ಬೆಂಗಳೂರು:ಚುನಾವಣಾಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿ ಘೋಷಣೆಗಳನ್ನು ಜಾರಿಗೆ ತರುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ಸರ್ಕಾರ, ಇದೀಗ ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಮಹತ್ವದ ಕಾಯ್ದೆಗಳನ್ನು ರದ್ದುಪಡಿಸಲು ಮುಂದಾಗಿದೆ. ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಬಲವಂತದ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡುವ ನಿರ್ಣಯ ಕೈಗೊಳ್ಳಲಾಗಿದೆ. ಜುಲೈ 3ರಂದು ಆರಂಭವಾಗುವ ಅಧಿವೇಶನದಲ್ಲಿಯೇ ಈ ಕಾಯ್ದೆಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಸರ್ಕಾರದ ಈ ನಿರ್ಧಾರಗಳನ್ನು ಖಂಡಿಸಿರುವ ಬಿಜೆಪಿ, ದ್ವೇಷದ ರಾಜಕಾರಣ ಎಂದು ಟೀಕಿಸಿದೆ.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಸಂಪುಟ ಸಭೆಯ ವಿವರಗಳನ್ನು ನೀಡಿದರು. ವ್ಯಾಪಕವಾಗಿ ರುವ ಬಲವಂತದ ಮತಾಂತರವನ್ನು ತಡೆಯಲು ಕಾಯ್ದೆ ತರಲಾಗಿತ್ತು. ಧಾರ್ವಿುಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆ ಮತ್ತು ಬಲವಂತ, ಅನುಚಿತ, ಪ್ರಭಾವ, ಒತ್ತಾಯ, ಆಮಿಷದ ಮೂಲಕ, ವಂಚನೆ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನುಬಾಹಿರ ಮತಾಂತರ ನಿಷೇಧಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಈ ಕಾನೂನು ಎಂದು ಹಿಂದಿನ ಸರ್ಕಾರ ಹೇಳಿಕೊಂಡಿತ್ತು. ಹೊಸ ಕಾನೂನಿನಂತೆ, ನಿಯಮ ಉಲ್ಲಂಘಿಸಿ ಮತಾಂತರ ಸಾಬೀತಾದರೆ 3-5 ವರ್ಷ ಜೈಲು, 25 ಸಾವಿರ ರೂ. ಜುಲ್ಮಾನೆ ಶಿಕ್ಷೆಗೆ ಒಳಪಡಬೇಕಾಗುತ್ತಿತ್ತು.
ಮತಾಂತರ ಉದ್ದೇಶದಲ್ಲಿ ನಡೆದ ಮದುವೆಯನ್ನು ಅಸಿಂಧು ಎಂದು ಘೋಷಿಸಲು ನ್ಯಾಯಾಲಯಕ್ಕೆ ಅವಕಾಶ ಕೊಡಲಾಗಿದ್ದರೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1973ರಲ್ಲಿ (1974ರ ಕೇಂದ್ರ ಅಧಿನಿಯಮ 2) ಏನೇ ಒಳಗೊಂಡಿದ್ದರೂ ಈ ಅಧ್ಯಾದೇಶದ ಅಡಿಯಲ್ಲಿ ಎಸಗುವ ಪ್ರತಿಯೊಂದು ಅಪರಾಧವು ಸಂಜ್ಞೇಯವಾಗಿರತಕ್ಕದ್ದು ಮತ್ತು ಜಾಮೀನುರಹಿತ ಎಂದು ಸ್ಪಷ್ಟಪಡಿಸಲಾಗಿತ್ತು. ಆದರೆ, ಕಾನೂನುಬದ್ಧ ಮತಾಂತರಕ್ಕೂ ಅವಕಾಶ ನೀಡಲಾಗಿತ್ತು. ಮತಾಂತರಗೊಂಡ ವ್ಯಕ್ತಿ ಮತಾಂತರಕ್ಕೆ ಮೊದಲು ಪಡೆಯುತ್ತಿದ್ದ ಸಾಮಾಜಿಕ ಸ್ಥಾನಮಾನ ಅನುಭವಿಸುವ ಅಥವಾ ಆತನು ಸರ್ಕಾರದಿಂದ ಪಡೆಯುತ್ತಿದ್ದ ಆರ್ಥಿಕ ಪ್ರಯೋಜನಗಳನ್ನು ಕಡಿತಗೊಳಿಸಲು ಅವಕಾಶ ಮಾಡಿಕೊಳ್ಳಲಾಗಿತ್ತು.
