ಬೆಂಗಳೂರು:ಕೇಸರಿ ಧ್ವಜವೇ ಮುಂದೊಂದು ದಿನ ರಾಷ್ಟ್ರಧ್ವಜ ಆಗಬಹುದೆಂಬ ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪಟ್ಟುಹಿಡಿದು ಧರಣಿ ನಡೆಸಿದ ಪರಿಣಾಮ ಬುಧವಾರ ವಿಧಾನಮಂಡಲದ ಉಭಯ ಸದನಗಳು ರಣರಂಗವಾಗಿ ಮಾರ್ಪಟ್ಟು ಕಲಾಪವನ್ನು ಆಪೋಶನ ತೆಗೆದುಕೊಂಡಿತು.ಈಶ್ವರಪ್ಪ ರಾಷ್ಟ್ರಧ್ವಜವನ್ನು ಅವಮಾನಿಸಿಲ್ಲವೆಂದು ಆಡಳಿತಾರೂಢ ಬಿಜೆಪಿ ಸಮರ್ಥಿಸಿಕೊಂಡರೆ, ಸಚಿವರ ರಾಜೀನಾಮೆ ಪಡೆಯಲೇಬೇಕೆಂದು ಕೈಪಡೆ ಪಟ್ಟುಹಿಡಿಯಿತು. ಇದರಿಂದಾಗಿ ವಾಕ್ಸಮರ, ಏಕವಚನದ ಬೈದಾಟ ಪ್ರತಿಧ್ವನಿಸಿತು.
ವಿಧಾನಸಭೆಯಲ್ಲಿ ಸ್ಪೀಕರ್ ಹಾಗೂ ಪರಿಷತ್​ನಲ್ಲಿ ಸಭಾಪತಿ ಪೀಠದ ಮುಂದೆ ಕಾಂಗ್ರೆಸ್ ಧರಣಿ, ಧಿಕ್ಕಾರ ಮೊಳಗಿಸಿದರೆ, ಆಡಳಿತಪಕ್ಷ ಪ್ರತಿಯಾಗಿ ವಾಗ್ದಾಳಿ ನಡೆಸಿದ್ದರಿಂದ ಕೋಲಾಹಲ ಉಂಟಾಯಿತು. ಸದನ ಸುಸೂತ್ರವಾಗಿ ನಡೆಸುವುದಕ್ಕೆ ಅವಕಾಶವಿಲ್ಲದಂತಾಗಿ ಗುರುವಾರಕ್ಕೆ ಮುಂದೂಡಿಕೆಯಾದವು.
ವಿಧಾನಸಭೆ ಕಲಾಪದ ಆರಂಭದಲ್ಲಿ ಸಂತಾಪ ಸೂಚನೆ ಬಳಿಕ, ರಾಷ್ಟ್ರಧ್ವಜಕ್ಕೆ ಸಚಿವ ಈಶ್ವರಪ್ಪ ಅಪಮಾನಿಸಿದ್ದರ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋರಿದರೆ, ಪಕ್ಷದ ಉಳಿದ ಸದಸ್ಯರು ಧ್ವನಿಗೂಡಿದರು. ಜೆಡಿಎಸ್​ನವರು ‘ನಾವು ಮೊದಲಿಗೆ ಕೋರಿದ್ದೇವೆ, ವಿಷಯ ಪ್ರಸ್ತಾಪಕ್ಕೆ ಮೊದಲು ನಮಗೆ ಅವಕಾಶ ಕೊಡಬೇಕು’ ಎಂದು ವಾದಿಸಿದರು. ಈ ನಿಲುವಿಗೆ ಸಿದ್ದರಾಮಯ್ಯ ತಗಾದೆ ತೆಗೆದು, ನಾವೇ ಮೊದಲು ಮಂಡಿಸುತ್ತೇವೆ ಎಂದು ಪ್ರತಿಪಾದಿಸಿದರು. ಪ್ರಶ್ನೋತ್ತರ ಕಲಾಪದ ಬಳಿಕ ಮಸೂದೆಗಳ ಮಂಡನೆಗೆ ಸ್ಪೀಕರ್ ಅವಕಾಶ ಕೊಟ್ಟಿದ್ದನ್ನು ಕಾಂಗ್ರೆಸ್ ಆಕ್ಷೇಪಿಸಿ, ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಪಟ್ಟು ಹಿಡಿಯಿತು. ಸ್ಪೀಕರ್ ಅನುಮತಿಯಂತೆ ಪ್ರಾಥಮಿಕವಾಗಿ ವಿಷಯ ಪ್ರಸ್ತಾಪಿಸಲು ಕಾಂಗ್ರೆಸ್ ಮುಂದಾಗುತ್ತಿದ್ದಂತೆ ಗದ್ದಲದ ತಿರುವು ಪಡೆಯಿತು. ಆಡಳಿತ ಪಕ್ಷದ ಸದಸ್ಯರು ವಿರೋಧಿಸಿದರೆ, ವಿಷಯ ಮಂಡಿಸಲು ಅವಕಾಶ ಕೊಡುತ್ತಿಲ್ಲವೆಂದು ಕಾಂಗ್ರೆಸ್​ನವರು ಸ್ಪೀಕರ್ ಪೀಠದ ಮುಂದೆ ಧರಣಿ ಹೂಡಿದರು.
