ಬೆಂಗಳೂರು:ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ ಎಂಬಂತಹ ಪರಿಸ್ಥಿತಿ ಇರುವ ಸಂದರ್ಭದಲ್ಲೇ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಜತೆಗೆ ಸಖ್ಯ ಏರ್ಪಟ್ಟಿರುವ ವಿಚಾರ ಪಕ್ಷದ ಆಂತರಿಕ ನೆಮ್ಮದಿಯನ್ನು ಕದಡಿದೆ. ಬಣ ರಾಜಕೀಯ ಕೂಡ ಇನ್ನಷ್ಟು ತೀವ್ರಗೊಳ್ಳುವ ಸುಳಿವು ಸಿಕ್ಕಿದ್ದು, ಹೈಕಮಾಂಡ್​ಗೆ ದೂರು-ಪ್ರತಿದೂರು ನೀಡುವ ಹಂತವನ್ನೂ ತಲುಪಿದೆ.
ಮೈತ್ರಿ ಸರ್ಕಾರ ಪತನದ ಬಳಿಕ ಜೆಡಿಎಸ್ ಜತೆಗಿನ ಅಂತರ ಹೆಚ್ಚಾಗಬೇಕೆಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣದ ಖಡಾಕಡಿ ವಾದ. ಆದರೆ ಜಾತ್ಯತೀತ ನಿಲುವು ಹೊಂದಿದ ಜೆಡಿಎಸ್ ನಮ್ಮ ಜತೆಗಿದ್ದರೆ ಅನುಕೂಲ ಎಂಬುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಶಯ. ವಿವಿಧ ವಿಚಾರದಲ್ಲಿ ಈ ಎರಡು ಬಣದ ನಡುವೆ ವೈಮನಸ್ಯ ಇದ್ದರೂ, ಜೆಡಿಎಸ್ ವಿಷಯ ಬಂದಾಗ ಅಭಿಪ್ರಾಯ ಘರ್ಷಣೆ ಹೆಚ್ಚಾಗಿದೆ. ಅಲ್ಲದೆ, ಪ್ರತಿಷ್ಠೆಯೂ ಇಣುಕಿದೆ.
ಪಕ್ಷದ ರಾಜ್ಯ ಉಸ್ತುವಾರಿಗೆ, ಸಾಧ್ಯವಾದರೆ ಹೈಕಮಾಂಡ್​ಗೆ ಅಭಿಪ್ರಾಯ ಮುಟ್ಟಿಸಿ ರಾಜ್ಯದ ಬೆಳವಣಿಗೆಯನ್ನು ಮನವರಿಕೆ ಮಾಡಿಕೊಡಲು ಇತ್ತಂಡಗಳೂ ತಯಾರಿ ಮಾಡಿಕೊಳ್ಳುತ್ತಿವೆ. ಪಕ್ಷದ ವೇದಿಕೆಯಲ್ಲಿ ಒಟ್ಟಿಗೆ ಕುಳಿತುಕೊಂಡು ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದು ಕಾರ್ಯಕರ್ತರ ಮುಂದೆ ತೋರಿಸಿಕೊಳ್ಳುತ್ತಿದ್ದರೂ, ಒಳೇಟುಕೊಡುವುದರಲ್ಲಿ ನಾಯಕರು ಆಸಕ್ತಿ ವಹಿಸಿದ್ದಾರೆಂಬುದಕ್ಕೆ ಹಲವು ಉದಾಹರಣೆಗಳಿವೆ. ತಮ್ಮ ರಾಜಕೀಯ ಹಿನ್ನೆಡೆ ಬಯಸುತ್ತಿರುವ ಜೆಡಿಎಸ್ ನಾಯಕರೊಂದಿಗೆ ಪಕ್ಷ ಒಟ್ಟಿಗೆ ಹೆಜ್ಜೆ ಹಾಕುವುದನ್ನು ಸಿದ್ದರಾಮಯ್ಯ ಸುತಾರಾಂ ಒಪ್ಪಲು ಸಿದ್ಧರಿಲ್ಲ. ತಾವಿದ್ದ ಹಳೆಯ ಪಕ್ಷವನ್ನು ರಾಜಕೀಯ ಪಕ್ಷವೇ ಅಲ್ಲ ಎಂದಿದ್ದರಲ್ಲದೆ, ಜೆಡಿಎಸ್ ನಾಯಕರನ್ನು ಹಿಗ್ಗಾಮುಗ್ಗ ಜರಿದಿದ್ದರು. ಇದಕ್ಕೆ ಪರ್ಯಾಯವಾಗಿ ಅತ್ತ ಕಡೆಯಿಂದಲೂ ವಾಗ್ದಾಳಿ ನಡೆದಿತ್ತು. ಈ ಮುನ್ನ ವಿಧಾನಪರಿಷತ್ ಉಪಸಭಾಪತಿ, ಸಭಾಪತಿ ಚುನಾವಣೆಯಲ್ಲಿ ಪಕ್ಷಕ್ಕೆ ಅಗತ್ಯವಾದಷ್ಟು ಮತ ಇಲ್ಲವಾದರೂ ಒತ್ತಾಯಪೂರ್ವಕವಾಗಿ ಅಭ್ಯರ್ಥಿ ಕಣಕ್ಕಿಳಿಸಿ, ಜೆಡಿಎಸ್ ಮತ್ತು ಬಿಜೆಪಿ ಸಖ್ಯವನ್ನು ನಾಡಿನ ಜನತೆಗೆ ತಿಳಿಸಲು ಸಿದ್ದರಾಮಯ್ಯ ಪ್ರಯತ್ನಿಸಿದ್ದರು. ಈ ಒತ್ತಾಯಪೂರ್ವಕ ಬೆಳವಣಿಗೆ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಸಹ್ಯ ಎನಿಸಿರಲಿಲ್ಲ.
ಇಷ್ಟರ ನಡುವೆ ಕಾಂಗ್ರೆಸ್ ಅತ್ಯಾಸಕ್ತಿಯಿಂದ ಮೈಸೂರು ಪಾಲಿಕೆ ಮೇಯರ್ ಸ್ಥಾನವನ್ನು ಜೆಡಿಎಸ್​ನವರಿಗೆ ಬಿಟ್ಟುಕೊಟ್ಟಿದ್ದು ಸಿದ್ದರಾಮಯ್ಯ ಕಣ್ಣುಕೆಂಪಾಗಿಸಿದೆ. ಮೈಸೂರು ತಮ್ಮ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಇಲ್ಲಿ ಜೆಡಿಎಸ್​ಗೆ ಮಣೆಹಾಕುವುದೆಂದರೇನು ಎಂದು ಸಿಟ್ಟಿಗೆದ್ದಿದ್ದಾರೆ.
ಇದಕ್ಕೆ ಪರ್ಯಾಯವಾಗಿ, ತಾವು ಸಿಎಂ ಆಗಿದ್ದಾಗಲೇ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲ್ಲಲಾಗದೆ ಜಾತಿ ಲೆಕ್ಕಾಚಾರದ ಮೇಲೆ ಬಾದಾಮಿ ಕ್ಷೇತ್ರಕ್ಕೆ ಹೋಗಿ ಗೆದ್ದು ಬಂದವರು, ಇನ್ನೂ ಮೈಸೂರಿನ ಮೇಲೆ ಹಿಡಿತ ಬಯಸುತ್ತಿದ್ದಾರೆಯೇ ಎಂಬ ಕುಹಕ ಅಭಿಪ್ರಾಯ ಡಿಕೆಶಿ ಬಳಗದಿಂದ ಕೇಳಿಬಂದಿದೆ.
