|ಸ.ದಾ. ಜೋಶಿಕಲಬುರಗಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ(ಎಸ್​ಸಿ ಮೀಸಲು) ವಿಧಾನಸಭಾ ಕ್ಷೇತ್ರದಲ್ಲಿ ಕೊರೆವ ಚಳಿಯಲ್ಲೂ ರಾಜಕೀಯ ಗರ್ವಿು ಜೋರಾಗಿದೆ. ಚುನಾವಣೆಗೆ ನಾಲ್ಕು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್-ಬಿಜೆಪಿ ಮಧ್ಯೆ ಶುರುವಾದ ‘ದಂಗಲ್’ ಭಾರಿ ಕುತೂಹಲ ಕೆರಳಿಸಿದೆ.
2008ರಲ್ಲಿ ಮರು ವಿಂಗಡಣೆ ಬಳಿಕ ಈ ಕ್ಷೇತ್ರ ಎಸ್​ಸಿಗೆ ಮೀಸಲಾದ ನಂತರ ಖರ್ಗೆ ಪರಿವಾರ ಪ್ರಾಬಲ್ಯ ಮೆರೆದಿದೆ. ಮೊದಲ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆದ್ದರೆ, ಪುತ್ರ ಪ್ರಿಯಾಂಕ್ ಎರಡು ಬಾರಿ ಜಯ ಗಳಿಸಿದ್ದಾರೆ. 2009ರಲ್ಲಿ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ತೆರವಾದ ಶಾಸಕ ಸ್ಥಾನಕ್ಕೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ದಿ.ವಾಲ್ಮೀಕಿ ನಾಯಕ್ ಜಯ ಗಳಿಸಿದ್ದರು. ಮೊದಲ ಚುನಾವಣೆಯಲ್ಲೇ ಪ್ರಿಯಾಂಕ್ ಸೋಲಿನ ರುಚಿ ಕಂಡಿದ್ದರು. ಆದರೆ 2013, 2018ರಲ್ಲಿ ಗೆದ್ದು ಇದೀಗ ಹ್ಯಾಟ್ರಿಕ್ ತವಕದಲ್ಲಿದ್ದಾರೆ. ಹೇಗಾದರೂ ಪ್ರಿಯಾಂಕ್​ರನ್ನು ಸೋಲಿಸಬೇಕೆಂದು ಆಡಳಿತಾರೂಢ ಬಿಜೆಪಿ ಬಿಗ್ ಪ್ಲ್ಯಾನ್ ರೂಪಿಸುತ್ತಿದೆ.
ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಪ್ರಿಯಾಂಕ್ ತಂದೆಯಷ್ಟು ಪ್ರಭಾವ, ವರ್ಚಸ್ಸು ಹೊಂದಿಲ್ಲವಾದರೂ ನೆಟ್​ವರ್ಕ್ ಬಲಪಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಗೆಲುವಿಗಾಗಿ ಏನೆಲ್ಲ ದಾಳ ಬೀಸಬೇಕು ಎಂಬುದರಲ್ಲೂ ನಿಸ್ಸೀಮರು. ಅಂತೆಯೇ ಬರುವ ಚುನಾವಣೆ ದೃಷ್ಟಿಕೋನದಿಂದ ಬಿಜೆಪಿ ತಂತ್ರಗಳಿಗೆ ಪ್ರತಿತಂತ್ರ ಹೆಣೆಯ ತೊಡಗಿದ್ದಾರೆ. ಪ್ರಿಯಾಂಕ್ ಗೆಲುವು ಕಾಂಗ್ರೆಸ್ ಪಾಲಿಗೆ ಅಗ್ನಿಪರೀಕ್ಷೆ ಎನಿಸಿದೆ. ಒಂದೊಮ್ಮೆ ರಿಸಲ್ಟ್ ಉಲ್ಟಾ ಹೊಡೆದಲ್ಲಿ ಎಐಸಿಸಿ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಪುತ್ರನನ್ನು ಗೆಲ್ಲಿಸಲಾಗಿಲ್ಲ. ಇಂಥದರಲ್ಲಿ ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆ ಹೇಗೆ ಎದುರಿಸುತ್ತಾರೆ? ಎಂಬ ಟೀಕೆ ಸುತ್ತಿಕೊಳ್ಳುವುದು ಸಹಜ. ಹೀಗಾಗಿ ಕೈ ಪಡೆಗೆ ಚಿತ್ತಾಪುರ ಕ್ಷೇತ್ರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯವಿದೆ.