ದೆಹಲಿಯ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿ ರಾಷ್ಟ್ರಧ್ವಜಕ್ಕೆ ಅಪಮಾನಿಸಿದ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ದಾವೆ ಹೂಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದರೆ, ರಾಷ್ಟ್ರಧ್ವಜದ ಬಗ್ಗೆ ಗೌರವ, ದೇಶಭಕ್ತಿ ಬಗ್ಗೆ ನಿಮ್ಮಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಆಡಳಿತ ಪಕ್ಷದವರು ತಿರುಗೇಟು ನೀಡಿದರು.
ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಸದನದಲ್ಲಿ ರಾಷ್ಟ್ರಧ್ವಜ ಪ್ರದರ್ಶನದ ಮೂಲಕ ರಾಷ್ಟ್ರಧ್ವಜ ಸಂಹಿತೆ ಉಲ್ಲಂಘಿಸಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ನಾವು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ. ಬಿಜೆಪಿಯವರು ಅಪಮಾನಿಸಿದ್ದನ್ನು ತೋರಿಸಲು ಪ್ರದರ್ಶನ ಮಾಡಿದ್ದೇವೆ. ಸ್ಪೀಕರ್ ಅದನ್ನು ವ್ಯಾಖ್ಯಾನ ಮಾಡಿರುವುದು ತಪ್ಪು.
|ಸಿದ್ದರಾಮಯ್ಯವಿಧಾನಸಭೆ ಪ್ರತಿಪಕ್ಷ ನಾಯಕ
ಬಿಜೆಪಿ ಮಾತೆತ್ತಿದರೆ ದೇಶಭಕ್ತಿ, ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುತ್ತದೆ. ರಾಷ್ಟ್ರಧ್ವಜವನ್ನು ಅವಮಾನಿಸಿದ ಸಚಿವ ಈಶ್ವರಪ್ಪ ವಿರುದ್ಧ ರಾಜ್ಯಪಾಲರು ಅಥವಾ ಮುಖ್ಯ ಮಂತ್ರಿ ಕ್ರಮ ಜರುಗಿಸಬೇಕಾಗಿತ್ತು.
|ಬಿ.ಕೆ.ಹರಿಪ್ರಸಾದ್ವಿಧಾನ ಪರಿಷತ್ ಪ್ರತಿಪಕ್ಷ ನಾಯಕ
ಮೇಲ್ಮನೆ ಕಲಾಪ ಆಹುತಿ:ರಾಷ್ಟ್ರಧ್ವಜಕ್ಕೆ ಅಗೌರವಿಸಿದ ಈಶ್ವರಪ್ಪ ವಿರುದ್ಧ ದಾವೆ, ಸಚಿವ ಸ್ಥಾನದಿಂದ ವಜಾಕ್ಕೆ ಕಾಂಗ್ರೆಸ್​ನಿಂದ ಒತ್ತಾಯ, ನಿಲುವಳಿ ಸೂಚನೆ ತಿರಸ್ಕರಿಸಿದ ಸಭಾಪತಿ ರೂಲಿಂಗ್ ವಿರೋಧಿಸಿ ಧರಣಿ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದ, ಗದ್ದಲಕ್ಕೆ ಮೇಲ್ಮನೆ ಇಡೀ ದಿನದ ಕಲಾಪ ಆಹುತಿಯಾಯಿತು.
