ಬೆಂಗಳೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀ. ಎತ್ತರದ ಆಕಾಶ ಗೋಪುರ (ಸ್ಕೈಡೆಕ್) ನಿರ್ಮಿಸಲು ಮುಂದಾಗಿದ್ದು, ವಿರೋಧ ಪಕ್ಷಗಳ ನಾಯಕರು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಶಾಸಕರ ಸಭೆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, 250 ಮೀಟರ್ ಎತ್ತರದ ಈ ಸ್ಕೈಡೆಕ್ ಗಾಗಿ 25 ಎಕರೆ ಜಾಗ ಅಗತ್ಯವಿದೆ ಎಂದರು.
ಕೊಮ್ಮಘಟ್ಟ ಹಾಗೂ ಬೆಂಗಳೂರು ವಿವಿ ಬಳಿಯ ಜಾಗವನ್ನು ನೋಡಿದ್ದೆವು. ಬೆಂಗಳೂರು ಬೆಳೆಯುತ್ತಿರುವಾಗ ಬೆಂಗಳೂರು ವಿವಿಯ ಬಳಿ 25 ಎಕರೆ ಭೂಮಿ ವ್ಯರ್ಥ ಮಾಡುವುದು ಬೇಡ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಶಾಸಕರು ಅಭಿಪ್ರಾಯಪಟ್ಟರು. ಹೀಗಾಗಿ ಈಗ ನೈಸ್ ರಸ್ತೆಯ ಬಳಿ ಮಾಡಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲಾ ಶಾಸಕರು ಒಪ್ಪಿದ್ದಾರೆ ಎಂದು ತಿಳಿಸಿದರು.
ಈ ಜಾಗ ನೈಸ್ ಸಂಸ್ಥೆ ಬಳಿ ಇದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಕ್ಕೆ ನೈಸ್ ಸಂಸ್ಥೆ 200 ಎಕರೆ ಭೂಮಿ ವಾಪಸ್ ನೀಡಬೇಕಿದೆ ಎಂದು ಅಶೋಕ್ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ನೈಸ್ ಸಂಸ್ಥೆ ಬಳಿ ಚರ್ಚೆ ಮಾಡುತ್ತೇವೆ. ಈ ಯೋಜನೆಗಾಗಿ 10 ಜಾಗ ಹುಡುಕಲಾಗಿತ್ತು. ಯೋಜನೆ ಮಾಡಲು ಅವಕಾಶವಿಲ್ಲದ ಕಾರಣ ನೈಸ್ ರಸ್ತೆ ಬಳಿ ಮಾಡುವ ತೀರ್ಮಾನ ಮಾಡಲಾಗಿದೆ ಎಂದರು.
ಮೊದಲು ಈ ಯೋಜನೆಯನ್ನು ಕಂಠೀರವ ಕ್ರೀಡಾಂಗಣದ ಎದುರು ಮಾಡಲು ಪ್ರಸ್ತಾವನೆ ನೀಡಿದ್ದರು. ಸಂಚಾರಿ ದಟ್ಟಣೆ ಸಮಸ್ಯೆ ಹೆಚ್ಚಳ. ವಾಯುಸೇನೆ ಹಾಗೂ ಹೆಚ್ಎಎಲ್ ನಿಂದ ಇದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ ಹಿಂದೆ ಸರಿಯಲಾಯಿತು. ಈ ಯೋಜನೆಗೆ 400-500 ಕೋಟಿ ವೆಚ್ಚವಾಗಲಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುವ ಉದ್ದೇಶದಿಂದ ಕನಿಷ್ಠ ಪಕ್ಷ 25 ಎಕರೆ ಜಾಗ ಅಗತ್ಯವಿದೆ ಎಂದು ಅಂದಾಜಿಸಿದ್ದೇವೆ ಎಂದು ತಿಳಿಸಿದರು.
ನೈಸ್ ರಸ್ತೆ ಬಳಿ ಮಾಡುವುದರಿಂದ ಪ್ರವಾಸಿಗರು ಮೈಸೂರು, ಕೊಡಗು ಭಾಗಕ್ಕೆ ತೆರಳಲು ಮುಕ್ತವಾದ ಸಂಚಾರ ಮಾರ್ಗವಿರುತ್ತದೆ. ಇನ್ನು ನೈಸ್ ರಸ್ತೆ ಅಗಲೀಕರಣಕ್ಕೂ ಅವಕಾಶ ಇರುವುದರಿಂದ ಇದು ಸೂಕ್ತ ಜಾಗ ಎಂದು ಅಶೋಕ್ ಅವರು ಸಲಹೆ ನೀಡಿದ್ದಾರೆ. ಅವರ ಸಲಹೆಯಲ್ಲೂ ಅರ್ಥವಿದೆ. ಪೆರಿಫೆರಲ್ ರಿಂಗ್ ರಸ್ತೆ ಮಾಡಿದಾಗ ಎಲ್ಲಾ ಭಾಗಗಳಿಂದಲೂ ಇಲ್ಲಿಗೆ ಸಂಪರ್ಕ ಸಾಧಿಸಬಹುದು. ಇವರ ಸಲಹೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು.
ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಮೆಟ್ರೋ ಸಂಪರ್ಕ ಮಾಡಬೇಕಿದೆ. ಇದಕ್ಕೆ ಆರ್ಥಿಕ ಹೊರೆ ಇದ್ದು, ಈ ಭಾಗದಲ್ಲಿ ಅಭಿವೃದ್ಧಿ ಕಡಿಮೆ ಇರುವ ಕಾರಣ ಭೂಮಿ ವಶಕ್ಕೆ ಪಡೆಯಲು ಕಡಿಮೆ ವೆಚ್ಚವಾಗಲಿದೆ ಎಂದು ಈ ಸಲಹೆ ನೀಡಲಾಗಿದೆ. ಆರ್ಥಿಕವಾಗಿ ಎಲ್ಲಿ ನಮಗೆ ಅನುಕೂಲವಾಗುತ್ತದೆ ಎಂದು ಪರಿಶೀಲಿಸಲಾಗುವುದು. ಇದನ್ನು ಸರ್ಕಾರದಿಂದಲೇ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಮೊದಲು ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೆ 18.5 ಕಿ.ಮೀ ಉದ್ದದ ಟನಲ್ ರಸ್ತೆ ಮಾಡಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಟೆಂಡರ್ ಕರೆಯಲಾಗುವುದು. ಈ ರಸ್ತೆ ನಿರ್ಮಾಣದ ವೇಳೆ ಕೆಲವು ಜಾಗಗಳನ್ನು ವಶಕ್ಕೆ ಪಡೆಯಬೇಕಾಗುತ್ತದೆ. ಈ ಎಲ್ಲಾ ವಿಚಾರವಾಗಿ ಶಾಸಕರ ಮುಂದೆ ಪ್ರಸ್ತಾಪ ಮಾಡಿದ್ದು, ಶಾಸಕರು ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಬೆಂಗಳೂರಿನ ಪೂರ್ವದಿಂದ ಪಶ್ಚಿಮಕ್ಕೆ ಒಂದು ಮಾರ್ಗ ಸಿದ್ಧ ಮಾಡಲಾಗಿದ್ದು, ಮುಂದಿನ ಹಂತಗಳಲ್ಲಿ ತೆಗೆದುಕೊಳ್ಳಲಾಗುವುದು. ಇನ್ನು ಮುಂದಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಮೆಟ್ರೋ ಮಾರ್ಗಗಳನ್ನು ಡಬಲ್ ಡೆಕ್ಕರ್ ಮೇಲ್ಸೆತುವೆ ಮಾಡಲಾಗುವುದು. ಪಾಲಿಕೆ ಹಾಗೂ ಮೆಟ್ರೋ ಎರಡೂ ಇಲಾಖೆಗಳು ಇದರ ವೆಚ್ಚವನ್ನು ಭರಿಸಲಿವೆ.
ಟನಲ್ ರಸ್ತೆ ಜತೆಗೆ 17-18 ಕಡೆಗಳಲ್ಲಿ ಜಾಗ ಹುಡುಕಿದ್ದು ಸದ್ಯಕ್ಕೆ 100 ಕಿ.ಮೀ ನಷ್ಟು ಸಿಗ್ನಲ್ ಮುಕ್ತ ಕಾರಿಡಾರ್ ಮೇಲ್ಸೆತುವೆ ಮಾಡಲು ಮುಂದಾಗಿದ್ದು, ಇದಕ್ಕಾಗಿ 12 ಸಾವಿರ ಕೋಟಿಯಷ್ಟು ವೆಚ್ಚ ತಗುಲಲಿದೆ. ಇದಕ್ಕಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇನ್ನು ಕಸ ವಿಲೇವಾರಿಗೆ ಬೆಂಗಳೂರಿನ ಹೊರಭಾಗದ 15-20 ಕಿ.ಮೀ ದೂರ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಜಾಗ ಗುರುತಿಸಿ ಅಲ್ಲಿ ಕಸ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ.
ಸರ್ಕಾರಿ ಜಾಗ ಇದ್ದಲ್ಲಿ ಅದನ್ನು ಬಳಸಲಾಗುವುದು. ಇಲ್ಲವಾದರೆ ಖಾಸಗಿ ಜಮೀನುಗಳನ್ನು ಆಯುಕ್ತರು ಖರೀದಿ ಮಾಡಲಿದ್ದಾರೆ. ಕೇಂದ್ರ ಪರಿಸರ ಇಲಾಖೆ ನಿಯಮಾನುಸಾರ ಇದನ್ನು ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
