ಬೆಂಗಳೂರು:ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದು ವರ್ಷ ಮೂರು ತಿಂಗಳು ಬಾಕಿ ಇರುವಾಗ ಕಾಂಗ್ರೆಸ್​ನ ಆಂತರಿಕ ಗಜಿಬಿಜಿ ಬಹಿರಂಗವಾಗುತ್ತಲೇ ಇದೆ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ.ಕೆ.ಶಿವಕುಮಾರ್ ಪಕ್ಷವನ್ನು ಸದಾ ಚಟುವಟಿಕೆಯಿಂದ ಇಡಲು ಒಂದಷ್ಟು ಪ್ರಯತ್ನ ಮಾಡುತ್ತಲೇ ಇದ್ದಾರೆ, ಇದರೊಟ್ಟಿಗೆ ಹೆಚ್ಚಿನ ಪ್ರಮಾಣದ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಮುಂದಾಗಿರುವುದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸಹ್ಯವಾಗುತ್ತಿಲ್ಲ. ಕೆಲವು ತಿಂಗಳ ಹಿಂದಷ್ಟೇ ಅಧ್ಯಕ್ಷರ ತಕ್ಕಡಿ ಏರುತ್ತಿಲ್ಲ ಎಂದು ವಿ.ಎಸ್.ಉಗ್ರಪ್ಪ, ಮುಖಂಡ ಸಲೀಂ ಕಮಿಷನ್ ಹೆಚ್ಚಳ ಕುರಿತ ಮೈಕ್ ಮುಂದೆ ಪಿಸುಗುಟ್ಟಿದ್ದರು. ಇದು ಪಕ್ಷ ಹಾಗೂ ಡಿಕೆಶಿ ಅವರ ಇಮೇಜ್​ಗೆ ಧಕ್ಕೆಯಾಗಿತ್ತು. ಇದೀಗ ಸಿದ್ದರಾಮಯ್ಯ ಹಾಗೂ ಅವರ ಪರಮಾಪ್ತ ಮಾಜಿ ಶಾಸಕ ಅಶೋಕ ಪಟ್ಟಣ ನಡುವೆ ನಡೆದ ಚರ್ಚೆಯಾಗಿದೆ. ಅನೌಪಚಾರಿಕ ಚರ್ಚೆಯ ಸಾಲುಗಳ ನಡುವಿನ ತೀವ್ರತೆ ಗಮನಿಸಿದರೆ ಡಿಕೆಶಿ ನಡೆಗಳು ಸಿದ್ದರಾಮಯ್ಯ ಬಣಕ್ಕೆ ಇಷ್ಟವಾಗುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಪುಲಿಕೇಶಿನಗರ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮಾಜಿ ಮೇಯರ್ ಸಂಪತ್​ರಾಜ್ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದ ವಿಚಾರವೇನಲ್ಲ. ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪರವಾಗಿ ಸಿದ್ದರಾಮಯ್ಯ ನಿಂತಿದ್ದರೆ, ಸಂಪತ್​ರಾಜ್ ಪರ ಡಿಕೆಶಿ ಇದ್ದಾರೆ. ಇದೊಂದು ಕ್ಷೇತ್ರದ ಉದಾಹರಣೆ, ಇನ್ನೂ ಅನೇಕ ಕಡೆ ಡಿ.ಕೆ.ಶಿವಕುಮಾರ್ ತಮ್ಮ ಆಪ್ತ ಮುಖಂಡರಿಗೆ ಕ್ಷೇತ್ರದಲ್ಲಿ ತಯಾರಾಗಲು ಪರೋಕ್ಷ ಸಂದೇಶ ನೀಡಿದ್ದಾರೆ. ಇದು ಸಿದ್ದರಾಮಯ್ಯ ಬಣವನ್ನು ಕೆರಳಿಸಿದೆ. ಈ ಬೆಳವಣಿಗೆ ಕುರಿತು ಒಟ್ಟಾರೆ ಅಭಿಪ್ರಾಯ ಸಿದ್ದರಾಮಯ್ಯ- ಪಟ್ಟಣ ನಡುವಿನ ಚರ್ಚೆ ವೇಳೆ ಮಾಧ್ಯಮದ ಮೈಕ್ ಮುಂದೆ ಪಿಸುಮಾತಲ್ಲಿ ಹೊರಬಂದಿದೆ. ‘ಎಲ್ಲ ಹಾಳು ಮಾಡುತ್ತಾರೆ, ಅಲ್ಟಿಮೇಟ್ ಔಟ್​ಕಮ್ ಏನು?’ ಎಂಬ ಸಿದ್ದರಾಮಯ್ಯ ಗಡಸು ದನಿಯ ಅಭಿಪ್ರಾಯ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬಹುದನ್ನು ಬಹಿರಂಗಪಡಿಸಿದೆ. ಮೇಕೆದಾಟು ಪಾದಯಾತ್ರೆ ನಡೆಸುವ ವಿಚಾರದಲ್ಲೂ ಒಮ್ಮತ ಇರಲಿಲ್ಲ ಎಂಬುದು ಆ ಸಂದರ್ಭದಲ್ಲಿಯೇ ಬಹಿರಂಗವಾಗಿತ್ತು.
