ಬೆಂಗಳೂರು:ಸಂವಿಧಾನ ಮೇಲಿನ ಚರ್ಚೆ ಸಂದರ್ಭ ಸಚಿವ ಡಾ.ಕೆ.ಸುಧಾಕರ್ ಹಾಗೂ ಮಾಜಿ ಸ್ಪೀಕರ್ ರಮೇಶ್​ಕುಮಾರ್ ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡ ಘಟನೆ ವಿಧಾನಸಭೆಯಲ್ಲಿ ನಡೆಯಿತು. ಅಸಂಸದೀಯ ಹಾಗೂ ಅವಾಚ್ಯ ಶಬ್ದ ಬಳಕೆ, ಆರೋಪ-ಪ್ರತ್ಯಾರೋಪಗಳಿಂದಾಗಿ ಸದನ ಕೋಲಾಹಲದ ಕಣವಾಗಿತ್ತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ರಮೇಶ್​ಕುಮಾರ್, ಸುಧಾಕರ್​ಗೆ ಅವಾಚ್ಯಶಬ್ದ ಬಳಸಿ ರೇಗಿದರು. ಅದಕ್ಕೆ ಪ್ರತಿಯಾಗಿ ಸುಧಾಕರ್, ‘ನಿಂದೆಲ್ಲ ಗೊತ್ತಿದೆ ಕುಳಿತುಕೊಳ್ಳಲೊ’ ಎಂದು ನಿಂದಿಸಿದರು. ಇನ್ನೊಂದು ಹಂತದಲ್ಲಿ ಪರಸ್ಪರ ಇಬ್ಬರೂ ತಲೆಹಿಡುಕ ಪದ ಬಳಸಿದರು.
ಪರಿಸ್ಥಿತಿ ಕೈಮೀರಿದ್ದರಿಂದ ಸ್ಪೀಕರ್ ಸ್ಥಾನದಲ್ಲಿದ್ದ ಶಿವಾನಂದ ಪಾಟೀಲ್ ಸದನವನ್ನು ಮುಂದೂಡಿದರು. ಆ ಬಳಿಕ ನಡೆದ ಸಂಧಾನ ಸಭೆಯೂ ಯಶಸ್ವಿಯಾಗದೆ ಕಲಾಪದಲ್ಲಿ ಗದ್ದಲ, ಗಲಾಟೆ, ಪರ-ವಿರೋಧಿ ಘೋಷಣೆಗಳು ಮೊಳಗಿದವು.
ಈ ದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷ ಅರಾಜಕತೆ ಸೃಷ್ಟಿಸುತ್ತಿದೆ. ಅಘೋಷಿತ ತುರ್ತು ಪರಿಸ್ಥಿತಿಯಿದೆ. ಫ್ಯಾಸಿಸ್ಟ್​ಗಳು, ಕೋಮುವಾದಿಗಳು ಎಂದೆಲ್ಲ ನಮ್ಮನ್ನು ಜರಿಯುತ್ತಾರೆ. 40-50 ವರ್ಷ ಆಳಿದ ಪಕ್ಷ ದೇಶದಲ್ಲಿ ಅರಾಜಕತೆಗೆ ಆಸ್ಪದ ಮಾಡಿಕೊಡುತ್ತಿದೆ ಎಂದು ಕಾಂಗ್ರೆಸ್ ಹೆಸರು ಹೇಳದೆ ಡಾ.ಕೆ.ಸುಧಾಕರ್ ಕುಟುಕಿದರು. ಸಿಟ್ಟಿಗೆದ್ದ ರಮೇಶ್​ಕುಮಾರ್, ನಾವು ಸಂವಿಧಾನ ರಕ್ಷಣೆಗೆ ಹೋರಾಟ ಮಾಡುತ್ತಿದ್ದೇವೆ ಎಂದರು. ಆಗ ಸುಧಾಕರ್, ನಾನು ಯಾವುದೇ ಪಕ್ಷದ ಹೆಸರು ಹೇಳಲಿಲ್ಲ ಎಂದು ತಿರುಗೇಟು ನೀಡಿದರು.
