|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಿದರೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂಬ ಸಿದ್ಧ ಸೂತ್ರಕ್ಕೆ ಜೋತುಬಿದ್ದಿರುವ ಕಾಂಗ್ರೆಸ್, ನವೆಂಬರ್ ಅಂತ್ಯದೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ಮುಂದಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳಲು ಕೊನೇ ಹಂತದಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ್ದು ಕಾರಣ ಎಂಬ ಪಕ್ಷದ ರಾಜ್ಯ ಘಟಕದ ವಾದವನ್ನು ಹೈಕಮಾಂಡ್ ಕೂಡ ಒಪ್ಪಿಕೊಂಡಿದೆ. ಹೀಗಾಗಿ ರಾಜ್ಯ ಘಟಕದ ಸಲಹೆ ಪುರಸ್ಕರಿಸಲು ನಿರ್ಧರಿಸಿದೆ.
ಆಯ್ಕೆ ಹೇಗೆ?:ವಿಜಯವಾಣಿಗೆ ಲಭ್ಯವಾದ ಮಾಹಿತಿಗಳ ಪ್ರಕಾರ, ಅಕ್ಟೋಬರ್- ನವೆಂಬರ್ ವೇಳೆಗೆ ಅಭ್ಯರ್ಥಿಗಳ 150ಕ್ಕಿಂತ ಹೆಚ್ಚು ಕ್ಷೇತ್ರಗಳ ವಿಚಾರದಲ್ಲಿ ಸ್ಪಷ್ಟತೆ ತಂದುಕೊಳ್ಳಲು ಉದ್ದೇಶಿಸಲಾಗಿದೆ. 224 ಕ್ಷೇತ್ರಗಳಲ್ಲಿ ಪಕ್ಷ 150 ಸ್ಥಾನ ಗೆಲ್ಲಲೇಬೇಕೆಂಬ ಗುರಿ ಹಾಕಿಕೊಂಡಿದ್ದು, ಈ ಪ್ರಕಾರವೇ ಪಕ್ಷ ಎಣಿಸಿದ ಗೆಲ್ಲಬಹುದಾದ ಕ್ಷೇತ್ರಗಳನ್ನು ಪಟ್ಟಿ ಮಾಡಿಕೊಂಡು ಅಲ್ಲಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ.
ತಕ್ಷಣ ಪ್ರಕ್ರಿಯೆ:ಮಾಸಾಂತ್ಯದೊಳಗೆ ಜಿಲ್ಲಾ ವಾಸ್ತು ವೀಕ್ಷಕರ ನೇಮಕ ಆಗಲಿದೆ. ಜತೆಜತೆಗೇ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕ್ಷೇತ್ರವಾರು ಸಭೆ ನಡೆಸಲಿದ್ದಾರೆ. ಪ್ರತಿ ಕ್ಷೇತ್ರದ ಬಲಾಬಲ, ಎದುರಾಳಿ ಬಲ, ಟಿಕೆಟ್ ಆಕಾಂಕ್ಷಿಗಳನ್ನು ಗುರುತಿಸಿ ಪ್ರಬಲರು ಯಾರೆಂದು ಗುರುತಿಸಲಾಗುತ್ತದೆ. ಪ್ರಸ್ತುತ ಪಕ್ಷದ 69 ಶಾಸಕರಿದ್ದಾರೆ. ಇವರಲ್ಲಿ ಆರೋಗ್ಯ- ವಯೋಸಹಜ ಕಾರಣಕ್ಕೆ ಮೂರು ಮಂದಿಯನ್ನು ಹೊರತುಪಡಿಸಿ ಉಳಿದವರಿಗೆಲ್ಲ ಟಿಕೆಟ್ ಬಹುತೇಕ ಖಾತ್ರಿ ಎನ್ನಲಾಗುತ್ತಿದೆ. ಉಳಿದಂತೆ 2018ರಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಆಸಕ್ತರಿದ್ದರೆ ಅವರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ.
