ಬೆಂಗಳೂರು:ರಾಜ್ಯದಲ್ಲಿ ಪಕ್ಷವನ್ನು ಗೆಲುವಿನ ಹಳಿಮೇಲೆ ತರಲು ಹರಸಾಹಸಪಡುತ್ತಿರುವ ಕಾಂಗ್ರೆಸ್​ಗೆ ಬಿಜೆಪಿಯ ಹಿಂದುತ್ವ ಅಜೆಂಡವೇ ದೊಡ್ಡಸವಾಲಾಗಿ ಕಾಣಿಸಿದ್ದು, ಮುಂದೇನು ಮಾಡಬೇಕೆಂದು ತಲೆ ಮೇಲೆ ಕೈಹೊತ್ತು ಕುಳಿತಿದೆ.
ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಈ ಅಳುಕು ವ್ಯಕ್ತವಾಗಿದ್ದು, ಬಿಜೆಪಿಗೆ ಕೌಂಟರ್ ನೀಡುವುದು ಹೇಗೆ? ಬಿಜೆಪಿಯ ಹಿಂದುತ್ವ ಅಜೆಂಡಾದಿಂದ ಉಂಟಾಗುತ್ತಿರುವ ಹಾನಿಯ ತಡೆಯುವ ಮಾರ್ಗ ಯಾವುದು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದಿದ್ದು, ಹಿರಿಯ ನಾಯಕರೇ ತಮ್ಮ ಕಳವಳ ಹೊರಹಾಕಿದ್ದಾರೆ. ಪಕ್ಷದ ಸಿದ್ಧಾಂತ ಮೀರಿ ಹಿಂದುತ್ವದ ಪರವಾಗಿ ಹೋಗಲು ಸಾಧ್ಯವಿಲ್ಲ. ಇದನ್ನು ಬಿಟ್ಟು ಏನು ಪರಿಹಾರ ಹುಡುಕಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ವೀರಶೈವ ಲಿಂಗಾಯತ ನಿಗಮ, ಮರಾಠ ಅಭಿವೃದ್ಧಿ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ ರಚನೆ ವಿಚಾರದಲ್ಲಿ ಸರ್ಕಾರ ರಾಜಕೀಯ ಉದ್ದೇಶಕ್ಕೆ ತೀರ್ಮಾನ ಮಾಡಿತಾದರೂ, ಅವುಗಳನ್ನು ವಿರೋಧಿಸಲೂ ಆಗದೇ, ಸಮರ್ಥಿಸಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ಕಾಂಗ್ರೆಸ್​ನದ್ದಾಗಿತ್ತು. ಸರ್ಕಾರದ ನಿರ್ಧಾರ ತಪ್ಪೆನಿಸಿದರೂ ವಿರೋಧಿಸಿದರೆ ತಮ್ಮ ಶಾಸಕರಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ನಾವೇನು ಮಾಡಬೇಕೆಂದು ಅರ್ಥವಾಗುತ್ತಿಲ್ಲ ಎಂದು ಹಿರಿಯ ನಾಯಕರೊಬ್ಬರು ಕಳವಳ ಹೊರಹಾಕಿದ್ದಾರೆ.
ಈ ಹಿಂದೆ ಕಾಂಗ್ರೆಸ್​ಗೆ ಗಟ್ಟಿ ಮತ ಬ್ಯಾಂಕ್ ಆಗಿದ್ದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಮತಗಳು ಇಂದು ಬಿಜೆಪಿ ಪಾಲಾಗುತ್ತಿವೆ. ಇಂಥ ಬೆಳವಣಿಗೆ ಬಗ್ಗೆ ಪಕ್ಷ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ಮಾಜಿ ಸಚಿವರು ಸಭೆಯಲ್ಲಿ ಹೇಳಿಕೊಂಡಿದ್ದಾರೆ.