ಆಗ ಸುಧಾಕರ್ ನೆರವಿಗೆ ಬಂದ ಸಚಿವ ವಿ ಸೋಮಣ್ಣ, ರಮೇಶ್​ಕುಮಾರ್ ಏನು ಮಾತನಾಡಬೇಕೆಂದು ಡಿಕ್ಟೇಟ್ ಮಾಡಬಾರದು ಎಂದರು. ಅದಕ್ಕೆ ರಮೇಶ್​ಕುಮಾರ್ ‘ನಿಮ್ಮ ಉಪದೇಶ ನನಗೆ ಬೇಕಿಲ್ಲ’ ಎಂದರೆ, ಸೋಮಣ್ಣ ಕೂಡ ‘ನಿಮ್ಮ ಉಪದೇಶವೂ ನಮಗೆ ಬೇಕಿಲ್ಲ’ ಎಂದು ಟಾಂಗ್ ಕೊಟ್ಟರು. ಮಾತು ಮುಂದುವರಿಸಿದ ಸುಧಾಕರ್, ಸಂವಿಧಾನ ಹಾಳು ಮಾಡುತ್ತಾರೆಂಬ ಆರೋಪ ನಮ್ಮ ಮೇಲೆ ಬಂದಿವೆ. ಹಾಗಿದ್ದರೆ ತುರ್ತು ಪರಿಸ್ಥಿತಿ ಹೇರಿದವರು ಯಾರು? ಎಂದು ಕೆಣಕಿದರು. ಮಧ್ಯ ಪ್ರವೇಶಿಸಿದ ಕಾಂಗ್ರೆಸ್​ನ ಕೆ.ಜೆ.ಜಾರ್ಜ್, ಮೊನ್ನೆ ಮೊನ್ನೆವರೆಗೆ ಕಾಂಗ್ರೆಸ್​ನಲ್ಲಿದ್ದಿರಿ. ಆಗ ತುರ್ತು ಪರಿಸ್ಥಿತಿ ವಿರುದ್ಧವಿದ್ದಿರಾ ಎಂದು ಪ್ರಶ್ನಿಸಿದರು. ಆಗ ರಮೇಶ್​ಕುಮಾರ್, ನಿಮಗೆ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ಹಕ್ಕಿಲ್ಲ. ತುರ್ತಪರಿಸ್ಥಿತಿ ಬಗ್ಗೆ ಈಶ್ವರಪ್ಪ, ಯಡಿಯೂರಪ್ಪ, ಸುರೇಶ್​ಕುಮಾರ್ ಅಂತಹವರು ಮಾತನಾಡಲಿ, ತಲೆ ಬಾಗಿ ಕೇಳುತ್ತೇವೆ ಎಂದರು. ಇದಕ್ಕೆ ತಿರುಗೇಟು ನೀಡಿದ ಸುಧಾಕರ್, ನೀವು ದಳದಲ್ಲಿ ಇದ್ದವರು ಕಾಂಗ್ರೆಸ್​ಗೆ ಏಕೆ ಬಂದಿರಿ ಎಂದು ಕೇಳಿದರು.
ತರುವಾಯ ಸುಪ್ರೀಂಕೋರ್ಟ್ ತೀರ್ಪು ಪ್ರಸ್ತಾಪಿಸಿದ ಸುಧಾಕರ್, ಸಭಾಧ್ಯಕ್ಷರ ಪೀಠದಿಂದ ನಮಗೆ ಅನ್ಯಾಯವಾಗಿದೆ. 17 ಜನರ ರಾಜಕೀಯ ಜೀವನ ಹಾಳಾಗುತ್ತಿತ್ತು. ನಮ್ಮನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿತ್ತು. 8 ತಿಂಗಳು ಆಜ್ಞಾತವಾಸ ಅನುಭವಿಸಿದ್ದೇವೆ ಎಂದರು. ಆಗ ಸದನದಿಂದ ಹೊರ ಹೋಗಿದ್ದ ರಮೇಶ್​ಕುಮಾರ್ ಒಳಗೆ ಬಂದು ಈ ವಿಷಯ ಇಲ್ಲಿ ಚರ್ಚೆ ಆಗಬೇಕೆ? ಎಂದು ಸ್ಪೀಕರ್ ಪೀಠದ ಎದುರು ಬಂದು ಪ್ರತಿಭಟಿಸಿದರು. ಆಗ ಮಾತಿಗೆ ಮಾತು ಬೆಳೆದು ಬೈದಾಡಿಕೊಂಡರು.