ವಿಧಾನ ಪರಿಷತ್ ಸದನ ಸೇರುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ ಅವರು ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ಕೋರಿದರೆ, ಪ್ರಶ್ನೋತ್ತರ ಕಲಾಪದ ಬಳಿಕ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ರಾಷ್ಟ್ರದ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸ್ತೀವಿ ಎಂಬ ಪ್ರಚೋದನಕಾರಿ, ವಿವಾದಾತ್ಮಕ ಹೇಳಿಕೆಯು ದೇಶದ ಏಕತೆ ಛಿದ್ರಗೊಳಿಸುವ ಹುನ್ನಾರವಾಗಿದೆ. ಸಚಿವರೊಬ್ಬರಿಂದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿಯಿತು. ನಿಯಮಾನುಸಾರ ಕಲಾಪ ನಡೆಯಲಿ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಕೋರಿದರು. ಸ್ಪೀಕರ್ ಸೂಚನೆಗೆ ಗೌರವ ನೀಡದವರು, ರಾಷ್ಟ್ರಧ್ವಜಕ್ಕೆ ಗೌರವಿಸುವ ಬಗ್ಗೆ ನಮಗೆ ಪಾಠ ಹೇಳುತ್ತಾರೆ ಎಂದು ಆಡಳಿತ ಪಕ್ಷದವರು ತಿವಿದರು.
ಎರಡೂ ಕಡೆಯವರ ಪ್ರಚೋದನಾತ್ಮಕ ಮಾತುಗಳು, ವಾಗ್ವಾದ ನಿಲ್ಲದ ಕಾರಣ ಕಲಾಪವನ್ನು ಸಭಾಪತಿ 10 ನಿಮಿಷ ಮುಂದೂಡಿದರು. ಮತ್ತೆ ಸದನ ಸೇರಿದಾಗ ಪ್ರಾಥಮಿಕವಾಗಿ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷ ನಾಯಕರಿಗೆ ಅವಕಾಶ ಕೊಟ್ಟರು. ಬಿ.ಕೆ.ಹರಿಪ್ರಸಾದ್ ಪ್ರತಿ ಮಾತಿಗೆ ಆಡಳಿತ ಪಕ್ಷದವರ ಆಕ್ಷೇಪ, ಕಾಂಗ್ರೆಸ್ ಸದಸ್ಯರ ಪ್ರತಿರೋಧ ಗಮನಿಸಿದ ಸಭಾಪತಿ ಎರಡೂ ಕಡೆಯವರನ್ನು ಗದರಿಸಿ ಸುಮ್ಮನಾಗಿಸಿದರು.
