.
| ಕೋಟ ಶ್ರೀನಿವಾಸಪೂಜಾರಿ, ಮಾಜಿ ಸಚಿವ
ಆರ್​ಎಸ್​ಎಸ್​ಗೆ ಬೇಕಾಬಿಟ್ಟಿಯಾಗಿ ಭೂಮಿ ನೀಡಲಾಗಿದೆ, ಅದರ ಪರಾಮರ್ಶೆಯಾಗಬೇಕು ಎಂದು ಸಂಪುಟ ಸಹೋದ್ಯೋಗಿಯೇ ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಸರ್ಕಾರದ ಭೂಮಿ ಅರ್ಹರಿಗೆ ಸಿಗಬೇಕು. ಯಾವುದೇ ಸಂಘಟನೆಯಾದರೂ ಆಗಿರಲಿ, ಸರಿಯಾದ ಉದ್ದೇಶಕ್ಕೆ ಬಳಸುತ್ತಾರೋ ಎಂಬುದು ಮುಖ್ಯ. ಸದುದ್ದೇಶವಾಗಿದ್ದರೆ ಗೌರವಿಸಬೇಕಾಗುತ್ತದೆ. ಶಿಕ್ಷಣ ಸಂಸ್ಥೆಯಾಗಿದ್ದರೆ, ಸೇವಾ ಹಿನ್ನೆಲೆ ನೋಡಬೇಕಾಗುತ್ತದೆ ಎಂದರು. ಬಿಜೆಪಿ ಸರ್ಕಾರದ ಅವಧಿಯ ಎಲ್ಲ ಪ್ರಕರಣ ಕೆದಕುತ್ತೀರಾ ಎಂಬುದಕ್ಕೆ ಉತ್ತರಿಸಿದ ಕೃಷ್ಣಬೈರೇಗೌಡ, ಆರು ತಿಂಗಳ ಹಿಂದಿನದ್ದೆಲ್ಲ ಕೆದಕುತ್ತಾ ಹೋದರೆ ಅದೇ ಕೆಲಸ ಆಗುತ್ತದೆ. ತೀರಾ ಹಿಂದೆ ತಪ್ಪಾದ ನಿರ್ದಿಷ್ಟ ಪ್ರಕರಣ ಗಮನಕ್ಕೆ ಬಂದರೆ ಮರುಪರಿಶೀಲನೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 18 =
Remember me
