ಬೆಂಗಳೂರು:ರಜೆಯಿದ್ದರೂ ಆಟ ಆಡುವುದಕ್ಕೆ ಮನಸ್ಸಿಲ್ಲ. ಅಪ್ಪ ಅಮ್ಮನ ಜತೆ ಕಾಲ ಕಳೆಯೋಣ ಎಂದರೆ ಪರೀಕ್ಷೆಯ ಭಯ ಬಿಡುತ್ತಿಲ್ಲ. ರಾಜ್ಯ ಪಠ್ಯಕ್ರಮದ 5,8 ಮತ್ತು 9ನೇ ತರಗತಿ ಮಕ್ಕಳ ತುಮುಲವಿದು. ಮೌಲ್ಯಾಂಕನ ಪರೀಕ್ಷೆ ಕುರಿತು ಹೈಕೋರ್ಟ್ ತೀರ್ಪು ಕಾಯ್ದಿರಿಸಿರುವುದರಿಂದ ಮಕ್ಕಳು ಮುಂದೇನು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಬೋರ್ಡ್ ಪರೀಕ್ಷೆ ಮುಂದುವರಿಯುತ್ತಾ? ಅಥವಾ ರದ್ದಾಗುತ್ತಾ? ರದ್ದಾದರೆ ಮುಂದೇನು ಎಂಬ ತೊಳಲಾಟಕ್ಕೆ ವಿದ್ಯಾರ್ಥಿಗಳ ಜತೆಗೆ ಪಾಲಕರೂ ಸಿಲುಕಿದ್ದಾರೆ. ಪರೀಕ್ಷೆ ಮುಗಿದ ಮೇಲೆ ಬೇರೆ ಬೇರೆ ಚಟುವಟಿಕೆಗಳಿಗೆ ಮಕ್ಕಳನ್ನು ತೊಡಗಿಸುವ ಕುರಿತು ಪಾಲಕರು ಯೋಜನೆ ರೂಪಿಸಿಕೊಂಡಿದ್ದರು. ಆದರೆ ಬೋರ್ಡ್ ಪರೀಕ್ಷೆಯ ಭವಿಷ್ಯದ ಕುರಿತು ಶಾಲೆಗಳಿಂದಾಗಲಿ, ಸರ್ಕಾರದಿಂದಾಗಲಿ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಮೌಲ್ಯಾಂಕನ ಪರೀಕ್ಷೆ ಮುಂದುವರಿಯದೇ ಹೋದಲ್ಲಿ ಶಾಲಾ ಹಂತದ ಪರೀಕ್ಷೆ ಮಾಡುತ್ತಾರಾ? ಮಾಡಿದರೆ ಯಾವಾಗ? ಮಕ್ಕಳನ್ನು ಹೇಗೆ ಅಣಿಗೊಳಿಸ ಬೇಕೆಂಬ ಪ್ರಶ್ನೆ ಪಾಲಕರನ್ನು ಕಾಡಲಾರಂಭಿಸಿದೆ.
ಇದರ ಜತೆಗೆ ಪಬ್ಲಿಕ್ ಪರೀಕ್ಷೆ ಎಂಬ ಭಯ ಮಕ್ಕಳ ಮನಸ್ಸಿನಲ್ಲಿ ಕುಳಿತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಬೇಕಾದ ಅಗತ್ಯವಿದೆ ಎಂಬ ಸಲಹೆ ಶಿಕ್ಷಣ ತಜ್ಞರ ವಲಯದಲ್ಲಿ ಕೇಳಿಬರುತ್ತಿದೆ. ಪರೀಕ್ಷೆ ಭಯ ಬೇಡ ಎಂದು ಧೈರ್ಯ ತುಂಬುವ ಕೆಲಸ ಶಿಕ್ಷಣ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳಿಂದ ಆಗಬೇಕಿತ್ತು. ಸೂಕ್ತ ಮಾರ್ಗಸೂಚಿ ಹೊರಡಿಸಿ, ಅಗತ್ಯವಿರುವ ಮಕ್ಕಳಿಗೆ ಆಪ್ತ ಸಮಾಲೋಚನೆ ಕೊಡಿಸಿ, ನ್ಯಾಯಾಲಯದ ತೀರ್ಪು ಬರುವವರೆಗೂ ಮಕ್ಕಳನ್ನು ರಕ್ಷಿಸುವ ಹೊಣೆಯನ್ನು ಶಿಕ್ಷಣ ಇಲಾಖೆ ಹಾಗೂ ಶಾಲೆಗಳು ನಿಭಾಯಿಸಬೇಕಿತ್ತು. ಆದರೆ ಈ ಕೆಲಸಗಳು ಆಗಿಲ್ಲ. ಪರಿಸ್ಥಿತಿಯ ತೀವ್ರತೆ ಅರಿತು ಮಕ್ಕಳ ಹಿತದೃಷ್ಟಿಯಿಂದ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.