ಕಾರ್ಯಾಚರಣೆ ಹೇಗೆ?:ಅಭ್ಯರ್ಥಿಗಳನ್ನು ಅನೌಪಚಾರಿಕವಾಗಿ ಅಂತಿಮ ಗೊಳಿಸಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚನೆ ಕೊಡಲಾಗುತ್ತದೆ. ಅಧಿಕೃತ ಪಟ್ಟಿಯನ್ನು ಚುನಾವಣೆ ಸಮೀಪಿಸಿದಾಗ ಘೋಷಿಸಲಾಗುತ್ತದೆ. ಒಂದು ವೇಳೆ ಕ್ಷೇತ್ರದಲ್ಲಿ ಅಸಮಾಧಾನ ಲಕ್ಷಣಗಳಿದ್ದರೆ, ಬಗೆಹರಿಸಲು ಪ್ರಯತ್ನಿಸಲಾಗುತ್ತದೆ.
ರಾಜಸ್ಥಾನದತ್ತ ಕೈ ದಂಡು:ಪಕ್ಷದ ಸಂಘಟನೆಗೆ ಚುರುಕು ನೀಡುವ ಉದ್ದೇಶದಿಂದ ಕಾಂಗ್ರೆಸ್ ರಾಜಸ್ಥಾನದಲ್ಲಿ ಮೇ 13ರಿಂದ ಹಮ್ಮಿಕೊಂಡಿರುವ ಚಿಂತನಾ ಶಿಬಿರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರು, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿವಿಧ ಘಟಕಗಳ ಮುಖ್ಯಸ್ಥರು ಪಾಲ್ಗೊಳ್ಳುವರು. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿಷಯ ಮಂಡಿಸಲಿದ್ದಾರೆ.
ಟಾರ್ಗೆಟ್ ಜೆಡಿಎಸ್:ಹಳೇ ಮೈಸೂರು ಭಾಗ ಮತ್ತು ಜೆಡಿಎಸ್ ಪ್ರಾಬಲ್ಯ ಇರುವ ಕಡೆಗಳಲ್ಲಿ ಹೆಚ್ಚಿನ ಗಮನ ಹರಿಸಲು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದು, ಆ ಪ್ರಕಾರ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕ್ಷೇತ್ರದ ಮೇಲೆ ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಹಿಡಿತ ಸಾಧಿಸಲು ಬಯಸಿದ್ದಾರೆ. ಜೆಡಿಎಸ್ ಅನ್ನು ಎಷ್ಟು ಕಡಿಮೆ ಸ್ಥಾನ ಪಡೆದುಕೊಳ್ಳುವಂತೆ ಮಾಡಿದರೆ ಅದು ಸ್ಪಷ್ಟವಾಗಿ ಕಾಂಗ್ರೆಸ್​ಗೆ ಆಗುವ ಲಾಭ ಎಂಬ ಲೆಕ್ಕಾಚಾರದಲ್ಲಿ ಇರುವ ಕೈ ನಾಯಕರು, ಈ ನಿಟ್ಟಿನಲ್ಲಿ ಜೆಡಿಎಸ್ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದಾರೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಚುನಾವಣೆ ಉದ್ದೇಶದ ಸರ್ವೆ ನಡೆಸಲು ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಿದೆ. ಇನ್ನೇನು ಸರ್ವೆ ಕಾರ್ಯ ಆರಂಭವಾಗಲಿದ್ದು, ಈ ವರದಿ ಆಧಾರದ ಮೇಲೆ ಕಾರ್ಯತಂತ್ರವನ್ನು ಬದಲು ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
ಕಾಂಗ್ರೆಸ್ಸಿಗರು ತಮ್ಮ ವಿರುದ್ಧ ಆರೋಪ ಮಾಡದಂತೆ ಕೋರಲು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಮಾಜಿ ಸಚಿವ ಎಂ.ಬಿ.ಪಾಟೀಲ್ ಭೇಟಿ ಮಾಡಿದ್ದರೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಸ್ವತಃ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆಯೇ ಮುಖ್ಯವಾಗಿದ್ದು, ಆ ಕುರಿತು ನಾನು ಏನನ್ನೂ ಹೇಳ ಬಯಸುವುದಿಲ್ಲ.