ಕಮಲ ಪಡೆಗೆ ಅಭ್ಯರ್ಥಿ ಚಿಂತೆ:ಬಿಜೆಪಿಗೆ ಶಕ್ತಿ ತುಂಬುವ ಜತೆಗೆ ಒಮ್ಮೆ ಕಮಲ ಅರಳಿಸಿದ್ದ ವಾಲ್ಮೀಕಿ ನಾಯಕ್ ಕಳೆದ ವರ್ಷ ನಿಧನ ಹೊಂದಿದ ಕಾರಣಕ್ಕೆ ಹೊಸಬರನ್ನು ಕಣಕ್ಕಿಳಿಸಬೇಕಿದೆ. ಖರ್ಗೆ ಜತೆ ಕುಸ್ತಿಗಿಳಿಯಲು ಎಲ್ಲ ರೀತಿಯಿಂದಲೂ ಸಮರ್ಥವಿರುವ ಅಭ್ಯರ್ಥಿ ಶೋಧದಲ್ಲಿ ಬಿಜೆಪಿ ವರಿಷ್ಠರಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 4393 ಮತಗಳಿಂದ ಪಕ್ಷದ ಅಭ್ಯರ್ಥಿ ಸೋತಿರುವುದು ಕೇಸರಿಪಡೆ ಉತ್ಸಾಹ ಹೆಚ್ಚಿಸಿದೆ. ಸದ್ಯಕ್ಕೆ ಅಭ್ಯರ್ಥಿ ಯಾರೆಂಬ ಗೊಂದಲವಿದ್ದು, ಕೊನೇ ಘಳಿಗೆಯಲ್ಲಿ ಯಾರು ಕಣಕ್ಕಿಳಿಯುತ್ತಾರೆಂಬ ಕುತೂಹಲವೂ ಇದೆ. ಮಣಿಕಂಠ ರಾಠೋಡ್ ಸೇರಿ ಹಲವು ಹೆಸರು ಚಾಲ್ತಿಯಲ್ಲಿವೆ. ಪ್ರಿಯಾಂಕ್ ಹಾಗೂ ಮಣಿಕಂಠ ನಡುವಿನ ರಾಜಕೀಯ ಸಮರ ಕಳೆದೊಂದು ತಿಂಗಳಿಂದ ಕ್ಷೇತ್ರ ಮಾತ್ರವಲ್ಲ, ಕಲಬುರಗಿ ಜಿಲ್ಲಾ ರಾಜಕೀಯವನ್ನೇ ಗರಂ ಮಾಡಿದೆ. ಇವರಲ್ಲದೆ ವಿಠ್ಠಲ್ ನಾಯಕ, ಅರವಿಂದ ಚವ್ಹಾಣ್, ಬಸವರಾಜ ಬೆಣ್ಣೆಶಿರೂರ, ಧರ್ಮಣ್ಣ ಇಟಗಿ ಇತರರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಸಂಸದ ಡಾ. ಉಮೇಶ ಜಾಧವ್, ಎಂಎಲ್​ಸಿ ಸುನೀಲ್ ವಲ್ಲ್ಯಾಪುರೆ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಹೆಸರುಗಳೂ ಚರ್ಚೆಯಲ್ಲಿವೆ.
ಜೆಡಿಎಸ್ ಝುಳಝುಳ!:ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವವೇ ಕಳೆದುಕೊಂಡ ಸ್ಥಿತಿಯಲ್ಲಿದ್ದು, ಏನಿದ್ದರೂ ಕಾಂಗ್ರೆಸ್-ಬಿಜೆಪಿ ನಡುವಿನ ಕುಸ್ತಿ ಫಿಕ್ಸ್ ಇದೆ. 2004ರಲ್ಲಿ ಜೆಡಿಎಸ್​ನಿಂದ ವಿಶ್ವನಾಥ ಪಾಟೀಲ್ ಹೆಬ್ಬಾಳ ಗೆದ್ದಿದ್ದರು. 2008ರಲ್ಲಿ ಕ್ಷೇತ್ರ ಎಸ್​ಸಿ ಮೀಸಲಾದ ಬಳಿಕ ಜೆಡಿಎಸ್ ಝುಳಝುಳವಾಗಿದೆ. 2013ರಲ್ಲಿ ಪಕ್ಷದ ಅಭ್ಯರ್ಥಿ ತಿಪ್ಪಣ್ಣ ಕೇವಲ 955 ಮತ ಗಳಿಸಿದ್ದರು. ಕಳೆದ ಸಲ ಪಕ್ಷ ಅಭ್ಯರ್ಥಿಯನ್ನೇ ನಿಲ್ಲಿಸಿಲ್ಲ. ಈಗಲೂ ನಿಲ್ಲುವುದು ಅನುಮಾನ.
ಜಾತಿವಾರು ಲೆಕ್ಕಾಚಾರ:ಲಿಂಗಾಯತರು, ಲಂಬಾಣಿ, ಕೋಲಿ, ಕಬ್ಬಲಿಗ ಸೇರಿ ಮೇಲ್ವರ್ಗ ಹಾಗೂ ತನ್ನ ಸಾಂಪ್ರದಾಯಿಕ ಮತಗಳು ಚದುರದಂತೆ ಸೆಳೆಯುವ ಜತೆಗೆ ಕಾಂಗ್ರೆಸ್ ಅತಿಯಾಗಿ ನಂಬಿದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತ(ಅಹಿಂದ) ವರ್ಗದ ಸ್ವಲ್ಪ ಮತಕ್ಕೆ ಲಗ್ಗೆಯಿಟ್ಟರೆ ಜಯದ ಹಾದಿ ಸುಗಮವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಇನ್ನು ಅಹಿಂದ ಜತೆಗೆ ಒಂದಿಷ್ಟು ಮೇಲ್ವರ್ಗದ ಮತ ಕಬಳಿಸಿ ಮತ್ತೆ ಗೆಲ್ಲುವ ಉಮೇದಿನಲ್ಲಿ ಖರ್ಗೆ ಟೀಮ್ ಇದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದಂತೆ ಇದೀಗ ಜೂನಿಯರ್ ಖರ್ಗೆಗೂ ಮಣಿಸಬೇಕೆಂಬ ಕಸರತ್ತು ಬಿಜೆಪಿ ನಡೆಸಿದೆ.


ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − one =
Remember me
