ಬೆಂಗಳೂರು:ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ 40 ಪರ್ಸೆಂಟ್ ಕಮಿಷನ್ ಆರೋಪದ ಹಳಿಯ ಮೇಲೆ ಸಾಲುಗಟ್ಟಿ ಹೊರಟ ಕಾಂಗ್ರೆಸ್ ನಾಯಕರು, ಇದೇ ವಿಚಾರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಮತ್ತು ಇದನ್ನೂ ಮುಂಬರುವ ವಿಧಾನಸಭಾ ಚುನಾವಣೆ ವಿಷಯವಾಗಿ ಮಾಡುವ ಸಂಕಲ್ಪ ಮಾಡಿದ್ದಾರೆ.
ಅರಮನೆ ಮೈದಾನದಲ್ಲಿ ಸೋಮವಾರ ಮಾಜಿ ಸಚಿವ ಎಂ.ಬಿ ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮವು ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲು ಕಾರ್ಯಕರ್ತರನ್ನು ಸಜ್ಜುಗೊಳಿಸುವ ವೇದಿಕೆಯಾಗಿ ಪರಿಣಮಿಸಿತು.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆರಂಭದಲ್ಲಿ ಈ ವಿಷಯದ ಪೀಠಿಕೆ ಹಾಕಿ, ರಾಜ್ಯದಲ್ಲಿ ಇಂದು ಅಧಿಕಾರದಲ್ಲಿ ಕೂತಿರುವುದು ಅತ್ಯಂತ ಭ್ರಷ್ಟ ಸರ್ಕಾರ. ಇದು ಶೇ.40 ಕಮಿಷನ್ ಸರ್ಕಾರವಾಗಿದೆ. ಜನರಿಗೆ ರಾಜ್ಯದ ಅಭಿವೃದ್ಧಿಗೆ ಇದ ನಿಷ್ಪ್ರಯೋಜಕ ಎಂದು ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರವನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸಬೇಕು ಎಂದು ಕರೆ ನೀಡಿದ ಸುರ್ಜೆವಾಲ, ರಾಜ್ಯದ ಜನರ ಹಣ ತಿಂದು ಅಧಿಕಾರದಲ್ಲಿ ಕೂರಲು ಸಾಧ್ಯವಿಲ್ಲ. ಬಿಜೆಪಿ ನಾಯಕರೊಬ್ಬರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದು, ಸಚಿವರು ಶೇ. 40 ಕಮಿಷನ್ ಕೇಳುತ್ತಿದ್ದಾರೆ ಎಂದು ಉಲ್ಲೇಕಿಸಿದ್ದಾರೆ. ಆ ಪತ್ರ ಇಲ್ಲಿದೆ ಎಂದು ಪ್ರದರ್ಶಿಸಿದರು. ಸದ್ಯದಲ್ಲೇ ಅಮಿತ್ ಷಾ ಹಾಗೂ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂಬ ವಿಚಾರ ಕೇಳ್ಪಟ್ಟೆ. ಅವರು ಇಲ್ಲಿರುವ ಎಲ್ಲ ಭ್ರಷ್ಟ ಮಂತ್ರಿಗಳನ್ನು ಕಿತ್ತೊಗೆಯಬೇಕು, ಇಲ್ಲದಿದ್ದರೆ ಇಲ್ಲಿ ದೋಚಲಾಗುತ್ತಿರುವ ಹಣ ದೆಹಲಿ ಸರ್ಕಾರಕ್ಕೆ ಹಾಗೂ ನಾಗ್ಪುರಕ್ಕೆ ರವಾನೆಯಾಗಲಿದೆ ಎಂಬುದು ಸಾಬೀತಾಗುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಏಪ್ರಿಲ್​ನಲ್ಲಿ ಹೋರಾಟ ಮಾಡುವುದಾಗಿ ಘೊಷಿಸಿದ್ದಾರೆ. ಕೆಂಪಣ್ಣನವರೇ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಿಮಗೆ ನಾವು ಬಲ ತುಂಬುತ್ತೇವೆ ಎಂದು ವೇದಿಕೆಯಿಂದಲೇ ಬೆಂಬಲ ಪ್ರಕಟಿಸಿದರು.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ 40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆಯಬೇಕು. ನಾಗ್ಪುರದವರು ಎಲ್ಲ ಕಡೆ ಕೈಯಾಡಿಸುತ್ತಾರೆ. ಅವರ ಚೇಷ್ಟೆಯಿಂದಲೇ ಇಷ್ಟೆಲ್ಲ ಆಗುತ್ತಿದೆ. ಅವರು ಏನೇ ಮಾಡಿದರು ಜನರನ್ನು ಎಚ್ಚರಿಸಿ, ಜನರೇ ಅವರನ್ನು ಓಡಿಸುವಂತೆ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕೊನೆಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗಿದೆ. ಬಿಜೆಪಿಯವರು ಬಂದ ಮೇಲೆ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ಧ್ರುವನಾರಾಯಣ, ಸತೀಶ್ ಜಾರಕಿಹೊಳಿ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿ ಬಹುತೇಕ ಎಲ್ಲ ನಾಯಕರು ವೇದಿಕೆಯಲ್ಲಿದ್ದರು.
