ವಿಧಾನಸಭಾ ಚುನಾವಣೆಗೆ ಪಕ್ಷಗಳು ಹಂತಹಂತವಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಸುತ್ತಿದ್ದರೆ ಬಿಜೆಪಿ ‘ಜನಾಭಿಪ್ರಾಯ’ ರೂಪಿಸುವ ನಿಟ್ಟಿನಲ್ಲಿ ತನ್ನಲ್ಲಿರುವ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳ ಒತ್ತಡಕ್ಕೆ ಪಕ್ಷದ ಮುಂಚೂಣಿ ನಾಯಕರು ಹೈರಾಣಾಗಿದ್ದಾರೆ. ಕೆಲವು ಕಡೆ ಗುಂಪುಗಾರಿಕೆ ವಿಪರೀತವಾಗಿದ್ದು, ಟಿಕೆಟ್ ಘೋಷಣೆ ಬಳಿಕ ತಿಕ್ಕಾಟ ತೀವ್ರಗೊಳ್ಳುವ ಲಕ್ಷಣ ಕಾಣಿಸಿದೆ. ಬಿಜೆಪಿ ವಿಚಾರಕ್ಕೆ ಬಂದರೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಕ್ಷದ ರಾಜ್ಯ ನಾಯಕರೆದುರು ತಮ್ಮ ಅಪೇಕ್ಷೆ ಹೊರಗೆಡಹಿ, ತಕ್ಷಣದಿಂದಲೇ ಬೂತ್ ಮಟ್ಟದಲ್ಲಿ ಚಟುವಟಿಕೆ ಚುರುಕುಗೊಳಿಸಲು ಟಾಸ್ಕ್ ನೀಡಿದ್ದಾರೆ. ಜೆಡಿಎಸ್ ಮಾತ್ರ ಪಂಚರತ್ನ ಯಾತ್ರೆ ಮೂಲಕ ತನ್ನ ಉತ್ಸಾಹ ದಾಖಲಿಸುತ್ತ ಸಾಗಿದೆ.
ಬೆಂಗಳೂರು:ಟಿಕೆಟ್ ಹಂಚಿಕೆಯಲ್ಲಿ ಹೊಸ ಪ್ರಯತ್ನ ಮಾಡಿದ ಕಾಂಗ್ರೆಸ್​ನಲ್ಲೀಗ ಟಿಕೆಟ್ ಆಕಾಂಕ್ಷಿಗಳಿಂದ ಅತ್ಯುತ್ಸಾಹ ಕಾಣಿಸಿದ್ದು, ಸಾಕಷ್ಟು ಕ್ಷೇತ್ರಗಳಲ್ಲಿ ಗುಂಪುಗಾರಿಕೆ ತೀವ್ರಗೊಂಡಿದೆ. ಇದು ಪಕ್ಷದ ನಾಯಕರಲ್ಲಿ ಕಳವಳ ಹೆಚ್ಚಿಸಿದೆ. ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆಂದು ಪಕ್ಷದ ರಾಜ್ಯ ನಾಯಕರು ಗಟ್ಟಿ ದನಿಯಲ್ಲಿ ಹೇಳಿಕೊಂಡು ಬಂದಿದ್ದೇ ತಡ ಟಿಕೆಟ್ ಆಕಾಂಕ್ಷಿಗಳು ಅವಕಾಶಕ್ಕಾಗಿ ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ. ಅಲ್ಲದೇ ಹತ್ತಾರು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಬೆಂಬಲಿಗ ಆಕಾಂಕ್ಷಿ, ಡಿ.ಕೆ. ಶಿವಕುಮಾರ್ ಬೆಂಬಲಿಗ ಆಕಾಂಕ್ಷಿ ಎಂದು ಗುರುತಿಸಿಕೊಂಡು ಪರಸ್ಪರ ತೊಡೆ ತಟ್ಟಿಕೊಂಡಿದ್ದಾರೆ.
‘ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ’ ಎಂಬ ಫ್ಲೆಕ್ಸ್​ಗಳನ್ನು ಹಾಕಿಕೊಂಡಿರುವ ಮುಖಂಡರು ಕ್ಷೇತ್ರದಲ್ಲಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಬೀದರ್​ನಿಂದ ಚಾಮರಾಜನಗರದವರೆಗೆ, ಬೆಳಗಾವಿಯಿಂದ ಬಳ್ಳಾರಿವರೆಗೆ ಇಂತಹ ಬೆಳವಣಿಗೆ ನಡೆದಿದ್ದು, ಇಂತಹ ಬಹಿರಂಗ ನಾಯಕತ್ವದ ಲಾಭ- ನಷ್ಟದ ಲೆಕ್ಕಚಾರದಲ್ಲಿ ಕೈ ನಾಯಕರು ತೊಡಗಿದ್ದಾರೆ.