ಸರ್ಕಾರದ ಸಮರ್ಥನೆ:ದೇಶದ ಜನಸಂಖ್ಯೆಯಲ್ಲಿ ಶೇ.80ರಷ್ಟು ಹಿಂದೂಗಳೇ ಇರುವಾಗ ಮತಾಂತರ ಭಯ ಏಕೆ? ಈ ಕಾಯ್ದೆ ಮೂಲಕ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕನ್ನಾಗಿ ಮಾಡಿ ಅಸಮಾನತೆ ಸೃಷ್ಟಿಸುವ ಹುನ್ನಾರವಿತ್ತು. ಸಂವಿಧಾನದಲ್ಲಿಯೇ ಧಾರ್ವಿುಕ ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟತೆ ಇರುವುದರಿಂದ ಕಾಯ್ದೆಯ ಅಗತ್ಯವಿಲ್ಲ.
ರೈತರು, ವರ್ತಕರು ಹಾಗೂ ಅವಲಂಬಿತರ ಹಿತ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸದೃಢತೆ ಕಾಯ್ದುಕೊಳ್ಳುವ ಉದ್ದೇಶದಿಂದ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್​ಗೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ಬಿಜೆಪಿ ಆಡಳಿತಾವಧಿಯಲ್ಲಿ ಕಾಯ್ದೆಯ ಎರಡು ಸೆಕ್ಷನ್​ಗಳಿಗೆ ತಂದಿದ್ದ ತಿದ್ದುಪಡಿ ಹಿಂಪಡೆದು, ಒಂದಿಷ್ಟು ಮಾರ್ಪಾಡಗಳನ್ನು ಮಾಡಲಾಗಿದೆ ಎಂದು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದರು.
ಪರವಾನಗಿ, ವಹಿವಾಟು ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ತಿದ್ದುಪಡಿಯನ್ನು ವಾಪಸ್ ಪಡೆಯಲಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಪ್ರಾಂಗಣ ಮತ್ತು ಹೊರಗೂ ಮಾರಾಟಕ್ಕೆ ಅವಕಾಶವಿದ್ದು, ಏಕರೂಪ ಮಾರುಕಟ್ಟೆ ಶುಲ್ಕ ವಿಧಿಸಲಾಗುತ್ತದೆ ಎಂದು ವಿವರಿಸಿದರು.
ಕಾಯ್ದೆ ತಿದ್ದುಪಡಿಗೆ ಮುನ್ನ 2018-19ರಲ್ಲಿ ಶುಲ್ಕ ರೂಪದಲ್ಲಿ ಎಪಿಎಂಸಿಗೆ 620 ಕೋಟಿ ರೂ.ವರೆಗೆ ಆದಾಯ ಸಂದಾಯವಾಗಿತ್ತು. ತಿದ್ದುಪಡಿ ನಂತರ ಆದಾಯವು 2020-21ರಲ್ಲಿ 300 ಕೋಟಿ, 21-22ರಲ್ಲಿ 200 ಮತ್ತು 22-23ರಲ್ಲಿ 194 ಕೋಟಿ ರೂ.ಗೆ ಇಳಿದಿದೆ. ಕ್ರಮೇಣ ಎಪಿಎಂಸಿ ಆದಾಯವೇ ಶೂನ್ಯವಾಗುವ ಸಾಧ್ಯತೆಯಿತ್ತು ಎಂದು ಶಿವಾನಂದ ಪಾಟೀಲ್ ಹೇಳಿದರು.
ಸರ್ಕಾರದ ಸಮರ್ಥನೆ:ಎಪಿಎಂಸಿ ತಿದ್ದುಪಡಿ ಕಾಯ್ದೆ ಮೂರು ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದು, ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ರೈತರಿಗೆ ಒಳ್ಳೆಯ ಬೆಲೆ ಸಿಕ್ಕಿಲ್ಲ, ಅವಲಂಬಿತ ಹಮಾಲರು ಸೇರಿ ಒಂದು ಲಕ್ಷ ಕುಟುಂಬಗಳು ಕಷ್ಟಕ್ಕೆ ಸಿಲುಕಿದ್ದವು.
ಅಲ್ಪಸಂಖ್ಯಾತರ ಓಲೈಕೆಗಾಗಿ ಪಠ್ಯಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಹಾಗೂ ರಾಷ್ಟ್ರೀಯ ವಿಚಾರಧಾರೆಗಳ ವಿಷಯಗಳನ್ನು ಪಠ್ಯದಿಂದ ಕೈಬಿಡುವುದು ಸರಿಯಲ್ಲ. ಮಹಾನ್ ಚಿಂತಕ ವೀರಸಾವರ್ಕರ್ ಅವರ ಪಠ್ಯ ಕೈಬಿಡುವುದು ದೇಶದ್ರೋಹ. ಈ ನಿರ್ಧಾರಗಳಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು.