ಮಿಸ್ಟರ್ ಬಸವರಾಜ ಬೊಮ್ಮಾಯಿ, ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ತೊಲಗಬೇಕು. ರಾಜ್ಯ ಹಾಳು ಮಾಡಬೇಡಿ.
|ಸಿದ್ದರಾಮಯ್ಯವಿರೋಧ ಪಕ್ಷದ ನಾಯಕ
ಸಕಾರಾತ್ಮಕ ಹೋರಾಟ:ನಮ್ಮದು ಬದುಕಿನ ಹೋರಾಟ, ಬದುಕಿಗಾಗಿ ಹೋರಾಟ. ನಮ್ಮದು ಸಕಾರಾತ್ಮಕ ರಾಜಕಾರಣ. ಅವರು ಭಾವನಾತ್ಮಕವಾಗಿ ನಕಾರಾತ್ಮಕ ರಾಜಕಾರಣ ಮಾಡುತ್ತಾರೆ. ನಾನು ಶಕ್ತಿ ಮೀರಿ ಕಾಂಗ್ರೆಸ್ ಸಾಧನೆ, ಬಿಜೆಪಿ ವೈಫಲ್ಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದರು. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಮಾತನಾಡಿದ ಅವರು, ತ್ಯಾಗ ಬಲಿದಾನ ಮಾಡಿ, ದೇಶ ಕಟ್ಟಿರುವ ಪಕ್ಷ ಕಾಂಗ್ರೆಸ್. ಬಿಜೆಪಿಯವರು ಆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಆದರೂ ದೇಶಭಕ್ತಿ ಬಗ್ಗೆ ನಮಗೇ ಪಾಠ ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಇಂದು ರೈತರಿಂದ ಹಿಡಿದು ಬಡ ಕೂಲಿ ಕಾರ್ವಿುಕರು, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದವರನ್ನು ಬಿಜೆಪಿ ದುಸ್ಥಿತಿಗೆ ದೂಡಿದೆ. ಶಾಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗದಿರುವುದು ನಮ್ಮ ಮುಂದೆ ಇರುವ ಪರಿಸ್ಥಿತಿ. ಹೀಗಾಗಿ ಈ ಎಲ್ಲರಿಗೂ ಶಕ್ತಿ ತುಂಬಬೇಕಿದೆ ಎಂದರು.
ರಾಜ್ಯ ನಾಯಕರಿಗೆ ಹಿತೋಪದೇಶ:ಎಲ್ಲರೂ ಸೇರಿ ಮುಂದಿನ 12 ತಿಂಗಳಲ್ಲಿ ರಾಜ್ಯದಲ್ಲಿ ಕೇವಲ ಸರ್ಕಾರ ಬದಲಿಸುವುದಲ್ಲ, ವ್ಯವಸ್ಥೆ, ಶಾಸನಗಳು, ದೃಷ್ಟಿಕೋನ ಬದಲಾವಣೆ ಮಾಡಿ ಗೌರವಯುತ ಕರ್ನಾಟಕಕ್ಕಾಗಿ ಪಾರದರ್ಶಕ ಹಾದಿಯಲ್ಲಿ ಸಾಗುವ, ಜವಾಬ್ದಾರಿಯುತ, ಜನರ ಪರ ಕೆಲಸ ಮಾಡುವ ಸರ್ಕಾರ ಕೊಡಬೇಕು ಎಂದು ರಣದೀಪ್ ಸುರ್ಜೆವಾಲಾ ರಾಜ್ಯ ನಾಯಕರಿಗೆ ಹಿತೋಪದೇಶ ನೀಡಿದರು. ಹೊಸ ಆಲೋಚನೆ ನೀಡಿ, ಹೊಸ ದಾರಿಯಲ್ಲಿ ಮುನ್ನಡೆಸಲು, ಯುವಕರಿಗೆ ಉದ್ಯೋಗ, ರೈತರಿಗೆ ಹೊಸ ಜೀವನ, ಸಣ್ಣ ಉದ್ಯೋಗದಾತರು, ವ್ಯಾಪಾರಿ, ದಲಿತರಿಗೆ ಕಲ್ಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನೀವೆಲ್ಲರೂ ಒಟ್ಟಾಗಿ ಇದನ್ನು ನಿಭಾಯಿಸಬೇಕಾಗಿದೆ ಎಂದರು.
ಜನ್ಮದಿನದಂದೇ ಮರಣ: ಬೈಕ್​ನಲ್ಲಿ ಹೋಗುವಾಗ ತಲೆ ಮೇಲೇ ಬಿದ್ದ ಮರ..!

ಮನೆಗೆಲಸ ಮಾಡಿ ಗಂಡಸರಿಗೆ ಸವಾಲು ಹಾಕಿದ ಉಪೇಂದ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 20 =
Remember me
