ಬೆಂಗಳೂರು:ರಾಜ್ಯದಲ್ಲಿಯೇ ಆತಿ ಹೆಚ್ಚು 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬ ನಂಬಿಕೆಯಿತ್ತು. ಈ ಬಾರಿ ಇಲ್ಲಿ ಬಿಜೆಪಿ ಮೇಲುಗೈ ಪಡೆದಿದೆ. ಕಾಂಗ್ರೆಸ್ 12 ಸ್ಥಾನ ಪಡೆದಿದ್ದರೆ, ಅದಕ್ಕಿಂತ ಎರಡು ಸ್ಥಾನಗಳನ್ನು ಹೆಚ್ಚಿಗೆ ಪಡೆದುಕೊಂಡಿರುವ ಬಿಜೆಪಿ 15 ಸೀಟುಗಳನ್ನು ಗೆದ್ದು ರಾಜಧಾನಿ ಮೇಲೆ ಹಿಡಿತ ಸಾಧಿಸಿದೆ. ಜಯನಗರ ಫಲಿತಾಂಶ ಬಾಕಿ ಇದೆ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ ಬೆಂಗಳೂರು ನಗರದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 28ಕ್ಕೆ ಏರಿದೆ. ಆ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್​ನ್ನು ಹಿಂದಿಕ್ಕಿತ್ತು. 2013ರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 12 ಸ್ಥಾನಗಳಲ್ಲಿ ಗೆದ್ದು ಸಮಬಲ ಸಾಧಿಸಿದ್ದವು. 2018ರ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, ನಂತರ ಆಪರೇಷನ್ ಕಮಲದಿಂದ ಶಾಸಕರ ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಿಕೊಂಡಿತ್ತು.
ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಇನ್ನಿಲ್ಲದ ತಂತ್ರಗಾರಿಕೆ ನಡೆಸಿದ್ದರು. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರತಿ ಕ್ಷೇತ್ರದಲ್ಲೂ ಮತದಾರನ ಮನಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದ್ದವು. ಜತೆಗೆ ಪ್ರತಿ ಕ್ಷೇತ್ರಕ್ಕೂ ಮುಖಂಡರ ದಂಡನ್ನು ಕರೆತಂದಿದ್ದ ಈ ಎರಡೂ ಪಕ್ಷಗಳು ಮತ ಕೊಯ್ಲು ಹೆಚ್ಚಿಸಿಕೊಳ್ಳಲು ವಿಶೇಷ ಪ್ರಯತ್ನ ನಡೆಸಿದ್ದವು. ಇದರ ಫಲವಾಗಿ ಎರಡೂ ಪಕ್ಷಗಳ ಪ್ರಯತ್ನವನ್ನು ಫಲಿತಾಂಶ ಪ್ರತಿಬಿಂಬಿಸಿದೆ.
ಬಿಜೆಪಿಗೆ ವರದಾನವಾದ ಮೋದಿ ರೋಡ್ ಶೋ:ಬೆಂಗಳೂರು ಐಟಿ-ಬಿಟಿ ಸಿಟಿಯಾಗಿರುವುದರಿಂದ ಜಾಗತಿಕ ಗಮನ ಸೆಳೆದಿದೆ. ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಬೆಂಗಳೂರಿಗೆ ಹಲವು ಯೋಜನೆಗಳನ್ನು ಪ್ರಕಟಿಸಿ ತನ್ನ ಲಕ್ಷ್ಯವನ್ನು ಮುಂದುವರಿಸಿತ್ತು. ಅದರಲ್ಲೂ ಪ್ರಧಾನಿ ಮೋದಿ ಮೂರು ದಿನ ರೋಡ್ ಶೋ ನಡೆಸಿ ಗಮನ ಸೆಳೆದರು. ಪ್ರಚಾರದ ಕೊನೆಯಲ್ಲಿ ಸತತವಾಗಿ ಎರಡು ದಿನ 36 ಕಿ.ಮೀ. ಉದ್ದದ ರೋಡ್ ಶೋ 19 ಕ್ಷೇತ್ರಗಳಲ್ಲಿ ಹಾದುಹೋಗಿತ್ತು. ಇದು ಆ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ಗಳಿಸಲು ನೆರವಾಗಿದೆ.