ಆರ್​ಎಸ್​ಎಸ್ ವಿರುದ್ಧ ಟೀಕೆ:ಹರಿಪ್ರಸಾದ್ ಅವರು ಮಾತಿನ ಮಧ್ಯೆ ಆರ್​ಎಸ್​ಎಸ್ ಹಾಗೂ ನಾಗ್ಪುರ ಕಚೇರಿ ವಿಷಯ ಎತ್ತಿದ್ದು ಮತ್ತೆ ವಾಗ್ವಾದಕ್ಕೆ ಕಾರಣವಾಯಿತು. ಮಧ್ಯೆ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಷಯಕ್ಕೆ ಸೀಮಿತವಾಗಿ ಮಾತನಾಡಲು ತಿಳಿಸಬೇಕು’ ಎಂದು ಸಭಾಪತಿಗೆ ವಿನಂತಿಸಿದರು. ಮಾತು ಮುಂದುವರಿಸಿದ ಹರಿಪ್ರಸಾದ್,ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಈಶ್ವರಪ್ಪ ವಿರುದ್ಧ ದೇಶದ್ರೋಹದ ದಾವೆ ಹೂಡಿ, ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಡಿಕೆಶಿ, ಈಶ್ವರಪ್ಪ ಜಗಳ್​ಬಂದಿ:ಕಾಂಗ್ರೆಸ್​ನ ಡಿ.ಕೆ.ಶಿವಕುಮಾರ್ ಏರುಧ್ವನಿಯಲ್ಲಿ ‘ರಾಷ್ಟ್ರದ್ರೋಹಿ’ ಎಂದು ಈಶ್ವರಪ್ಪ ಅವರನ್ನು ಜರಿದರೆ, ‘ನೀನು ರಾಷ್ಟ್ರದ್ರೋಹಿ, ನಿಮ್ಮಪ್ಪ ರಾಷ್ಟ್ರದ್ರೋಹಿ’ ಎಂದು ಪ್ರತಿಯಾಗಿ ಈಶ್ವರಪ್ಪ ಬೈದರು. ಅಲ್ಲದೆ, ‘ಕಲ್ಲುಬಂಡೆ ಲೂಟಿ ಹೊಡೆದು ಜೈಲಿಗೆ ಹೋಗಿ ಬಂದವ ನೀನು, ಜಾಮೀನು ಮೇಲೆ ಹೊರಗಿದ್ದೀಯ’ ಎಂದದ್ದು ಮಾತಿನ ಚಕಮಕಿಗೆ ಎಡೆಮಾಡಿಕೊಟ್ಟಿತು. ಎಲ್ಲರೂ ಒಟ್ಟಿಗೆ ವಾಗ್ವಾದಕ್ಕೆ ಇಳಿದ ಕಾರಣ ಯಾರಿಗೆ ಏನು ಹೇಳುತ್ತಿದ್ದಾರೆ ಎಂದು ತಿಳಿಯದೆ ಗೊಂದಲ, ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಕಲಾಪವನ್ನು ಸ್ಪೀಕರ್ ಮುಂದೂಡಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿ, ಮಾಧ್ಯಮದವರ ಪ್ರಶ್ನೆಗಳಿಗೆ ಈಶ್ವರಪ್ಪ ನೀಡಿರುವ ಉತ್ತರದ ಪೂರ್ಣ ಪಾಠದ ಪ್ರಕಾರ ರಾಷ್ಟ್ರಧ್ವಜಕ್ಕೆ ಅಪಮಾನವಾಗಿಲ್ಲ. ನಿಲುವಳಿ ಸೂಚನೆಗೆ ಅವಕಾಶ ಸಲ್ಲದು ಎಂದಾಗ ಸಭಾಪತಿ ಪುರಸ್ಕರಿಸಿ, ಕಾಂಗ್ರೆಸ್​ನ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು.
ಇದನ್ನೊಪ್ಪದ ಕಾಂಗ್ರೆಸ್ ಧರಣಿ ಹೂಡಿದರೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಧ್ಯೆ ಮಾತಿನ ಸಮರ ಮುಂದುವರಿದಿದ್ದರಿಂದ ಕಲಾಪವನ್ನು ಸಭಾಪತಿ ಮುಂದೂಡಿದರು. ಭೋಜನ ವಿರಾಮದ ಬಳಿಕ ಮತ್ತೆ ಸದನ ಸೇರಿದಾಗ ಪ್ರಶ್ನೋತ್ತರವನ್ನು ಸಭಾಪತಿ ಕೈಗೆತ್ತಿಕೊಂಡರು. ಕೋಲಾಹಲ ಮರುಕಳಿಸಿದ್ದರಿಂದ ಗುರುವಾರಕ್ಕೆ ಮುಂದೂಡಿದರು.