ರಾಜೀನಾಮೆಗೆ ಮುಂದಾದ ರಮೇಶ್
ಕಾಂಗ್ರೆಸ್ ಸದಸ್ಯರು ಬೆಂಬಲಕ್ಕೆ ಧಾವಿಸಲಿಲ್ಲ ಎಂದು ಅಸಮಾಧಾನಗೊಂಡ ರಮೇಶ್​ಕುಮಾರ್, ರಾಜೀನಾಮೆ ನೀಡಲು ಮುಂದಾಗಿದ್ದರು. ಆಪ್ತ ಸಹಾಯಕನಿಗೆ ರಾಜೀನಾಮೆ ಪತ್ರ ಟೈಪ್ ಮಾಡಿ ತರುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾಧಾನ ಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಸ್ಪೀಕರ್ ಕಾಗೇರಿ ಪರಿಶೀಲನೆ
ಸದನದಲ್ಲಿ ಸುಧಾಕರ್ ಮತ್ತು ರಮೇಶ್​ಕುಮಾರ್ ಪರಸ್ಪರ ನಿಂದನೆ ಪ್ರಕರಣ ಸ್ಪೀಕರ್ ಕಚೇರಿ ಅಂಗಳಕ್ಕೆ ತಲುಪಿತ್ತು. ಸ್ಪೀಕರ್ ಸಂಭಾಷಣೆಯ ವಿಡಿಯೋ ತುಣುಕು ಸಂಗ್ರಹ ಹಾಗೂ ಕಡತ ಪರಿಶೀಲಿಸಿದರು. ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆಯಲು ಸ್ಪೀಕರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನಾನೂ ಹಕ್ಕುಚ್ಯುತಿ ಮಂಡಿಸುತ್ತೇನೆ
ಹಿಂದೆ 17 ಶಾಕಸರು ರಾಜೀನಾಮೆ ಸ್ವೀಕರಿಸದೆ ತಿರಸ್ಕರಿಸಿದ್ದ ರಮೇಶ್​ಕುಮಾರ್ ನಮಗೆ ನೀಡಿದ ನೋವನ್ನು ಜನರ ಮುಂದಿಡುವ ಪ್ರಯತ್ನ ಮಾಡುವಾಗ, ನನ್ನನ್ನು ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಈ ಬಗ್ಗೆ ಹಕ್ಕುಚ್ಯುತಿ ಮಂಡಿಸುವುದಾಗಿ ಸಚಿವ ಡಾ.ಸುಧಾಕರ್ ತಿಳಿಸಿದರು. ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ನಾನು ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸ್ತೇನೆ. ಪ್ರಸಕ್ತ ಅಧಿವೇಶನ ಮುಗಿಯುವವರೆಗೆ ಅವರನ್ನು ಉಚ್ಚಾಟನೆ ಮಾಡಬೇಕು. ಸದನದಲ್ಲಿ ಅವರು ಯಾರ ಮಾತನ್ನೂ ಕೇಳಲು ತಯಾರಿಲ್ಲ ಎಂದರು. ಸದನದ ಗೌರವ ಉಳಿಸುವ ಕೆಲಸ ಮಾಡಬೇಕು. ಆದರೆ ಪ್ರತಿಪಕ್ಷಗಳು ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದಾರೆ. ಇದು ವೈಯಕ್ತಿಕ ಜಟಾಪಟಿ ಅಲ್ಲ. ಅವರ ಪಕ್ಷದ ಭವಿಷ್ಯದ ಸಲುವಾಗಿ ನಮ್ಮ ಜತೆ ಚೆಲ್ಲಾಟ ಆಡಿದರು. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿತ್ತು ಎಂದು ಆರೋಪಿಸಿದರು. ರಮೇಶ್​ಕುಮಾರ್​ಗೆ ನಾಟಕ ಮಾಡೋದು ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ಅವರು ಸದನಕ್ಕೆ ಬಂದಿಲ್ಲ. ನಾಳೆ ಸ್ಪೀಕರ್​ಗೆ ದೂರು ಸಲ್ಲಿಸುತ್ತೇನೆ ಎಂದರು.