ಕಾಂಗ್ರೆಸ್ ಕೂಡ ಪ್ರಿಯಾಂಕಾ ಗಾಂಧಿ ಅವರಿಂದ ರೋಡ್ ಶೋ ನಡೆಸಿ ತಕ್ಕಮಟ್ಟಿಗೆ ಬಿಜೆಪಿಗೆ ಟಾಂಗ್ ನೀಡುವ ಕೆಲಸ ಮಾಡಿತು. ತನ್ನ ಪರಂಪರಾಗತ ಮತಗಳು ಹೆಚ್ಚಿರುವ ಕ್ಷೇತ್ರಗಳತ್ತಲೇ ದೃಷ್ಟಿ ಇರಿಸಿದ್ದ ಕಾಂಗ್ರೆಸ್ ಚಾಣಾಕ್ಷ ನಡೆ ಆ ಪಕ್ಷದ ಅಭ್ಯರ್ಥಿಗಳು ಗೆಲುವಿನ ದಡ ಸೇರುವಂತಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸರಿಸಮವಾಗಿ ಪೈಪೋಟಿ ನೀಡಲು ಹಿಂದೆ ಬಿದ್ದಿದ್ದ ಜೆಡಿಎಸ್​ನದ್ದು ಶೂನ್ಯ ಸಾಧನೆ.
ಬೆಂಗಳೂರಿನಲ್ಲಿ 4 ಮೀಸಲು ಕ್ಷೇತ್ರಗಳಿವೆ. ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಎರಡರಲ್ಲಿ ಗೆದ್ದು ಸಮಬಲ ಸಾಧಿಸಿದೆ. ಸಿ.ವಿ. ರಾಮನ್​ನಗರದಿಂದ ಎಸ್. ರಘು ಹಾಗೂ ಮಹದೇವಪುರದಿಂದ ಮಂಜುಳಾ (ಇಬ್ಬರೂ ಬಿಜೆಪಿ) ಆಯ್ಕೆಯಾಗಿದ್ದಾರೆ. ಪುಲಕೇಶಿನಗರ ಕ್ಷೇತ್ರದಿಂದ ಎ.ಸಿ. ಶ್ರೀನಿವಾಸ, ಆನೇಕಲ್ ಕ್ಷೇತ್ರದಿಂದ ಬಿ. ಶಿವಣ್ಣ (ಇಬ್ಬರೂ ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ. ವಿಶೇಷವೆಂದರೆ ಮೀಸಲು ಕ್ಷೇತ್ರಗಳಲ್ಲಿ ಇದೇ ಮೊದಲ ಬಾರಿ ಮಹಿಳೆಯೊಬ್ಬರು ಜಯ ಗಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಸತತವಾಗಿ ಗೆಲ್ಲುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಇನ್ನಿತರ ಕಾರಣಗಳಿಂದ ಜಯ ಸಾಧಿಸುವುದು ಹಿಮಾಲಯ ಚಾರಣದಷ್ಟೇ ಕಠಿಣ ಹಾದಿಯಂತಿರುತ್ತದೆ. ಆದರೆ, ಈ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿರುವ ರಾಜಧಾನಿ ಶಾಸಕರಲ್ಲಿ ಹೆಚ್ಚಿನವರು ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಶಾಸಕರಾಗಿದ್ದ 28 ಮಂದಿ ಪೈಕಿ ಈ ಬಾರಿ 24 ಜನರು ಉಮೇದುವಾರಿಕೆ ದಾಖಲಿಸಿ ಎಲ್ಲರೂ ಗೆಲುವು ಪಡೆದಿರುವುದು ರಾಜಕೀಯ ಪಂಡಿತರನ್ನು ಹುಬ್ಬೇರುವಂತೆ ಮಾಡಿದೆ.
ವರುಣದಲ್ಲಿ ವಿ. ಸೋಮಣ್ಣ ಹೀನಾಯ ಸೋಲು: ಪ್ರತಾಪ್​ ಸಿಂಹ ಹೇಳಿಕೆಗಳೇ ಮುಳುವಾಯಿತು!

ಹಸ್ತಾಧಿಕಾರ ಮುಂದಿನ ವಾರ ಹೊಸ ಸರ್ಕಾರ: ಇಂದು ಸಿಎಲ್​ಪಿ ಸಭೆ, ಮುಂದಿನ ಚಟುವಟಿಕೆಗಳೇನು?

ವರದಕ್ಷಿಣೆಯಾಗಿ ಬೈಕ್​ ಕೇಳಿದ ವರನಿಗೆ ಮಂಟಪದಲ್ಲೇ ಚಪ್ಪಲಿ ಏಟು ಕೊಟ್ಟ ಮಾವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