ಏನಿದು ಗೊಂದಲ?:ರಾಜ್ಯದ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಎಕ್ಸಾಂ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಮಾ. 11ರಿಂದ 2 ಪರೀಕ್ಷೆ ನಡೆದ ಬಳಿಕ ಸುಪ್ರೀಂಕೋರ್ಟ್ ಪರೀಕ್ಷೆಗೆ ತಡೆ ನೀಡಿದೆ. ಇನ್ನು ಇದೇ ಪ್ರಕರಣ ಸಂಬಂಧ ವಾದ- ಪ್ರತಿವಾದ ಆಲಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ್ದು, ಶೀಘ್ರವೇ ಪ್ರಕಟಿಸಲಿದೆ.
ಇದೇಕೆ ಎರಡೆರಡು ಪರೀಕ್ಷೆ ಶಿಕ್ಷೆ?:ಹೈಕೋರ್ಟ್ ಏಕಸದಸ್ಯ ಪೀಠ ಮೌಲ್ಯಾಂಕನ ಪರೀಕ್ಷೆ ರದ್ದುಗೊಳಿಸಿದ ನಂತರ ಕೆಲವು ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಾಲಾ ಹಂತದಲ್ಲೇ ಪರೀಕ್ಷೆ ಮುಗಿಸಿವೆ. ಅದರಲ್ಲಿಯೂ ಪ್ರಾಥಮಿಕ ಮತ್ತು ಪ್ರೌಢಶಾಲೆ ಒಟ್ಟಿಗೆ ಇರುವ ಖಾಸಗಿ ಶಾಲೆಗಳು 5,8 ಮತ್ತು 9ನೇ ತರಗತಿಗೆ ಶಾಲಾ ಹಂತದಲ್ಲಿಯೇ ಪರೀಕ್ಷೆ ಮಾಡಿ ಕೈತೊಳೆದುಕೊಂಡಿವೆ. ಮಾ. 25ರಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ಆರಂಭವಾಗಲಿದೆ. ಲೋಕಸಭಾ ಚುನಾವಣೆ ಇರುವ ಕಾರಣ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ನ್ಯಾಯಾಲಯವು ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಿ ಎಂದು ಆದೇಶ ಹೊರಡಿಸಿದರೆ ಅನುಕೂಲವಾಗಲಿದೆ ಎಂಬ ಕಾರಣ ನೀಡಿ ಕೆಲವು ಖಾಸಗಿ ಶಾಲೆಗಳಲ್ಲಿ ಪರೀಕ್ಷೆ ಮುಗಿಸಲಾಗಿದೆ. ಇಂತಹ ಸಮಯದಲ್ಲಿ ನ್ಯಾಯಾಲಯ ಮೌಲ್ಯಾಂಕನ ಪರೀಕ್ಷೆ ನಡೆಸಿ ಎಂದು ತೀರ್ಪು ನೀಡಿದರೆ, ವಿದ್ಯಾರ್ಥಿಗಳು ಮತ್ತೆ ಮೌಲ್ಯಾಂಕನವನ್ನು ಎದುರಿಸಬೇಕಾಗುತ್ತದೆ. ಆಗ ನಿರಂತರವಾಗಿ ಎರಡೆರಡು ಪರೀಕ್ಷೆ ಬರೆಯುವ ಒತ್ತಡ ಮಕ್ಕಳ ಮೇಲೆ ಬೀಳಲಿದೆ.