ಬಾಸ್ಟರ್ಡ್ ಪದ ಬಳಸಿಲ್ಲ
ರಮೇಶ್​ಕುಮಾರ್ ಸ್ಪೀಕರ್ ಆಗಿದ್ದಾಗ ಮಾಡಿದ್ದ ಆದೇಶವನ್ನು ಸುಧಾಕರ್ ಪ್ರಸ್ತಾಪ ಮಾಡಿದರು. ಆ ಆದೇಶ ರಮೇಶ್​ಕುಮಾರ್ ಆಗಿ ಮಾಡಿದ್ದಲ್ಲ. ಸ್ಪೀಕರ್ ಆಗಿ ಮಾಡಿದ್ದ ಆದೇಶ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್ ಆದೇಶವನ್ನು ಸದನದಲ್ಲಿ ಪ್ರಸ್ತಾಪಿಸುವಂತಿಲ್ಲ. ಅದನ್ನು ಹೇಳಿ ರಮೇಶ್​ಕುಮಾರ್ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ. ಸುಧಾಕರ್ ಹೀಗೆ ಮಾತನಾಡಿದ್ದು ಸರಿಯಲ್ಲ ಎಂದರು. ಸದನದ ಹಕ್ಕುಚ್ಯುತಿಯಾಗಿದೆ. ಪೀಠಕ್ಕೆ ಅಗೌರವವಾಗಿದೆ. ಸುಧಾಕರ್ ಬಹಳ ಉದ್ಧಟತನದಿಂದ ಮಾತಾಡಿದ್ದಾರೆ. ಅದಕ್ಕೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನೋಟಿಸ್ ಕೊಟ್ಟಿದ್ದೇವೆ. ಇದರ ಮೇಲೆ ಚರ್ಚೆ ಮಾಡಲು ಅವಕಾಶ ನೀಡಲೇ ಇಲ್ಲ. ಗದ್ದಲ ಮಾಡಿದರು. ಸರ್ಕಾರ ನಡೆಸುವವರೇ ಹೀಗೆ ಮಾಡಿದರೆ ಹೇಗೆ? ಇದನ್ನು ಖಂಡಿಸುತ್ತೇನೆ. ಇದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಎಂದು ಆರೋಪಿಸಿದರು. ರಮೇಶ್​ಕುಮಾರ್ ಬಾಸ್ಟರ್ಡ್ ಪದ ಬಳಸಿಲ್ಲ. ಅವರು ಆ ಪದ ಬಳಸಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ದಾಖಲೆ ಇದೆಯಾ? ಒಳಗೆ ರೆಕಾರ್ಡ್ ಆಗಿದೆಯಾ? ತೋರಿಸಿ ನೋಡೋಣ ಎಂದು ಪತ್ರಕರ್ತರಿಗೆ ಸವಾಲು ಹಾಕಿದರು.
ಸಸ್ಪೆಂಡ್​ಗೆ ಬಿಜೆಪಿ ಆಗ್ರಹ
ತರುವಾಯ ಸಭೆ ಸೇರಿದಾಗ ಬಿಜೆಪಿ ಸದಸ್ಯರು ನಮ್ಮ ಮಂತ್ರಿಗೆ ನಿಂದಿಸಿದ್ದಾರೆ. ಅವರನ್ನು ಸಸ್ಪೆಂಡ್ ಮಾಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾವು ಹಕ್ಕುಚ್ಯುತಿ ನೋಟಿಸ್ ಕೊಟ್ಟಿದ್ದೇವೆ. ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರು. ಆಗ ಬಿಜೆಪಿ ಸದಸ್ಯರು ಜೋರಾಗಿ ಗಲಾಟೆ ಮಾಡಿ ಕೋಲಾಹಲದ ವಾತಾವರಣ ಸೃಷ್ಟಿಸಿದರು. ಆಗ ಸ್ಪೀಕರ್ ಸದನವನ್ನು ಬುಧವಾರಕ್ಕೆ ಮುಂದೂಡಿದರು. ಗಲಾಟೆ ತರುವಾಯ ಎರಡನೇ ಬಾರಿ ಸದನ ಸೇರಿದಾಗ ರಮೇಶ್​ಕುಮಾರ್ ಹಾಜರಿರಲಿಲ್ಲ.
ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಯಲ್ಲಿ ಕೋರಿಕೆಯ ವರ್ಗಾವಣೆ ವಿಚಾರದ ಅಂಶಗಳೇನಿವೆ?

ರಾಜ್ಯದಲ್ಲಿ ಓರ್ವ ಟೆಕ್ಕಿಯಿಂದ ಮೂವರಿಗೆ ಹರಡಿದ ಕೊರೊನಾ ವೈರಸ್​; ನಾವಿದ್ದೇವೆ ಹೆದರಬೇಡಿ ಎಂದು ಜನರಿಗೆ ಧೈರ್ಯ ತುಂಬಿದ ಡಾ. ಸುಧಾಕರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 4 =
Remember me