ಯುವಕಾಂಗ್ರೆಸ್​ನಲ್ಲಿ ಭುಗಿಲು:ಯುವ ಕಾಂಗ್ರೆಸ್​ನಲ್ಲಿ ‘ಪರ್ಫಾಮೆನ್ಸ್’ ವರದಿ ಮಾಡಿ, ಪದಾಧಿಕಾರಿಗಳಿಗೆ ಬಡ್ತಿ ನೀಡಿದ ವಿಚಾರ ಈಗ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಧ್ಯಾ ಪವಿತ್ರಾ ಸೇರಿ ಹಲವು ಪದಾಧಿಕಾರಿಗಳು ರಾಜೀನಾಮೆ ನೀಡಲೂ ಮುಂದಾಗಿದ್ದಾರೆ. ನಾವು ಪಕ್ಷ ಕರೆದಾಗಲೆಲ್ಲ ಬಂದು ಕೆಲಸ ಮಾಡಿದ್ದೇವೆ, ಚುನಾವಣೆಯಲ್ಲಿ ಗೆಲುವು ಪಡೆದು ಪದಾಧಿಕಾರಿಯಾಗಿದ್ದೇವೆ. ಈಗ ನಮ್ಮನ್ನು ಕಡೆಗಣಿಸಿ ಪದೋನ್ನತಿ ನೆಪ ಹೇಳಿ ಕೆಲವರಿಗೆ ಜವಾಬ್ದಾರಿ ನೀಡಲಾಗಿದೆ. ಹೀಗಿದ್ದ ಮೇಲೆ ಚುನಾವಣೆ ನಡೆಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ವಿರುದ್ಧವೂ ಗುರುತರ ಆರೋಪ ಮಾಡಿದ್ದಾರೆ.
ಸ್ವಾರ್ಥ ರಾಜಕಾರಣ ಕಾಂಗ್ರೆಸ್​ನ ಗುಣಧರ್ಮ:ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಳಜಗಳ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ, ಸಾರ್ವಜನಿಕರಿಗೆ ಗೊತ್ತಿರುವ ವಿಚಾರ. ಆಡಳಿತ ಅಥವಾ ಪ್ರತಿಪಕ್ಷದಲ್ಲಿದ್ದಾಗ ಜನಹಿತಕ್ಕಿಂತ ಅಧಿಕಾರ ಹೇಗೆ ಹಿಡಿಯಬೇಕು, ಹೇಗೆ ಬಳಸಬೇಕು ಎಂಬ ಬಗ್ಗೆ ಯೋಚಿಸಿದೆ. ಸ್ವಾರ್ಥ ರಾಜಕಾರಣವೇ ಕಾಂಗ್ರೆಸ್​ನ ಗುಣಧರ್ಮ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಆರು ತಿಂಗಳ ಸಾಧನೆಯನ್ನು ಟೀಕಿಸಿರುವ ಸಿದ್ದರಾಮಯ್ಯ ಅವರದು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ. ಈ ಹಿಂದೆ ಅಧಿಕಾರದಲ್ಲಿದ್ದಾಗ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ.84ರಿಂದ 96 ಈಡೇರಿಸಿದ್ದೇವೆ ಎಂದು ಹೇಳಿಕೊಂಡರೂ ಜನರು ತಿರಸ್ಕರಿಸಿದರು. ಯೋಜನೆಗಳ ಘೋಷಣೆಯಷ್ಟೇ ಅನು ಷ್ಠಾನವೂ ಮುಖ್ಯ ಎಂದು ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ಮತ್ತು ಡಿಕೆಶಿ ಎಣ್ಣೆ ನೀರು ಇದ್ದಂಗೆ. ಅವರು ಕೂಡಿರಲು ಸಾಧ್ಯವಿಲ್ಲ. ಅವರಲ್ಲಿ 3 ಗುಂಪುಗಳಿವೆ. ಸಿದ್ದು ಗುಂಪು, ಡಿಕೆಶಿ ಗುಂಪು ಹಾಗೂ ಪರಮೇಶ್ವರ್, ಖರ್ಗೆ ಗುಂಪು ಇವೆ. ಮೂರನೇ ಗುಂಪಿನಲ್ಲಿ ಶಾಮನೂರು ಶಿವಶಂಕರಪ್ಪ ಇದ್ದಾರೆ.
|ಗೋವಿಂದ ಕಾರಜೋಳಸಚಿವ
ಬೆಂಗಳೂರು:ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವಕ್ಕಾಗಿ ಪೈಪೋಟಿ ನಡೆದಿದೆ ಎಂದು ತಿಳಿದಿದ್ದೆವು. ಆದರೆ ಕಿತ್ತಾಟ ನಡೆದಿರುವುದು ಬಯಲಾಗಿದೆ ಎಂದು ಸಚಿವ ಆರ್.ಅಶೋಕ್ ಗೇಲಿ ಮಾಡಿದರು. ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಅಶೋಕ ಪಟ್ಟಣ ನಡುವಿನ ಪಿಸುಮಾತು ಆ ಪಕ್ಷದ ನಿಜಬಣ್ಣ ಬಹಿರಂಗಪಡಿಸಿದೆ. ಆಂತರಿಕ ಸಂಘರ್ಷದಲ್ಲಿ ಮುಳುಗಿದ್ದು, ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಅಶೋಕ್ ತಿವಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twelve =
Remember me