ಶಿಕ್ಷಣ ಸಚಿವರಿಗೆ ಪತ್ರ:5, 8 ಮತ್ತು 9ನೇ ತರಗತಿ ಪರೀಕ್ಷೆಯ ಗೊಂದಲದಿಂದ ಮಕ್ಕಳ ಮನಸ್ಸಿನಲ್ಲಿ ಆಗುತ್ತಿರುವ ಕಳವಳ ಮತ್ತು ಆತಂಕ ನಿವಾರಣೆ ಮಾಡಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್​ನ ನಿರ್ದೇಶಕ ನಾಗಸಿಂಹರಾವ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಎರಡು ದಿನ ನಡೆದು ಮುಂದೂಡಿಕೆ ಆಗಿರುವ ಪರೀಕ್ಷೆಗಳು ನಡೆಯುತ್ತವೆಯೇ? ಪರೀಕ್ಷೆ ನಿಂತು ಹೋಗುತ್ತದೆಯೇ? ಎಂಬ ಪ್ರಶ್ನೆಗಳು ಮಕ್ಕಳನ್ನು ಮಾತ್ರವಲ್ಲ ಶಿಕ್ಷಕರು, ಪಾಲಕರನ್ನು ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ಮಕ್ಕಳ ಶಿಕ್ಷಣದ ಹಕ್ಕು ಹಾಗೂ ಜೀವಿಸುವ ಹಕ್ಕು ಗೊಂದಲ ಪರಿಸ್ಥಿತಿಯಲ್ಲಿದೆ. ಸರ್ಕಾರದ ಆದೇಶದಂತೆ ಪಬ್ಲಿಕ್ ಪರೀಕ್ಷೆಗೆ ಶಾಲೆಗಳು ಮತ್ತು ಪಾಲಕರು ಮಕ್ಕಳನ್ನು ಪರೀಕ್ಷೆಗೆ ಮಾನಸಿಕವಾಗಿ ಸಿದ್ಧಪಡಿಸಿದ್ದರು. ಆದರೆ ಎರಡು ದಿನಗಳ ಪರೀಕ್ಷೆಯ ನಂತರ ನ್ಯಾಯಾಲಯ ಪರೀಕ್ಷೆ ತಡೆಹಿಡಿದಿದೆ. ಪ್ರಕರಣ ನ್ಯಾಯಾಲಯದ ಮುಂದಿದೆ. ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಮಕ್ಕಳು ಮುಂದಿನ ವಿಷಯಗಳ ಪರೀಕ್ಷೆಗೆ ಸಿದ್ಧರಾಗುವುದನ್ನು ಬಿಟ್ಟಿದ್ದಾರೆ. ಹಾಗೆಯೇ, ಮಕ್ಕಳಿಗೆ ಉತ್ಸಾಹ ತುಂಬಲು ಶಾಲೆಗಳು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಮಗಳು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಮೌಲ್ಯಾಂಕನ ಪರೀಕ್ಷೆ ರದ್ದಾದ ನಂತರ ಶಾಲೆಯು ಸರ್ಕಾರ ನಿಗದಿ ಮಾಡಿದ್ದ ವೇಳಾಪಟ್ಟಿ ಪ್ರಕಾರ ಶಾಲಾ ಹಂತದಲ್ಲಿಯೇ ಪರೀಕ್ಷೆ ಮಾಡಿ ಮುಗಿಸಿದೆ. ಇದಕ್ಕೆ ಶಾಲಾ ಆಡಳಿತ ಮಂಡಳಿಯು ಯಾವುದೇ ಸ್ಪಷ್ಟನೆ ನೀಡಿಲ್ಲ. ನ್ಯಾಯಾಲಯದ ತೀರ್ಪು ಒಂದು ವೇಳೆ ಸರ್ಕಾರದ ಪರವಾಗಿ ಬಂದಲ್ಲಿ ನಮ್ಮ ಮಕ್ಕಳು ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡುವುದು?
| ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಾಲಕರು
ಬೋರ್ಡ್ ಎಕ್ಸಾಂ ನಡೆದಿದ್ದರೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕ ಅನುಭವವಾಗುತ್ತಿತ್ತು. ಖಾಸಗಿ ಶಾಲಾ ಒಕ್ಕೂಟ ಪರೀಕ್ಷೆ ಆರಂಭವಾದ ಮೇಲೆ ಕೋರ್ಟ್​ಗೆ ಹೋಗುವ ಅಗತ್ಯ ಇರಲಿಲ್ಲ. ಕೋರ್ಟ್ ತುರ್ತು ನ್ಯಾಯದಾನ ಮಾಡಬೇಕು.
| ಪ್ರಿಯಾ ಗೋಪಾಲ್ ಪಾಲಕರು, ಶಿವಮೊಗ್ಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fifteen =
Remember me