ಬಿಜೆಪಿ ವಿರುದ್ಧದ ಎಷ್ಟೇ ಆರೋಪ, ಪ್ರತಿಭಟನೆ ಮಾಡಿದರೂ ಜನರಿಗೆ ನಾಟುತ್ತಿಲ್ಲ. ಪ್ರಯತ್ನ ಸಾಕಾಗುತ್ತಿಲ್ಲ ಎಂಬುದೂ ಸಭೆಯಲ್ಲಿ ಚರ್ಚೆಯಾಗಿದೆ. ಅಂತಿಮವಾಗಿ ಬಿಜೆಪಿಯನ್ನು ಮಣಿಸಲು ಸಾಹಿತಿ, ಬುದ್ಧಿಜೀವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯಲು ನಿರ್ಧರಿಸಲಾಯಿತು. ಶೀಘ್ರವೇ ಕಾಂಗ್ರೆಸ್ ಸಿದ್ಧಾಂತಕ್ಕೆ ಪೂರಕವಾದ ಬುದ್ಧಿಜೀವಿಗಳ ತಂಡ ಕಟ್ಟಿ ಅವರಿಂದ ಆಗಿಂದಾಗ್ಗೆ ಮಾರ್ಗದರ್ಶನ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಹಾಗೆಯೇ ಬೆಳವಣಿಗೆಗಳು ನಡೆದಾಗ ಆದಷ್ಟು ಶೀಘ್ರವೇ ಸಭೆ ಸೇರಿ ಪಕ್ಷದ ನಿಲುವನ್ನು ಸ್ಪಷ್ಟಮಾಡಿಕೊಳ್ಳಲು 15-20 ಪ್ರಮುಖ ನಾಯಕರ ಕೋರ್ ಕಮಿಟಿ ರಚಿಸಲೂ ಸಹ ನಿರ್ಧರಿಸಲಾಗಿದೆ.
ನಮ್ಮದು ಮಹಾತ್ಮ ಗಾಂಧಿಯವರ ಮತ್ತು ವಿವೇಕಾನಂದರ ಹಿಂದುತ್ವ. ಹಿಂದುತ್ವದ ಬಗ್ಗೆ ಬೇಕಾದಷ್ಟು ಅಭಿಪ್ರಾಯ, ಚರ್ಚೆಗಳು ಆಗಿರಬಹುದು. ಆದರೆ ಹಿಂದುಧರ್ಮ ಯಾರ ಆಸ್ತಿಯೂ ಅಲ್ಲ.| ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಗೋಹತ್ಯೆ ನಿಷೇಧಕ್ಕೆ ವಿರೋಧಚಳಿಗಾಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಮುಂದಾಗಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ. ‘ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದರೆ ಎಷ್ಟು ಜನ ನಿರುದ್ಯೋಗಿಗಳಾಗುತ್ತಾರೆ ಎಂಬುದು ಬಿಜೆಪಿ ನಾಯಕರಿಗೆ ಅರಿವಿದೆಯೇ? ಹಸು ಮುದಿಯಾಗುತ್ತೆ, ಗೊಡ್ಡಾಗುತ್ತದೆ. ಅದನ್ನು ಏನು ಮಾಡಬೇಕು. ಆರ್​ಎಸ್​ಎಸ್​ನವರು ತೆಗೆದುಕೊಂಡು ಮನೆಗೆ ಹೋಗುತ್ತಾ ರೆಯೇ’ ಎಂದು ಪ್ರಶ್ನಿಸಿದ್ದಾರೆ. ಗೋ ಹತ್ಯೆ ನಿಷೇಧ ಕಾನೂನು ಕುರಿತಂತೆ ಸೋಮವಾರ ಮುಸ್ಲಿಂ ಸಮುದಾಯದ ನಾಯಕರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಕಳವಳ ವ್ಯಕ್ತಪಡಿಸಿದ್ದಲ್ಲದೆ, ಸರ್ಕಾರ ಮಂಡಿಸಲಿರುವ ಪ್ರಸ್ತಾಪದ ವಿರುದ್ಧ ಹೋರಾಡುವಂತೆ ಮನವಿ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಕಾಯ್ದೆಯನ್ನು ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಏಕೆ ಜಾರಿಗೊಳಿಸಿಲ್ಲ. ಕರ್ನಾಟಕದಲ್ಲಿ ಮಾತ್ರ ಈ ಕಾಯ್ದೆ ಏಕೆ ಜಾರಿಯಾಗುತ್ತಿದೆ, ಇದನ್ನು ಸದನದಲ್ಲಿ ನಾವು ವಿರೋಧಿಸುತ್ತೇವೆ ಎಂದರು.