|ಸಿದ್ದರಾಮಯ್ಯಪ್ರತಿಪಕ್ಷ ನಾಯಕ
ಬೆಂಗಳೂರು:ಬೂದಿಮುಚ್ಚಿದ್ದ ಕೆಂಡದಂತಿದ್ದ ಕಾಂಗ್ರೆಸ್ ನಾಯಕರ ನಡುವಿನ ಕಿತ್ತಾಟ ಈಗ ಹೊರಬಂದಿದ್ದು, ಹೊಸ ಶೀತಲ ಸಮರಕ್ಕೆ ನಾಂದಿಯಾಗಿದೆ. ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಪ್ರಚಾರ ಸಮಿತಿ ಅಧ್ಯಕ್ಷರು ಗುಡುಗಿದ್ದು, ದೆಹಲಿ ನಾಯಕರ ಸಮ್ಮುಖದಲ್ಲಿ ದೂರು ಸಲ್ಲಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಸಚಿವ ಅಶ್ವತ್ಥನಾರಾಯಣ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಈಗ ಕಾಂಗ್ರೆಸ್ ಒಳಗೆ ಆಂತರಿಕ ಸಂಘರ್ಷ ಹುಟ್ಟುಹಾಕಿದೆ. ಡಿಕೆಶಿ ಹೇಳಿಕೆ ಎಂ.ಬಿ.ಪಾಟೀಲರನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್, ಅಶ್ವತ್ಥನಾರಾಯರಣ್​ರನ್ನು ಭೇಟಿಯಾಗಿಲ್ಲ. ಭೇಟಿಯಾಗಬಾರದು ಎಂದೂ ಇಲ್ಲ. ಇದು ಖಾಸಗಿ ವಿಚಾರ. ಎಲ್ಲರೂ ಸ್ನೇಹಿತರು, ನಮ್ಮ ಅಧ್ಯಕ್ಷರು ಎಲ್ಲೂ ಹೋಗಿಲ್ವಾ? ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ’ ಎಂದು ಏರುದನಿಯಲ್ಲಿ ಪ್ರತಿಕ್ರಿಯಿಸಿದರು. ನೀವು ಯಾರನ್ನ ಭೇಟಿ ಮಾಡಿಲ್ವಾ? ನಿಮ್ಮ ಮನೆಗೆ ಯಾರೂ ಬಂದಿಲ್ವಾ? ಅವರಿಗೆ ಪ್ರೊಟೆಕ್ಷನ್ ಕೊಡಲು ನಾನೇನು ಚೀಫ್ ಮಿನಿಸ್ಟರಾ›? ಹೋಂ ಮಿನಿಸ್ಟರ್ ಅಥವಾ ಪಕ್ಷದ ಅಧ್ಯಕ್ಷನಾ? ಎಂದರು. ಖಾಸಗಿ ಸಂಬಂಧಗಳು ಬೇರೆ, ರಾಜಕೀಯ ಸಂಬಂಧಗಳು ಬೇರೆ. ಅಶ್ವತ್ಥನಾರಾಯಣ್ ಬಗ್ಗೆ ನಾನು ಸಹ ರಾಜೀನಾಮೆಗೆ ಆಗ್ರಹಿಸಿದ್ದೇನೆ. ಅಧ್ಯಕ್ಷರ ಹೇಳಿಕೆ ಸರಿಯಿಲ್ಲ, ನನ್ನ ಭೇಟಿ ಬಗ್ಗೆ ಯಾರಿಗೂ ಹೇಳುವ ಅವಶ್ಯಕತೆ ಇಲ್ಲ, ನಾನು ಯಾರಿಗೂ ಹೇಳಬೇಕಾಗಿಲ್ಲ ಎಂದು ಅಧ್ಯಕ್ಷರಿಗೆ ಪಂಚ್ ನೀಡುವ ರೀತಿ ಹೇಳಿಕೆ ನೀಡಿದರು.
ಪ್ರಚಾರ ಸಮಿತಿ ಅಧ್ಯಕ್ಷರ ಈ ಅಭಿಪ್ರಾಯ ಮುಂದಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷರಿಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಹಾಕಿದಾಗ, ನಾನು ಇದರ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಸಚಿವರು ಭೇಟಿ ಮಾಡಿದ್ದಾರೆಂದು ಮಾಧ್ಯಮದವರೇ ಹೇಳಿ ಪ್ರತಿಕ್ರಿಯೆ ಕೇಳಿದರು, ಮಿಕ್ಕಿದ್ದು ನನಗೆ ಗೊತ್ತಿಲ್ಲ. ಈ ಚರ್ಚೆ ಬಿಟ್ಟುಬಿಡಿ ಎಂದರು. ಇನ್ನು ಎಂ.ಬಿ.ಪಾಟೀಲ್ ಈ ಅಭಿಪ್ರಾಯ ನೀಡುವ ಮುನ್ನ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಸಿದ್ದರಾಮಯ್ಯ ಅಣತಿಯಂತೆಯೇ ಹೇಳಿಕೆ ನೀಡಿದ್ದಾರೆಂದು ಗುಸುಗುಸು ಕಾಂಗ್ರೆಸ್​ನಲ್ಲಿದೆ. ಡಿ.ಕೆ.ಶಿವಕುಮಾರ್ ಅವರನ್ನು ನಿಯಂತ್ರಿಸಲು ಸಿದ್ದರಾಮಯ್ಯ ಬಣ ಪ್ರಯತ್ನಿಸುತ್ತಲೇ ಬಂದಿರುವುದು ಗುಟ್ಟಾಗಿ ಉಳಿದ ವಿಚಾರವೇನಲ್ಲ.