ಕೆಲವು ಕಡೆ ಕೈಕೈ ಮಿಲಾಯಿಸಿದ್ದು, ಮತ್ತೆ ಕೆಲವು ಕಡೆ ಫ್ಲೆಕ್ಸ್ ಅಳತೆಯಲ್ಲಿ ಪೈಪೋಟಿ ಕಾಣಿಸಿದೆ. ಇನ್ನೂ ಕೆಲವೆಡೆ ಜನ ಬೆಂಬಲ ತೋರಿಸಲು ಧಾರಾಳ ಹಣದ ಹರಿವು ಕೂಡ ಆಗಿದೆ. ಆಕಾಂಕ್ಷಿಗಳು ಯಾರೆಂದು ಗೊತ್ತಾದರೆ ಆಂತರಿಕ ಬಂಡಾಯ ಪರಿಹಾರ ಸುಲಭ ಎಂದೇ ರಾಜ್ಯಮಟ್ಟದ ನಾಯಕರು ಭಾವಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಸಂಗತಿಯನ್ನು ಪಕ್ಷದ ಸಭೆಯಲ್ಲಿ ವ್ಯಕ್ತಪಡಿಸಿದ್ದರು. ಆದರೆ, ಟಿಕೆಟ್ ಪಡೆದುಕೊಳ್ಳಲು ಹಠ ತೊಟ್ಟಿರುವ ಹೊಸ ಆಕಾಂಕ್ಷಿಗಳು ಜಾತಿ, ಧರ್ಮ, ಮಠ-ಮಾನ್ಯಗಳ ಮೂಲಕ ಪಟ್ಟುಗಳನ್ನು ಹಾಕಿಸುತ್ತಿದ್ದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.
ಇಂತಹ ಬೆಳವಣಿಗೆ ಊಹಿಸಿದ್ದ ಎಐಸಿಸಿ, ಆಕಾಂಕ್ಷಿಗಳು ಒಟ್ಟಾಗಿ ಕಾಣಿಸಿ ಕೊಳ್ಳಬೇಕೆಂದು ಸ್ಪಷ್ಟ ಸೂಚನೆ ನೀಡಿತ್ತು. ಜಿಲ್ಲಾವಾರು ಸಮಿತಿ ಮೀಟಿಂಗ್ ವಿಳಂಬ ಡಿಸೆಂಬರ್ ಅಂತ್ಯದೊಳಗೆ ಅಭ್ಯರ್ಥಿ ಆಯ್ಕೆ ನಡೆಯಬೇಕೆಂದು ಕೆಪಿಸಿಸಿ ವೇಳಾಪಟ್ಟಿ ನೀಡಿತ್ತು. ಜಿಲ್ಲಾ ಘಟಕಗಳು ಬ್ಲಾಕ್ ಕಾಂಗ್ರೆಸ್ ಜತೆ ಸಭೆ ನಡೆಸಿ, ಪ್ರತಿ ವಿಧಾನಸಭಾ ಕ್ಷೇತ್ರದಿಂದ 1-3 ಸಂಭಾವ್ಯ ಹೆಸರನ್ನು ಗೌಪ್ಯವಾಗಿ ಕಳಿಸಲು ನಿರ್ದೇಶಿಸಿತ್ತು. ಆದರೆ, ಕೆಲ ಜಿಲ್ಲೆಗಳು ಇನ್ನೂ ಪಟ್ಟಿ ಕಳಿಸಿಲ್ಲ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅಭ್ಯರ್ಥಿಗಳ ಲಿಸ್ಟ್ ಕಳುಹಿಸಲು ಗಡುವು ಕೊಟ್ಟಿದ್ದೆವು. ಕೆಲ ಜಿಲ್ಲೆಗಳಲ್ಲಿ ಮೀಟಿಂಗ್ ಆಗಿಲ್ಲ. ಆದ್ದರಿಂದ ಇನ್ನು 3 ದಿನಗಳಲ್ಲಿ ಸಂಭಾವ್ಯರ ಪಟ್ಟಿ ಬರಲಿದೆ. ನಂತರ ಚುನಾವಣಾ ಸಮಿತಿ ಸಭೆ ನಡೆಸಲಿದೆ. ಸಂಕ್ರಾಂತಿ ಒಳಗೆ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + four =
Remember me