ಕುರುಬ ಸಮುದಾಯದ ಮೀಸಲಾತಿ ಪರ ಸಮಾವೇಶಕ್ಕೆ ಈಶ್ವರಪ್ಪ ಕರೆದೂ ಇಲ್ಲ, ನಾನು ಬರುವುದಿಲ್ಲ ಅಥವಾ ಬರುತ್ತೇನೆಂದು ಹೇಳಿರಲಿಲ್ಲ. ಈಶ್ವರಪ್ಪ ಪ್ರಭಾವಿ ನಾಯಕ ಅಂದವರು ಯಾರು? ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಲ್ಲಿ ಹೋಯಿತು? ಈಶ್ವರಪ್ಪನವರು ಸ್ವಂತ ಬುದ್ಧಿಯಿಂದ ಈ ಹೋರಾಟ ಮಾಡುತ್ತಿಲ್ಲ, ಸ್ವಾರ್ಥಕ್ಕೋಸ್ಕರ ಜನರನ್ನು ದಾರಿ ತಪ್ಪಿಸಬಾರದು.| ಸಿದ್ದರಾಮಯ್ಯವಿಧಾನಸಭೆ ವಿಪಕ್ಷ ನಾಯಕ
ಕುರುಬರನ್ನು ಎಸ್​ಟಿಗೆ ಸೇರಿಸುವ ಕುರಿತು ರ್ಚಚಿಸಲು ಸಿದ್ದರಾಮಯ್ಯ ಅವರನ್ನು ನಮ್ ತಾಯಿ ಸತ್ಯವಾಗಲೂ, ನನ್ನ ಮಕ್ಕಳಾಣೆಗೂ ಕರೆದಿದ್ದೇನೆ. ಇನ್ಯಾವ ಭಾಷೆಯಲ್ಲಿ ಹೇಳಲಿ. ಈಗಾಗಲೆ ಸಮಾಜದ ಸ್ವಾಮೀಜಿಗಳು ಅವರ ಮನೆಗೆ ಹೋಗಿ ಕುಳಿತು ಕರೆದು ಬಂದಿದ್ದಾರೆ. ಈ ವಿಚಾರದಲ್ಲಿ ಅವರು ಯಾಕೆ ರಾಜಕಾರಣ ಮಾಡ್ತಿದ್ದಾರೋ ಗೊತ್ತಿಲ್ಲ.| ಕೆ.ಎಸ್.ಈಶ್ವರಪ್ಪಸಚಿವ
ಎಸ್ಟಿ ಹೋರಾಟದ ಹಿಂದೆ ಆರೆಸ್ಸೆಸ್ ಪಿತೂರಿಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಬೇಕೆಂಬ ಹೋರಾಟದ ಹಿಂದೆ ಆರ್​ಎಸ್​ಎಸ್ ಕೈವಾಡವಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಮೀಸಲಾತಿ ಹೋರಾಟದ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ದತ್ತಾತ್ತೇಯ ಹೊಸಬಾಳೆ ಇದ್ದಾರೆ. ಇವರು ಜನರ ದಾರಿ ತಪ್ಪಿಸುವುದು, ಗೊಂದಲ ಸೃಷ್ಟಿಸುವ ಮೂಲಕ ಸಮುದಾಯ ಒಡೆಯುವ ಪಿತೂರಿ ನಡೆಸಿದ್ದಾರೆ ಎಂದು ಆಪಾದಿಸಿದರು. ಈಗ ಮೀಸಲಾತಿ ಪರವಾಗಿ ಮಾತನಾಡುವ ಸಚಿವ ಈಶ್ವರಪ್ಪ ಉಡುಪಿಯಲ್ಲಿ ಕನಕ ಗೋಪುರ ಕೆಡವಿದಾಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಮಿಲ್ಲರ್ ಆಯೋಗ ರಚನೆ ಸಂದರ್ಭದಲ್ಲೂ ಬಿಜೆಪಿಯವರು ವಿರೋಧಿಸಿದ್ದರು, ಹಾವನೂರು, ಚಿನ್ನಪ್ಪ ರೆಡ್ಡಿ, ಮಂಡಲ್ ಕಮಿಷನ್ ವರದಿ ಸ್ವಾಗತ ಮಾಡಿದರೆ? ಆರ್​ಎಸ್​ಎಸ್ ಸ್ಥಾಪಕರಾದ ಹೆಡ್ಗೆವಾರ್, ಸರಸಂಘಚಾಲಕ ಗೋಲ್ವಾಲ್ಕರ್ ಮೀಸಲಾತಿ ಹೋರಾಟ ಮಾಡಿದ್ದರೆ ಎಂದು ಟೀಕಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 20 =
Remember me