ಡಿಕೆಶಿಗೆ ರಮ್ಯಾ ಬುದ್ಧಿಮಾತು!:ಮಾಜಿ ಸಂಸದೆ ರಮ್ಯಾ ಚರ್ಚೆಯನ್ನು ಮತ್ತೊಂದು ಮಗ್ಗುಲಿಗೆ ತೆಗೆದುಕೊಂಡು ಹೋಗಿದ್ದಾರೆ. ‘ಪಕ್ಷಾತೀತವಾಗಿ ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಕೆಲವರ ಕುಟುಂಬಗಳಲ್ಲಿ ವಿವಾಹವೂ ನಡೆಯುತ್ತದೆ. ನನಗೆ ಆಶ್ಚರ್ಯವಾಗಿದೆ ಡಿ.ಕೆ. ಶಿವಕುಮಾರ್ ಅವರೇ, ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸ ಬೇಕಲ್ಲವೇ?’ ಎಂದು ಪಕ್ಷದ ಅಧ್ಯಕ್ಷರಿಗೆ ಬುದ್ಧಿವಾದ ಹೇಳಿದ್ದಾರೆ.
ಸಿಎಂ ಚರ್ಚೆ ಮುನ್ನೆಲೆಗೆ:ಕಾಂಗ್ರೆಸ್ ಹೈಕಮಾಂಡ್​ಗೆ ನಿದ್ರೆಗೆಡಿಸಿದ್ದ ‘ಮುಂದಿನ ಮುಖ್ಯಮಂತ್ರಿ ’ ಕೂಗು ತಣ್ಣಗಾಗಿತ್ತು, ಬುಧವಾರ ಪುನಃ ಮುನ್ನೆಲೆಗೆ ಬಂದಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಬಣದ ಶಾಸಕರಿಗೆ ಕಸಿವಿಸಿ ಉಂಟುಮಾಡಿದೆ. ಇದೇ ವಿಷಯದಲ್ಲಿ ಪ್ರತಿಕ್ರಿಯೆ ನೀಡಿದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಅದು ಅವರ ವೈಯಕ್ತಿಕ ಹೇಳಿಕೆ. ಪಕ್ಷಕ್ಕೆ ಸಂಬಂಧವಿಲ್ಲ. ನಮ್ಮ ಪಕ್ಷದಲ್ಲಿ ಗೆದ್ದಿರುವ ಶಾಸಕರು ಜಿಲ್ಲಾ ಉಸ್ತುವಾರಿಗಳಿಗೆ ಮುಖ್ಯಮಂತ್ರಿ ಅಭ್ಯರ್ಥಿಗಳ ಬಗ್ಗೆ ಶಿಫಾರಸ್ಸು ಮಾಡುತ್ತಾರೆ. ನಂತರ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ವೈಯಕ್ತಿಕ ಅಭಿಪ್ರಾಯ ಹೇಳಲು ನಮ್ಮ ಪಕ್ಷದಲ್ಲಿ ಅವಕಾಶವಿದೆ. ಅಂತಿಮವಾಗಿ ತೀರ್ಮಾನ ಕೈಗೊಳ್ಳುವವರು ಹೈಕಮಾಂಡ್ ಎಂದರು. ಈ ರೀತಿ ಹೇಳಿಕೆ ಕೊಟ್ಟರೆ ತೊಂದರೆ ಇಲ್ಲ. ಒಬ್ಬರು ಇಂತಹ ಹೇಳಿಕೆ ಕೊಟ್ಟರೆ ಎಲ್ಲ 80 ಜನ ಆ ಹೇಳಿಕೆ ಕೊಡಬೇಕು ಎಂದೇನಿಲ್ಲ. ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದಾರೆ ಅಷ್ಟೇ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 18 =
Remember me