| ಎನ್. ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ರ್ಚಚಿಸಿ ತೀರ್ಮಾನ ಕೈಗೊಳ್ಳುವ ಬದಲಿಗೆ ದ್ದೇಷದ ತೀರ್ಮಾನ ತೆಗೆದುಕೊಂಡಿದ್ದು, ಸಂಕಷ್ಟದಲ್ಲಿರುವ ಜನರಿಗೆ ಈ ಸರ್ಕಾರ ಶಾಪವಾಗಿದೆ.
| ಬಸವರಾಜ ಬೊಮ್ಮಾಯಿ ಮಾಜಿ ಸಿಎಂ
ಹಿಂದಿನ ಸರ್ಕಾರ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆಯಲ್ಲಿ ಬಹುಪಾಲು ಅಂಶಗಳನ್ನು ಕೈಬಿಡಲು ಸಂಪುಟ ಸಭೆ ನಿರ್ಧರಿಸಿದೆ. ಆರ್​ಎಸ್​ಎಸ್ ಸ್ಥಾಪಕ ಹೆಡ್ಗೆವಾರ್ ಭಾಷಣದ ಅಂಶವಿದ್ದ ‘ಆದರ್ಶ ಪುರುಷ ಯಾರಾಗಬೇಕು?’ ವೀರ ಸಾವರ್ಕರ್ ಕುರಿತ ಪಾಠ, ಚಕ್ರವರ್ತಿ ಸೂಲಿಬೆಲೆ ರಚಿಸಿದ ರಾಜಗುರು, ಸುಖದೇವ್, ಭಗತ್ ಸಿಂಗ್ ಕುರಿತ ‘ತಾಯಿ ಭಾರತಿಯ ಅಮರ ಪುತ್ರರು’, ಮತ್ತು ಶತಾವಧಾನಿ ಗಣೇಶ್ ಅವರ ಯಜ್ಞ ಯಾಗಾದಿ ಕುರಿತ ಪಾಠ ಕೈಬಿಡಲಾಗುವುದು.
6-10ನೇ ಕ್ಲಾಸ್​ವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ ಕೆಲ ಬದಲಾವಣೆ ಆಗಲಿದೆ. ರಾಜಪ್ಪ ದಳವಾಯಿ, ರವೀಶ್​ಕುಮಾರ್, ಚಂದ್ರಶೇಖರ, ಅಶ್ವತ್ಥನಾರಾಯಣ, ರಾಜೇಶ್ ಅವರನ್ನೊಳಗೊಂಡ ಶಿಕ್ಷಣ ತಜ್ಞರ ಸಮಿತಿ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ಆಗಿದೆ. ಈಗ ಹೊಸ ಪುಸ್ತಕಗಳನ್ನ ಪ್ರಿಂಟ್ ಮಾಡಿಸಿದರೆ ಹೆಚ್ಚು ವೆಚ್ಚವಾಗಲಿದೆ. ಆದ್ದರಿಂದ ಯಾವುದನ್ನು ಬೋಧಿಸಬೇಕು, ಯಾವುದನ್ನು ಬೋಧಿಸಬಾರದೆಂದು ನಿರ್ದೇಶನ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬರಗೂರು ಸಮಿತಿ ಪರಿಷ್ಕರಿಸಿದ್ದ ವೇಳೆ ಇದ್ದ ಸಾವಿತ್ರಿಬಾ ಫುಲೆ, ಅಂಬೇಡ್ಕರ್ ಕವನ ಹಾಗೂ ನೆಹರೂ ಅವರ ಮಗಳಿಗೆ ಬರೆದ ಪತ್ರ ಪಾಠಗಳನ್ನು ಸೇರಿಸಲಾಗುತ್ತದೆ. ಮುಂದೆ ತಜ್ಞರ ಸಮಿತಿ ಸಂಪೂರ್ಣ ಪರಿಷ್ಕರಣೆ ಮಾಡಲಿದೆ. 75 ಸಾವಿರ ಶಾಲೆಗಳಿಗೆ 15 ಪುಟಗಳ ಪೂರಕ ಪಠ್ಯಗಳನ್ನು ಕಳುಹಿಸಿ ಶಿಕ್ಷಕರಿಗೆ ಸೂಚನೆ ಕೊಡುತ್ತೇವೆ. ಇದರ ಮುದ್ರಣಕ್ಕೆ 10- 12 ಲಕ್ಷ ರೂ. ಆಗಬಹುದು ಎಂದು ತಿಳಿಸಿದರು.
ಚಲಿಸುವ ರೈಲಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ

ಮಧ್ಯಪ್ರದೇಶ; 400 ಕಾರುಗಳ ಬೆಂಗಾವಲಿನೊಂದಿಗೆ ಕಾಂಗ್ರೆಸ್​ ಸೇರ್ಪಡೆಯಾದ ಸಿಂಧಿಯಾ ಆಪ್ತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