‘ಆರ್​ಎಸ್​ಎಸ್ ಕಚೇರಿಯಲ್ಲಿ 52 ವರ್ಷಗಳ ಕಾಲ ರಾಷ್ಟ್ರ ಧ್ವಜಾರೋಹಣ ಮಾಡಿದ್ದಿಲ್ಲ. ಆ ಕಚೇರಿ ನಗರವನ್ನು ಹಿಂದಿಯಲ್ಲಿ ನಾಗ್ಪುರ, ಇಂಗ್ಲಿಷ್​ನಲ್ಲಿ ಸ್ನೇಕ್​ಪುರ ಅಂತಲೂ ಕರೆಯುತ್ತಾರೆ. ನಾನು ಕನ್ನಡಾಭಿಮಾನಿಯಾದ ಕಾರಣಕ್ಕೆ ….ಹೀಗೆ ಹೇಳುತ್ತೇನೆ’ ಎಂದು ಬಿ.ಕೆ.ಹರಿಪ್ರಸಾದ್ ಆಡಿದ ಮಾತು ಬಿಜೆಪಿಯವರನ್ನು ಕೆರಳಿಸಿತು. ಆಡಳಿತ ಪಕ್ಷದ ಸದಸ್ಯರ ಒತ್ತಾಯಕ್ಕೆ ಸಭಾಪತಿ ಸ್ಪಂದಿಸಿ, ನಾಗ್ಪುರಕ್ಕೆ ಕನ್ನಡದಲ್ಲಿ ಬಳಸಿದ ಪದವನ್ನು ಕಡತದಿಂದ ತೆಗೆದುಹಾಕಲು ಸೂಚಿಸಿದರು.
ಕಾಂಗ್ರೆಸ್​ನಿಂದ ರಾಷ್ಟ್ರಧ್ವಜ ಪ್ರದರ್ಶನ:ಕಲಾಪ ಮುಂದೂಡಿಕೆ ಬಳಿಕ ಸ್ಪೀಕರ್ ಕೊಠಡಿಯಲ್ಲಿ ಆಡಳಿತ, ಪ್ರತಿಪಕ್ಷಗಳ ನಡುವೆ ರಾಜಿ ಸಂಧಾನ ಸಭೆ ನಡೆದರೂ ಫಲಪ್ರದವಾಗಲಿಲ್ಲ. ಭೋಜನ ವಿರಾಮದ ಬಳಿಕ ಸದನ ಮತ್ತೆ ಸೇರಿದಾಗ ಕಾಂಗ್ರೆಸ್​ನವರು ರಾಷ್ಟ್ರಧ್ವಜ ಹಿಡಿದುಕೊಂಡು ಬಂದು ‘ಈ ಧ್ವಜಕ್ಕೆ ನೀವು ಅಪಮಾನ ಮಾಡಿದ್ದೀರಿ’ ಎಂದು ಧರಣಿ ಮುಂದುವರಿಸಿದರು. ರಾಷ್ಟ್ರಧ್ವಜ ಬಳಕೆಗೆ ಸಂಹಿತೆಯಿದೆ, ಹೇಗೆ ಬೇಕೋ ಹಾಗೆ ಬಳಸಲು ಬರುವುದಿಲ್ಲವೆಂದು ಕಾಂಗ್ರೆಸ್ ನಡವಳಿಕೆಗೆ ಸ್ಪೀಕರ್ ಗರಂ ಆದರೆ, ರಾಷ್ಟ್ರಧ್ವಜವನ್ನು ರಾಜಕೀಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹಾಯ್ದರು. ರಾಷ್ಟ್ರಧ್ವಜಕ್ಕೆ ಅಪಮಾನಿಸಿದ ಈಶ್ವರಪ್ಪ ವಿರುದ್ಧ ಮೊದಲು ಕ್ರಮಕೈಗೊಳ್ಳಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ವಾಕ್ಸಮರ ನಿಲ್ಲದ ಕಾರಣ ಕಲಾಪವನ್ನು ಸ್ಪೀಕರ್ ಗುರುವಾರಕ್ಕೆ ಮುಂದೂಡಿದರು.
ಆನ್​ಲೈನ್​ ಫ್ರೆಂಡ್​ ಜತೆ ಕಷ್ಟ ಹೇಳ್ಕೊಂಡಿದ್ದಕ್ಕೆ 86 ಲಕ್ಷ ರೂ. ಕಳ್ಕೊಂಡ; ಅದೃಷ್ಟವಶಾತ್​ ಕಿಡ್ನಿ ಉಳೀತು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + nine =
Remember me