ಈ ತಿಕ್ಕಾಟ ಇಷ್ಟಕ್ಕೆ ನಿಲ್ಲದೇ, ಮೇಯರ್ ಸ್ಥಾನ ಬಿಟ್ಟುಕೊಡಲು ಕಾರಣರಾದವರ ಮೇಲೆ ಕ್ರಮವಾಗಬೇಕೆಂದು ಸಿದ್ದರಾಮಯ್ಯ ಬಣ ಪಟ್ಟು ಹಿಡಿದಿದೆ. ಆದರೆ, ಈ ಬೆಳವಣಿಗೆಯಲ್ಲಿ ಪ್ರಮುಖಪಾತ್ರ ವಹಿಸಿದ ತನ್ವೀರ್ ಸೇಠ್ ಅವರಿಗೆ ದೂರವಾಣಿ ಕರೆ ಮಾಡಿದ್ದ ಡಿ.ಕೆ.ಶಿವಕುಮಾರ್ ಖುದ್ದು ಭೇಟಿಗೆ ಆಹ್ವಾನಿಸಿದ್ದಾರೆ. ಹಾಗೆಯೇ ಭಾನುವಾರ ಪಕ್ಷದ ಕೆಲವು ನಾಯಕರು ದೆಹಲಿಗೆ ದೂರು ನೀಡಲು ತೆರಳುತ್ತಾರೆಂಬ ಗುಸುಗುಸು ಸಹ ಪಕ್ಷದಲ್ಲಿದೆ. ಈಗಾಗಲೇ ಇಮೇಲ್ ಮೂಲಕ ಇಲ್ಲಿನ ಬೆಳವಣಿಗೆಯ ವರದಿಯನ್ನು ರಾಜ್ಯ ಉಸ್ತುವಾರಿಗೆ ಕಳಿಸಲಾಗಿದೆ ಎಂಬ ಮಾಹಿತಿಯೂ ಇದೆ.
ಭವಿಷ್ಯದ ಲೆಕ್ಕಾಚಾರದ ಮುನ್ನೋಟ
ಮೈಸೂರು ಪಾಲಿಕೆ ಮೇಯರ್ ಸ್ಥಾನದ ವಿಚಾರವಾಗಿ ನಡೆದಿರುವ ತಿಕ್ಕಾಟ ಭವಿಷ್ಯದ ಲೆಕ್ಕಾಚಾರದ ಮುನ್ನೋಟವಾಗಿಯೂ ಕಾಣಿಸುತ್ತಿದೆ. ‘ನಿಮ್ಮನ್ನು ಹಣಿಯಲು ನಾವು ಯಾವುದೇ ತ್ಯಾಗಕ್ಕೂ ಸಿದ್ಧ’ ಎಂಬ ಸೂಕ್ಷ್ಮ ಸಂದೇಶವನ್ನು ಎಚ್​ಡಿಕೆ-ಡಿಕೆಶಿ ಜೋಡಿ ಸಿದ್ದರಾಮಯ್ಯಗೆ ಕಳಿಸಿದೆ. ಮೈತ್ರಿ ಸರ್ಕಾರದ ಪತನದ ಬಳಿಕ ಎಚ್.ಡಿ.ದೇವೇಗೌಡ, ಎಚ್​ಡಿಕೆ ಹಾಗೂ ಜೆಡಿಎಸ್ ಕುರಿತು ಡಿಕೆಶಿ ಮಾತನಾಡಿದ್ದು ಕಡಿಮೆಯೇ. ಪಕ್ಷದ ಬಾವುಟದ ವಿಷಯ ಬಂದಾಗ ಪಕ್ಷದ ನೆಲೆಯಲ್ಲಿ ಪ್ರತಿರೋಧ ನೀಡಿದ್ದರ ಹೊರತು ತುಟಿಬಿಚ್ಚಿಲ್ಲ. ಇದು ಸಿದ್ದರಾಮಯ್ಯ ಬಳಗಕ್ಕೆ ಸರಿ ಎನಿಸಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − five =
Remember me
